ಬಳ್ಳಾರಿ

ಬಳ್ಳಾರಿಯಲ್ಲಿ ವೀರವನಿತೆ ಒನಕೆ ಓಬವ್ವ ಜಯಂತಿ ಆಚರಣೆ

ಬಳ್ಳಾರಿಯಲ್ಲಿ ವೀರವನಿತೆ ಒನಕೆ ಓಬವ್ವ ಜಯಂತಿ ಆಚರಣೆ

ಬಳ್ಳಾರಿಯಲ್ಲಿ ವೀರವನಿತೆ ಒನಕೆ ಓಬವ್ವ ಜಯಂತಿ ಆಚರಣೆ 

ಬಳ್ಳಾರಿ 11: ವೀರವನಿತೆ ಒನಕೆ ಓಬವ್ವಳ ಸಾಹಸ, ದೇಶಪ್ರೇಮ ಇಂದಿನ ಮಹಿಳೆಯರಿಗೆ ಪ್ರೇರಣೆಯಾಗಿದ್ದು, ಮಹಿಳೆಯರು ಓಬವ್ವಳನ್ನು ಮಾದರಿಯಾಗಿ ಮಾಡಿಕೊಂಡು ಕೆಲಸ ಮಾಡಿದರೆ ಏನಾದರೂ ಸಾಧಿಸಬಹುದು ಎಂದು ಬಳ್ಳಾರಿ ಮಹಾನಗರ ಪಾಲಿಕೆಯ ಮಹಾಪೌರರಾದ ಮುಲ್ಲಂಗಿ ನಂದೀಶ್ ಅವರು ಹೇಳಿದರು. 

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಸೋಮವಾರ  ಆಯೋಜಿಸಿದ್ದ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಓಬವ್ವ ಅವರ ಸಮಯಪ್ರಜ್ಞೆ, ಧೈರ್ಯದ ಮನೋಭಾವ ಮತ್ತು ಆದರ್ಶಗಳನ್ನು ಪ್ರತಿಯೊಬ್ಬರು ರೂಢಿಸಿಕೊಳ್ಳಬೇಕು. ವೀರವನಿತೆ ಒನಕೆ ಓಬವ್ವನ ವೀರತನ ಎಲ್ಲರಿಗೂ ಮಾದರಿಯಾಗಿದೆ, ಪ್ರತಿಯೊಬ್ಬ ಹೆಣ್ಣು ಮಕ್ಕಳು ಓಬವ್ವನ ಧೈರ್ಯ ಮತ್ತು ಸಾಹಸವನ್ನು ಆಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. 

ಗಂಗಾವತಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಾಹಿತಿ ಹಾಗೂ ಚಿಂತಕರಾದ ಡಾ.ಲಿಂಗಣ್ಣ ಜಂಗಮನಹಳ್ಳಿ ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಸಮಯ ಪ್ರಜ್ಞೆ ಮತ್ತು ಪರಾಕ್ರಮದಿಂದ ವೈರಿ ಸೈನಿಕರನ್ನು ಸದೆಬಡಿದ ಒನಕೆ ಓಬವ್ವ ಇಂದಿನ ಪೀಳಿಗೆಗೆ ಪ್ರೇರಣೆ ಆಗಿದ್ದಾರೆ. ಒನಕೆ ಓಬವ್ವ ಮತ್ತು ಚಿತ್ರದುರ್ಗ ಕೋಟೆಯ ಇತಿಹಾಸವು ಹಾಸುಹೊಕ್ಕಾಗಿದೆ. ಹೈದರ್ ಅಲಿಯ ಕ್ರೂರ ಸೈನಿಕರನ್ನು ತನ್ನ ಕೊನೆಯ ಉಸಿರು ಇರುವವರೆಗೂ ಎದುರಿಸಿದ ಕರ್ನಾಟಕದ ಯೋಧ ಎಂದೇ ಹೆಸರುವಾಸಿಯಾಗಿದ್ದಾರೆ ಎಂದರು. 

ಚಿತ್ರದುರ್ಗ ಸಾಮ್ರಾಜ್ಯದಲ್ಲಿ ಹೈದರಾಲಿ ಸೈನ್ಯ ಕೋಟೆಯ ಮೇಲೆ ದಾಳಿ ಮಾಡಿದಾಗ ವೀರತನದಿಂದ ಸೈನ್ಯವನ್ನು ಹಿಮ್ಮೆಟ್ಟಿದ ದಿಟ್ಟ ಮಹಿಳೆ ಎಂದು ತಿಳಿಸಿದ ಅವರು, ಅವರ ನಿಷ್ಠೆ, ಪರಾಕ್ರಮ, ವೀರತನ, ಸಮಯ ಪ್ರಜ್ಞೆಯನ್ನು ಓಬವ್ವನನ್ನು ನೋಡಿ ಕಲಿಯಬೇಕು. ಆ ಸಮಯದಲ್ಲಿ ಓಬವ್ವ ತೋರಿದ ಧೈರ್ಯ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು. 

ಸರ್ಕಾರವು ಯಾವುದೇ ಜಾತಿ, ಧರ್ಮಕ್ಕೆ ಸೀಮಿತಗೊಳಿಸಿ ಜಯಂತಿ ಹಾಗೂ ದಿನಾಚರಣೆ ಆಚರಿಸುವುದಿಲ್ಲ. ರಾಷ್ಟ್ರಕ್ಕೆ ಹಾಗೂ ಸಮಾಜಕ್ಕೆ ಮಹನೀಯರು ನೀಡಿರುವ ಕೊಡುಗೆ, ತ್ಯಾಗ, ಬಲಿದಾನ, ಸಾಧನೆಗಳು ಹಾಗೂ ನಿಸ್ವಾರ್ಥ ಸೇವೆ ಗುರುತಿಸಿ ಸರ್ಕಾರದ ನಿಯಮಗಳಡಿ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ಕವಿತಾ ಗಂಗೂರ್ ತಂಡ ಸುಗಮ ಸಂಗೀತ ನಡೆಸಿಕೊಟ್ಟರು. 

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ತಹಶೀಲ್ದಾರರಾದ ಗೌಸಿಯಾ ಬೇಗಂ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಲಾಲಪ್ಪ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ, ಬಳ್ಳಾರಿ ಜಿಲ್ಲಾ ಘಟಕ ಛಲವಾದಿ ಮಹಾಸಭಾ ಅಧ್ಯಕ್ಷ ಸಿ.ಶಿವಕುಮಾರ, ಹಿರಿಯ ಸಾಹಿತಿ ಎನ್‌.ಡಿ.ವೆಂಕಮ್ಮ, ಪತ್ರಕರ್ತ ಸಿ.ಮಂಜುನಾಥ ಸೇರಿದಂತೆ ಸಮಾಜದ ಮುಖಂಡರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು, ಇನ್ನಿತರರು ಉಪಸ್ಥಿತರಿದ್ದರು.  


. 




ಸುದ್ದಿ ಓದಿ