ಮುದ್ದೆಬಿಹಾಲ್

50 ದಿನ ಪೂರೈಸಿದ ಧರಣಿ: ಅಧಿಕಾರಿಯಿಂದ ಸದಸ್ಯತ್ವ ರದ್ಧತಿಯ ಬೆದರಿಕೆ

50 ದಿನ ಪೂರೈಸಿದ ಧರಣಿ: ಅಧಿಕಾರಿಯಿಂದ ಸದಸ್ಯತ್ವ ರದ್ಧತಿಯ ಬೆದರಿಕೆ

ಮುದ್ದೇಬಿಹಾಳ : ಪಿಡಿ ಸಾಹೇಬ್ರು ಬಂದು ನಮಗೆ ಧಮಕಿ ಕೊಡ್ತಾರೆ.ನೀವು ಕ್ಲಿಯರೆನ್ಸ್‌ ಕೊಡದಿದ್ದ ಕಾರಣ ಮುಂದಿಟ್ಟು ನಿಮ್ಮ ಸದಸ್ಯತ್ವ ರದ್ದುಗೊಳಿಸುವುದಾಗಿ ಬೆದರಿಕೆ ಹೇಳುತ್ತಿದ್ದಾರೆ ಎಂದು ಪುರಸಭೆ ಸದಸ್ಯ ಮಹೆಬೂಬ ಗೊಳಸಂಗಿ ಆರೋಪಿಸಿದರು. 

ಪಟ್ಟಣದ ಪುರಸಭೆ ಎದುರಿಗೆ ಕಳೆದ 50ದಿನಗಳಿಂದ ಮುಖ್ಯಾಧಿಕಾರಿ ಕಾರ್ಯವೈಖರಿಯ ವಿರುದ್ಧದ ಅಂಶಗಳ ಕುರಿತು ತನಿಖೆ ನಡೆಸಬೇಕು ಹಾಗೂ ಇನ್ನುಳಿದ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹ ಸ್ಥಳದಲ್ಲಿ ಪ್ರಥಮ ಪುಣ್ಯಸ್ಮರಣೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. 

ಯಾವುದೇ ಸದಸ್ಯನಿಗೆ ಅಧಿಕಾರಿಗಳು ಮೊದಲು ನೋಟಿಸ್ ನೀಡಬೇಕು.ಟ್ಯಾಕ್ಸ್‌ ತುಂಬಿದ್ದೀರಿ ಏನು ಎಂಬ ಬಗ್ಗೆ ಮಾಹಿತಿ ನೀಡಬೇಕು ಎಂದು ಪಿಡಿ ಕೇಳುತ್ತಾರೆ.ಸಿಪಿಐ ಅವರು 200 ಮೀಟರ್ ದೂರ ಕೂಡಬೇಕು ಎನ್ನುತ್ತಾರೆ.ಇಲ್ಲಿ ಅಧಿಕಾರಿಗಳು ತಮ್ಮ ಮನಸ್ಸಿಗೆ ಬಂದಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. 

ವಿಧಾನಸೌಧದಲ್ಲಿ ಯಡಿಯೂರ​‍್ಪ ಸಿಎಂ ಇದ್ದ ಅವಧಿಯಲ್ಲಿ ವಿಪಕ್ಷ ನಾಯಕರಾಗಿದ್ದ ಸಿದ್ಧರಾಮಯ್ಯನವರು ಮಂತ್ರಿಗಳನ್ನು ಕರೆದುಕೊಂಡು ವಿಧಾನಸೌಧದೊಳಗೆ ಅಹೋರಾತ್ರಿ ಧರಣಿ ನಡೆಸಿದ್ದಾರೆ.ಆದರೆ ನಮ್ಮ ಪಾಲಿಗೆ ಪುರಸಭೆಯೇ ವಿಧಾನಸೌಧ.ಇಲ್ಲಿ ಸಾರ್ವಜನಿಕರ ಹಣವನ್ನು ಅಧಿಕಾರಿಗಳು ಲೂಟಿ ಮಾಡಬಾರದೆಂಬ ಕಾರಣದಿಂದ ನಾವು ಧರಣಿ ಕೂತಿದ್ದೇವೆ ಎಂದು ಹೇಳಿದರು. 

ಸ್ಥಾಯಿ ಸಮಿತಿ ಅಧ್ಯಕ್ಷ ಶಿವು ಹರಿಜನ ಮಾತನಾಡಿ, ಕಳೆದ ಮೂರು ದಿನಗಳ ಹಿಂದೆ ಜಿಲ್ಲಾಡಳಿತ,ಸರಕಾರದ ಅಣಕು ಶವಪ್ರದರ್ಶನ ಮಾಡಿ ಅಂತ್ಯಕ್ರಿಯೆ ಮಾಡಿದ್ದೇವು ಇಂದು ಮೂರು ದಿನಗಳ ತಿಥಿ ಕಾರ್ಯ ಮಾಡಿದ್ದೇವೆ ಎಂದು ಹೇಳಿದರು. 

ನ್ಯಾಯ ಕೊಡಿ ಎಂದು ಕೇಳಿದರೆ ನೆಪಗಳನ್ನು ಹೇಳುತ್ತಿರುವ ಅಧಿಕಾರಿಗಳು ಜನಪ್ರತಿನಿಧಿಗಳು   ಹೇಳಿದಂತೆ ಕೇಳುತ್ತಿದ್ದಾರೆ.ಜಿಲ್ಲಾಡಳಿತದ ಅಧಿಕಾರಿಗಳೂ ಜನಪ್ರತಿನಿಧಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ಧರಣಿ ನಿರತ ಸದಸ್ಯರು ಆರೋಪಿಸಿದರು.ಈ ಸಂದರ್ಭದಲ್ಲಿ ಜಂಗಮ ಸಮಾಜದ ಯುವ ಮುಖಂಡ ಸದು ಮಠ ಇದ್ದರು. 


ಸುದ್ದಿ ಓದಿ