ಶೃಂಗೇರಿ ಶಂಕರಮಠದಿಂದ 10 ಸಾವಿರ ಸೀಡ್ ಬಾಲ
ಬಳ್ಳಾರಿ22: ಪ್ರಕೃತಿ ಮತ್ತು ಪರಿಸರ ಕಾಪಾಡುವುದು ಪ್ರತಿಯೊಬ್ಬರ ಹೊಣೆ. ಹೀಗಾಗಿ, ಇಲ್ಲಿನ ಸಂಗನಕಲ್ಲು ರಸ್ತೆಯಲ್ಲಿರುವ ಶೃಂಗೇರಿ ಶಂಕರ ಮಠದ ವತಿಯಿಂದ 10 ಸಾವಿರ ಸೀಡ್ ಬಾಲ್ ಗಳನ್ನು ತಯಾರಿಸಿ ಸಂಡೂರಿನ ಬೆಟ್ಟದ ತಪ್ಪಲಿನಲ್ಲಿ ಎಸೆಯಲಾಗಿದೆ.
ಶೃಂಗೇರಿಯ ಮಹಾಸನ್ನಿಧಾನಂ ಜಗದ್ಗುರು ಭಾರತೀತೀರ್ಥ ಸ್ವಾಮೀಜಿ ಮತ್ತು ಸನ್ನಿಧಾನಂ ಜಗದ್ಗುರು ವಿಧುಶೇಖರ ಭಾರತೀ ಸ್ವಾಮೀಜಿ ಆಶೀರ್ವಾದದೊಂದಿಗೆ ಬಳ್ಳಾರಿಯ ಸಂಗನಕಲ್ ರಸ್ತೆ ಶಾಖೆಯ ಶೃಂಗೇರಿ ಶಂಕರ ಮಠದ 65 ಭಕ್ತರು 10 ಸಾವಿರ ಸೀಡ್ ಬಾಲ್ಗಳನ್ನು ಸಿದ್ಧಪಡಿಸಿಕೊಂಡು ಸಂಡೂರು ಅರಣ್ಯಕ್ಕೆ ಭೇಟಿ ನೀಡಿ ಸೀಡ್ ಬಾಲ್ ಎಸೆದರು.ಮಳೆಗಾಲದಲ್ಲಿ ಬೀಜ ಅಂಕುರಿ, ಸಸಿಯಾಗಿ ಮುಂದೆ ಮರವಾಗಿ ಬೆಳೆದು ಪ್ರಕೃತಿ ಮತ್ತು ಪರಿಸರವನ್ನು ಕಾಪಾಡುತ್ತದೆ.
ಇದರಿಂದ ಸಕಾಲಕ್ಕೆ ಮಳೆಯಾಗಿ ಪರಿಸರ ಶುದ್ಧೀಕರಣಗೊಳ್ಳುತ್ತದೆ. ಪ್ರತಿಯೊಬ್ಬರೂ ಗಿಡ, ಮರಗಳನ್ನು ನೆಟ್ಟು, ಪೋಷಿಸಿ ಪ್ರಕೃತಿ, ಪರಿಸರವನ್ನು ಕಾಪಾಡಬೇಕೆನ್ನುವುದು ಇದರ ಉದ್ದೇಶವಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಈ ತಂಡವು ಸಂಡೂರಿನ ಶೃಂಗೇರಿ ಶಂಕರ ಮಠಕ್ಕೆ ಭೇಟಿ ನೀಡಿ, ಮಠದಲ್ಲಿ ಗುರುಪೂರ್ಣಿಮೆಯ ಪೂಜೆಯಲ್ಲಿ ಭಾಗವಹಿಸಿತ್ತು. ಜೊತೆಗೆ ಕುಮಾರಸ್ವಾಮಿ, ನರಸಿಂಹ ದೇವಸ್ಥಾನಗಳಿಗೂ ಭೇಟಿ ನೀಡಿ ಗುರುಪೂರ್ಣಿಮವನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲ ಸಮಯದಲ್ಲೂ, ಎಲ್ಲರಿಗೂ ಗುರುವಿನ ಸ್ಥಾನದಲ್ಲಿರುವ ಪ್ರಕೃತಿಯಲ್ಲಿ ಸೀಡ್ ಬಾಲ್ ಎಸೆದು ಸಾವಿರಾರು ಗಿಡ, ಮರಗಳ ಉದಯಕ್ಕೆ ಪ್ರಾರ್ಥಿಸಲಾಯಿತು ಎಂದು ಸಂಘಟಕರು ತಿಳಿಸಿದ್ದಾರೆ.