ಭಾವದ ಅಂತರ್ಮುಖಿಯಾದ ಗಾಯನಕ್ಕೆ ಜಾತಿ ಮತ, ಪಂಥಗಳ ಹಂಗಿಲ್ಲ: ಚನ್ನಬಸವ ಮಹಾಸ್ವಾಮಿಗಳು

ಭಾವದ ಅಂತರ್ಮುಖಿಯಾದ ಗಾಯನಕ್ಕೆ ಜಾತಿ ಮತ, ಪಂಥಗಳ ಹಂಗಿಲ್ಲ: ಚನ್ನಬಸವ ಮಹಾಸ್ವಾಮಿಗಳು

ವಿಜಯಪುರ 06: ವಿಜಯಪುರದ ಜನಮಾನಸದಲ್ಲಿ ಬೆಳೆದು ಬಂದ ಸಂಗೀತ ವಿಶ್ವಭಾಷಿಕವಾಗಿದೆ. ಭಾವದ ಅಂತರ್ಮುಖಿಯಾದ ಗಾಯನಕ್ಕೆ ಜಾತಿ ಮತ, ಪಂಥಗಳ ಹಂಗಿಲ್ಲ. ಅದು ಶುದ್ಧ ವಿಶ್ವತತ್ವ ಇಂತಹ ಸಂಗೀತಕ್ಕೆ ಚೌಕಟ್ಟನ್ನು ಗುರು ಪಂಪರೆಯನ್ನು ಹಾಕಿಕೊಟ್ಟವರು. ಹಾನಗಲ್ಲ ಶಿವಯೋಗಿಗಳು ಹಾಗೂ ಪಂಚಾಕ್ಷರ ಕವಿ ಗವಾಯಿಗಳು ಎಂದು ಜಮಖಂಡಿ ಓಲೆಮಠದ  ಮ.ನಿ.ಪ್ರ. ಅಭಿನವ ಕುಮಾರ ಚನ್ನಬಸವ ಮಹಾಸ್ವಾಮಿಗಳು ಹೇಳಿದರು. 

ನಗರದ ಗಾನಬನದಲ್ಲಿ ಕುಮಾರ ಶಿವಯೋಗಿಗಳ 94ನೇ ಪುಣ್ಯ ಸ್ಮರಣೋತ್ಸವ ಹಾಗೂ ಪಂಡಿತ ಪಂಚಾಕ್ಷರ ಗವಾಯಿಗಳ 132ನೇ ಜಯಂತ್ಯೋತ್ಸವ ಕಾರ್ಯಕ್ರಮದ ಧರ್ಮಸಭೆಯ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಗುರು ಕಾರುಣ್ಯ ಸತತ ಅಭ್ಯಾಸ ಹಾಗೂ ಶ್ರದ್ಧೆ ಇದ್ದರೆ ಸಂಗೀತ ಸಾಧನೆ ಆಗುತ್ತದೆ.  ಲತಾ ಮಂಗೇಶ್ಕರ ಅವರಿಗೆ ಬಾಲ್ಯದಲ್ಲಿ ಪಂಚಾಕ್ಷರಿ ಗವಾಯಿಗಳು ಆಶೀರ್ವದಿಸಿದ್ದನ್ನು ಸ್ಮರಿಸಬಹುದು. ಅಂಧರ ಅನಾಥರ ಸೇವೆಗೈಯುತ್ತಿರುವ ಉಭಯ ಪ್ರತಿಷ್ಠಾನಗಳ ಕಾರ್ಯವನ್ನು ಸರ್ಕಾರ ಗುರುತಿಸಲಿ ಎಂದರು. 

ಶಿವಯೋಗ ಮಂದಿರದ ಧರ್ಮದರ್ಶಿ ಎಂ.ಬಿ.ಹಂಗರಗಿ ಮಾತನಾಡಿ, ಶಿವಯೋಗ ಮಂದಿರ ಶರಣ ಸಂಸ್ಕೃತಿ ಸಾಧಕರಿಗೆ  ತವರು ಮನೆಯಾದಂತೆ ವಿಜಯಪುರದ ಗಾನಬನವು ಸಂಗೀತ ಸಾಧಕರ ಗರಡಿಮನೆಯಾಗಿದೆ. ಮಕ್ಕಳಲ್ಲೇ ದೇವರನ್ನು ಕಾಣುವ ಪಂಡಿತ ತೋಂಟದಾರ್ಯರು ಅನೇಕರಿಗೆ ಸಂಗೀತ ಧಾರೆಯೆರೆದು ಅವರ ಬದುಕಿಗೆ ದಾರೀದೀಪವಾಗಿದ್ದಾರೆ ಎಂದರು. 

ಹುಬ್ಬಳ್ಳಿಯ ವಿರಕ್ತಮಠದ ಶ್ರೀ ಮ.ನಿ.ಪ್ರ. ಸಿದ್ಧಲಿಂಗೇಶ್ವರರು ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿ ಮಾತನಾಡಿದರು, ಮುದ್ದಡಗಾದ ಸಂಗಮೇಶ್ವರ ಸಂಸ್ಥಾನ ಹಿರೇಮಠದ ಶ್ರೀ ಷ.ಬ್ರ. ವೈದ್ಯೆಶ್ರೀ ಸದ್ಯೋಜಾತ ರೇಣುಕ ಶಿವಾಚಾರ್ಯರು, ಕವಿ ಮುದಗೇರಿ ರಮೇಶ ಕುಮಾರ, ನಾಗಯ್ಯ ಜಿ. ಹಿರೇಮಠ, ಗಾನಯೋಗಿ ಪಂಚಾಕ್ಷರ ಪ್ರತಿಷ್ಠಾನದ ಗೌರವ ಅಧ್ಯಕ್ಷ ಬಸವರಾಜ ಕೆಂಗನಾಳ ವೇದಿಕೆ ಮೇಲಿದ್ದರು. 

ಹಿರಿಯ ಸಂಗೀತಗಾರರಾದ ಶ್ರೀಶೈಲ ಚಿಕ್ಕಮಠ, ಗದುಗಿನ ಯುವ ಖ್ಯಾತ ಗಾಯಕರಾದ ಶ್ರೀ ವೆಂಕಟೇಶ ಆಲಕೋಡ ಶಾಸ್ತ್ರೀಯ ಸಂಗೀತವನ್ನು ಹಾಡಿದರು. ಗಾನಬನದ ವಿದ್ಯಾರ್ಥಿಗಳು ಗಾಯನದ ಮೂಲಕ ಸ್ತೋತ್ರಗಳ ಗಮನ ಸೆಳೆದರು.  ಪಂಡಿತ ತೋಂಟದಾರ್ಯ ಕವಿ ಗವಾಯಿಗಳು ಸಂಗೀತದೊಂದಿಗೆ ಸಮಾರಂಭ ಸಂಪನ್ನಗೊಂಡಿತು. 

ಈ ವೇಳೆ ಚಿದಾನಂದ ಜಡಿಮಠ ಸ್ವಾಗತಿಸಿದರು. ಪಿ.ಸಿ.ಅರಕೇರಿಮಠ ನಿರ್ವಹಿಸಿದರು, ಸುಭಾಸಚಂದ್ರ ಕನ್ನೂರ ವಂದಿಸಿದರು. ಕೈಲಾಸನಾಥ ಮದಭಾವಿ ನಿರೂಪಿಸಿದರು. 

ಕಾರ್ಯಕ್ರಮದಲ್ಲಿ ವಿರೇಶ ಜಂಗಿನಮಠ, ಎನ್‌.ವೈ.ದೇವಣಗಾಂವಿ, ಪಿ.ಎಸ್‌. ತಳಕೇರಿ, ಮಲ್ಲಯ್ಯ ಹಿರೇಮಠ, ಆನಂದ ಮುಳಸಾವಳಗಿ, ಡಾ. ಪರೀಕ್ಷಿತ ಕೋಟಿ  ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ