ಪರೀಕ್ಷೆಯ ಸೀರಿಯಸ್ನೆಸ್ಗಾಗಿ ಫನ್ ವೀಕ್ ಎಂಬ ಮೋಜಿನ ವೃತ
ಆಡುವಾಗ ಆಡು, ಓದುವಾಗ ಓದು ಎಂಬ ಪಾಲಿಸಿಯಿಂದ ರಿಲ್ಯಾಕ್ಸ್ ಮೂಡ್
ಮಹಾಲಿಂಗಪುರ 23 : ವಿದ್ಯಾರ್ಥಿಗಳು ತರಗತಿಯಲ್ಲಿ ವರ್ಷಪೂರ್ತಿ ಕಲಿತಿದ್ದನ್ನು ಪರೀಕ್ಷೆಯಲ್ಲಿ ಹರ್ಷದಿಂದ ಅಭಿವ್ಯಕ್ತಗೊಳಿಸಲು ಆಸ್ತೆಯಿಂದ ಅಧ್ಯಯನ ಮಾಡುವುದು ಅಗತ್ಯ. ಈ ನಿಟ್ಟಿನಲ್ಲಿ ಮಹಾಲಿಂಗಪುರದ ಕೆಎಲ್ಇ ಪಾಲಿಟೆಕ್ನಿಕ್ನಲ್ಲಿ ವಿದ್ಯಾರ್ಥಿಗಳ ಪರೀಕ್ಷೆಯ ಸೀರಿಯಸ್ ಮತ್ತು ಓದಿನ ಮೂಡ್ ಬರಿಸಲು ವಿಭಿನ್ನ ವಿನೂತನ ಸಾಪ್ತಾಹಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ದಿನಕ್ಕೊಂದು ಅವತಾರ:
ಮೊದಲ ದಿನ ಗ್ರೀನ್ ಡೇ ಎಂದು ಹಸಿರು ಬಟ್ಟೆ ಧರಿಸಿ ಬಂದು ಸಸಿ ನೆಟ್ಟರು. ಹಸಿರು ಗಿಡಗಳಿಗೆ ಪೇಂಟ್ ಬಳಿದು ಅಲಂಕಾರ ಮಾಡಿ ಆನಂದಿಸಿದರು. ಮರುದಿನ ಟೂರಿಸ್ಟ್ ಡೇ ಎಂದು ಪ್ರವಾಸಿಗರ ಗೆಟಪ್ನಲ್ಲಿ ಬಂದು ಪೋಸ್ ಕೊಟ್ಟರು. ಕ್ಲಾಸ್ ಕಲರ್ ಡೇ ಎಂದು ಐದು ಬ್ರ್ಯಾಂಚ್ನವರು ಆಯಾ ಬಣ್ಣದ ಬಟ್ಟೆ ಧರಿಸಿ ಪ್ರತ್ಯೇಕ ಐಡೆಂಟಿಟಿ ಕ್ರಿಯೇಟ್ ಮಾಡಿದರು. ಟ್ವಿನ್ಸ್ ಡೇ ಎಂದು ಇಬ್ಬರು ಜೋಡಿಗಳಾಗಿ ಒಂದೇ ತರಹದ ಬಟ್ಟೆ ಧರಿಸಿ ಗಮನ ಸೆಳೆದರು. ಮೂವಿ ಡೇ ಎಂದು ಸಿನಿಮಾ ತಾರೆಯರ ಗೆಟಪ್ನಲ್ಲಿ ಪೋಜ್ ಕೊಟ್ಟು ರಂಜಿಸಿದರು. ಟ್ರೆಡಿಷನಲ್ ಡೇ ಎಂದು ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿ ದೇಸಿ ಸಂಸ್ಕೃತಿ ಪ್ರತಿಬಿಂಬಿಸಿದರು. ಡೆನಿಮ್ ಡೇ ಎಂದು ಜೀನ್ಸ್ ಮತ್ತು ಜಾಕೇಟ್ ಧರಿಸಿ ಡೌವ್ ಮಾಡಿದರು. ಸಾರೀ ಅಂಡ್ ಟಾಯ್ ಡೇ ಎಂದು ಹುಡುಗಿಯರು ಸೀರೆ ಮತ್ತು ಹುಡುಗರು ಟಾಯ್ ಧರಿಸಿ ಗಮನ ಸೆಳೆದರು.
ಟ್ರ್ಯಾಕ್ಟರ್ ಮತ್ತು ಜೆಸಿಬಿ ಏರಿ ಬಂದ ವಿದ್ಯಾರ್ಥಿಗಳು:
ಇದು ಗ್ರಾಮೀಣ ಪ್ರದೇಶವಾದ್ದರಿಂದ ಬಹುತೇಕ ವಿದ್ಯಾರ್ಥಿಗಳು ರೈತನ ಮಕ್ಕಳೆ ಆಗಿದ್ದರಿಂದ ಸಾಂಪ್ರದಾಯಿಕ ದಿನದಂದು ಲುಂಗಿ, ಅಂಗಿ, ಟವಲ್ ಧರಿಸಿ ತಮ್ಮದೇ ಮನೆಯಲ್ಲಿನ ಟ್ರ್ಯಾಕ್ಟರ್ ಮತ್ತು ಜೆಸಿಬಿ ಚಲಾಯಿಸಿಕೊಂಡು ಕಾಲೇಜಿಗೆ ಆಗಮಿಸಿ ಅಬ್ಬರಿಸಿದರು. 2 ಜೆಸಿಬಿ, 20 ಟ್ರ್ಯಾಕ್ಟರ್ ತಂದು ಜವಾರಿ ಹಾಡಿಗೆ ತಕ್ಕಂತೆ ತಾಂಡವ ನೃತ್ಯ ಮಾಡಿಸಿದರು. ಟ್ರ್ಯಾಕ್ಟರ್ಗೆ ಸಿಂಗಲ್ ಬ್ರೇಕ್ ಹಾಕಿ, ಕ್ಲಚ್ ಮತ್ತು ಎಕ್ಸಿಲೇಟರ್ ಎದ್ವಾ ತದ್ವಾ ಬಳಸಿ ಟ್ರ್ಯಾಕ್ಟರ್ ಡ್ಯಾನ್ಸ್ ಮಾಡಿಸಿದರು. ಇತ್ತ ಜೆಸಿಬಿ ಜಂಪಿಂಗ್ ಮತ್ತು ಕ್ರೇನಿಂಗ್ ಮಾಡುವ ಮೂಲಕ ಗರ್ಜಿಸಿದರು. ಬೈಕ್ ಸೌಂಡ್ ಮಾಡುತ್ತ ರೌಂಡ್ ಹೊಡೆಯುತ್ತ ಕುಣಿದು ಕುಪ್ಪಳಿಸಿದ್ದು ಕ್ಯಾಂಪಸ್ನಲ್ಲಿ ಕಲರವ ಉಂಟು ಮಾಡಿತು.
ವಿದ್ಯಾರ್ಥಿಗಳು ಪ್ರತಿ ವರ್ಷ ತರಗತಿ, ಪ್ರ್ಯಾಕ್ಟಿಕಲ್, ಪ್ರೋಜೆಕ್ಟ್, ಟೆಸ್ಟ್ ಸೇರಿದಂತೆ ಬಿಡುವಿಲ್ಲದ ಕಲಿಕೆಯ ಹ್ಯಾಂಗೋವರ್ನಿಂದ ಹೊರಬರಲು ಅವರ ಮನೋಲ್ಲಾಸಕ್ಕಾಗಿ ವಾರ್ಷಿಕ ಪರೀಕ್ಷೆ ಪೂರ್ವದಲ್ಲಿ ಫನ್ ವೀಕ್ ಎಂಬ ಮೊಜಿನ ವೃತ ಆಚರಿಸಲು ಅವಕಾಶ ನೀಡಿದೆವು. ಶಿಸ್ತು, ಹದ್ದುಬಸ್ತು, ಎಂಬ ಕಟ್ಟಳೆ ಸಡಿಲಗೊಳಿಸಿ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ ಒಡನಾಟ ಬರೀ ಮೇಜು ಕುರ್ಚಿಗೆ ಸೀಮಿತವಾಗದೇ ಮೋಜು, ಮಸ್ತಿಗೆ ಪರಿವರ್ತನೆಯಾಗಿ ಆಡುವಾಗ ಆಡು, ಓದುವಾಗ ಓದು ಎಂಬ ಪಾಲಿಸಿಯಿಂದ ರಿಲ್ಯಾಕ್ಸ್ ಮೂಡ್ ಸೃಷ್ಠಿಸಲಾಯಿತು. ಕೊನೆಗೆ ಮೋಜು ಸಾಕು ಎಂದೆನಿಸಿ ಮರುದಿನದಿಂದಲೇ ಓದಿನ ಕಡೆ ಗಮನ ಕೊಡುವಂತೆ ಮಾಡಲಾಯಿತು.
- ಎಸ್.ಐ.ಕುಂದಗೋಳ ಪ್ರಾಚಾರ್ಯ ಕೆಎಲ್ಇ ಪಾಲಿಟೆಕ್ನಿಕ್ ಮಹಾಲಿಂಗಪುರ