6 ನಾಮಪತ್ರಗಳು ಕ್ರಮಬದ್ಧ : ಮಹಿಳಾ ಸ್ಥಾನಕ್ಕೆ ಅಧಿಕೃತ ಘೋಷಣೆಯೊಂದು ಬಾಕಿ : ಕಣದಲ್ಲಿ ಐವರು ಅಭ್ಯರ್ಥಿಗಳು
ಲೋಕದರ್ಶನ ವರದಿ
ಕಂಪ್ಲಿ 13: ಪಟ್ಟಣದ ಸೋಮಪ್ಪ ಕೆರೆ ಬಳಿಯ ನಟರಾಜ್ ಕಲಾ ಮಂದಿರದ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿಯಲ್ಲಿರುವ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಸಂಘದ ಚುನಾವಣಾ ಕಾರ್ಯಾಲಯದಲ್ಲಿ ಕಂಪ್ಲಿ ತಾಲೂಕು ಘಟಕದ ಕಾರ್ಯಕಾರಿ ಸಮಿತಿಯ ಚುನಾವಣೆ ಹಿನ್ನಲೆ ಸೋಮವಾರ ನಾಮಪತ್ರಗಳ ಪರೀಶೀಲನೆ ನಡೆಯಿತು.
ನಂತರ ಮುಖ್ಯ ಚುನಾವಣಾಧಿಕಾರಿ ಸಿ.ರಮೇಶ ಮಾತನಾಡಿ, ಕಂಪ್ಲಿ ತಾಲೂಕು ಘಟಕದ ಕಾರ್ಯಕಾರಿ ಸಮಿತಿಗೆ ಇಬ್ಬರು ಪುರುಷರ ಮತ್ತು ಓರ್ವ ಮಹಿಳಾ ಸ್ಥಾನ ಹುದ್ದೆ ಇದ್ದು, ಈ ಚುನಾವಣೆಯಲ್ಲಿ ಪುರುಷ ಸ್ಥಾನದ ಕಾರ್ಯಕಾರಿ ಸಮಿತಿಗೆ ಶಿಕ್ಷಕರಾದ ಹನುಮಂತಪ್ಪ, ಹಡಪದ ಜಡೆಪ್ಪ, ರೇವಣಸಿದ್ದೇಶ್ವರ, ಜೋಗಿ ನಾಯ್ಕ ರುದ್ರ್ಪ, ಹೆಚ್.ದೊಡ್ಡಬಸಪ್ಪ ಹಾಗೂ ಮಹಿಳಾ ಸ್ಥಾನಕ್ಕೆ ಐ.ಗಂಗಮ್ಮ ಇವರು ನಾಮಪತ್ರ ಸಲ್ಲಿಸಿದ್ದರು.
ಈಗ ನಾಮಪತ್ರಗಳನ್ನು ಪರೀಶೀಲಿಸಿದ್ದು, ಒಟ್ಟು 6 ಜನ ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿರುವುದರಿಂದ ಸ್ವೀಕೃತಗೊಂಡಿವೆ. ಅಚ್ಚುಕಟ್ಟಾಗಿ ಚುನಾವಣೆ ನಡೆಸಲಾಗುವುದು. ಏ.14ರಂದು ನಾಮಪತ್ರ ವಾಪಸ್ಸು ಪಡೆಯುವ ಅವಕಾಶವಿದೆ. ಮತ್ತು ಅಂತಿಮ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುವುದು. ಏ.19ರಂದು ಮತದಾನ ಪ್ರಕ್ರಿಯೆ ನಡೆಯಲಿದೆ. ಸಂಜೆ ಮತ ಎಣಿಕೆ ನಡೆಯಲಿದ್ದು, ಫಲಿತಾಂಶ ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಮಹಿಳಾ ಸ್ಥಾನಕ್ಕೆ ಅಧಿಕೃತ ಘೋಷಣೆಯೊಂದು ಬಾಕಿ : ಇಲ್ಲಿನ ಕಾರ್ಯಕಾರಿ ಸಮಿತಿಯ ಮಹಿಳಾ ಸ್ಥಾನಕ್ಕೆ ಸಹ ಶಿಕ್ಷಕಿ ಐ.ಗಂಗಮ್ಮ ಒಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನಲೆ ಅವಿರೋಧವಾಗಿ ಆಯ್ಕೆಗೊಂಡಿದ್ದು, ಚುನಾವಣಾಧಿಕಾರಿಗಳಿಂದ ಅಧಿಕೃತ ಘೋಷಣೆಯೊಂದು ಬಾಕಿ ಉಳಿದೆ. ಉಳಿದ ಎರಡು ಸ್ಥಾನದ ಪುರುಷ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಐದು ಜನ ಅಭ್ಯರ್ಥಿಗಳು ಕಣದಲ್ಲಿದ್ದು, ಚುನಾವಣಾ ಕಣ ರಂಗೇರುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿ ನಾಗರಾಜ ಇದ್ದರು.