4 ವರ್ಷದ ಬಿಜೆಪಿ ಅಧಿಕಾರವಧಿಯಲ್ಲಿ 15.72 ಕೋಟಿ ಸಚಿವರ ಪ್ರಯಾಣ ಭತ್ಯೆ : ನಂ1 ಸ್ಥಾನದಲ್ಲಿ ಕೋಟಾ ಶ್ರೀನಿವಾಸ
ಬೆಳಗಾವಿ : ರಾಜ್ಯದಲ್ಲಿ ಈ ಹಿಂದೆ ಅಧಿಕಾರದಲ್ಲಿ ಇದ್ದ ಬಿಜೆಪಿ ಸರಕಾರವು ಸಚಿವರ ಪ್ರಯಾಣದ ಹೆಸರಲ್ಲಿ ರಾಜ್ಯದ ತೆರಿಗೆ ಹಣವನ್ನು ಕೊಳ್ಳೆ ಹೊಡೆದಿದ್ದು, 4 ವರ್ಷಗಳಲ್ಲಿ 15 ಕೋಟಿ 72 ಲಕ್ಷ ದುಂದುವೆಚ್ಚ ಮಾಡಲಾಗಿದೆ. ಅದರಲ್ಲಿ ಬಿಜೆಪಿ ಸರ್ಕಾರದ ಸಚಿವರುಗಳಲ್ಲಿ ಅತ್ಯಂತ ಸರಳ, ಸಜ್ಜನ ಸ್ವಭಾವದ
ಸಚಿವರೆಂದೇ ಖ್ಯಾತಿ ಪಡೆದಿದ್ದ ಕೋಟಾ ಶ್ರೀನಿವಾಸ ಪೂಜಾರಿ ಅವರು 4 ವರ್ಷಗಳಲ್ಲಿ 1 ಕೋಟಿ 26 ಲಕ್ಷ 71 ಸಾವಿರದಾ 674 ರೂ ಪ್ರಯಾಣ ಭತ್ಯೆ ಪಡೆದು ಪ್ರಥಮ ಸ್ಥಾನದಲ್ಲಿದ್ದಾರೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಭೀಮಪ್ಪ ಗಡಾದ ಅವರು, ರಾಜ್ಯದಲ್ಲಿ 2019-20 ನೇ ಸಾಲಿನಿಂದ 2022-23 ನೇ ಸಾಲಿನವರೆಗಿನ ಬಿ.ಜೆ.ಪಿ. ಸರ್ಕಾರದ ಅವಧಿಯಲ್ಲಿನ ಸಚಿವರುಗಳ ಪ್ರಯಾಣ ಭತ್ಯೆಯ ಸಲುವಾಗಿ ರಾಜ್ಯ ಖಜಾನೆಯಿಂದ 15 ಕೋಟಿ 72 ಲಕ್ಷ 72 ಸಾವಿರದಾ 727 ರೂ.ಗಳನ್ನು ವೆಚ್ಚ ಮಾಡಲಾದ ಅಂಶವು ಮಾಹಿತಿ ಹಕ್ಕಿನಿಂದ ಬೆಳಕಿಗೆ ಬಂದಿದೆ. ಅದರಂತೆ ಪಶು ಸಂಗೋಪನಾ ಸಚಿವರಾಗಿದ್ದ ಪ್ರಭು ಚವ್ಹಾಣ ಅವರು99,15,442/- ರೂ.ಗಳ ಪ್ರಯಾಣ ಭತ್ಯೆ ಪಡೆದು ಎರಡನೆಯ ಸ್ಥಾನದಲ್ಲಿದ್ದರೆ, ಕೇವಲ 1,44,100 ರೂ.ಗಳ ಪ್ರಯಾಣ ಭತ್ಯೆ ಪಡೆದಿರುವ ಸಿ.ಪಿ. ಯೋಗೇಶ್ವರ ಅವರು ಮೂರನೇ ಸ್ಥಾನದಲ್ಲಿದ್ದು ಇತರ ಸಚಿವರೆಲ್ಲರಿಗೂ ಮಾದರಿಯಾಗಿದ್ದಾರೆ.
ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ಐಶಾರಾಮಿ ಹವಾನಿಯಂತ್ರಿತ ಫಾರ್ಚುನರ್, ಇನೋವಾ ಮುಂತಾದ ವಾಹನಗಳು ಮಾರುಕಟ್ಟೆಯಲ್ಲಿ ಪ್ರತಿ ಕಿಲೋ ಮೀಟರ್ ಗೆ 18ರಿಂದ 20 ರೂ.ಗಳಂತೆ ಬಾಡಿಗೆ ಸಿಗುತ್ತವೆ ಆದರೆ ಸರ್ಕಾರದ ಹಣದಲ್ಲಿಯೇ ಖರಿದೀಸಿ ಈ ವಾಹನಗಳನ್ನು ಸಚಿವರುಗಳಿಗೆ ನೀಡಲಾಗುತ್ತಿದೆ ಹಾಗೂ ಈ ವಾಹನಗಳ ಚಾಲಕರ ವೇತನವನ್ನು ಕೂಡಾ ಸರ್ಕಾರವೇ ನೀಡುತ್ತಿರುವಾಗ ಈ ಕಾರುಗಳಲ್ಲಿ ಪ್ರಯಾಣಿಸುವ ಸಚಿವರುಗಳಿಗೆ ಪ್ರತಿ ಕಿಲೋ ಮೀಟರ್ ಗೆ 40 ರೂ.ಗಳಂತೆ ಸರ್ಕಾರದಿಂದ ಪ್ರಯಾಣ ಭತ್ಯೆ
ನೀಡುತ್ತಿರುವುದು ಎಷ್ಟು ಸಮಂಜಸವೆಂಬುದು ರಾಜ್ಯದ ಪ್ರತಿಯೊಬ್ಬ ಸಾರ್ವಜನಿಕರ ಪ್ರಶ್ನೆಯಾಗಿದೆ ಎಂದು ಗಡಾದ ಹೇಳಿದ್ದಾರೆ.ಸಚಿವರುಗಳು ಬೆಂಗಳೂರಲ್ಲಿ ಕಛೇರಿಗಳ ನಿತ್ಯದ ಕೆಲಸಗಳ ಸಲುವಾಗಿ ಹಾಗೂ ಅವರ ಕ್ಷೇತ್ರಕ್ಕೆ ಹೋದಾಗ ಕ್ಷೇತ್ರದ ಹಳ್ಳಿಗಳಲ್ಲಿ ಪ್ರಯಾಣ ಮಾಡುವ ಸಲುವಾಗಿ ಇದೇ ಸಚಿವರುಗಳಿಗೆಸರ್ಕಾರದಿಂದಲೇ ಪ್ರತಿ ತಿಂಗಳು 2000 ಲೀಟರ್ ಇಂಧನ ಭತ್ಯೆ ನೀಡುತ್ತಿರುವ ವಿಷಯವು ಬಹಳ ಜನರಿಗೆ ಗೊತ್ತಿರುವುದಿಲ್ಲ.
ಇತ್ತೀಚಿಗೆ ಸಾರ್ವಜನಿಕರ ತೆರಿಗೆ ಹಣದಲ್ಲಿಯೇ 10 ಕೋಟಿ ರೂ.ಗಳ ವೆಚ್ಚದಲ್ಲಿ 33 ಹೊಸ ಕಾರುಗಳನ್ನು ಸಚಿವರ ಸಲುವಾಗಿಯೇ ಖರೀದಿ ಮಾಡಿರುವುದನ್ನು ರಾಜ್ಯದ ಜನತೆ ಇನ್ನೂ ಮರೆತಿರುವುದಿಲ್ಲ. ಸರ್ಕಾರಕ್ಕೆ ಉಂಟಾಗುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೌಕರರನ್ನು ನೇರ ನೇಮಕ ಮಾಡಿಕೊಳ್ಳದ ಸರ್ಕಾರ ವಿವಿಧ ಏಜೆನ್ಸಿ ಹಾಗೂ ಎನ್ ಜಿಓ ಗಳ ಮುಖಾಂತರ ಹೊರಗುತ್ತಿಗೆ ಆಧಾರದಮೇಲೆ ಕೆಲಸಗಾರರನ್ನು ನೇಮಕ ಮಾಡಿಕೊಳ್ಳತ್ತಲಿದೆ. ಅಲ್ಲದೇ ಸರ್ಕಾರಿ ಅಧಿಕಾರಿಗಳ ಉಪಯೋಗಕ್ಕಾಗಿ ಅವಶ್ಯವಿರುವ ವಾಹನಗಳನ್ನು ಕೂಡಾ ಖಾಸಗಿಯವರಿಂದ ಬಾಡಿಗೆಆಧಾರದ ಮೇಲೆ ಪಡೆದುಕೊಳ್ಳುವಂತೆ ಸರ್ಕಾರವು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ಕೂಡಾ ನೀಡಿರುತ್ತದೆ.
ಇದರಂತೆಯೆ ಸಚಿವರುಗಳ ಉಪಯೋಗಕ್ಕಾಗಿ ಸಹ ವಾಹನಗಳನ್ನು ಖಾಸಗಿ ಏಜೆನ್ಸಿಗಳಮೂಲಕ ಬಾಡಿಗೆ ಪಡೆದರೆ ವಾಹನಗಳ ಖರೀದಿಗೆ ಬೇಕಾಗುವ ಹಣ ಮತ್ತು ಚಾಲಕರುಗಳಿಗೆ ಪ್ರತಿ ತಿಂಗಳು ನೀಡಬೇಕಾದ ವೇತನದ ಹಣ ಎರಡು ಕೂಡಾ ಸರ್ಕಾರಕ್ಕೆ ಉಳಿತಾಯವಾಗುತ್ತದೆಎಂಬ ವಿಷಯವು ವಿಧಾನಸೌಧದಲ್ಲಿರುವ ಸಚಿವರುಗಳು ಹಾಗೂ ಅಧಿಕಾರಿಗಳಿಗೆ ಗೊತ್ತಾಗುತ್ತಿಲ್ಲವೇ? ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದ್ದು ಸರ್ಕಾರ ಈ ಕುರಿತು ಗಂಭೀರ ಚಿಂತನೆ ನಡೆಸುವುದು ಅವಶ್ಯವಿದೆ ಎಂದು ಭೀಮಪ್ಪ ಗಡಾದ ಅವರು ತಿಳಿಸಿದ್ದಾರೆ.