ಗುಂಗಿ ಹುಳ ಕಾಣಲಿಲ್ಲ-ದೆವ್ವ ಬಿಡಿಸುವುದು ನೋಡಲಿಲ್ಲ
-ಮಹಾಂತೇಶ ವೀ ಕರೀಕಟ್ಟಿ
ಹಿರಿಯ ಪ್ರಬಂಧಕರು
ನಮ್ಮ ದೇಶದ ಬಹುಪಾಲಾಗಿರುವ ಹಳ್ಳಿಗಳು ಇಂದಿಗೂ ತಮ್ಮದೇ ಆದ ಅನೇಕ ವಿಶೇಷತೆಗಳನ್ನು ಹೊಂದಿವೆ. ಹಬ್ಬ-ಹರಿದಿನಗಳು, ದೇವರು-ದಿಂಡರು, ಜಾತ್ರೆಗಳು, ಐತಿಹಾಸಿಕ ಪರಂಪರೆಗಳು, ಜಾತ್ಯಾತೀತವಾದ ಆಚರಣೆಗಳು ಇಂದಿಗೂ ಜೀವಂತವಾಗಿರುವುದು ನಮ್ಮ ಹಳ್ಳಿಗಳಲ್ಲಿ ಮಾತ್ರ. ಪ್ರತಿಯೊಂದು ಹಳ್ಳಿಯಲ್ಲೂ ತನ್ನದೇ ಆದ ವಿಶಿಷ್ಟ ಆಚರಣೆಗಳಿವೆ. ಅವು ಈಗಿನವರೆಗೂ ಬಹಳ ಸೊಗಸಾಗಿ ಒಗ್ಗಟ್ಟಿನಿಂದ ಆಚರಿಸಲ್ಪಟ್ಟಿವೆ. ಯಾವುದೇ ಒಂದು ಹಬ್ಬವು ಕೇವಲ ಒಂದು ಜಾತಿಗೆ ಸೀಮಿತವಾಗಿರದೆ, ಎಲ್ಲರಿಗೂ ಮನೆಹಬ್ಬವಾಗಿರುವುದನ್ನು ನಾವು ಕಾಣುವುದು ಹಳ್ಳಿಗಳಲ್ಲಿ ಮಾತ್ರ. ಊರದೇವರಿಗೆ ಹರಕೆ ಹೊತ್ತು ಕಾಯಿ ಒಡೆಯಿಸುವ ಮುಸಲ್ಮಾನರನ್ನು, ಮುಸ್ಲಿಂ ಮಸೀದಿಗಳಿಗೆ ಹೋಗಿ ಊದು ಹಾಕಿಸಿ ಬರುವ ಹಿಂದುಗಳನ್ನು ನಾವು ಕಾಣುವುದು ಇಂತಹ ಹಳ್ಳಿಗಳಲ್ಲಿ ಮಾತ್ರ. ಇಂತಹ ಹಳ್ಳಿಗಳ ಸಾಲಿಗೆ ಸೇರಿದ ಒಂದೂರು ನಮ್ಮೂರು.
"ನಾಳೆ ಒಂದು ದಿನಾ ಲೇ ಸಾಲಿ, ನಾಡಿದ್ದು ಸೂಟಿ ಐತಿ. ಅರಾಮ ಮನ್ಯಾಗ ಇದ್ದು ಹಬ್ಬ ನೋಡಬಹುದು" ತನ್ನಷ್ಟೆ ಭಾರದ ಪುಸ್ತಕಗಳ ಬ್ಯಾಗ್ ಹೊತ್ತುಕೊಂಡು ತನ್ನ ಅಕ್ಕಪಕ್ಕದಲ್ಲಿ ನಡೆಯುತ್ತಿದ್ದ ಗೆಳೆಯರನ್ನುದ್ದೇಶಿಸಿ ಖುಷಿಯಿಂದ ಹೇಳಿದ ತಿಮ್ಮ.
"ನಾಡಿದ್ದು ಯಾಕ ಸೂಟಿ ಐತಿ? ಐತಾರ ಅಂತು ಅಲ್ಲ. ಮತ್ತ್ಯಾಕ ಸೂಟಿ ಕೊಟ್ಟಾರು" ಎಂದು ಮುಖದ ಭಾವದಿಂದಲೆ ಪ್ರಶ್ನೆಯನ್ನು ಎಸೆಯುತ್ತ ತನ್ನ ಬ್ಯಾಗನ್ನು ಗಟ್ಟಿಯಾಗಿ ಹಿಡಿದು ನಡೆಯುತ್ತಿದ್ದ ಗೆಳೆಯ.
"ಅಷ್ಟು ಗೊತ್ತಿಲ್ಲ ಏನ್ಲೆ?! ನಾಡಿದ್ದು ಅಲ್ಲಾಹಬ್ಬ ಐತಿ. ಊರಾನ ಮಂದ್ಯೆಲ್ಲ ಬರತಾರು ನೋಡಾಕ. ಫುಲ್ಲ ಜಾತ್ರಿ ಕೂಡಿತರ್ೆತಿ. ಮಸ್ತ ಮಸ್ತ ಸೋಗ ಹಾಕಿತರ್ಾರು. ಭಾರಿ ಮಜಾ ಬತರ್ೆತಿ." ತನ್ನ ಮಾತುಗಳಿಂದಲೆ ಗೆಳೆಯನಿಗೆ ಹಬ್ಬದ ಬಗ್ಗೆ ಕುತೂಹಲ ಮೂಡಿಸುತ್ತ ಮುಂದುವರೆಸಿದ.
"ಅಷ್ಟ ಅಲ್ಲ, ಹಿಂದಿನ ದಿನ ಮಸೀದ್ಯಾಗ ದೇವರ ಕುಂಡರಸಿತರ್ಾರು. ಸಕ್ಕರಿ ಊದು ಏರಸ್ಕೊಂಡು ಬತರ್ಾರು. ನಾನು ಹೋಗಿತರ್ೆನಿ. ನೀ ಹೋಗಿಲ್ಲೇನ?" "ಇಲ್ಲ. ನಮ್ಮ ಮನಿ ದೂರ ಇರುದಕ್ಕ ನಾ ಒಮ್ಮೆನು ಹೋಗಿಲ್ಲ. ಈ ಸಲ ನಾನು ಹೋಗ್ತೇನಿ ನೋಡಾಕ"
"ಅಲ್ಲಾಹಬ್ಬದ ದಿನ ದೇವರು ಎದ್ದಿಂದ ಕೆಂಡ ಹಾಯ್ತಾರಂತ. ನಾನು ನೋಡಿಲ್ಲ. ಹೋಗಬೇಕಂದ್ರ ಗದ್ದಲ ಇತರ್ೆತಿ ಬ್ಯಾಡಾ ಅಂತ ಬೈತಾರು ಮನ್ಯಾಗ. ಈ ಸಲ ಹೆಂಗಾರ ಮಾಡಿ ಹೋಗುಣು ಬಾ ಲೆ" ಗೆಳೆಯನನ್ನು ಹುರುದುಂಬಿಸಿದ ತಿಮ್ಮ.
"ಆಯ್ತು ಹೋಗುಣು" "ಪ್ರತಿವರ್ಷ ಡೋಲಿ ಪ್ಯಾಟಿಗೆ ಬಂದಾಗ, ಒಂದು ಗುಂಗಿ ಹುಳ ಬಂದು ಸುತ್ತು ಹಾಯ್ತೇತಂತ. ಆಮ್ಯಾಲ ದೇವರ ಹೊಳಿಗೆ ಹೋಗ್ತಾವು. ಅವತ್ತ ಸಂಜೀಕ, ಮೈಯಾಗ ದೆವ್ವ ಬಂದಾವರಿಗೆ ದೆವ್ವ ಬಿಡಸ್ತಾರಂತ."
ತಿಮ್ಮ ದೆವ್ವ ಎಂದ ತಕ್ಷಣ ಕಿವಿ ನಿಮಿರಿಸಿ ಕೇಳತೊಡಗಿದ ಗೆಳೆಯ. ದೆವ್ವ ಭೂತಗಳ ಬಗ್ಗೆ ಸಾಕಷ್ಟು ಭಯವಿದ್ದರೂ, ದೆವ್ವ ಬಿಡಿಸುವುದು ನೋಡಬೇಕೆಂದು ಮನದಲ್ಲೆ ತಿಮರ್ಾನಿಸಿದ. ಹೇಗಾದರೂ ಮಾಡಿ ಈ ಸಲ ಇಬ್ಬರೂ ಸೇರಿ ಕೆಂಡ ಹಾಯುವುದನ್ನು, ಡೋಲಿ ಸುತ್ತುವ ಗುಂಗಿಹುಳವನ್ನು ಮತ್ತು ದೆವ್ವ ಬಿಡಿಸುವುದನ್ನು ನೋಡಲೇಬೇಕೆಂದು ನಿರ್ಧರಿಸಿದರು. ಅಂತೆ-ಕಂತೆಗಳೆಲ್ಲವನ್ನು ಕಣ್ಣಾರೆ ನೋಡುವ ಸಂದರ್ಭ ಬರುವುದನ್ನು ಯೋಚಿಸುತ್ತ ಮನೆಯತ್ತ ಹೆಜ್ಜೆ ಹಾಕಿದರು. ಅಂತೂ ಅಲ್ಲಾಹಬ್ಬದ (ಮೊಹರಂ) ದಿನ ಬಂತು. ಹೊಸ ಬಟ್ಟೆ ತೊಟ್ಟು ಹಬ್ಬದ ವಾತಾವರಣವನ್ನು ನೋಡಲು ಉತ್ಸಾಹಿಕನಾಗಿದ್ದ ತಿಮ್ಮ. ಮನೆಯಲ್ಲಿ ದೇವರಿಗೆಂದು ಮಾಡುತ್ತಿದ್ದ ಚೊಂಗ್ಯಾ ರುಚಿ ನೋಡು ಬಾ ಎಂದು ಕರೆಯುತ್ತಿರುವಂತೆ ಭಾಸವಾದರೂ ಇವತ್ತು ನೋಡಲೆಬೇಕೆಂದು ನಿರ್ಧರಿಸಿರುವ ಪ್ರಕ್ರಿಯೆಯ ಮುಂದೆ ಬೇರೆನೂ ಬೇಡ ಎನ್ನುವಂತಿತ್ತು ಅವನ ಹಾವಭಾವ. ಬೇಗನೆ ಗೆಳೆಯನನ್ನು ಕರೆದುಕೊಂಡು ಹೋಗಲು ಅವನ ಮನೆಯತ್ತ ಕಾಲುಕಿತ್ತ.
ಇಬ್ಬರೂ ಸೇರಿ ಅಂದುಕೊಂಡಂತೆ ತಮ್ಮ ಹೊಸ ಅನುಭವ ಪಡೆಯುವುದಕ್ಕೆಂದು ಹೆಜ್ಜೆ ಹಾಕತೊಡಗಿದರು. ಊರಿನ ತುಂಬ ಮೆರವಣಿಗೆ ಶುರುವಾಗುವುದು ಮಧ್ಯಾಹ್ನದ ನಂತರ ಎಂಬುದನ್ನು ಅರಿಯದೆ ಮುಂಜಾನೆಯೆ ಮಸೀದಿಯೆಡೆಗೆ ಸಾಗಿತ್ತು ಅವರ ಪಯಣ. ಹಳದಿ ಕಪ್ಪು ಬಣ್ಣಹಚ್ಚಿಕೊಳ್ಳುತ್ತಿದ್ದ ಹುಲಿವೇಷದವರನ್ನು, ಮರಗಾಲು ಕಟ್ಟಿಕೊಳ್ಳುತ್ತಿದ್ದ ಹುಡುಗರನ್ನು, ಕುದುರೆಯ ವೇಷ ತೊಡಲು ತಯಾರಾಗುತ್ತಿರುವವರನ್ನು ನೋಡಿದಾಕ್ಷಣ ತಾವು ಹಾಗೆ ವೇಷ ಹಾಕಿಕೊಳ್ಳಬೇಕೆಂಬ ಆಸೆ ಬಾರದಿರಲಿಲ್ಲ. ಪ್ರತಿಯೊಂದನ್ನು ಕೂಲಂಕುಷವಾಗಿ ವೀಕ್ಷಿಸುತ್ತ ನಿಂತವರಿಗೆ ಸಮಯ ಹೋಗಿದ್ದೆ ತಿಳಿಯಲಿಲ್ಲ.
"ದೇವರು ಏಳು ಹೊತ್ತಾಯ್ತು ನಡೀರಿ ಪಾ" ಎಂದು ಎಲ್ಲರಿಗೂ ಬೇಗನೆ ತಯಾರಾಗುವಂತೆ ಸೂಚಿಸುತ್ತಿದ್ದ ಹಿರಿಯೊಬ್ಬರ ಮಾತು ಕೇಳಿದಾಕ್ಷಣ ಅವರೆಲ್ಲರಿಗಿಂತ ಮುಂಚೆ ಮಸೀದಿಯ ಮುಂದಿನ ಕೆಂಡ ಹಾಯುವ ಸ್ಥಳದತ್ತ ಧಾವಿಸಿದರು ಇಬ್ಬರೂ.
ಹಲಗೆ, ತಮಟೆ ಮುಂತಾದ ವಾದ್ಯಗಳೊಂದಿಗೆ, ಅನೇಕ ವಿಧದ ಮಜಲುಗಳೊಂದಿಗೆ, ಹುಲಿ-ಕುದುರೆಯ ವೇಷಧಾರಿಗಳೊಂದಿಗೆ, ಕಾಲಿನ ಚರ್ಮದ ಪದರ ಹರೆಯುವಂತೆ ಜೋರಾಗಿ ಬಾರುಕೋಲಿನಿಂದ ಹೊಡೆದಾಡುತ್ತ ಬರುತ್ತಿರುವ ಕಟುಕರೊಂದಿಗೆ, ಮರಗಾಲು ತೊಟ್ಟರೂ ನೆಲದ ಮೇಲಿನ ನೋಟನ್ನು ಬಾಯಿಂದ ಎತ್ತುವ ಸಾಹಸ ಮಾಡುತ್ತಿರುವ ಹುಡುಗರೊಂದಿಗೆ, ಊರಹಿರಿಯರ ನೇತೃತ್ವದಲ್ಲಿ ದೊಡ್ಡ ಮಸೀದಿಯತ್ತ ಬಂದವು ಎಲ್ಲ ಡೋಲಿಗಳು ಮತ್ತು ದೇವರುಗಳು. ಮಸೀದಿಯ ಮುಂದಿನ ಅಂಗಳದಲ್ಲಿ ಕಟ್ಟಿಗೆಯ ದಿಣ್ಣೆಗಳನ್ನು ಸುಟ್ಟು ಕೆಂಡ ತಯಾರು ಮಾಡಲಾಗಿತ್ತು. ನೋಡನೋಡುತ್ತಿದ್ದಂತೆ ದೇವರನ್ನು ಹೊತ್ತವರು ಕೆಂಡದ ಒಂದು ತುದಿಯಿಂದ ಇನ್ನೊಂದು ತುದಿಗೆ ದಾಟಿ ಬರತೊಡಗಿದರು. ತಿಮ್ಮ ಮತ್ತು ಗೆಳೆಯ ಬಿಟ್ಟ ಕಣ್ಣು ಬಿಟ್ಟಂತೆ ಅದನ್ನು ನೋಡುತ್ತ ನಿಂತುಬಿಟ್ಟರು. ಒಂದು ಹೊಸ ರೋಮಾಂಚನಕಾರಿ ಪ್ರಕ್ರಿಯೆಯನ್ನು ನೋಡಿದ ಉಲ್ಲಾಸ ಅವರ ಮುಖದಲ್ಲಿತ್ತು.
ಡೋಲಿಗಳು ಮತ್ತು ದೇವರುಗಳನ್ನು ಹೊತ್ತವರು ಮಸೀದಿಯಿಂದ ಪ್ಯಾಟಿಯುದ್ದಕ್ಕೂ ಮೆರವಣಿಗೆ ಹೊರಟರು. ಊರದೇವರ ಗುಡಿಯ ಹತ್ತಿರ ಪ್ಯಾಟಿಗೆ ಬಂದಾಗ ಗುಂಗಿಹುಳವೊಂದು ಬಂದು ಡೋಲಿಗಳನ್ನು ಸುತ್ತುತ್ತದೆ ಎಂದು ಕೇಳಿದ್ದವರಿಬ್ಬರೂ ಮೆರವಣಿಗೆಗಿಂತ ಮುಂಚೆಯೆ ಡೋಲಿ ನಿಲ್ಲಿಸುವ ಜಾಗದ ಸಮೀಪ ತಮ್ಮ ಜಾಗ ಭದ್ರಮಾಡಿಕೊಳ್ಳಲು ಓಡಿದರು. ಗುಂಗಿ ಹುಳವನ್ನು ನೋಡಲು ಸರಳವಾಗುವಷ್ಟು ಹತ್ತಿರ ನಿಂತರು. ಯತಾಪ್ರಕಾರ ಮೆರವಣಿಗೆ ಗುಡಿಯ ಹತ್ತಿರ ಬಂದು ನಿಂತಿತು. ಕಡಿಮೆ ಗದ್ದಲ ಇದ್ದ ಜಾಗದಲ್ಲೀಗ ಜನ ಕಿಕ್ಕಿರಿದು ತುಂಬಿದ್ದರು. ತಮ್ಮ ಆಚರಣೆಗಳನ್ನು ಮುಗಿಸಿದ ನಂತರ ಡೋಲಿಗಳನ್ನು ಹೊತ್ತು ನದಿಯ ಕಡೆಗೆ ಸಾಗಿದರು. ಗುಂಗಿ ಹುಳವನ್ನು ನೋಡಬೇಕು ಎಂದು ಮುಂಚಿತವಾಗಿಯೆ ಯೋಜನೆ ರೂಪಿಸಿ ನಿಂತಿದ್ದವರಿಬ್ಬರಿಗೂ ಅದು ಮಾತ್ರ ಕಾಣಿಸಲಿಲ್ಲ. ನಾವು ಬಹಳ ಎತ್ತರವಿಲ್ಲದಕ್ಕೆ ನಮಗೆ ಆ ಗುಂಗಿಹುಳು ಬಂದು ಹೋಗಿದ್ದು ಕಾಣಲಿಲ್ಲವೋ? ಅದು ನಿಜವಾಗಿಯೂ ಬಂದು ಹೋಯಿತಾ? ಅಥವಾ ಇದೆಲ್ಲ ಜನರ ಕಾಲ್ಪನಿಕ ಕಥೆಯೋ? ತುಂಬಾ ಗದ್ದಲವಿದ್ದ ಕಾರಣ ಅದರ ಬರುವು ನಮಗೆ ತಿಳಿಯದೆ ಹೋಯಿತಾ? ಎಂದೆಲ್ಲ ಪರಸ್ಪರ ಮಾತನಾಡುತ್ತ ಕೆಳಗಿನ ಓಣಿಯತ್ತ ನಡೆಯುತ್ತಿದ್ದವರಿಗೆ ಒಬ್ಬ ಮಹಿಳೆಯ ಮೇಲೆ ಕಲ್ಲೊಂದನ್ನು ಹೊರೆಯಿಸಿ ಕರೆದುಕೊಂಡು ಹೊಗುತ್ತಿರುವುದು ಕಾಣಿಸಿತು. ಮೌಲ್ವಿಯೊಬ್ಬ ಕೈಯಲ್ಲಿ ನವಿಲುಗರಿ ಹಿಡಿದುಕೊಂಡು ಅದರಿಂದ ಅವಳನ್ನು ಬಡೆಯುತ್ತಿದ್ದ. ನೀರಿನ ಕೊಡ ಹೊತ್ತವನೊಬ್ಬನಲ್ಲದೆ, ಸುತ್ತಲೂ ಹತ್ತಾರು ಜನರು ಅವರೊಂದಿಗೆ ವೇಗವೇಗವಾಗಿ ಊರಿನ ಸ್ಮಶಾನದತ್ತ ಕಾಲುಹಾಕುತ್ತಿದ್ದರು. ಅವರು ಆ ಮಹಿಳೆಗೆ ಹಿಡಿದ ದೆವ್ವ ಬಿಡಿಸಲು ಹೋಗುತ್ತಿದ್ದಾರೆಂದು ಮಾತನಾಡುತ್ತಿದ್ದುದ್ದನ್ನು ಕೇಳಿದಾಕ್ಷಣ ಅವರಿಬ್ಬರ ಕಾಲುಗಳು ತಮಗರಿವಿಲ್ಲದಂತೆ ಆ ಗುಂಪಿನ ಹಿಂದೆಯೆ ಹೊರಟವು.
ಕನಿಷ್ಟಪಕ್ಷ ದೆವ್ವ ಬಿಡಿಸುವುದನ್ನಾದರೂ ನೋಡಬಹುದೆಂದು ಸಮಾಧಾನ ಪಡುತ್ತಿದ್ದವರಿಗೆ ದೂರದಲ್ಲಿ ಯಾರೋ ತಮ್ಮನ್ನು ಕೂಗಿಕರೆದಂತೆ ಅನಿಸಿತು. ತುಂಬಾ ಪರಿಚಯವಿರುವ ಧ್ವನಿಯಂತನಿಸಿ ತಿರುಗಿ ನೋಡಿದಾಗ ಶಾಲೆಯ ಶಿಕ್ಷಕರೊಬ್ಬರು "ಎಲ್ಲಿಗೆ ಹೋಗುತಿದ್ದೀರಾ? ಚಿಕ್ಕ ಮಕ್ಕಳು ಹಾಗೆಲ್ಲ ಹೋಗಬಾರದು" ಎಂದು ಸ್ವಲ್ಪ ಗಢಸು ಸ್ವರದಲ್ಲಿಯೆ ಹೇಳುತ್ತಿರುವುದು ಕೇಳಿಸಿತು. ಶಿಕ್ಷಕರ ಕೈಗೆ ಸಿಕ್ಕರೆ ಭಾಸುಂಡೆ ಮೂಡುತ್ತವೆ ಎಂಬ ಭಯದಲ್ಲಿ ಅಲ್ಲಿಂದ ಇಬ್ಬರೂ ಕಾಲ್ಕಿತ್ತರು. ತುಂಬಾ ದೂರ ಓಡಿ ಸುಸ್ತಾಗಿ ನಿಂತು ಒಬ್ಬತ ಮುಖವನ್ನೊಬ್ಬರು ನೋಡಿಕೊಳ್ಳುತ್ತ, "ಲೇ, ಗುಂಗಿಹುಳ ಕಾಣಲಿಲ್ಲ, ದೆವ್ವ ಬಿಡಿಸುವುದು ನೋಡಲಿಲ್ಲ ಎನ್ನುವಾಗ ತಿಮ್ಮನ ಮುಖದಲ್ಲಿ ಮುಂಜಾನೆಯಿದ್ದಷ್ಟು ಹೊಳಪು ಈಗಿರಲಿಲ್ಲ.