ಮನುಷ್ಯ ಮನುಷ್ಯನನ್ನು ದ್ವೇಷಿಸುವ ಗುಣ ಬದಲಾಗಬೇಕು; ಬಾಳೆಹೊನ್ನೂರಿನಲ್ಲಿ ನಡೆದ ಜಗದ್ಗುರು ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮ

ಮನುಷ್ಯ ಮನುಷ್ಯನನ್ನು ದ್ವೇಷಿಸುವ ಗುಣ ಬದಲಾಗಬೇಕು; ಬಾಳೆಹೊನ್ನೂರಿನಲ್ಲಿ ನಡೆದ ಜಗದ್ಗುರು ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮ
The habit of hating one another must change; Jagadguru Renukacharya Jayanti program held in Balehon

ಬಾಳೆಹೊನ್ನೂರು (ಚಿಕ್ಕಮಗಳೂರು) 03: ಮಹಿಳೆ ಎಂದರೇ ಧರ್ಮ, ಹುಟ್ಟಿನಿಂದ ಹಿಡಿದು ಕಡೆವರೆಗೂ ಮಹಿಳೆ ಧರ್ಮದಿಂದಲೇ ಜೀವನ ಮಾಡುತ್ತಾಳೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅಭಿಪ್ರಾಯಪಟ್ಟರು.  ಎನ್‌.ಆರ್‌.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ನಡೆದ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದ ವತಿಯಿಂದ ಆಯೋಜಿಸಿರುವ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವ ಅಂಗವಾಗಿ ನಡೆದ ’ಧರ್ಮ ಮತ್ತು ಮಹಿಳೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು.

ಸೀತೆಯಿಂದ ತ್ರೇತಾಯುಗ ಪ್ರಸಿದ್ಧಿ ಆಯಿತು, ದ್ವಾಪರ ಯುಗ ದ್ರೌಪದಿಯಿಂದ ಪ್ರಸಿದ್ಧಿ ಆಯಿತು. ಇವತ್ತು ಕಲಿಯುಗ, ಪ್ರತಿಯೊಂದು ಮನೆಯಲ್ಲಿ  ಮಹಿಳೆ ದೀಪ ಬೆಳಗಿಸುತ್ತಿದ್ದಾಳೆ ಎಂದು ಹೇಳಿದರು. ನಮ್ಮ ಮನೆಯಲ್ಲಿ ನಾವು ಐದು ಜನ ಹೆಣ್ಣು ಮಕ್ಕಳು, ಒಬ್ಬ ಮಗ. ನಮ್ಮ ತಂದೆ ತಾಯಿ ಆರು ಮಂದಿಗೂ ಯಾವುದೇ ಭೇದಭಾವ ಇಲ್ಲದೇ ಎಲ್ಲರನ್ನೂ ಸಮಾನತೆಯಿಂದ ಬೆಳೆಸಿದರು. ನನ್ನ ಪಾಲಕರು ಹೇಳಿಕೊಟ್ಟ ಸಂಸ್ಕೃತಿಯಿಂದಾಗಿಯೇ ನಾನಿಂದು ಏಳೂವರೆ ಕೋಟಿ ಜನಸಂಖ್ಯೆಯ ರಾಜ್ಯಕ್ಕೆ ಸಚಿವೆ ಆಗಿರುವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಒಂದು ಮನೆಯಲ್ಲಿ ಹೆಣ್ಣು ಮಗು ಮೊದಲು ಹುಟ್ಟಿ, ಎರಡನೇ ಮಗು ಗಂಡು ಆದರೆ, ಆ ಗಂಡು ಮಗುವಿಗೆ ಆ ಹೆಣ್ಣು ಮಗು ಕೇವಲ ಅಕ್ಕ ಆಗುವುದಿಲ್ಲ, ಎರಡನೇ ತಾಯಿಯಾಗುತ್ತಾಳೆ. 

ಅಣ್ಣ -ತಂಗಿ ಆದರೂ ಕೂಡ ತಂಗಿಯೇ ಅಣ್ಣನಿಗೆ ತಾಯಿ ಸ್ಥಾನ ಕೊಡುತ್ತಾಳೆ.  ಹೆಣ್ಣಿಗೆ ಮದುವೆ ವಯಸ್ಸು 18 ಆದರೆ, ಗಂಡಿಗೆ 21 ಆಗಿದೆ. ಇದು ಸಣ್ಣ ವಯಸ್ಸಿನಲ್ಲೇ ಹೆಣ್ಣಿನ ಪ್ರೌಢಿಮೆಯನ್ನು ತೋರುತ್ತದೆ ಎಂದು ಸಚಿವರು ತಿಳಿಸಿದರು. ಮಹಿಳೆ ಜೀವನದ ಪ್ರತಿಯೊಂದು ಘಟ್ಟದಲ್ಲಿ  ವಿವಿಧ ಜವಾಬ್ದಾರಿಯನ್ನು ನಿಭಾಯಿಸುತ್ತಾಳೆ. ಸಾಲ ಮಾಡಿಯಾದರೂ ಕೂಲಿ ಮಾಡಿಯಾದರೂ ತನ್ನ ಸಂಸಾರವನ್ನು ಸಾಕುವ ತಾಕತ್ತು ಮಹಿಳೆಗಿದೆ. ಮಹಿಳೆಯರು ದೈಹಿಕವಾಗಿ ಪುರುಷರಷ್ಟು ಸದೃಢರಲ್ಲ ನಿಜ. ಆದರೆ ಮಹಿಳೆ ಮಾನಸಿಕ ಪುರುಷರಿಗಿಂತ ಗಟ್ಟಿ. ಮಕ್ಕಳ ಹಾಗೂ ತನ್ನ ಮನೆತನದ ಭವಿಷ್ಯಕ್ಕೆ ಟೊಂಕಕಟ್ಟಿ ನಿಲ್ಲುತ್ತಾಳೆ. ಸ್ವಾಭಿಮಾನದ ಜೀವನವನ್ನು ಎಲ್ಲರೂ ಸಾಗಿಸೋಣ ಎಂದರು. ಗಾಳಿ, ನೀರು, ಮಣ್ಣು, ಕಲ್ಲು, ಗಿಡ, ಮರ, ವಾಹನ ಎಲ್ಲವನ್ನೂ ನಾವು ಪೂಜೆ ಮಾಡುತ್ತೇವೆ. ಆದರೆ, ಮನುಷ್ಯರನ್ನ ಮನುಷ್ಯರು ದ್ವೇಷಿಸುವಂತ ಪರಿಸ್ಥಿತಿಗೆ ತಲುಪಿದ್ದೇವೆ. ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ಧರ್ಮವನ್ನು ಉಳಿಸಿ ಬೆಳೆಸಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಕರೆ ನೀಡಿದರು.   

ಗುರು ಪರಂಪರೆಗೆ ಹೆಚ್ಚಿನ ಒತ್ತು:  ನಮ್ಮ ಮನೆಯಲ್ಲಿ ಗುರು ಪರಂಪರೆಗೆ ಮೊದಲ ಸ್ಥಾನ ಇದೆ, ನಾವು ಆ ಗುರು ಪರಂಪರೆಯನ್ನು ಬೆಳೆಸಿಕೊಂಡು ಹೋಗುತ್ತಿದ್ದೇವೆ. ಗುರು ಪರಂಪರೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಮಹಿಳೆ ಪ್ರಮುಖ ಪಾತ್ರವನ್ನು ವಹಿಸುತ್ತಾಳೆ, ಇದಕ್ಕಾಗಿ ತ್ಯಾಗವನ್ನೇ ಮಾಡುತ್ತಾಳೆ ಎಂದು ಹೇಳಿದರು.  ಮಠಗಳು ಸರ್ಕಾರಕ್ಕೆ ಸಮಾನವಾಗಿ ಕೆಲಸ ಮಾಡಿಕೊಂಡು ಬರುತ್ತಿವೆ. ಸಾಮಾಜಿಕ ಬದ್ಧತೆಯೊಂದಿಗೆ ಕೆಲಸ ಮಾಡುತ್ತಿವೆ.  ಮಠ ಮಾನ್ಯಗಳ ಇಂಥ ಕೆಲಸವನ್ನು ನೋಡಿದರೆ ನನಗೆ ನನ್ನ ಧರ್ಮದ ಬಗ್ಗೆ, ವೀರಶೈವ ಲಿಂಗಾಯತ ಧರ್ಮದಲ್ಲಿ ಹುಟ್ಟಿದ್ದು ಬಹಳ ಹೆಮ್ಮೆ ಎನಿಸುತ್ತದೆ. ಅನ್ನ, ಅಕ್ಷರ, ಆರೋಗ್ಯ, ಕೃಷಿ ದಾಸೋಹವನ್ನು ಮಾಡುತ್ತಿರುವುದನ್ನು ನೋಡಿದರೆ ಸಂತೋಷ ಎನಿಸುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಎಲ್ಲಾ ಜಾತಿಯ ಧರ್ಮದ ಗುರುಗಳನ್ನು ಒಂದೆಡೆ ಸೇರಿಸಲು ಇಂತಹ ಕಾರ್ಯಕ್ರಮಗಳು ವೇದಿಕೆಯಾಗಿವೆ. ಹಿಂದು, ಜೈನ, ಕ್ರೈಸ್ತ, ಮುಸ್ಲಿಂ, ಸಿಖ್ ಧರ್ಮ ಗುರುಗಳು ಒಂದೇ ಸದೇಶವನ್ನು ಈ ಜಗತ್ತಿಗೆ ಸಾರಿದ್ದಾರೆ. ಧರ್ಮದ ಕುರಿತು  ಪ್ರಮುಖ ಧರ್ಮಗುರುಗಳ ದೃಷ್ಟಿಕೋನ ಒಂದೇ ಆಗಿರುತ್ತದೆ. ಧರ್ಮವೆಂದರೆ ಆಚರಣೆಗಳಲ್ಲ, ಸತ್ಯ ಜೀವನ, ಪ್ರಾಮಾಣಿಕ ಕೆಲಸ, ಮತ್ತು ಇತರರಿಗೆ ಸಹಾಯ ಮಾಡಿದಂತೆ ಎಂದು ಸಿಖ್ ಧರ್ಮಗುರುಗಳಾದ ಗುರು ನಾನಕ್ ಹೇಳಿದರೆ, ಶರಣಾಗತಿ, ನ್ಯಾಯ, ದಯೆ, ಸಮಾನತೆ ಎಂಬ ಮೌಲ್ಯಗಳ ಆಚರಣೆ ಬಗ್ಗೆ ಇಸ್ಲಾಂ  ಧರ್ಮದ ಪ್ರವಾದಿ ಮುಹಮ್ಮದ್ ಹೇಳಿದ್ದಾರೆ ಎಂದರು.  ಕ್ರೈಸ್ತ ಧರ್ಮದ ದೃಷ್ಟಿಕೋನ ಯೇಸು ಕ್ರಿಸ್ತ ಧರ್ಮದ ಮೂಲವನ್ನು ಪ್ರೀತಿ ಮತ್ತು ಕ್ಷಮೆ ಎಂದು ಹೇಳಿದರು. ಧರ್ಮ ಎಂದರೆ ದುಃಖ ನಿವಾರಣೆ ಮತ್ತು ಮನಶಾಂತಿ ಪಡೆಯುವ ಮಾರ್ಗ ಎಂದು ಗೌತಮ ಬುದ್ಧ ಬೌದ್ಧ ಧರ್ಮದ ದೃಷ್ಟಿಕೋನದ ಬಗ್ಗೆ ಹೇಳಿದರು.

ಧರ್ಮವನ್ನು ಅಹಿಂಸೆ, ಸತ್ಯ, ತ್ಯಾಗ, ನಿಯಮ ಎಂದು ಮಹಾವೀರರು ಜೈನ ಧರ್ಮದ ದೃಷ್ಟಿಕೋನ ಎಂದು ವಿವರಿಸಿದರು. ಇಡೀ ಜಗತ್ತಿನ ಸಕಲ ಜೀವ ರಾಶಿಗಳ ಸುಖವನ್ನೇ ಬಯಸಿದ ಧರ್ಮ ನಮ್ಮ ಹಿಂದೂ ಧರ್ಮ. ವಸುದೈವ ಕುಟುಂಬಕಂ ಎಂಬ ಸಂದೇಶವನ್ನು ಸಾರಿದ ಧರ್ಮ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು. ಇಂಥ ಮುಕ್ತ ಕಾಲಘಟ್ಟದಲ್ಲಿ ಈ ಧರ್ಮ ಚೆನ್ನಾಗಿಲ್ಲ, ಆ ಧರ್ಮ ಚೆನ್ನಾಗಿಲ್ಲ ಅಂತ ಹೇಳುವ ಮೂಲಕ ಮುಗ್ದ ಮಕ್ಕಳ, ಯುವ ಜನರ ಭಾವನೆಗಳನ್ನು ಕೆರಳಿಸುತ್ತಿದ್ದೇವೆ. ಗಾಂಧಿಯವರು ಹೇಳಿದಂತೆ ಕೆಟ್ಟದ್ದನ್ನು ನೋಡಬಾರದು, ಕೆಟ್ಟದ್ದನ್ನು ಮಾತನಾಡಬಾರದು, ಕೆಟ್ಟದ್ದನ್ನು ಕೇಳಬಾರದು. ಎಷ್ಟು ದಿನ ಇರುತ್ತೀವಿ ಅನ್ನೋದು ಮುಖ್ಯ ಅಲ್ಲ, ಹೇಗೆ ಇದ್ದೀವಿ ಅನ್ನುವುದು ಮುಖ್ಯ. ಮಾನವ ಧರ್ಮಕ್ಕೆ ಜಯವಾಗಲಿ, ವಿಶ್ವಕ್ಕೆ ಧರ್ಮದಿಂದಲೇ ಶಾಂತಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ರೇಣುಕಾಚಾರ್ಯ ಮೂರ್ತಿ ಸ್ಥಾಪನೆಗೆ ನೆರವು: ಮಠದ ವತಿಯಿಂದ ನಿರ್ಮಿಸಲಾಗುತ್ತಿರುವ ರೇಣುಕಾಚಾರ್ಯ ಮೂರ್ತಿ ಸ್ಥಾಪನೆಗೆ ಈಗಾಗಲೇ ಸರ್ಕಾರದಿಂದ ನೆರವು ನೀಡುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭರವಸೆ ನೀಡಿದ್ದು, ಮಾಜಿ ಸಿಎಂ ಯಡಿಯೂರ​‍್ಪ ಅವರು ಕೂಡ ನೆರವು ನೀಡಿದ್ದು, ನಾನು ಕೂಡ ಕೈಲಾದಷ್ಟು ಸಹಾಯ ಮಾಡುವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಘೋಷಿಸಿದರು. ವೇದಿಕೆಯಲ್ಲಿ ಬಾಳೆ ಹೊನ್ನೂರಿನ ಶ್ರೀಮದ್ ರಂಭಾಪುರಿ ವೀರಸಿಂಹಾಸನಾದೀಶ್ವರ  ಅದರ 1008 ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿಯವರು ಸಾನಿಧ್ಯ ವಹಿಸಿದ್ದರೆ, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಶೃಂಗೇರಿ ಶಾಸಕ ರಾಜೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಂಶುಮಾನ್, ಬಿಸಿ ಗೀತಾ, ಚಂದ್ರಕಲಾ ಬೆಳ್ಳಾವರ, ಇಂಧುಮತಿ ಮಾನ್ವಿ, ಸುಧಾಕರ ಶೆಟ್ಟಿ, ಎಂ.ಆರ್‌.ವೆಂಕಪ್ಪಗೌಡರು, ವಿದ್ಯಾನಂದ ಭಟ್, ಅಬ್ದುಲ್ ವಹೀದ್ ಉಪಸ್ಥಿತರಿದ್ದರು. 


ಸುದ್ದಿ ಓದಿ