ಮಹಲಿಂಗಪುರ

ಓರ್ವ ಪರೀಕ್ಷಾರ್ಥಿಗೆ 24 ಪರೀಕ್ಷಾ ಸಿಬ್ಬಂದಿ ಕರ್ತವ್ಯ ನಿರ್ವಹಣೆ

ಓರ್ವ ಪರೀಕ್ಷಾರ್ಥಿಗೆ 24 ಪರೀಕ್ಷಾ ಸಿಬ್ಬಂದಿ ಕರ್ತವ್ಯ ನಿರ್ವಹಣೆ

ಮಹಾಲಿಂಗಪುರ 23: ಪಿಯುಸಿ ವಾರ್ಷಿಕ ಪರೀಕ್ಷೆಗಳು ಮಾ.1ರಿಂದ ಆರಂಭವಾಗಿ 22ರಂದು ಕೊನೆಗೊಂಡವು.  ಮಹಾಲಿಂಗಪುರದ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಶುಕ್ರವಾರ ಕೇವಲ ಓರ್ವ ವಿದ್ಯಾರ್ಥಿನಿ ಹಿಂದೀ ಪರೀಕ್ಷೆ ಬರೆದರೆ ಆಕೆಗಾಗಿ ಬರೊಬ್ಬರಿ 21 ಜನ ಪರೀಕ್ಷಾ ಸಿಬ್ಬಂದಿ ಕಾರ್ಯನಿರ್ವಹಿಸಿದರು. ಅಲ್ಲದೇ ಓರ್ವ ಪರೀಕ್ಷಾರ್ಥಿಗೆ ಅವಕಾಶ ಮಾಡಿಕೊಡುವ ಸಲುವಾಗಿ ಎಸ್‌ಸಿಪಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಪಿಯುಸಿ ವಿಭಾಗದ 60ಕ್ಕೂ ಹೆಚ್ಚು ಸಿಬ್ಬಂದಿ ಮಧ್ಯಾಹ್ನದ ನಂತರ ನಿಯಮಿತ ಕರ್ತವ್ಯಕ್ಕೆ ಹಾಜರಾಗಬೇಕಾಯಿತು.  

ಚಿಮ್ಮಡ ಗ್ರಾಮದ ಸರಕಾರಿ ಪಪೂ ಕಾಲೇಜಿನ ವಿದ್ಯಾರ್ಥಿನಿ ಅಸ್ಮಾ ಅಮೀರಸಾಬ ಕಡಿವಾಲ ವಾಣಿಜ್ಯ ವಿಭಾಗದಲ್ಲಿ ಪ್ರವೇಶ ಪಡೆದು ಕನ್ನಡ ಭಾಷಾ ವಿಷಯದ ಬದಲು ಹಿಂದಿ ಭಾಷೆ ಆಯ್ದುಕೊಂಡು ಸ್ವಂತ ಅಧ್ಯಯನ ಮಾಡಿದ್ದಳು. ಮಹಾಲಿಂಗಪುರ ಪರೀಕ್ಷಾ ಕೇಂದ್ರದಲ್ಲಿ ಎಲ್ಲರೊಂದಿಗೆ 5 ವಿಷಯಗಳ ಪರೀಕ್ಷೆ ಬರೆದಿದ್ದಳು. ಕೊನೆಯದಾಗಿ ಹಿಂದೀ ಪರೀಕ್ಷೆಗೆ ಏಕೈಕ ಅಭ್ಯರ್ಥಿಯಾಗಿ ಪರೀಕ್ಷೆ ಬರೆದಳು. ತಹಸೀಲ್ದಾರ ವಾಹನದಲ್ಲಿ ಭದ್ರತೆಯೊಂದಿಗೆ ಒಂದು ಪ್ರಶ್ನೆ ಪತ್ರಿಕೆ ಬಂದಿತು. ಎಲ್ಲ ಸಿಬ್ಬಂದಿ ಪರೀಕ್ಷಾರ್ಥಿಗೆ ಶುಭ ಹಾರೈಸಿ, ಆಕೆಯೊಂದಿಗೆ ಫೊಟೋ ಕ್ಲಿಕ್ಕಿಸಿಕೊಂಡರು. 

ಏಕೈಕ ಪರೀಕ್ಷಾರ್ಥಿಗಾಗಿ ವಿ.ಎಲ್‌.ನಾರಾಯಣಕರ (ಪರೀಕ್ಷಾ ಮುಖ್ಯಸ್ಥ), ಎಂ.ಎಂ.ಮುಲ್ಲಾ (ಜಂಟೀ ಮುಖ್ಯಸ್ಥ), ಪಿ.ಎಸ್‌.ಬಟವಾಲ (ಕಚೇರಿ ಅಧೀಕ್ಷಕಿ), ಅರುಣ ಖಾನಾಪುರ (ಉತ್ತರ ಪತ್ರಿಕೆ ಪಾಲಕ), ರಮೇಶ ಒಣರೊಟ್ಟಿ, ವೀರೇಶ ಬಿ, ಈಶ್ವರ ಹಲಗಿ, ವಿವೇಕ ದಿವಟೆ, ಎಸ್‌.ಕೆ,ರಾಠೋಡ (ಸಿಟ್ಟಿಂಗ್ ಸ್ಕಾ-್ವಡ್ಸ್‌), ಎ.ಕೆ.ಹಿಂಡಿಕರ (ಉಪತಹಸೀಲ್ದಾರ), ವೈ.ಎಂ.ಪಮ್ಮಾರ, ಶಿವಾನಂದ ಕುರಬೆಟ್ಟ, ಬಿ.ಆರ್‌.ಹೂಗಾರ (ಎಸ್ಕಾರ್ಟ್ಸ್‌), ಅನಿಲ್ ಭಜಂತ್ರಿ (ಚಾಲಕ), ಬಿ.ಎ.ಮುಡಶಿ, ಶಿವಲಿಂಗ ಶಿರಗುಪ್ಪಿ (ಆರೋಗ್ಯ ಇಲಾಖೆ), ಬಿ.ಬಿ.ಯಲ್ಲಟ್ಟಿ (ಕೊಠಡಿ ಮೇಲ್ವಿಚಾರಕ), ಗುರು ಮೂಶಪ್ಪಗೋಳ (ಕಚೇರಿ ಸಿಬ್ಬಂದಿ), ಶಂಕರ ಕಲ್ಲೋಳಿ, ತಿರುಮಲ ಜಮಾದಾರ, ಸುನಿತಾ ಚೌಗಲಾ, ಚನ್ನಯ್ಯ ಮಠಪತಿ (ಸಿಪಾಯಿಗಳು), ಸುರೇಶ ಪೂಜೇರಿ (ವಾಚಮನ್) ಹಾಗೂ ಓರ್ವ ಪೊಲೀಸ್ ಪೇದೆ ಕರ್ತವ್ಯ ನಿರ್ವಹಿಸಿದರು. 


ಸುದ್ದಿ ಓದಿ