ಗೋಕಾಕ್

ಪ್ರತಿಶತ 100 ಅಂಕ ಪಡೆದ ವಿದ್ಯಾರ್ಥಿಗಳಿಗೆ 25 ಸಾವಿರ ಬಹುಮಾನ: ಹಿರೇಮಠ

ಪ್ರತಿಶತ 100 ಅಂಕ ಪಡೆದ ವಿದ್ಯಾರ್ಥಿಗಳಿಗೆ 25 ಸಾವಿರ ಬಹುಮಾನ: ಹಿರೇಮಠ

ಹಾರೂಗೇರಿ 27: ಮುಂಬರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಪಡೆದುಕೊಳ್ಳುವ ಸರ್ಕಾರಿ ಶಾಲೆಯ ಎಲ್ಲ ಮಕ್ಕಳಿಗೆ ತಲಾ 25 ಸಾವಿರ ರೂ. ಬಹುಮಾನ ನೀಡಲಾಗುವುದು ಎಂದು ಚಿಕ್ಕೋಡಿ ಡಯಟ್‌ನ ಉಪನ್ಯಾಸಕ ಎಸ್‌.ಬಿ.ಹಿರೇಮಠ ಹೇಳಿದರು. 

ಪಟ್ಟಣದ ಸರಕಾರಿ ಪ್ರೌಢಶಾಲೆಗೆ ಶುಕ್ರವಾರ ಭೇಟಿ ನೀಡಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ, ಪರೀಕ್ಷೆ ತಯಾರಿ ಬಗ್ಗೆ ಅವಲೋಕಿಸಿ ಮಾತನಾಡಿದ ಅವರು ಸರ್ಕಾರಿ ಶಾಲೆ ಮಕ್ಕಳಲ್ಲಿ ಪ್ರತಿಭೆಗೆ ಕೊರತೆಯಿಲ್ಲ. ಖಾಸಗಿ ಶಾಲೆಗಳ ಮಕ್ಕಳ ಶೈಕ್ಷಣಿಕ ಪ್ರಗತಿಗಿಂತ ಮುಂದಿದ್ದಾರೆ. ಅವರಿಗೆ ಪಾಲಕರ, ಶಿಕ್ಷಕರ ಸರಿಯಾದ ಮಾರ್ಗದರ್ಶನ ಸಿಕ್ಕಲ್ಲಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಬಲ್ಲರು ಎಂದರು. 

ಹಾರೂಗೇರಿ ಸರ್ಕಾರಿ ಪ್ರೌಢಶಾಲೆಯ 10 ನೇ ತರಗತಿ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಎಸ್‌ಎ1 ಪರೀಕ್ಷೆ ಬಗ್ಗೆ ಉತ್ತಮ ತಯಾರಿ ಮಾಡಿಕೊಂಡು ಪರೀಕ್ಷೆ ನಡೆಸುತ್ತಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ ಎಸ್‌.ಬಿ.ಹಿರೇಮಠ ಅವರು ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಕಾಳಜಿ ವಹಿಸಿ, ಮುಂಬರುವ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮವಾದ ಫಲಿತಾಂಶವನ್ನು ಸಾಧಿಸುವಂತೆ ಮಾರ್ಗದರ್ಶನ ನೀಡಿದರು. 

ಮತ್ತೋರ್ವ ಡಯಟ್ ಉಪನ್ಯಾಸಕರಾದ ಬಿ.ಬಿ.ಕೊಕಟನೂರ ಅವರು ಮಾತನಾಡಿ ಮಕ್ಕಳು ಸಮಾಜದ ಅಮೂಲ್ಯ ಆಸ್ತಿ. ವಿದ್ಯಾರ್ಥಿಗಳ ಬದುಕಿನಲ್ಲಿ ಎಸ್‌ಎಸ್‌ಎಲ್‌ಸಿ ಪ್ರಮುಖ ಮೆಟ್ಟಿಲಾಗಿದ್ದು, ನಿರಂತರ ಪ್ರಯತ್ನ, ಸತತ ಅಧ್ಯಯನ, ಸಮಯಕ್ಕೆ ಮಹತ್ವ ನೀಡಿ, ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದುಕೊಳ್ಳಬೇಕೆಂದು ಹೇಳಿದರು. 

ಪ್ರೌಢಶಾಲೆ ಮುಖ್ಯಾಧ್ಯಾಪಕಿ ಆರ್‌.ಬಿ.ಖೇಮಲಾಪುರೆ, ಶಿಕ್ಷಕರಾದ ಎಸ್‌.ಎಂ.ಹಿಪ್ಪರಗಿ, ಎಸ್‌.ಎಂ.ಜಮಾದಾರ, ಶಂಕರ ಜಾಲಿಹಾಳ, ಆರ್‌.ಕೆ.ಅಧ್ಯಾಪಕ, ಪಿ.ಎ.ಶೆಟ್ಟಿಗೌಡರ, ಸಂತೋಷ ಅಸ್ಕಿ, ಬಿ.ವಿ.ಪೂಜಾರಿ ಮೊದಲಾದ ಶಿಕ್ಷಕರು ಉಪಸ್ಥಿತರಿದ್ದರು. 


ಸುದ್ದಿ ಓದಿ