ಬೆಳಗಲಿ ಪಪಂ: ಶೇ 79.87 ರಷ್ಟು ಮತದಾನ
ಮಹಾಲಿಂಗಪುರ: ಸಮೀಪದ ಬೆಳಗಲಿ ಪಟ್ಟಣ ಪಂಚಾಯ್ತಿ 17 ವಾರ್ಡ್ಗಳಲ್ಲಿನ ಒಟ್ಟು 12798 ಮತದಾರರ ಪೈಕಿ 10222 ಜನ ಮತದಾರರು ತಮ್ಮ ಹಕ್ಕು ಚಲಾಯಿಸುವ ಮೂಲಕ ಒಟ್ಟು ಶೇ 79.87 ರಷ್ಟು ಮತ ಚಲಾವಣೆಗೊಳ್ಳುವುದರ ಮೂಲಕ ಶಾಂತಿಯುತವಾಗಿ ಮತದಾನ ನಡೆದಿದೆ.
ಪಟ್ಟಣ ಪಂಚಾಯ್ತಿ 17 ವಾರ್ಡ್ಗಳಿಗೆ ಸೋಮವಾರ ಮತದಾನ ನಡೆದಿದ್ದು, 17 ಮತಗಟ್ಟೆಗಳಲ್ಲಿ ಮತದಾನಕ್ಕೆ ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾವಣೆ ಮಾಡಿದರು. ಬೆಳಿಗ್ಗೆ 7 ಗಂಟೆಗೆ ಆರಂಭವಾದ ಮತದಾನ ಸಂಜೆ 5 ಗಂಟೆವರೆಗೆ ಪೊಲೀಸರ ಸರಾ್ಗವಲಿನ ಮಧ್ಯೆ ವಿಶೇಷ ಭದ್ರತೆಯೊಂದಿಗೆ ಶಾಂತಿಯುತವಾಗಿ ಪೂರ್ಣಗೊಂಡಿತು.
ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನದವರೆಗೆ ಮತದಾನ ಮಂದಗತಿಯಲ್ಲಿ ಸಾಗಿ ಸಂಜೆ ಕೊನೆಗೊಳ್ಳುವ ಒಂದು ಗಂಟೆ ಮುಂಚಿತ ಮತ್ತೆ ಮತದಾನ ಬಿರುಸು ಪಡೆಯಿತು. ಮತಗಟ್ಟೆ ಮುಂಭಾಗ ನಿಗದಿಪಡಿಸಿದ್ದ ಜಾಗದಲ್ಲಿ ಅಭ್ಯರ್ಥಿಗಳು ಸೇರಿದಂತೆ ಬೆಂಬಲಿಗರು ಮತದಾರರಿಗೆ ಕೈ ಮುಗಿದು ಮತಯಾಚನೆ ಮಾಡಿದರು. ಹಲವು ಕಡೆ ತೀವ್ರ ಜಿದ್ದಾಜಿದ್ದಿ ಏರ್ಪಟಟಿದ್ದು, ಅಭ್ಯರ್ಥಿಗಳು, ಅವರ ಕುಟುಂಬದವರು, ಮುಖಂಡರು ಕಾರ್ಯಕರ್ತರು ಮತದಾರರ ಮನ ಸೆಳೆಯಲು ಕೊನೆ ಹಂತದ ಕಸರತ್ತು ನಡೆಸಿದರು.
17 ಸ್ಥಾನಗಳಿಗೆ 34 ಅಭ್ಯರ್ಥಿಗಳು ಕಣದಲ್ಲಿದ್ದು, ಶಾಂತಿಯುತ ಮತದಾನಕ್ಕಾಗಿ ಪ್ರತಿ ಮತಗಟ್ಟೆ ವ್ಯಾಪ್ತಿಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. 34 ಅಭ್ಯರ್ಥಿಗಳ ಭವಿಷ್ಯವನ್ನು ಇವಿಎಂ ಯಂತ್ರಗಳಲ್ಲಿ ಮತದಾರರು ಭದ್ರಪಡಿಸಿದರು. ವಯೋವೃದ್ಧರು, ಅನಾರೋಗ್ಯ ಪೀಡಿತರು ತಮ್ಮ ಸಂಬಂಧಿಕರ ಸಹಾಯದಿಂದ ಮತಗಟ್ಟೆಗಳಿಗೆ ಆಗಮಿಸಿ ಮತಚಲಾಯಿಸಿ ಮತದಾನದ ಜಾಗೃತಿ ಮೂಡಿಸಿದ್ದು ವಿಶೇಷ.