11 ನೇ ತಾರೀಖು, 12:46 ಗಂಟೆ… ಏನಿದರ ರಹಸ್ಯ..?!
ಬೆಂಗಳೂರು10 : ಸುಮಾರು 7 ವರ್ಷದಿಂದ ಡೈರೆಕ್ಷನ್ ಗೋಜಿಗೆ ಹೋಗದೇ ಆಕ್ಟಿಂಗು ಪ್ಲಸ್ ಪ್ರಜಾಕೀಯದ ಮೀಟಿಂಗು ಮಾಡ್ಕೊಂಡೇ ಕಾಲ ಕಳೆದ ಸ್ಯಾಂಡಲ್ ವುಡ್ನ ಬುದ್ಧಿವಂತ, ರಿಯಲ್ ಸ್ಟಾರ್ ಉಪೇಂದ್ರ ಅವರ ಕೈಯ್ಯಲ್ಲಿ ಸದ್ಯಕ್ಕಂತೂ ಮೂರ್ನಾಲ್ಕು ಸಿನಿಮಾಗಳಿವೆ.ಅವರ ‘ಹೋಮ್ ಮಿನಿಸ್ಟರ್’ ಶೀರ್ಷಿಕೆಯ ಚಿತ್ರವೊಂದು ರಿಲೀಸ್ಗೆ ರೆಡಿಯಾಗಿದ್ದು, ‘ಕಬ್ಜ’, ‘ಲಗಾಮ್’ ಸಿನಿಮಾಗಳ ಶೂಟಿಂಗ್ ನಡೆಯುತ್ತಿವೆ.ಈ ಮಧ್ಯೆ ಉಪ್ಪಿ ಅಭಿಮಾನಿಗಳಿಂದ ಸದಾ ಎದುರಾಗುತ್ತಿರುವ ಪ್ರಶ್ನೆ “ಯಾವಾಗ ಡೈರೆಕ್ಷನ್ ಮಾಡ್ತೀರಾ ಸರ್..?” ಅಂತ. ಇದೀಗ ಅವರ ಪ್ರಶ್ನೆಗೆ ಉತ್ತರ ಸಿಗೋ ಸಮಯ ಹತ್ತಿರ ಬರ್ತಿದೆ ಅಂತ ಕಾಣುತ್ತೆ. ಮಾರ್ಚ್ 11 ಡೇಟ್ ಸೇವ್ ಮಾಡಿಕೊಳ್ಳಿ ಎಂದು ಡೇಟ್ ಅನೌನ್ಸ್ ಮಾಡಿ ನಟ ಉಪೇಂದ್ರ ಕುತೂಹಲ ಮೂಡಿಸಿದ್ದಾರೆ.ಈ ಬಗ್ಗೆ ನಟ ಹಾಗೂ ನಿರ್ದೇಶಕ ಉಪೇಂದ್ರ ಟ್ವೀಟ್ ಮಾಡಿದ್ದು, ಮಾರ್ಚ್ 11, ಮಧ್ಯಾಹ್ನ 12;46ಕ್ಕೆ ವಿಶೇಷ ಅಪ್ಡೇಟ್ವೊಂದನ್ನು ಕೊಡಲಿದ್ದಾರೆ. ಅದು ಉಪ್ಪಿ ಡೈರೆಕ್ಷನ್ನಲ್ಲಿ ಮೂಡಿ ಬರುತ್ತಿರುವ ಸಿನಿಮಾನೇ ಇರಬಹುದೇನೋ ಎಂಬ ಚರ್ಚೆ ಗಾಂಧೀನಗರದಲ್ಲಿ ಸದ್ದು ಮಾಡುತ್ತಿದೆ.