ಜುಲೈ 18 ರಂದು ಧಾರವಾಡ ಭಾರತೀಯ ತಾಂತ್ರಿಕ ಸಂಸ್ಥೆಯ (ಐಐಟಿ) 7ನೇ ಘಟಿಕೋತ್ಸವ ಕಾರ್ಯಕ್ರಮ
ಲೋಕದರ್ಶನ ವರದಿ
ಧಾರವಾಡ 15 : ಧಾರವಾಡ ಭಾರತೀಯ ತಾಂತ್ರಿಕ ಸಂಸ್ಥೆಯ (ಐಐಟಿ) 7ನೇ ಘಟಿಕೋತ್ಸವವು ಜುಲೈ 18, 2026 ರಂದು ಮಧ್ಯಾಹ್ನ 3 ಗಂಟೆಗೆ ಆಯೋಜಿಸಲಾಗಿದೆ ಎಂದು ಧಾರವಾಡ ಐಐಟಿ ನಿರ್ದೇಶಕ ಪ್ರೋ, ವೆಂಕಪ್ಪಯ್ಯ ಆರ್. ದೇಸಾಯಿ ಅವರು ಹೇಳಿದರು. ಅವರು ಇಂದು (ಜು.15) ಧಾರವಾಡ ಭಾರತೀಯ ತಾಂತ್ರಿಕ ಸಂಸ್ಥೆಯ 7ನೇ ಘಟಿಕೋತ್ಸವದ ಕುರಿತು ಪತ್ರಿಕಾಗೋಷ್ಠಿ ಜರುಗಿಸಿ, ಮಾತನಾಡಿದರು.
ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಅನುಸಂಧಾನ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ ರಾಷ್ಟ್ರೀಯ ವಿಜ್ಞಾನ ಪೀಠಾಚಾರ್ಯ ಹಾಗೂ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಏವಂ ಮಾನ್ವಿತ ವಿದ್ಯುತ್ ಅಭಿಯಾಂತ್ರಿಕೀ ಪ್ರಾಧ್ಯಾಪಕರಾದ ಪ್ರಾ. ಭೀಮ್ ಸಿಂಗ್ ಹಾಗೂ ಗೌರವ ಅತಿಥಿಗಳಾಗಿ ಬೆಂಗಳೂರು ಟಾಟಾ ಪವರ್ ರೀನೀವೆಬಲ್ ಮೈಕ್ರೋಗ್ರೀಡ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೋಜ್ ಗುಪ್ತಾ ಮತ್ತು ಭಾರತ ಪ್ಯಾನ್ ಐಐಟಿ ಪೂರ್ವ ಛಾತ್ರಾಗಣದ ಅಧ್ಯಕ್ಷ ಪ್ರಭಾತ ಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಘಟಿಕೋತ್ಸವದ ಅಧ್ಯಕ್ಷತೆಯನ್ನು ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಶರದ್ ಕುಮಾರ್ ಸರಾಫ್ ಕಾರ್ಯಕ್ರಮದಲ್ಲಿ ಅವರು ಭಾಗವಹಿಸುವರು. ಧಾರವಾಡ ಭಾರತೀಯ ತಾಂತ್ರಿಕ ಸಂಸ್ಥೆಯ (ಐಐಟಿ) 7ನೇ ಘಟಿಕೋತ್ಸವದ ಅಂಗವಾಗಿ ಸಂಸ್ಥೆಯ ಶೈಕ್ಷಣಿಕ ಸಾಧನೆ, ಸಂಶೋಧನೆ, ವಿದ್ಯಾರ್ಥಿ ಕಲ್ಯಾಣ, ಮೂಲಸೌಕರ್ಯ ಹಾಗೂ ಆಡಳಿತ ಕ್ಷೇತ್ರದ ಪ್ರಮುಖ ಸಾಧನೆಗಳ ಬಗ್ಗೆ ಅವರು ಹೇಳಿದರು.
ಘಟಿಕೋತ್ಸವ ಕಾರ್ಯಕ್ರಮದಲ್ಲಿ ಖ್ಯಾತ ಸಮಾಜ ಸೇವಕಿ, ಪದ್ಮ ಭೂಷಣ ವಿಜೇತೆ, ಲೇಖಕಿ ಸುಧಾ ಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಾಗುವುದು. ರಾಷ್ಟ್ರಪತಿ ಭವನ ಹಾಗೂ ಕೇಂದ್ರ ಶಿಕ್ಷಣ ಇಲಾಖೆಯಿಂದ ಅಗತ್ಯ ಅನುಮತಿ ಲಭಿಸಿದೆ. ಈ ಗೌರವವು ಧಾರವಾಡಕ್ಕೆ ಮಹತ್ವದ ಹೆಗ್ಗುರುತಾಗಲಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ನಿರ್ಮಿಸಲಿದೆ. ಸುಧಾ ಮೂರ್ತಿ ಅವರ ಸಾಧನೆಗಳು ಹಾಗೂ ಸಮಾಜಮುಖಿ ಸೇವೆಗಳು ಹೆಚ್ಚಿನ ಜನರಿಗೆ ತಲುಪಲಿವೆ ಎಂದು ಅವರು ಹೇಳಿದರು.