ಸಾವಿರಾರು ಕೋಟಿ ಸೆಸ್ ಸಂಗ್ರಹ-ನಿಲ್ಲದ ಭಿಕ್ಷಾಟನೆ
ಸಾವಿರಾರು ಕೋಟಿ ಸೆಸ್ ಸಂಗ್ರಹ-ನಿಲ್ಲದ ಭಿಕ್ಷಾಟನೆ
ಬೆಂಗಳೂರು: ರಾಜ್ಯ ಸರ್ಕಾರ ಕಳೆದ 4 ವರ್ಷಗಳಿಂದ ಸ್ಥಳೀಯ ಸಂಸ್ಥೆಗಳಿಂದ 7093 ಕೋಟಿ ರೂ.ಭಿಕ್ಷುಕರ ಸೆಸ್ ಸಂಗ್ರಹ ಮಾಡಿದೆ. ಆದರೂ ಸಹ ಮಕ್ಕಳ ಭಿಕ್ಷಾಟನೆ ಮುಂದುವರಿದಿದೆ. ಇದು ನೋಡಿದರೆ ಎಲ್ಲವೂ ಸರಿ ಇಲ್ಲ ಎಂಬುದು ಸೂಚಿಸುತ್ತದೆ ಎಂದು ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳನ್ನು ಗುರುತಿಸಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಬೆಂಗಳೂರಿನ ಲೆಟ್ಜ್ ಕಿಟ್ ಫೌಂಢಷನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ವಿಭಾಗೀಯ ನ್ಯಾಯಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತ್ತು. ಕೆಲ ಕಾಲ ವಾದ ಆಲಿಸಿದ ನ್ಯಾಯಾಲಯ, ಸ್ಥಳೀಯ ಸಂಸ್ಥೆಗಳು ಸಂಗ್ರಹ ಮಾಡಿರುವ ಭಿಕ್ಷುಕರ ಸೆಸ್ ಅನ್ನು ವಸೂಲಿ ಮಾಡಿಕೊಳ್ಳಲು ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಬಗ್ಗೆ ಮುಂದಿನ ವಿಚಾರಣೆ ವೇಳೆ ಮಾಹಿತಿ ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿ ವಿಚಾರಣೆಯನ್ನು 8 ವಾರಗಳ ಕಾಲ ಮುಂದೂಡಿತು. ಅರ್ಜಿದಾರರ ಪರ ಹಿರಿಯ ವಕೀಲ ಪುತ್ತಿಗೆ ಆರ್. ರಮೇಶ್ ವಾದ ಮಂಡಿಸಿ, ಕಳೆದ 4 ವರ್ಷಗಳಲ್ಲಿ ಸರ್ಕಾರ ಒಟ್ಟು 7,093 ಕೋಟಿ ಸೆಸ್ ಸಂಗ್ರಹ ಮಾಡಿದ್ದು, ಅದರಲ್ಲಿ 3,453 ಕೋಟಿ ರೂ. ಖರ್ಚು ಮಾಡಲಾಗಿದೆ. ಇನ್ನೂ ಸ್ಥಳೀಯ ಸಂಸ್ಥೆಗಳು 3,639 ಕೋಟಿ ರೂ. ವರ್ಗಾಯಿಸಬೇಕಿದೆ. ಸಾವಿರಾರು ಕೋಟಿ ಖರ್ಚಾದರೂ ಮಕ್ಕಳ ಭಿಕ್ಷಾಟನೆ ನಿಂತಿಲ್ಲ ಎಂದರು. ಅದಕ್ಕೆ ಸರ್ಕಾರದ ಪರ ವಕೀಲರು, ಭಿಕ್ಷಾಟನೆ ನಿರ್ಮೂಲನೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ವಿವರಿಸಿ, ಸ್ಥಳೀಯ ಸಂಸ್ಥೆಗಳು ಸಂಗ್ರಹ ಮಾಡಿರುವ ಸೆಸ್ ಹಣವನ್ನು ಸರ್ಕಾರಕ್ಕೆ ವರ್ಗಾವಣೆ ಮಾಡುತ್ತಿಲ್ಲ, ಆ ಕುರಿತು ಸ್ಥಳೀಯ ಸಂಸ್ಥೆಗಳಿಗೆ ಜ್ಞಾಪನಾ ಪತ್ರಗಳನ್ನು ಕಳುಹಿಸಲಾಗುತ್ತಿದೆ ಎಂದರು. ಕೊನೆಗೆ ನ್ಯಾಯಾಲಯ, ಎಷ್ಟು ಸೆಸ್ ಸಂಗ್ರಹಮಾಡಲಾಗಿದೆ, ಎಷ್ಟು ಖರ್ಚು ಮಾಡಲಾಗಿದೆ ಹಾಗೂ ಬಾಕಿ ಹಣದ ಲೆಕ್ಕ ನೀಡುವಂತೆ ಸರ್ಕಾರಕ್ಕೆ ಸೂಚನೆ ನೀಡಿತು