ರಾಘವೇಂದ್ರ ತೀರ್ಥಗುರು ಸಾರ್ವಭೌಮರ 353ನೇ ಆರಾಧನಾ ಮಹೋತ್ಸವ
ಬಳ್ಳಾರಿ 21: ನಗರ ಸೇರಿದಂತೆ ಜಿಲ್ಲೆಯಾದ್ಯಂತ ರಾಘವೇಂದ್ರ ಸ್ವಾಮಿ ಮಠ ಸೇರಿದಂತೆ ವಿವಿಧ ದೇಗುಲಗಳಲ್ಲಿ ಬುಧವಾರ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ 353ನೇ ಆರಾಧನಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಬುಧವಾರ ಮಧ್ಯಾರಧಾನೆ ನಿಮಿತ್ತ ರಾಘವೇಂದ್ರ ತೀರ್ಥ ವೃಂದಾವನಕ್ಕೆ ವಿಶೇಷ ಪೂಜೆ, ಅಲಂಕಾರ, ಮಹಾನೈವೇದ್ಯ, ಮಹಾ ಮಂಗಳಾರತಿ ಸೇರಿದಂತೆ ವಿವಿಧ ಪೂಜೆಗಳನ್ನು ಮಾಡಲಾಯಿತು.
ನಗರದ ಸತ್ಯನಾರಾಯಣ ಪೇಟೆ ರಾಘವೇಂದ್ರ ಸ್ವಾಮಿ ಮಠ, ಬೆಂಗಳೂರು ರೋಡ್ ರಾಘವೇಂದ್ರ ಸ್ವಾಮಿ ಮಠ, ಕೌಲ್ ಬಜಾರ್ ಗಣಪತಿ ದೇವಾಲಯ, ಲಕ್ಷ್ಮೀ ನರಸಿಂಹ ದೇವಾಲಯ ಸೇರಿದಂತೆ ನಾನಾ ದೇಗುಲಗಳಲ್ಲಿ ಮಧ್ಯಾರಾಧನೆ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ವಿಶೇಷ ಪೂಜೆ: ನಗರದ ಎಸ್.ಎನ್.ಪೇಟೆ, ರಾಯಲ್ ಕಾಲೊನಿ ಸಂಜೀವರಾಯರು ಹಾಗೂ ರಾಘವೇಂದ್ರ ಸ್ವಾಮಿಗಳವರ ಮೃತ್ತಿಕಾ ವೃಂದಾವನ ಸನ್ನಿಧಾನದಲ್ಲಿ ರಾಘವೇಂದ್ರ ಸ್ವಾಮಿಗಳವರ ಮಧ್ಯಾರಾಧನ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಮಠದ ಸೇವಾ ಟ್ರಸ್ಟ್ ಅಧ್ಯಕ್ಷ ವಿ.ರಾಘವೇಂದ್ರ ಅವರ ನೇತೃತ್ವದಲ್ಲಿ ಬೆಳಿಗ್ಗೆ ಅಷ್ಟೋತ್ತರ ಪಾರಾಯಣ, ವಿಶೇಷ ಪೂಜೆ, ಅಲಂಕಾರ, ಮಹಾನೈವೇದ್ಯೆ, ಮಹಾ ಮಂಗಳಾರತಿ ಸೇರಿದಂತೆ ವಿವಿಧ ಪೂಜೆಗಳು ವಿಜೃಂಭಣೆಯಿಂದ ನಡೆದವು. ನಾನಾ ಕಡೆಯಿಂದ ಆಗಮಿಸಿದ ನೂರಾರು ಭಕ್ತರು ಗುರುರಾಯರ ದರ್ಶನ ಪಡೆದು ಭಕ್ತಿ ಸಮರ್ಿಸಿದರು. ಆಗಮಿಸಿದ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು. ವಿವಿಧ ಭಜನಾ ಮಂಡಳಿ ಸದಸ್ಯರಿಂದ ಸಾಮೂಹಿಕ ಭಜನೆ ನಡೆಯಿತು. ಆರಾಧನಾ ಮಹೋತ್ಸವ ಹಿನ್ನೆಲೆ ಶ್ರೀಮಠ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿತ್ತು. ವಿವಿಧ ಪಂಡಿತರಿಂದ ಉಪನ್ಯಾಸ ಕಾರ್ಯಕ್ರಮಗಳು ನಡೆದವು.