ಲೇಖನಗಳು

ಚಳಿಗಾಲದ ಒಂದು ಸಾವು

ಚಳಿಗಾಲದ ಒಂದು ಸಾವು

ಡಿಸೆಂಬರ್‌ನ ಕೊರೆವ ಚಳಿ, ಈ ಪರಿ ಚಳಿಗೆ ಗದಗದ ನಡುಗಿಯೇ ಮುದುಕರು ಸತ್ತೇ ಹೋಗುತ್ತಾರೇನೋ.. ಗೋಣಿ ಚೀಲದಲ್ಲಿ ಕಾಲಿಟ್ಟು, ಕುಂಚಿಗೆಯಲ್ಲಿ ಮುದುರಿಕೊಂಡು ಮಲಗುತ್ತಿದ್ದ ಅವೇಷ್ಟು ಬದುಕಿನ ಕತೆಗಳನ್ನು ಅಜ್ಜಿ ಹೇಳಿದ್ದಳು. ಬಡತನ ಹಸಿವು ಇವುಗಳ ಜೊತೆಗೆ ಈ ಚಳಿಯೂ ಶತ್ರುವಾಗಿತ್ತು. 

ಚಳಿಗಾಲ ಶುರುವಾಗುವ ಮುನ್ನವೆ ನಾವು ಅದನ್ನು ಎದುರಿಸಲು ಹೇಗೆಲ್ಲ ಸಜ್ಜುಗೊಳ್ಳುತ್ತೇವೆ. ಉಣ್ಣೆಯ ಟೊಪ್ಪಿಗೆ, ಸ್ವೇಟರು​‍್ರ, ರಗ್ಗು ಜಮಖಾನೆ ಮಪ್ಲರು.ಗ್ಲೀಸರಿನು ವ್ಯಾಸಲಿನು ಬಾಡಿ ಲೋಶನ್‌.. ಅಂಗಡಿಯಂದ ಬೆಡ್ ರೂಮಿಗೆ ಸೇರುತ್ತವೆ.ನಾವೇನೊ ಸರಿ,ಆದರೆ ಮನೆ ಎದುರಿನ ಬಸ್ ಸ್ಟಾಪಿನ ಕಟ್ಟಡದಲ್ಲಿ ಹುಚ್ಚನಿದ್ದಾನಲ್ಲ ಅವನು? ಮುಚ್ಚಿರುವ ಕದ ಕಿಡಕಿಗಳಿಂದ ಚಳಿ ನುಗ್ಗಿ ಬರುವದಕ್ಕೆ ಕಷ್ಟವಾಗಬಹುದು.ಆದರೆ ಸುತ್ತಲು ತೆರೆದುಕೊಂಡಿರುವ ಬುಸ್ ಸ್ಟಾಪಿನ ಹುಚ್ಚ ಋತುಮಾನಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ನಿರುಮ್ಮಳ ಇದ್ದಾನೆ.ಅವನಿಗೆ ಸತ್ತು ಹೋಗುವೆನೆಂಬ ಭಯವಿಲ್ಲ,ಆದರೆ ಚಳಿಯ ಅರಿವಾಗದಷ್ಟು ಹುಚ್ಚು ಅವನಿಗಿರಲಿಕ್ಕಿಲ್ಲ. ಇದ್ದಿದ್ದರೆ ಒಳ್ಳೆಯದಿತ್ತು. ಅವನ ಅಂಗಿಗೆ ಗುಂಡಿಗಳಿಲ್ಲ ಎಲ್ಲ ಕಡೆ ಹರಿದ ಪ್ಯಾಂಟಿನ ತೂತಿನೊಳಗೆ ತೂರಲು ಚಳಿಗೆ ಖಂಡಿತ ಭಯವಾಗುವದಿಲ್ಲ. ಯಾಕೆಂದರೆ ಅದಕ್ಕೆ ಸಾವಿಲ್ಲ. ಮುಗಿದಂತೆ ಮಾಡಿ ಮತ್ತೆ ಮತ್ತೆ ಶುರುವಾಗುತ್ತಿದೆ. 

ಒಣಗಿದ ಚರ್ಮವನ್ನು ಮುಚ್ಚಿಕೊಂಡರೆ ಮಾತ್ರ  ಅವನು ಬದುಕುತ್ತಾನೆ. ಈ ಎಚ್ಚರ ಅದೇಷ್ಟು ಬಾರಿ ನನ್ನನ್ನು ಕಾಡಿದೆ. ಹಳೆಯ ಸ್ವೇಟರು​‍್ರ ಟೊಪ್ಪಿಗೆ ದಪ್ಪನೆದೊಂದು ಚಾದರು ಬಳಸದೆ ಗಂಟುಕಟ್ಟಿಕೊಂಡು ಮೂಲೆ ಸೇರಿವೆ. ಅವನಿಗೆ ಕೊಟ್ಟರಾತು ಎಂದು ಚಳಿ ನೆನಪಿಸುತ್ತದೆ. ಅವನ ಹಸಿವಿನ ಬಾಯಿಗೆ ನೆನಪು ಮಾಡಿಕೊಂಡು ಅನ್ನ ನೀರು ಇತ್ತು ಬಂದಿದ್ದೇನೆ, ಆದರೆ ಸ್ವೇಟರು​‍್ರ ಚಾದರು ನೀಡಲೇಕೊ ಮರೆತು ಹೋಗುತ್ತಿದೆ. ಒಮ್ಮೊಮ್ಮೆ ನೆನಪಾದರು ಚಳಿ ಹೊರಹೋಗಲು ಬೆದರಿಸುತ್ತದೆ. ಇವತ್ತು ಬೆಚ್ಚಗೆ ಮಲಗಿದರಾತು, ನಾಳೆ ಮರೆಯದೆ ಕೊಟ್ಟರಾತು.. ಹೇಗೂ ಇಷ್ಟು ದಿನ ತಡೆದುಕೊಂಡಿದ್ದಾನೆ.. ಅಷ್ಟಕ್ಕೂ ಚಳಿಯ ಅನುಭವ ಅವನಿಗೆ ಆಗುತ್ತದೋ ಇಲ್ಲವೊ. 

ಮರುದಿನದ ಮುಂಜಾವು, ಎಂಥ ಆಹ್ಲಾದಕರ ವಾತಾವರಣ. ಮುಂಜಾವು ಇನ್ನು ಎಷ್ಟು ಕವಿತೆಗಳನ್ನು ಬಚ್ಚಿಟ್ಟುಕೊಂಡಿದೆಯೋ.. ಹೀಗೆ ಬಾಲ್ಕನಿಯಲ್ಲಿ ಕೂತು ಕಾಫೀ ಹೀರುತ್ತಿದ್ದರೆ ಒಂದೊಮ್ಮೆ ನನ್ನೆದರೂ ಒಂದು ಕವಿತೆ ಬಿಚ್ಚಿಕೊಳ್ಳುತ್ತದೆ. ಆ ಹುಚ್ಚನಿಗೊಂದು ಕಪ್ಪು ಬಿಸಿ ಕಾಫೀ ಕೊಡಬೇಕಲ್ಲವೆ? ಇನ್ನೂ ಇಬ್ಬನಿ ಇದೆ, ಕಾಫಿಯ ಉಘಕ್ಕೆ ಕರಗುವದಿಲ್ಲವದು. ಆ ಹುಚ್ಚನಾದರೂ ಇನ್ನು ಮಲಗಿರುತ್ತಾನೆ. ಇಲ್ಲ ಎದ್ದು ಬಹೀರ್ದೆಸೆಗೆ ಅದೆಲ್ಲೋ ಹೋಗಿರುತ್ತಾನೆ. ಸರಿ ಆರಾಮಾಗಿ ಬರಲಿ, ಆ ನಂತರ ಒಂದೈದು ರೂಪಾಯಿ ಕೈಗಿತ್ತರೆ ಅವನೆ ಟೀ ಕಾಫೀ ಕುಡಿದುಕೊಳ್ಳುತ್ತಾನೆ. ಇದೆ ಸರಿ. ಚಳಿಗೆ ಹೊರ ಹೋಗಲಾಗುವದಿಲ್ಲ. ಆದರೆ ಈ ಚಳಿಗಾಲ ಮಾತ್ರ ರಮ್ಯ.  

ಚಳಿಗಾಲದ ಸಂಜೆ ತುಂಬಾ ಆಹ್ಲಾದಕರ, ಹೆಂಡತಿ ಚಹ ಮಾಡಿಕೊಟ್ಟಳು. ಆಫೀಸಿನ ದಣಿವು ಮತ್ತು ಸಂಜೆಗೆ ಸಾಂದ್ರವಾಗುತ್ತಿರುವ ಚಳಿ ಎರಡರ ಹಿತವನ್ನು ಒಂದು ಕಪ್ಪು ಚಹ ಕಾಯಬೇಕು. ಚಹ ಹೀರುತ್ತ ಹೊರಗಡೆ ಮನೆ ಎದುರಿನ ಬಸ್ ಸ್ಟಾಪಿನತ್ತ ನೋಡಿದೆ, ಥೂ.. ಹಾಳಾದ್ದು ಈ ಮರೆವು, ಮತ್ತೆ ಹುಚ್ಚ ನೆನಪಾದ. ಇಲ್ಲಾ ಇವತ್ತು ಕೊಡಲೆಬೇಕು.. ನೆನಪಿಸುವಂತೆ ಹೆಂಡತಿಗೆ ಹೇಳಿದೆ. ನೆನಪಾಗುವಂತೆ ಟಿವಿಯ ಮೇಲೆ ಹುಚ್ಚ ಅಂತ ಕೆಂಪು ಅಕ್ಷರ ಮೂಡಿಸಿದೆ. ಈ ಟವಿ ಲೋಕವನ್ನೆ ಮರೆಸಿಬಿಡುತ್ತದೆ. ಕೊಡಬೇಕಾದ್ದನ್ನೆಲ್ಲ ಬಡಬಡನೆ ಹುಡುಕಿ ಒಂದು ಪಾಲಿಥೀನು ಚೀಲದಲ್ಲಿ ತುಂಬಿ ಕಾಣುವಂತೆ ಇಟ್ಟುಕೊಂಡೆ, ಸದ್ಯಕ್ಕೆ ಒಂದು ಮಟ್ಟಿಗಿನ ನಿರಾಳ.   

ರಾತ್ರಿಯ ಎಂಟುವರೆ, ಚಳಿ ಒಟ್ಟಾಗುತ್ತಿದೆ. ಹೆಂಡತಿ ಹುಚ್ಚ.. ಹುಚ್ಚ.. ಅಂತಾ ಆಗಾಗ ನೆನಪಿಸುತ್ತಲೆ ಇದ್ದಳು. ಅವಳೇಷ್ಟೋ ಬಾರಿ ಹುಚ್ಚನ್ನ ಕರೀತಿನಿ, ನೋಡು.. ಮಲಗು.. ಬೇಗ್ ಮಲಕೊ ಅವಾ ನಿಮ್ಮನ್ನ ಹಿಡ್ಕಂಡ ಹೊಕ್ಕಾನ.. ಅಂತಾ ಹಟಮಾರಿಯಾದ ಮಕ್ಕಳನ್ನು ಹೆದರಿಸಿ ಗಪ್ಚುಪ್ ಮಾಡಿ ಮಲಗಿಸುವ ತಂತ್ರವನ್ನು ಹುಡುಕಿಕೊಂಡಿದ್ದಳು. ಟಿವಿಯ ಮೇಲಿನ ಕೆಂಪು ಹೇಳಿಕೊಡುತ್ತಲೆ ಇತ್ತು. ಎದ್ದು ಊಟ ಮುಗಿಸಿದೆ. ಉಳಿದಿದ್ದನ್ನು ಹೆಂಡತಿ ತುಂಬಿಟ್ಟಳು. ಖಂಡಿತಾ ಇವತ್ತು ಕೊಡುತ್ತೇನೆ ಮನಸ್ಸಿನಲ್ಲಿ ಋಣ ಪರಿಹಾರವಾದಂತಹ ಭಾವ. ಕೊಟ್ಟು ಹಗುರವಾಗಿ ಬಿಡಬಹುದು. ಕೊಡದೆ ಇರುವ ಮಹಾಭಾರ ಜೀವನಪರ್ಯಂತ ಉಳಿಯುತ್ತದೆ. ಹಾಗೆ ಅಂದುಕೊಂಡು ಎಷ್ಟೋ ದಿನಗಳಾಗಿದ್ದವು. ಇವತ್ತು ಆಚರಣೆಗೆ ಬರುತ್ತಿದೆ. ಮೇಲೊಂದು ಅಂಗಿ ಹಾಕಿಕೊಂಡು ಲುಂಗಿ ಮೇಲೆ ಕಟ್ಟಿ ಎರಡೂ ಚೀಲ ಹಿಡಿದುಕೊಂಡು ಹೊರಟೆ. ಹೆಂಡತಿ ನಕ್ಕಳು ನಾನೂ ನಕ್ಕೆ. 

ಹೊರಬರುತ್ತಿದ್ದಂತೆ ಚಳಿ ಮುಲಾಜಿಲ್ಲದೆ ಒಳಹೊಕ್ಕಿತು. ಈ ಚಳಿಗೆ ನಾಚಿಕೆಯೆ ಇಲ್ಲ ಬಿಸಿಲು ಮಳೆಗಳನ್ನು ಮೂಲೆ ಹಿಡಿಸಿ ಬೆಚ್ಚಗೆ ಮಲಗಿಸಿಯೆ ಹೊರ ಬಿದ್ದಿದೆ. ನಾನೂ ಹಾಗೆ ಹೊರ ಬಿದ್ದಿದ್ದೇನೆ. ದುಡುಕಿನಿಂದ ನಡೆದು ಬಂದು ಬಸ್ ಸ್ಟಾಪು ಸೇರಿದೆ. ಅರೇ ಅಲ್ಲಿ ಅವನಿಲ್ಲ. ಎಲ್ಲಿ ಹೋದ ಈ ಹುಚ್ಚು ಮುದುಕ, ಯಾವತ್ತೂ ಈ ಹೊತ್ತಿನಲ್ಲಿ ಇಲ್ಲಿಯೆ ಬಿದ್ದುಕೊಂಡಿರುತ್ತಿದ್ದವ ಇವತ್ತೆ ಹೋಗಬೇಕೆ. ಐದ್ಹತ್ತು ನಿಮಿಷ ಕಾಯಬೇಕೆನಿಸಿ ಕಟ್ಟಿಯ ಮೇಲೆ ಕುಳಿತುಕೊಂಡೆ. ಸೊಳ್ಳೆಗಳು ಮುಕ್ಕರಿದವು. ಇವನ್ನು ಯಾವ ಚಳಿ ಬಿಸಿಲು ಕೊಲ್ಲಲಾಗುತ್ತಿಲ್ಲ. ಒಂದು ದಿನ ಸೊಳ್ಳೆಗಳಿಂದಲೆ ಸರ್ವನಾಶವಾದರೂ ಆದೀತು ಎನಿಸಿತು. ಹುಚ್ಚ ಬರುವ ಹಾಗೆ ಕಾಣಲಿಲ್ಲ.ನಾನು ಒಯ್ದಿದ್ದ ಚೀಲಗಳನ್ನು ಹುಚ್ಚನಿಗೆ ತೋರಿಸದೆ ಅವನಿಗೆ ಹೇಳದೆ ಇಟ್ಟು ಬರುವ ಮನಸ್ಸಾಗಲಿಲ್ಲ. ಅವನು ತೋರಬಹುದಾದ ಕೃತಜ್ಞತಾ ಭಾವವನ್ನು ಕಣ್ಣು ತುಂಬಿಕೊಳ್ಳುವ ಆಸೆ ನನಗೆ. ಸ್ವಲ್ಪ ಹೊತ್ತು ಬಿಟ್ಟು ಬಂದು ಕೊಟ್ಟರಾಯಿತು ಅಂದುಕೊಂಡು ಮತ್ತೆ ಮನೆ ಸೇರಿಕೊಂಡೆ. ಮನೆಯಿಂದ ಹೊರ ಬರಲು ಮಾಡಿಕೊಂಡ ಸಿದ್ಧತೆ ಮನೆ ಸೇರಿಕೊಳ್ಳಲು ಬೇಕಾಗಲಿಲ್ಲ. 

ಮತ್ತೊಂದು ವಿಫಲ ಯತ್ನ. ಹೆಂಡತಿ ನಕ್ಕಳು, ನನಗೀಗ ನಗು ಬರಲಿಲ್ಲ. ಇದರ ಬಗ್ಗೆಯೆ ಮತನಾಡುತ್ತ ಕುಳಿತೆ.- ಇದು ಒಳ್ಳೆಯ ಕತೆ.. ಇದರ ಕುರಿತು ಕತೆ ಬರೆಯಿರಿ.. ನನ್ನವಳ ಮಾತು ತಾಕಿತು. ಅವಳ ಮಾತು ಸರಿಯೆನಿಸಿ ಅವನನ್ನು ಕತೆಯಾಗಿಸುವ ಹುರುಪಿನಿಂದ ಪೆನ್ನು ಹಾಳೆ ಹಿಡಿದು ಕೂತೆ.ಹೀಗೆ ಮಾಡಿದರೆ ಅವನ ನೆನಪು ಹಾರುವದಿಲ್ಲ. ಹೀಗಾಗಿ ಹೆಂಡತಿಗೆ ಪದೆಪದೆ ನೆನಪು ಮಾಡುವಂತೆ ಹೇಳ ಹೋಗಲಿಲ್ಲ. 

ಅವನ ಕತೆ.  

ಹೇಗೆ ಆರಂಬಿಸುವದು, ಮುಗಿಸುವದು ಹೇಗೆ.. ಯೋಚಿಸಿದಂತೆ ಕತೆಯೊಂದು ಹುತ್ತ ಬೆಳೆದಂತೆ ನನ್ನೊಳಗೆ ಬೆಳೆದು ನಿಂತಿತು. ಅದನ್ನು ಬರಹಕ್ಕಿಳಿಸುವ ಹುಮ್ಮಸ್ಸು ಹಾಳೆ ಮೇಲೆ ಓಡತೊಡಗಿತು. ಹಾಳೆ ತಿರುವಿದಂತೆ ಇದು ಯಾರ ಕತೆಯೊ ಎಂಬ ಅನುಮಾನ ಸುಳಿದಾಡ ತೊಡಗಿತು. ಥಟ್ಟನೆ ನೆನಪಾಯಿತು.. ಅಯ್ಯೋ.. ಆಗಲೆ ಹತ್ತುವರೆ ಗಂಟೆ ! ಚೀಲಗಳನ್ನು ಹಿಡಿದವನೆ ದಡದಡ ಮೆಟ್ಟಿಲಿಳಿಯತೊಡಗಿದೆ. ಅಪಾರ್ಟಮೆಂಟಿನ ಗಾರ್ಡ ಗೇಟು ಹಾಕತೊಡಗಿದ್ದ. ಛೇ ! ತುಟಿಗೆ ಬಂದ ಮಾತು ಒಳಗೆ ಲೋಚಗುಟ್ಟಿತು. ಸರಿ.. ನಾಳೆ ಬೆಳಿಗ್ಗೆ ಎದ್ದ ಕೂಡಲೆ ಕೊಟ್ಟರಾಯಿತು.. ತಿರುಗಿ ಮೆಟ್ಟಿಲೇರತೊಡಗಿದೆ. ಚಳಿ ದಟ್ಟವಾಗತೊಡಗಿತು. 

ತಲೆ ತುಂಬ ಹುಚ್ಚನನ್ನಿಟ್ಟುಕೊಂಡೆ ಮಲಗಿದ್ದ ನನಗೆ ಬೇಗನೆ ಎಚ್ಚರವಾಯಿತು. ಕದ ತೆರೆದು ಕಾಫೀ ಕುಡಿಯದೆ ಕೆಳಗೆ ಇಳಿದು ಗೇಟ್ ತೆರೆಯಿಸಿದೆ.ಮಂಜಿನ ಪೊರೆ ಕಳಚತೊಡಗಿತ್ತು. ಬೆಳಕು ತೆಳುವಾಗಿ ಸುತ್ತ ಹರಡಿಕೊಳ್ಳುತಿತ್ತು. ಈ ಸಾರಿ ಚಳಿಯ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಬನೀನು ತೊಟ್ಟುಕೊಂಡಂತೆ ಹೊರಬಿದ್ದೆ. ಅಷ್ಟಾಗಿ ಚಳಿ ಎನಿಸಲಿಲ್ಲ. ಹಾಗೆ ಬಸ್ ಸ್ಟಾಪಿನತ್ತ ಬಂದೆ, ಅಲ್ಲೆ ಹತ್ತಿರದಲ್ಲಿದ್ದ ಟೀ ಅಂಗಡಿಯ ಮುದುಕಿ ಆ ಹುಚ್ಚನಿಗೆ ಪ್ಲಾಸ್ಟೀಕು ಕಪ್ಪಿನಲ್ಲಿ ಚಹಾ ಇಟ್ಟು ಹೋಗಿದ್ದಳು. ಅದವಳ ನಿತ್ಯ ಕಾಯಕ. ಅವನು ಎಚ್ಚರವಾದಾಗ ಎದ್ದು ಕುಡಿಯುತ್ತಾನೆ. ನಾನು ಎಚ್ಚರಿಸಲು ಕೂಗಿದೆ, ಕರೆದೆ. ಎರಡ್ಮೂರು ಬಾರಿ ಕರೆದೆ. ಈ ಹುಚ್ಚರಿಗೆ ಯಾವುದೂ ಅರಿವಾಗುವದಿಲ್ಲ. ಮೈದಡವಿ ಎಚ್ಚರಿಸಲು ನೋಡಿದೆ. ಊಹೂಂ.. ಏಳುತ್ತಿಲ್ಲ. ನನಗೆ ಅನುಮಾನ ಶುರುವಾಯಿತು, ಟೀ ಅಂಗಡಿಯ ಮುದುಕಿಯನ್ನು ಕೂಗಿ ಹೇಳಿದೆ, ಅವಳು ಈಗಷ್ಟೇ ಮಿಸುಕಾಡಿದ್ದನ್ನು ನೋಡಿದ್ದರ ಬಗ್ಗೆ ಹೇಳಿ ಗಿರಾಕಿಗಳಿಗೆ ಚಹಾ ಉಪ್ಪಿಟ್ಟು ಕೊಡುವಲ್ಲಿ ನಿರತಳಾದಳು. ಅಲ್ಲೇ ಇದ್ದ ಅಟೋದವರನ್ನು ಕೂಗಿ ಕರೆದೆ. ಅವರೆಲ್ಲ ಬಂದು ಸೇರಿದರು. ಅವನು ಅಲುಗಾಡಿಸಿದರೂ ಏಳಲಿಲ್ಲ. ಆವನು ಮತ್ತೇಂದು ಏಳಲಾರ ಎಂಬುದು ಖಚಿತವಾಯಿತು. ಹಿಡಿದುಕೊಂಡಿದ್ದ ಚೀಲಗಳು ತಂತಾನೆ ಕೈ ಜಾರಿದವು. ವಾಕಿಂಗ್ ಹೊರಟಿದ್ದ ಜನರೆಲ್ಲ ನೆರೆಯತೊಡಗಿದರು._ಗುಜುಗುಜು.. ಗೌಜು ಗದ್ದಲ ತುಂಬಿಕೊಂಡಂತೆ ಸೂರ್ಯ ಏರಿ ಬರತೊಡಗಿದ. 

ಅವನು ಆಂಧ್ರದವನು.. ಚಾಮರಾಜನಗರದವನು.. ನೌಕರಿಯಲ್ಲಿದ್ದನಂತೆ.. ವ್ಯಾಪಾರಿಯಂತೆ.. ಅಯ್ಯೋ.. ಮಫತ್ತದಾರಿ  ಪೊಲೀಸ್ ಅಂತಾ ತಿಳಿದಿದ್ದೇವು. ಪಾಪ.. ಹೆಂಡತಿ ಓಡಿ ಹೋಗಿದ್ದಳಂತೆ.. ಆಮೇಲೆ ಹೀಗಾದನಂತೆ.. ಮಕ್ಕಳು ಮರಿ ಎಲ್ಲ ಇವೆಯಂತೆ. ಹೀಗೆ ನಾನೆಂದೂ ಅವನ ಕುರಿತು ಕೇಳಿರದ ಗೊತ್ತಿರದ ಕತೆಗಳು ಬಿಚ್ಚಿಕೊಳ್ಳತೊಡಗಿದವು. ಕೊಡದೆ ಉಳಿದ ಭಾರ ಇನ್ನೂ ಭಾರವಾಗುತ್ತಿರುವಚಿತೆ ಭಾಸವಾಗತೊಡಗಿತು. 

- ಲಿಂಗರಾಜ ಸೊಟ್ಟಪ್ಪನವರ 

ಹಾವೇರಿ 

- * * * -  


ಸುದ್ದಿ ಓದಿ