ಮಹಲಿಂಗಪುರ

ದೇವರಾಜ ಅರಸು ಯೋಜನೆಯ ಮನೆಗಳ ಹಂಚಿಕೆಯಲ್ಲಿ ಗೋಲ್ ಮಾಲ್ !

ದೇವರಾಜ ಅರಸು ಯೋಜನೆಯ ಮನೆಗಳ ಹಂಚಿಕೆಯಲ್ಲಿ ಗೋಲ್ ಮಾಲ್ !

ಪುರಸಭೆ ಸದಸ್ಯರು ಮತ್ತು ಮುಖಂಡರಿಂದ ಕ್ರಮಕ್ಕೆ ಆಗ್ರಹ. 

ಮಹಾಲಿಂಗಪುರ 11: ದೇವರಾಜ ಅರಸು ವಸತಿ ಯೋಜನೆಯಡಿ ವಸತಿ ಇಲಾಖೆಯಿಂದ ಕುಶಲ ಕರ್ಮಿ ನೇಕಾರರ ವಸತಿ ರಹಿತರಿಗೆ 2021-22ನೇ ಸಾಲಿನಲ್ಲಿ ಮಂಜೂರಿಯಾದ ಮನೆಗಳ ಹಂಚಿಕೆಯಲ್ಲಿ ಸೌಜನ್ಯ ನೇಕಾರ ಸೋಸಾಯಿಟಿ ಅಧ್ಯಕ್ಷರಿಂದ ಗೋಲ್ ಮಾಲ್ ನಡೆದಿರುವುದು ಖಂಡನೀಯ ಮತ್ತು ಅವರ ವಿರುದ್ಧ ಕ್ರಮ ಕೈಗೊಂಡು ಆಗಿರುವ ಲೋಪ ದೋಷಗಳನ್ನು ಸರಿಪಡಿಸಿ ಮನೆಗಳನ್ನು ವಿತರಿಸಲು ಪುರಸಭೆ ಸದಸ್ಯರು ಮತ್ತು ನೇಕಾರ ಮುಖಂಡರು ಬರೆದ ಮನವಿ ಪತ್ರದಲ್ಲಿ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ. 

ರವಿವಾರ ಪುರಸಭೆ ಸದಸ್ಯ ಪ್ರಲ್ಹಾದ ಸಣ್ಣಕ್ಕಿ ಅವರ ಕಾರ್ಯಾಲಯದಲ್ಲಿ ಸಮಾನ ಮನಸ್ಕರ ಸಭೆ ನಡೆದು ಈ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, 100 ಮನೆಗಳಲ್ಲಿ 40ಕ್ಕೂ ಅಧಿಕ ನೇಕಾರಲ್ಲದ ವ್ಯಕ್ತಿಗಳನ್ನು ಗುರುತಿಸಿರುವುದು ಖೇದಕರ ಸಂಗತಿ. ಏಕೆಂದರೆ ಶತಶತಮಾನಗಳಿಂದ ಕಷ್ಟ ಕಾಲದಲ್ಲಿ ಸೂರಿಲ್ಲದೆ ನೇಕಾರಿಕೆಯಲ್ಲಿ ತೊಡಗಿ ರಾಷ್ಟ್ರದ ಮಾನ ಮುಚ್ಚಿರುವ ಇವರಿಗಾಗಿಯೇ ಮಾಡಿರುವ ಯೋಜನೆ ಇವತ್ತು ಬೇರೆಯವರ ಪಾಲಾಗುತ್ತಿರುವುದು ಎಷ್ಟು ಸಮಂಜಸ ಎಂದು ನೇಕಾರ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಒಂದು ವೇಳೆ ಮನೆಗಳು ದೊರಕದೇ ಹೋದರೆ ಬಡ ನೇಕಾರರ ಶಾಪ ಮಾತ್ರ ಈ ಗೋಲಮಾಲದಲ್ಲಿ ಪಾಲ್ಗೊಂಡವರಿಗೆ ತಟ್ಟದೆ ಇರದು ಎನ್ನುತ್ತಾರೆ ಇವರು. 

ಇವತ್ತಿಗೂ ನೇಕಾರಿಕೆಯಲ್ಲಿ ತೊಡಗಿರುವ ಪರಿವಾರ ಅವರ ಪರಿಸರ ಮತ್ತು ಬಾಡಿಗೆ ಇರುವ ವಾಸದ ಮನೆ ನೋಡಿದಲ್ಲಿ ಇನ್ನೂ ಸುಮಾರು ಮೂರು ದಶಮಾನಗಳ ಹಿಂದಿನ ಜೀವನ ಶೈಲಿ ನೆನಪಿಗೆ ಬರುತ್ತದೆ. ಇಂತಹ ಶೋಚನೀಯ ಸ್ಥಿತಿಯಲ್ಲಿ ದಿನ ದೂಡುತ್ತಿರುವ ಇವರನ್ನು ಬದಿಗೊತ್ತಿ ನೇಕಾರಿಕೆಯಲ್ಲಿ ಪರಿಶ್ರಮ ಪಡದ ವ್ಯಕ್ತಿಗಳಿಗೆ ಸೂರು ನೀಡುತ್ತಿರುವುದು ನಿಜಕ್ಕೂ ಇವರಿಗೂ ಮತ್ತು ಪೂರ್ವಜರಿಗೂ ಮಾಡಿರುವ ಅನ್ಯಾಯವೇ ಸರಿ.ಜಿಲ್ಲಾಧಿಕಾರಿಗಳು ಮತ್ತು ಜವಳಿ ಇಲಾಖೆ ಉಪ ನಿರ್ದೇಶಕರು ನೇಕಾರ ಕಾಲೋನಿಗೆ ಅರ್ಹ ಫಲಾನುಭವಿಗಳನ್ನು ಹೊರತು ಪಡಿಸಿ, ಇನ್ನುಳಿದ 40ಕ್ಕೂ ಅಧಿಕ ಅನರ್ಹ ಫಲಾನುಭವಿಗಳ ಪಟ್ಟಿಯನ್ನು ರದ್ದುಗೊಳಿಸಬೇಕೆಂದು ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಹಿಟ್ಟಿನಮಠ ಹೇಳಿದರು. 

ಪುರಸಭೆ ಸದಸ್ಯರಾದ ರವಿ ಜವಳಗಿ ಮತ್ತು ಪ್ರಲ್ಹಾದ ಸಣ್ಣಕ್ಕಿ ಮಾತನಾಡಿ, ಸೌಜನ್ಯ ನೇಕಾರ ಸೊಸೈಟಿಯ ಜಿ.ಎಸ್‌.ಗೊಂಬಿ ಬಡ ನೇಕಾರ ಕುಟುಂಬದ ಸದಸ್ಯರು, ನೇಕಾರರ ಕಷ್ಟ ಕೋಟಲೆಗಳನ್ನು ಅರಿತವರೂ ಕೂಡ. ಬೇಲಿ ಎದ್ದು ಹೊಲ ಮೇಯುವ ಹಾಗೆ ಒಬ್ಬೊಬ್ಬರಿಂದ ಕನಿಷ್ಠ 20 ರಿಂದ 30 ಸಾವಿರ ಲಂಚ ಪಡೆದು ನೇಕಾರರರು ಅಲ್ಲದ 40ಕ್ಕೂ ಅಧಿಕರಿಗೆ ಮನೆ ಹಂಚಿ ಲಕ್ಷಾಂತರ ಅವ್ಯವಹಾರ ನಡೆಸಿರುವುದು ನೇಕಾರ ಸಮೂಹಕ್ಕೆ ಮಾಡಿದ ದ್ರೋಹವೇ ಸರಿ. ಆದ್ದರಿಂದ ಕಾಲನಿಯಲ್ಲಿ ನಿಜವಾದ ಫಲಾನುಭವಿಗಳನ್ನು ಹೊರತುಪಡಿಸಿ 40ಕ್ಕೂ ಅಧಿಕ ಅನರ್ಹ ಪಟ್ಟಿ ರದ್ದುಪಡಿಸಿ, ಇಲ್ಲದಿದ್ದರೆ ಬೃಹತ್ ಪ್ರತಿಭಟನೆ ನಡೆಸಲಾಗುವದು ಎಂದು ಪುರಸಭೆ ಮುಖ್ಯಾಧಿಕಾರಿಗಳು, ಜವಳಿ ಇಲಾಖೆ ಉಪನಿರ್ದೇಶಕರು ಮತ್ತು ಜಿಲ್ಲಾಧಿಕಾರಿಗಳನ್ನು ಆಗ್ರಸಿದರು.. 

ಪುರಸಭೆ ಸದಸ್ಯರಾದ ಬಸವರಾಜ ಚಮಕೇರಿ, ಮುಖಂಡರಾದ ಮಹಾಲಿಂಗ ಮುದ್ದಾಪೂರ, ಚನ್ನಪ್ಪ ರಾಮೋಜಿ, ಚನ್ನಗೀರಿ ಮತ್ತು ಶಿವಾನಂದ ಹುನಿಶ್ಯಾಳ ಸೇರಿದಂತೆ ಹಲವರು ಇದ್ದರು. 


ಸುದ್ದಿ ಓದಿ