ಮಹಲಿಂಗಪುರ

ಯ್ಯೋಮ್ ಏ ಅಸ್ರಾ ಮೋಹರಂ ಹಬ್ಬ ಪಟ್ಟಣದ ಹಿಂದೂ, ಮುಸ್ಲಿಂರಿಂದ ವಿಜೃಂಭಣೆಯಿಂದ ಆಚರಣೆ

ಯ್ಯೋಮ್ ಏ ಅಸ್ರಾ ಮೋಹರಂ ಹಬ್ಬ ಪಟ್ಟಣದ ಹಿಂದೂ, ಮುಸ್ಲಿಂರಿಂದ ವಿಜೃಂಭಣೆಯಿಂದ ಆಚರಣೆ

ಮಹಾಲಿಂಗಪುರ : ಯ್ಯೋಮ್ ಏ ಅಸ್ರಾ ಮೋಹರಂ ಹಬ್ಬವನ್ನು ಪಟ್ಟಣದ ಹಿಂದೂ, ಮುಸ್ಲಿಂ ಬಾಂಧವರು ಶನಿವಾರ ಕೊನೆಯ ದಿವಸ ವಿಜೃಂಭಣೆಯಿಂದ ಆಚರಿಸಿದರು. 

ಒಟ್ಟು ಹತ್ತು ದಿನಗಳ ಆಚರಣೆ ಇದಾಗಿ ಇಸ್ಲಾಂ ಧರ್ಮದ ಹೊಸ ವರ್ಷವೂ ಆರಂಭಗೊಳ್ಳುತ್ತದೆ. ಮೊದಲ ದಿವಸ ಗುದ್ದಲಿ ಹಾಕಿ, ಐದು ದಿವಸಗಳ ನಂತರ ಪಟ್ಟಣದ ಏಳು ಕಡೆಗಳಲ್ಲಿ ಲಾಲಸಾಬಲಿ, ಮೌಲಾಲಿ, ಹಸನ್-ಹುಸೇನ್ ಎಂಬ ಪಂಜೆಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಈ ಪಂಜೆಗಳಿಗೆ ಭಕ್ತರು ನೀಡಿದ ಬಣ್ಣ ಬಣ್ಣದ ಬಟ್ಟೆಗಳನ್ನು ತೊಡಿಸಿ, ನಾಣ್ಯಗಳ ಪುತ್ತಳಿ ಸರಗಳನ್ನು ತೊಡಿಸಿ ಜನತೆಯಲ್ಲಿ ದೈವತ್ವದ ಭಾವ ಪ್ರಕಟಗೊಳ್ಳುವಂತೆ ಶೃಂಗಾರಗೊಳಿಸಲಾಗಿತ್ತು. 

ಸಂಪ್ರದಾಯ : ಐದು ದಿವಸಗಳಲ್ಲಿ ಎಲ್ಲ ಸಮೂದಾಯಗಳ ಭಕ್ತರು ಈ ಪಂಜೆಗಳಿಗೆ ಸಿಹಿ ಖಾದ್ಯ ಚೋಂಗೆ ಸಹಿತ ಬಗೆ ಬಗೆಯ ನೈವೇದ್ಯ (ಯಡಿ)ಗಳನ್ನು ಪಂಜೆ ಇರುವೆಡೆ ತಂದು ಸಮರ್ಪಿಸಿ, ಮನೆಗಳಲ್ಲಿರುವ ಸದಸ್ಯರೆಲ್ಲರೂ ಕೈಗೆ ಕೆಂಪು ದಾರ (ಲಾಡಿ) ಕಟ್ಟಿಕ್ಕೊಂಡು ದೇವರು ಹೊಳೆಗೆ ಹೋಗುವ ಕೊನೆ ದಿವಸಗಳ ವರೆಗೆ ಪಕೀರ್ ಆಗಿ ತಮ್ಮ ಪೂರ್ವಜರ ಸಂಪ್ರದಾಯ ನೆರೆವೇರಿಸಿದರು.

ಭಕ್ತರ ಮನೆಗಳಿಗೆ ಭೇಟಿ: ಪಂಜೆಗಳು ಈ ಐದು ದಿವಸಗಳಲ್ಲಿ ಮೂರು ಬಾರಿ ಪಟ್ಟಣದ ಪ್ರತಿ ಭಕ್ತರ ಮನೆಗೆ ಭೇಟಿ ನೀಡಿ ಭೂತ, ಭವಿಷ್ಯತ್ ಹಾಗೂ ವರ್ತಮಾನ ಕಾಲದ ಬಗ್ಗೆ ಉಭಯ ಕುಶಲೋಪರಿ ನಡೆಸಿ ಭಕ್ತರಲ್ಲಿ ಧನ್ಯತಾಭಾವ ಮೂಡಿಸಿದವು. ಬೇಡಿಕ್ಕೊಂಡಂತೆ ಬರುವ ವರ್ಷ ಪರಿವಾರದಲ್ಲಿ ಇಷ್ಟಾರ್ಥವೇನಾದರು ಸಿದ್ಧಿಸಿದರೆ ಹರಕೆಯ ವಸ್ತುಗಳನ್ನು ಪಂಜೆಗಳಿಗೆ ತೊಡಿಸುತ್ತಾರೆ.

ಮೆರವಣಿಗೆ : ಕೊನೆಯ ದಿವಸ ಶನಿವಾರ ಮುಂಜಾನೆ ಎಲ್ಲ ಪಂಜೆಗಳು ಭಕ್ತರ ಮನೆಗಳಿಗೆ ಭೇಟಿ ನೀಡಿ ನಡುಚೌಕಿ ಪ್ರದೇಶದಲ್ಲಿ ಬಣ್ಣ ಬಣ್ಣದ ಆಕರ್ಷಕ ತಾಬೂತ್ (ಡೋಲಿ)ಗಳ ಜೊತೆಯಲ್ಲಿ ಸೇರಿ, ಮಹಾಲಿಂಗಪುರದ ಆರಾಧ್ಯ ಶ್ರೀ ಗುರು ಮಹಾಲಿಂಗೇಶ್ವರ ದೇವಸ್ಥಾನದ ಕಡೆಗೆ ಹೆಜ್ಜೆ ಹಾಕಿದಾಗ, ಸಕಲ ವಾದ್ಯ ವೃಂದಗಳು ತಮ್ಮ ಸಂಗೀತ ನೀನಾದದಿಂದ ಮೋಹರಂ ಮೆರವಣಿಗೆಯ ಮೆರಗು ಹೆಚ್ಚಿಸಿದರೆ, ವಿವಿಧ ವೇಷ ಭೂಷಣಗಳನ್ನು ಧರಿಸಿ ಕಲಾ ಕೌಶಲ್ಯ ಮೆರೆದ ಕಲಾವಿದರು ಸೇರಿದ ಸಾವಿರಾರು ಜನತೆಯ ಮೆಚ್ಚುಗೆಗೆ ಪಾತ್ರರಾದರು. 

ಮಠದಿಂದ ಪೂಜೆ: ದೇವಸ್ಥಾನಕ್ಕೆ ಆಗಮಿಸಿದ ಪಂಜೆಗಳಿಗೆ ಮಠದ ಮನಿಪ್ರ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಪೂಜೆ ನೆರವೇರಿಸಿ, ಪಂಜೆಗಳ ಜೊತೆ ಮಾತನಾಡುವಾಗ ಸೇರಿದ ಭಕ್ತರ ಕಣ್ಣುಗಳು ಆನಂದ ಭಾಷ್ಪದಿಂದ ತುಂಬಿ ಹೋದುವು.ಇದುವೇ ನಾಡಿಗೆ ಭಾವೈಕ್ಯತೆಯ ಸಾರವನ್ನು ಸಾರಿ, ಹಿಂದೂ ಮುಸ್ಲಿಂರು ಐಕ್ಯತೆಯೊಂದಿಗೆ ನೆಮ್ಮದಿಯ ಬದುಕು ಸಾಗಿಸುತ್ತಿದ್ದಾರೆ ಎನ್ನುವುದಕ್ಕೆ ಈ ಕ್ಷಣ ಸಾಕ್ಷಿಯಾಯಿತು. 

ಬಸವ ತೀರ್ಥಕ್ಕೆ ಪಂಜೆಗಳು : ಸಂಜೆ ಮತ್ತೆ ವಾಡಿಕೆಯಂತೆ ದೇವಸ್ಥಾನಕ್ಕೂ ಮತ್ತು ಗೌಡರ ಮನೆಗೆ ಭೇಟಿ ನೀಡಿ ನೇರವಾಗಿ ಅಪ್ಪನವರ ಬಸವತೀರ್ಥಕ್ಕೆ ಆಗಮಿಸಿ ಕೊನೆಯದಾಗಿ ಪಂಜೆಗಳು ಬಸವ ತೀರ್ಥದಲ್ಲಿ ಮಿಂದೆದ್ದು ಮೋಹರಂ ಹಬ್ಬಕ್ಕೆ ಇತಿಶ್ರೀ ಹಾಡಿದವು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಬಂದ ಡೋಲಿಗಳಿಗೆ ಜನರು ಖರ್ಜುರ ಎಸೆದು ತಮ್ಮ ಭಕ್ತಿ ಸಮರ್ಪಿಸಿದರು. 

ಸ್ವಾತಂತ್ರ್ಯ ಪೂರ್ವದ ಪರಿಕಲ್ಪನೆ: ಈ ಆಚರಣೆ ಸ್ವಾತಂತ್ರ್ಯ ಪೂರ್ವದಿಂದಲೂ ನಡೆದುಕ್ಕೊಂಡು ಬಂದಿದೆ. ಅಂದಿನ ಲೋಕಮಾನ್ಯ ಬಾಲಗಂಗಾಧರನಾಥ ತಿಲಕರ ಪರಿಕಲ್ಪನೆಯೇ ಸಾರ್ವಜನಿಕ ಹಬ್ಬಗಳ ಆಚರಣೆ. ಇದರಂತೆ ಸಾರ್ವಜನಿಕ ಗಣೇಶೋತ್ಸವ, ನವರಾತ್ರಿ ಉತ್ಸವಗಳು ಕೂಡ ಸೇರಿವೆ. ಏಕೆಂದರೆ ಅಂದು ಬ್ರಿಟಿಷರು ಭಾರತೀಯರ ಒಗ್ಗಟ್ಟಿನಿಂದ ನಮಗೆ ಗಂಡಾಂತರ ಎಂದರಿತಿದ್ದರು. ನಮ್ಮನ್ನು ಗುಂಪಾಗಿ ಸೇರಲು ಬಿಡುತ್ತಿರಲಿಲ್ಲ. ಈ ಕಾರಣದಿಂದ ಸಾರ್ವಜನಿಕವಾಗಿ ಉತ್ಸವಗಳನ್ನು ಏರ್ಪಡಿಸಿ ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರಿಕ್ಕೊಂಡು ಸ್ವಾತಂತ್ರ್ಯ ಪಡೆಯುವುದು ಹೇಗೆ ಎಂಬಿತ್ಯಾದಿ ಯೋಜನೆಗಳನ್ನು ರೂಪಿಸಲಾಗುತ್ತಿತ್ತು. 


ಸುದ್ದಿ ಓದಿ