ಬೆಳಗಾವಿ ಸುವರ್ಣ ಸೌಧ, ವಿಧಾನ ಸೌಧಕ್ಕೆ 5 ವರ್ಷಕ್ಕೆ 12 ಕೋಟಿ 17 ಲಕ್ಷ ವಿದ್ಯುತ್ ಬಿಲ್ : ಸುಟ್ಟ ಬಲ್ಬಗಳ ಮಾಹಿತಿ ನೀಡದಿರುವದು ಅನುಮಾನಕ್ಕೆ ಕಾರಣ : ಗಡಾದ

ಬೆಳಗಾವಿ ಸುವರ್ಣ ಸೌಧ, ವಿಧಾನ ಸೌಧಕ್ಕೆ 5 ವರ್ಷಕ್ಕೆ 12 ಕೋಟಿ 17 ಲಕ್ಷ ವಿದ್ಯುತ್ ಬಿಲ್ : ಸುಟ್ಟ ಬಲ್ಬಗಳ ಮಾಹಿತಿ ನೀಡದಿರುವದು ಅನುಮಾನಕ್ಕೆ ಕಾರಣ : ಗಡಾದ

ಬೆಳಗಾವಿ : ಬೆಳಗಾವಿಯ ಸುವರ್ಣ ಸೌಧ ಹಾಗೂ ಬೆಂಗಳೂರಿನ ವಿಧಾನ ಸೌಧಗಳಿಗೆ ಕಳೆದ 5 ವರ್ಷಗಳಲ್ಲಿ 12 ಕೋಟಿ 17 ಲಕ್ಷ ರೂ. ಗಳನ್ನು ಪಾವತಿ ಮಾಡಲಾಗಿದ್ದು, ಆದರೆ ಇಲ್ಲಿ ಸುಟ್ಟ ಬಲ್ಬಗಳನ್ನು ಬದಲಾಯಿಸಲು ಮತ್ತು ವಿದ್ಯುತ್ ಕಛೇರಿಯ ಸಲುವಾಗಿ ವೆಚ್ಚ ಮಾಡಿದ ಮಾಹಿತಿಯನ್ನು ಅಧಿಕಾರಿಗಳು ಬಹಿರಂಗ ಪಡಿಸದೇ ಇರುವುದು ಹಲವಾರು ಅನುಮಾನಗಳನ್ನು ಹುಟ್ಟು ಹಾಕುತ್ತಿದ್ದು, ಈ ಕುರಿತು ಸರಕಾರ ಸ್ಪಷ್ಟನೆ ನೀಡುವಂತೆ ಮೂಡಲಗಿಯ ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಅವರು ಒತ್ತಾಯಿಸಿದ್ದಾರೆ.   

   ಈ ಕುರಿತು ಪತ್ರಿಕಾ ಪ್ರಕಟನೆ ನೀಡಿರುವ ಗಡಾದ ಅವರು, ಕಳೆದ ದಿ. 1-4-2018ರಿಂದ 1-5-2023ರ ವರೆಗಿನ 5 ವರ್ಷಗಳ ಅವಧಿಯಲ್ಲಿ ಬೆಂಗಳೂರಿನ ವಿಧಾನಸೌಧ ಹಾಗೂ ಬೆಳಗಾವಿಯ ಸುವರ್ಣ ಸೌಧದಲ್ಲಿರುವ ಕಛೇರಿಗಳಲ್ಲಿ ಬಳಕೆ ಮಾಡಲಾಗಿರುವ ವಿದ್ಯುತ್ ಬಿಲ್ ಸಲುವಾಗಿ ಒಟ್ಟು 12,17,16,914 ರೂ.ಗಳನ್ನು ಸರ್ಕಾರದಿಂದ ವಿದ್ಯುತ್ ನಿಗಮಕ್ಕೆ ಪಾವತಿಸಲಾಗಿದೆ. ಅದರಂತೆ ಬೆಂಗಳೂರಿನ ವಿಧಾನ ಸೌಧದಲ್ಲಿರುವ ಕಛೇರಿಗಳ ವಿದ್ಯುತ್ ಬಿಲ್ 8,47,10,396 ರೂ.ಗಳು ವೆಚ್ಚವಾಗಿದೆ. ಬೆಳಗಾವಿಯ ಸುವರ್ಣ ಸೌಧದಲ್ಲಿರುವ ಕಛೇರಿಗಳ ವಿದ್ಯುತ್ ಬೆಳಕಿಗೆ 3,70,00,6518 ರೂ.ಗಳು ವೆಚ್ಚ ಹೀಗೆ ಒಟ್ಟು 5 ವರ್ಷದಲ್ಲಿ 12 ಕೋಟಿ 17 ಲಕ್ಷ ಎರಡು ವಿಧಾನ ಸೌಧಗಳ ವಿದ್ಯುತ್ ಬಿಲ್‌ನ್ನು ಪಾವತಿಸಲಾಗಿದೆ. 

    ಅದರಂತೆ ಸ್ವಾತಂತ್ರ್ಯ ದಿನಾಚರಣೆ ಮತ್ತು 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಾಗೂ ಗಣರಾಜ್ಯೋತ್ಸವದ ಪ್ರಯಕ್ತ ಅಲ್ಲದೇ ರಾಷ್ಟ್ರಪತಿಗಳು ಬೆಂಗಳೂರಿಗೆ ಆಗಮಿಸಿದ ಸಮಯದಲ್ಲಿ ವಿಧಾನ ಸೌಧ ಮತ್ತು ಸುವರ್ಣ ಸೌಧಗಳ ವಿಶೇಷ ದೀಪಾಲಂಕಾರಕ್ಕಾಗಿ 1,32,20,654 (01 ಕೋಟಿ 32 ಲಕ್ಷ 20 ಸಾವಿರದ 654) ರೂ.ಗಳು ವೆಚ್ಚವಾಗಿರುವ ಅಂಶವು ಮಾಹಿತಿ ಹಕ್ಕಿನಿಂದ ಬೆಳಕಿಗೆ ಬಂದಿದೆ. 

   ಇದರಲ್ಲಿ ಗಮನಿಸಬೇಕಾದ ಅಂಶಗಳೆಂದರೆ ದಿ. 27-9-2022ರಂದು ರಾಷ್ಟಪತಿಗಳು ಬೆಂಗಳೂರಿಗೆ ಆಗಮಿಸಿದ ಸಮಯದಲ್ಲಿ ವಿಧಾನಸೌಧಕ್ಕೆ ವಿಶೇಷ ದೀಪಾಲಂಕಾರ ಮಾಡಿದ್ದು, ಇದಕ್ಕಾಗಿ 13,55,517 ರೂ.ಗಳನ್ನು ವೆಚ್ಚ ಮಾಡಲಾಗಿದೆ. 2021ರ ಎಪ್ರಿಲ್ ತಿಂಗಳಲ್ಲಿ ಅತೀ ಹೆಚ್ಚು ವಿದ್ಯುತ್ ಬಿಲ್ಲು ಅಂದರೆ 29,38,997 ರೂ.ಗಳು ಬಂದಿದ್ದರೆ 2019ರ ಜುಲೈ ತಿಂಗಳ ಒಂದಕ್ಕೆ ಕೇವಲ 69,964 ರೂ.ಗಳು ಬಿಲ್ ಬಂದಿರುವುದು.

   ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿಗಳು ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆಗಳು ವಿವಿಧ ವಿದ್ಯುತ್ ಕಂಪನಿಗಳಿಗೆ ಹಲವಾರು ವರ್ಷಗಳಿಂದ ಸಾವಿರಾರು ಲಕ್ಷ ಕೋಟಿ ರೂ.ಗಳಷ್ಟು ವಿದ್ಯುತ್ ಬಾಕಿ ಪಾವತಿಸಬೇಕಾಗಿದೆ ಆದರೆ ವಿಧಾನಸೌಧ, ಸುವರ್ಣ ಸೌಧಗಳಲ್ಲಿಯ ಕಛೇರಿಗಳ ಬಾಕಿಯನ್ನು ಅಲ್ಲಿನ ಅಧಿಕಾರಿಗಳು ಪ್ರತಿ ತಿಂಗಳು ತಪ್ಪದೇ ತುಂಬುತ್ತ ಬಂದಿರುವುದು ಸಮಾಧಾನಕರವಾಗಿದೆ. 

     ವಿಧಾನ ಸೌಧ ಮತ್ತು ಸುವರ್ಣ ಸೌಧ ಇವೇರಡು ಕಛೇರಿಗಳಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳು ದಿನನಿತ್ಯ 6ರಿಂದ 7 ಗಂಟೆಗೆ ತಮ್ಮ ಮನೆಗಳಿಗೆ ತೆರಳುತ್ತಾರೆ. ಅಧಿವೇಶನಗಳ ಸಮಯದಲ್ಲಿ ಮಾತ್ರ ಕೆಲವು ಅಧಿಕಾರಿಗಳು, ಸಿಬ್ಬಂದಿಗಳು ಹೆಚ್ಚಿನ ಸಮಯ ಕಛೇರಿಯಲ್ಲಿ ಇರಬೇಕಾಗುವುದು, ಆದರೂ ಕೂಡಾ ಅಧಿಕಾರಿ, ಸಿಬ್ಬಂದಿಗಳು ಕಛೇರಿಗಳಿಂದ ಹೊರ ಹೋಗುವಾಗ ವಿದ್ಯುತ್ ಬಲ್ಬಗಳನ್ನು ಬಂದ ಮಾಡಿ ಹೋದರೆ ಹೆಚ್ಚಿನ ಪ್ರಮಾಣದಲ್ಲಿ ಸರಕಾರಕ್ಕೆ ಉಳಿತಾಯ ಆಗಬಹುದಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ ಎಂದು ಭೀಮಪ್ಪ ಗಡಾದ ಅವರು ತಿಳಿಸಿದ್ದಾರೆ. 


ಸುದ್ದಿ ಓದಿ