ಅಸಾಮಾನ್ಯನಾಗಿ ಬೆಳೆದ ಸಾಮಾನ್ಯ

ಅಸಾಮಾನ್ಯನಾಗಿ ಬೆಳೆದ ಸಾಮಾನ್ಯ


ಶಾಮನೂರು ಕಲ್ಲಪ್ಪ, ಶಾಮನೂರು ಸಾವಿತ್ರಮ್ಮ ದಂಪತಿ ಪುತ್ರ ಎನಿಸಿದ ಶಿವಶಂಕರಪ್ಪ ಹುಟ್ಟಿದ್ದು ಸಾಮಾನ್ಯ ಬಡಕುಟುಂಬದಲ್ಲಿ. ವರ್ತಕರಾಗಿದ್ದ ಅವರ ಕುಟುಂಬ ಬೆಳೆದು ಬಂದಿದ್ದು ಮಾತ್ರ ಒಂದು ಪವಾಡ ಎಂದರೂ ತಪ್ಪಲ್ಲ.

ಸತತ ಶ್ರಮ, ನಿರ್ದಿಷ್ಟಗುರಿ, ಧೃತಿಗೆಡದ ಧೈರ್ಯ, ಆತ್ಮವಿಶ್ವಾಸ, ಜನರೊಂದಿಗೆ ಬೆರೆಯುವ ಸಾಮರ್ಥಯ ಗಳಿಸಿಕೊಂಡರೆ ಎಂತಹ ಸಾಧನೆಯನ್ನಾದರೂ ನೀರು ಕುಡಿದಷ್ಟುಸಲೀಸಾಗಿ ಮಾಡಬಹುದು ಎಂಬುದನ್ನು ಶಿವಶಂಕರಪ್ಪನವರು ಸಾಧಿಸಿ ತೋರಿಸಿದ್ದಾರೆ.

ಶಾಮನೂರು ಶಿವಶಂಕರಪ್ಪನವರ ಕುಟುಂಬದ ಹಿರಿಯರು ಮೂಲತಃ ವಿಜಾಪುರದ ಕಡೆಯವರು. ದಾವಣಗೆರೆಗೆ ಬಂದು ನೆಲೆ ನಿಂತ ಮೇಲೆ ಇಲ್ಲಿನ ಕಾಳಿಕಾದೇವಿ ರಸ್ತೆಯಲ್ಲಿ ವಾಸವಾಗಿದ್ದ ಕುಟುಂಬದವರು ನಿಧಾನವಾಗಿ ವ್ಯಾಪಾರ ಪ್ರಾರಂಭಿಸಿದರು. ನಗರದ ಚೌಕಿಪೇಟೆಯ ಬಕ್ಕೇಶ್ವರ ದೇವಸ್ಥಾನ ಪಕ್ಕದಲ್ಲಿನ ಒಂದು ಸಣ್ಣ ಅಂಗಡಿಯಿಂದ ಆರಂಭಗೊಂಡ ಶಾಮನೂರು ಕುಟುಂಬದ ವ್ಯವಹಾರ ಇಂದು ವಿದೇಶಗಳವರೆಗೆ ವಿಸ್ತಾರವಾಗಿದೆ. ಕೃಷಿ, ಕೈಗಾರಿಕೆ, ಶಿಕ್ಷಣ, ಸಮಾಜ ಸೇವೆ, ತಂತ್ರಜ್ಞಾನ ಸೇರಿದಂತೆ ಎಲ್ಲ ರಂಗದಲ್ಲೂ ತನ್ನದೇ ಆದ ಅಸ್ಮಿತೆಯನ್ನು ಈ ಕುಟುಂಬ ಬೆಳೆಸಿಕೊಂಡಿದೆ. ಈ ಎಲ್ಲ ಅಸ್ಮಿತೆಯ ವಾರಸುದಾರ ಶಾಮನೂರು ಶಿವಶಂಕರಪ್ಪ.

ವ್ಯವಹಾರದಲ್ಲಿ ನೈಪುಣ್ಯತೆ ಸಾಧಿಸಿದ್ದು ಒಂದು ಎರಡು ದಿನಗಳಲ್ಲಿ ಅಲ್ಲ. ನಿರಂತರ ಶ್ರಮದಿಂದ. ಅಣ್ಣ ಬಸವರಾಜಪ್ಪ ಅಂಗಡಿಯ ಒಳಗಿನ ವ್ಯವಹಾರ ನೋಡಿಕೊಂಡರೆ ಶಿವಶಂಕರಪ್ಪ ಹೊರಗಿನ ವ್ಯವಹಾರ ನೋಡುತ್ತ ಬಂದರು. ಒಂದು ದಿನವೂ ವ್ಯವಹಾರದಲ್ಲಿ ಪ್ರಗತಿ ಆಗಿಲ್ಲ ಎಂಬ ಮಾತು ಕೇಳಿಬರದಂತೆ ನೋಡಿಕೊಂಡರು. ಚೌಕಿಪೇಟೆಯ ವ್ಯವಹಾರ ಕೊನೆಗೆ ವಿದೇಶಗಳಿಗೆ ತಲುಪುವವರೆಗೆ ಶಿವಶಂಕರಪ್ಪ ವಿಶ್ರಾಂತಿ ಪಡೆಯಲೇ ಇಲ್ಲ. ತಾವು ಎಷ್ಟೇ ದೊಡ್ಡ ರಾಜಕಾರಣಿಯಾಗಿದ್ದರೂ ತಮ್ಮ ಕೊನೆಯ ದಿನಗಳ ವರೆಗೂ ತಮ್ಮ ಕಿರಾಣಿ ಅಂಗಡಿಗೆ ಹೋಗಿ ಅಲ್ಲಿ ಕುಳಿತು ಕಾಳು-ಕಡಿ ಗುಣಮಟ್ಟ ಪರಿಶೀಲಿಸಿ ಬರುತ್ತಿದ್ದರು.

ಶಿವಶಂಕರಪ್ಪ ವಿಶ್ರಾಂತಿ ಬಯಸಿದವರಲ್ಲ. ನಿರಂತರ ಜನರ ಒಡನಾಡಿಯಾಗಿರುವ ಎಸ್‌ಎಸ್‌ ಮುಟ್ಟಿದ್ದೆಲ್ಲಾ ಚಿನ್ನವಾಯಿತು. ಹಾಗೆಂದು ಇದು ಅದೃಷ್ಟ, ದೇವರ ಆಟವೆಂದಲ್ಲ. ಅದು ಅವರಲ್ಲಿನ ಪರಿಣತಿ, ಆಸಕ್ತಿ, ಶ್ರದ್ಧೆ, ಬದ್ಧತೆಯ ಪ್ರತಿಫಲ.

ಮೂಲತಃ ವ್ಯಾಪಾರಿಯಾಗಿದ್ದ ಅವರಿಗೆ ಪರಿಸ್ಥಿತಿಗೆ ತಕ್ಕಂತೆ ಒಗ್ಗಿಕೊಳ್ಳುವ ಗುಣ ಇತ್ತು. ಅವರಿಗೆ ಸದಾ ಕ‌ಣ್ಮುಂದೆ ಇರುವ ಗುರಿ ತಲುಪುವ ಉದ್ದೇಶವಿತ್ತೇ ಹೊರತು ಇಂತಹುದ್ದೇ ವಾತಾವರಣ ಇರಬೇಕು ಎಂಬುದಿರಲಿಲ್ಲ. ಆದರೆ, ಅಗತ್ಯಕ್ಕೆ ಬೇಕಾದ ಸವಲತ್ತು ಪಡೆದುಕೊಳ್ಳುವಲ್ಲಿ ಎಸ್‌ಎಸ್‌ ಎಂದಿಗೂ ಹಿಂದೇಟು ಹಾಕಲಿಲ್ಲ. ಇದೇ ಕಾರಣಕ್ಕೆ ಇಂದು ಸಕಲ ಸವಲತ್ತುಗಳನ್ನು ಗಳಿಸಿದ್ದರು. ಸ್ವಂತ ಹೆಲಿಕಾಪ್ಟರ್‌ ಇಟ್ಟುಕೊಂಡು ಸಂಚರಿಸುವ ಶ್ರೀಮಂತ ರಾಜಕಾರಣಿಗಳಲ್ಲಿ ಇವರು ಮೊದಲ ಸಾಲಿನಲ್ಲಿದ್ದರು.

555 ಮತ್ತು ಎಸ್ಸೆಸ್‌ಗೆ ಅವಿನಾಭಾವ ಸಂಬಂಧ. ಸರಿ ಸುಮಾರು 45 ವರ್ಷಗಳ ಅಕ್ಷರಶಃ ಸಂಗಾತಿಯಂತಾಗಿದ್ದ 555 ಸಿಗರೇಟ್‌ನ್ನು ಒಂದೇ ಮಾತಿಗೆ ಬಿಟ್ಟವರು ಎಸ್ಸೆಸ್‌. ಚಿಕ್ಕಂದಿನಿಂದಲೇ ಸಿಗರೇಟು ಅಭ್ಯಾಸ ಮಾಡಿಕೊಂಡಿದ್ದ ಅವರು ಪ್ರಾರಂಭದಲ್ಲಿ ಗೆಳೆಯರೊಂದಿಗೆ "ಪ್ಯಾಸೆಂಜರ್‌', ಆಮೇಲೆ " ತ್ರಿಕ್ಯಾಚ್‌' ಸೇದಲಾರಂಭಿಸಿದರು. 1950 ರಿಂದ 555 ಸಿಗರೇಟು ಸೇದುವುದನ್ನು ಪ್ರಾರಂಭಿಸಿದ ಅವರು ಪ್ರತಿ 10 ನಿಮಿಷಕ್ಕೊಂದು ಸಿಗರೇಟು ಸುಡುತ್ತಿದ್ದರು.

ಸಿಗರೇಟು ಮತ್ತು ಟೀ ಅಚ್ಚುಮೆಚ್ಚಿನ ಸಂಗಾತಿಯಾಗಿದ್ದವು. 77ನೇ ವಯಸ್ಸಿನಲ್ಲಿ ಜ್ವರ ಮತ್ತು ಕಫದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಸಿರಿಗೆರೆಯ ಡಾ| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರ ಒಂದೇ ಒಂದು ಮಾತಿಗೆ ಸಿಗರೇಟು ಸೇವನೆ ನಿಲ್ಲಿಸಿದರು. ಎಸ್ಸೆಸ್‌ ಅವರಿಗೆ 555 ಎಂದರೆ ಎಷ್ಟು ಅಚ್ಚುಮೆಚ್ಚು ಅಂದರೆ ಅವರ ಎಲ್ಲ ಕಾರಿನ ನಂಬರ್‌ನಲ್ಲಿ 555 ಇಂದಿಗೂ ರಾರಾಜಿಸುತ್ತಿದೆ.

ಸುದ್ದಿ ಓದಿ