ಬಳ್ಳಾರಿ

ಆಪ್ತ ಸಮಾಲೋಚನೆಯು ಸಾಮಾಜಿಕ ಜವಾಬ್ದಾರಿ; ಡಾ. ಪಾಂಡುರಂಗಿ

ಆಪ್ತ ಸಮಾಲೋಚನೆಯು ಸಾಮಾಜಿಕ ಜವಾಬ್ದಾರಿ; ಡಾ. ಪಾಂಡುರಂಗಿ

ಬಳ್ಳಾರಿ 03 : ಆಪ್ತ ಸಮಾಲೋಚನೆ ಒಂದು ಕಲೆ, ಇದು ಒಂದು ಮಾದರಿಯ ಸಾಮಾಜಿಕ ಜವಾಬ್ದಾರಿಯಾಗಿದ್ದು, ಇದನ್ನು ಪ್ರಾಮಾಣಿಕವಾಗಿ, ನಿಷ್ಪಕ್ಷಪಾತವಾಗಿ ಮತ್ತು ಪರಾನುಭೂತಿಯಿಂದ ಆಪ್ತ ಸಮಾಲೋಚಕರು ನಿರ್ವಹಿಸಬೇಕು ಎಂದು ಧಾರವಾಡದ ಖ್ಯಾತ ಮನೋವೈದ್ಯರು ಮತ್ತು ಶಾಂತಿಧಾಮ ಮನೋ ಆಸ್ಪತ್ರೆ ಸಂಸ್ಥಾಪಕರು ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಆನಂದ ಪಾಂಡುರಂಗಿ ಹೇಳಿದರು.

ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಎಸ್ ಆರ್ ಎಚ್ (ಸಂತಾನೋತ್ಪತ್ತಿ ಮತ್ತು ಲೈಂಗಿಕ ಆರೋಗ್ಯ) ಕೇಂದ್ರ ಮತ್ತು ಎಫ್‍ಪಿಎಐ (ಭಾರತೀಯ ಕುಟುಂಬ ಯೋಜನೆ ಸಂಘ) ಜಂಟಿಯಾಗಿ ಆಯೋಜಿಸಿರುವ ಎರಡು ದಿನಗಳ ಆಪ್ತಸಮಾಲೋಚನೆ ಕೌಶಲಗಳು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಗತ್ತಿನಲ್ಲಿರುವ ಪ್ರತಿ 6 ಜನರಲ್ಲಿ ಒಬ್ಬರಿಗೆ ಆಪ್ತ ಸಮಾಲೋಚನೆ ಅಗತ್ಯತೆ ಇದೆ. ಆದರೆ 70-80 ಪ್ರತಿಶತ ಜನ ಸಮಾಲೋಚಕರನ್ನು ಭೇಟಿಯಾಗದೆ ಖಿನ್ನತೆಗೆ ಒಳಗಾಗುತ್ತಾರೆ. ಅವರು ಮಾನಸಿಕವಾಗಿ ನೊಂದು ಆತ್ಮಹತ್ಯೆಗೆ ಮುಂದಾಗುತ್ತಾರೆ ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಸಿದ್ದು ಪಿ ಆಲಗೂರ ಮಾತನಾಡಿ, ಪುರುಷ ಮತ್ತು ಮಹಿಳೆಯರಿಬ್ಬರೂ ಖಿನ್ನತೆಯಿಂದ ಹೊರಬರಲು ಆಪ್ತಸಮಾಲೋಚಕರನ್ನು ಭೇಟಿ ಮಾಡಿ ಸಲಹೆ ಪಡೆದುಕೊಳ್ಳುವುದು ಉತ್ತಮ. ನರರೋಗ ಮತ್ತು ಮನೋವೈದ್ಯರಾಗಿ 35 ವರ್ಷಗಳ ಅಪಾರ ಅನುಭವ ಹೊಂದಿರುವ ಡಾ. ಪಾಂಡುರಂಗಿ ಅವರಿಂದ ಕಾರ್ಯಾಗಾರಕ್ಕೆ ಮೆರುಗು ಹೆಚ್ಚಿದೆ ಎಂದು ಹೇಳಿದರು.

ವಿತ್ತಾಧಿಕಾರಿಗಳಾದ ಡಾ. ಕೆ ಸಿ ಪ್ರಶಾಂತ್ ಮಾತನಾಡಿ, ಮಾನಸಿಕ ಸ್ವಾಸ್ಥ್ಯದ ಪ್ರಭುತ್ವ ಸಾಧಿಸಲು ಪ್ರತಿಯೊಬ್ಬರು ತಂತ್ರಜ್ಞಾನ ಮತ್ತು ಅಂತರ್ಜಾನ ಎರಡನ್ನು ಸಮರ್ಪಕವಾಗಿ ಬಳಕೆ ಮಾಡಬೇಕು. ಇದರಿಂದ ಜೀವನದ ಪ್ರತಿ ಹಂತದಲ್ಲೂ ಯಶಸ್ಸು ಸಾಧಿಸಲು ಸಾಧ್ಯವಿದೆ ಎಂದು ಹೇಳಿದರು. 

ವಿಶ್ವವಿದ್ಯಾಲಯದ ಕುಲಸಚಿವರು (ಮೌಲ್ಯಮಾಪನ) ಪ್ರೊ. ಶಶಿಕಾಂತ್ ಉಡಿಕೇರಿ, ಸಿಂಡಿಕೇಟ್ ಸದಸ್ಯರಾದ ಪದ್ಮಾ ವಿಠ್ಠಲ್, ಎಫ್‍ಪಿಎಐನ ಉಪಾಧ್ಯಕ್ಷರಾದ ವಿಜಯ ಸಿಂಹ, ಎಫ್‍ಪಿಎಐನ ಕಾರ್ಯದರ್ಶಿಗಳಾದ ಟಿ ಜಿ ವಿಠ್ಠಲ್, ವಿವಿಯ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ. ಜಿ ಪಿ ದಿನೇಶ್, ಎನ್‍ಎಸ್‍ಎಸ್ ಸಂಯೋಜನಾಧಿಕಾರಿ ಡಾ. ಗೌರಿ ಮಾಣಿಕ್ ಮಾನಸ, ಡಾ. ಸಂತೋಷ್ ಜಿ ಕೆ, ಆಪ್ತಸಮಾಲೋಚನ ತರಬೇತಿದಾರರಾದ ಪ್ರಶಾಂತ್ ಮತ್ತು ಅನಂತರಾಮು ಕಾರ್ಯಕ್ರಮದಲ್ಲಿದ್ದರು. ವಿಶ್ರೀಕೃವಿವಿಯ ಸಹಾಯಕ ಪ್ರಾಧ್ಯಾಪಕರಾದ ರಾಕೇಶ ವಿ ತಾಳಿಕೋಟಿ ಅತಿಥಿ ಪರಿಚಯ ಮಾಡಿದರು. ಡಾ. ಗಿರಿಗೌಡ ನಿರೂಪಿಸಿದರು. ಎಫ್‍ಪಿಎಐನ ಮ್ಯಾನೇಜರ್ ವಿಜಯಲಕ್ಷ್ಮಿ ವಂದಿಸಿದರು. ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

ಸುದ್ದಿ ಓದಿ