ಡಿಎಂಎಗೆ 396 ಪುಟುಗಳ ದಾಖಲೆ ಸಲ್ಲಿಕೆ:
52ನೇ ದಿನದ ಹೋರಾಟದಲ್ಲಿ ತನಿಖಾ ವರದಿ ಹಸ್ತಾಂತರ
ಮುದ್ದೇಬಿಹಾಳ : ಪಟ್ಟಣದ ಪುರಸಭೆ ಎದುರಿಗೆ ಮುಖ್ಯಾಧಿಕಾರಿ ಎಸ್.ಎಸ್.ಬಾಗಲಕೋಟ ಕಾರ್ಯವೈಖರಿ ಬಗ್ಗೆ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಳೆದ 52 ದಿನಗಳಿಂದ ಹೋರಾಟ ನಡೆಸುತ್ತಿರುವ ಪುರಸಭೆ ಸದಸ್ಯ ಮಹೆಬೂಬ ಗೊಳಸಂಗಿ,ಸ್ಥಾಯಿ ಸಮಿತಿ ಅಧ್ಯಕ್ಷ ಶಿವು ಹರಿಜನ ಅವರನ್ನು ಮೂರನೇ ಬಾರಿಗೆ ಭೇಟಿ ಮಾಡಿದ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಾಜಶೇಖರ ಡಂಬಳ ಅವರು ಬುಧವಾರ ಡಿಸಿ ನೇಮಿಸಿದ್ದ ತನಿಖಾ ತಂಡ ಸಲ್ಲಿಸಿದ್ದ ವರದಿಯನ್ನು ಹೋರಾಟಗಾರರಿಗೆ ಹಸ್ತಾಂತರಿಸಿದರು.
ಪಿಡಿ ರಾಜಶೇಖರ ಡಂಬಳ ಮಾತನಾಡಿ, ಆ,22 ರಂದು ಬೆಂಗಳೂರಿನ ಪೌರಾಡಳಿತ ನಿರ್ದೇಶಕರಿಗೆ ಜಿಲ್ಲಾಧಿಕಾರಿಗಳು ವರದಿ ಕಳುಹಿಸಿದ್ದಾರೆ.ತನಿಖಾ ವರದಿಯ 12 ಅಂಶಗಳ ಮಾಹಿತಿಯನ್ನು ತಮಗೆ ನೀಡಿದ್ದು ಧರಣಿ ಅಂತ್ಯಗೊಳಿಸುವಂತೆ ಮನವಿ ಮಾಡಿದರು.ಆದರೆ ಇದಕ್ಕೊಪ್ಪದ ಹೋರಾಟಗಾರರು, ನಮಗೆ ಮುಖ್ಯಾಧಿಕಾರಿ ಮೇಲೆ ಕ್ರಮ ಜರುಗಿಸಿರುವ ಕುರಿತು ಅಧಿಕೃತ ಆದೇಶ ಬರುವವರೆಗೂ ಹಾಗೂ ಮುದ್ದೇಬಿಹಾಳ ಪುರಸಭೆಗೆ ಮತ್ತೊಬ್ಬರನ್ನು ಪ್ರಭಾರಿಯಾಗಿ ನೇಮಿಸುವವರೆಗೂ ಹೋರಾಟ ಮುಂದುವರೆಸುವುದಾಗಿ ಹೇಳಿದರು.ಈ ವೇಳೆ ಹೋರಾಟಗಾರ ಹರೀಶ ನಾಟೀಕಾರ,ಅಧಿಕಾರಿಗಳು ಹೋರಾಟಗಾರರಿಗೆ ಮೊಸಳೆ ಕಣ್ಣೀರು ಒರೆಸಲು ಬಂದಿದ್ದಾರೆ ಎಂದು ಪಿಡಿ ವಿರುದ್ಧವೇ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಸಿಪಿಐ ಆನಂದ ವಾಘ್ಮೋಡೆ,ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ,ಉಪಾಧ್ಯಕ್ಷೆ ಶಹಜಾದಬಿ ಹುಣಚಗಿ,ಸದಸ್ಯ ಮಹ್ಮದರಫೀಕ ದ್ರಾಕ್ಷಿ,ಮಾಜಿ ಸದಸ್ಯ ಕಾಮರಾಜ ಬಿರಾದಾರ,ಮುಖಂಡ ಹುಸೇನ್ ಮುಲ್ಲಾ,ಸಂಗಪ್ಪ ಮೇಲಿನಮನಿ,ಸದು ಮಠ,ಪ್ರಶಾಂತ ಕಾಳೆ ಸೇರಿದಂತೆ ಹಲವರು ಇದ್ದರು.
ತನಿಖಾಧಿಕಾರಿಗಳಿಂದ 396 ಪುಟಗಳ ದಾಖಲೆ ಸಲ್ಲಿಕೆ: ಮುಖ್ಯಾಧಿಕಾರಿ ಎಸ್.ಎಸ್.ಬಾಗಲಕೋಟ ಅವರ ಮೇಲಿನ ಆರೋಪಗಳೂ ಸೇರಿದಂತೆ ಹೋರಾಟಗಾರರ 12 ಬೇಡಿಕೆಗಳಿಗೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಒಟ್ಟು 396 ಪುಟಗಳ ದಾಖಲೆಯನ್ನು ಡಿಎಂಎಗೆ ಸಲ್ಲಿಸಿದ್ದಾರೆ.ಇದರ ಆಧಾರದ ಮೇಲೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಡಿಸಿ ಪೌರಾಡಳಿತ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ದೀಡ್ ನಮಸ್ಕಾರ ಹೋರಾಟ ತಾತ್ಕಾಲಿಕ ಮುಂದಕ್ಕೆ: ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ನಿಧನದ ಹಿನ್ನೆಲೆಯಲ್ಲಿ ವಿಜಯಪುರದ ಅಂಬೇಡ್ಕರ್ ಸರ್ಕಲ್ನಿಂದ ಡಿಸಿ ಕಛೇರಿಯವರೆಗಿನ ದೀಡ್ ನಮಸ್ಕಾರ ಹೋರಾಟವನ್ನು ತಾತ್ಕಾಲಿಕವಾಗಿ ಮುಂದೂಡಿದ್ದೇವೆ ಎಂದು ಪುರಸಭೆ ಸದಸ್ಯರಾದ ಮಹೆಬೂಬ ಗೊಳಸಂಗಿ,ಸ್ಥಾಯಿ ಸಮಿತಿ ಅಧ್ಯಕ್ಷ ಶಿವು ಹರಿಜನ ತಿಳಿಸಿದ್ದಾರೆ.