ಅತಿ ಶೀಘ್ರದಲ್ಲೇ ತಾಲೂಕು ಕ್ರೀಡಾಂಗಣ ಮಾಡುವೆ : ಗಣೇಶ ಭರವಸೆ
ಅತಿ ಶೀಘ್ರದಲ್ಲೇ ತಾಲೂಕು ಕ್ರೀಡಾಂಗಣ ಮಾಡುವೆ : ಗಣೇಶ ಭರವಸೆ
ಕಂಪ್ಲಿ:22. ಆದಷ್ಟು ಶೀಘ್ರದಲ್ಲೇ ಭೂಮಿ ಗುರುತಿಸಿ ತಾಲೂಕು ಕ್ರೀಡಾಂಗಣ ವ್ಯವಸ್ಥೆ ಕಲ್ಪಿಸುವೆ ಎಂದು ಶಾಸಕ ಜೆ.ಎನ್.ಗಣೇಶ್ ಅವರು ಭರವಸೆ ನೀಡಿದರು. ಸ್ಥಳೀಯ ಸತ್ಯನಾರಾಯಣಪೇಟೆ ಸಹಿಪ್ರಾ ಶಾಲಾವರಣದಲ್ಲಿ ಸೋಮವಾರ ಕಂಪ್ಲಿ ಕ್ರೀಡಾ ಹಾಗೂ ಕ್ರಿಕೆಟ್ ಅಸೋಷಿಯೇಷನ್ ಉದ್ಘಾಟನೆ ಸಮಾರಂಭ ಉದ್ಘಾಟಿಸಿ ಮಾತನಾಡಿ. ಕ್ರೀಡಾಭ್ಯಾಸ ನಿರಂತರವಾಗಿರಬೇಕು. ಕ್ರೀಡಾ ಕೌಶಲ ಸತತ ಅಭ್ಯಾಸದಿಂದ ದೊರಕಲು ಸಾಧ್ಯ. ಕಂಪ್ಲಿ ಪಟ್ಟಣ ಸೇರಿ ಸುತ್ತಲಿನಲ್ಲಿ ತಾಲೂಕು ಕ್ರೀಡಾಂಗಣಕ್ಕಾಗಿ ಜಮೀನು ಅನ್ವೇಷಿಸಲಾಗುತ್ತಿದೆ.
ನೀರಾವರಿ ಪ್ರದೇಶವಾಗಿದ್ದರಿಂದ ಸರ್ಕಾರಿ ಬೆಲೆಗೆ ಜಮೀನು ಸಿಗುವುದು ದುಸ್ತರವಾಗಿದೆ. ಕ್ಷೇತ್ರದ ಎರಡು ತಾಲೂಕುಗಳಲ್ಲಿ ತಾಲೂಕು ಕ್ರೀಡಾಂಗಣ ಮಾಡುವ ಕನಸಿದೆ. ಜಾಗದ ಕೊರತೆಯಿಂದ ಕ್ರೀಡಾಂಗಣ ಮಾಡಲು ಅಡೆತಡೆಯಾಗಿದೆ. ಈಗಾಗಲೇ ಜಾಗ ಹುಡುಕಾಟ ನಡೆದಿದ್ದು, ಜಾಗ ಸಿಕ್ಕ ತಕ್ಷಣ ಗುರುತಿಸಿ, ಕ್ರೀಡಾಂಗಣ ಮಾಡಿಕೊಡಲಾಗುವುದು.
ಕ್ಷೇತ್ರದಲ್ಲಿ ರಾಜ್ಯ ಮಟ್ಟದಲ್ಲಿ ಸಾಧನೆಗೈದ ಕ್ರೀಡಾಪಟುಗಳಿದ್ದು, ಕ್ರೀಡಾಂಗಣದಿಂದ ಮತ್ತಷ್ಟು ಸಾಧನೆಗೆ ಅಣಿಯಾಗುತ್ತದೆ. ಇನ್ನಷ್ಟು ಪ್ರತಿಭೆಯುಳ್ಳ ಕ್ರೀಡಾಪಟುಗಳನ್ನು ಮುಖ್ಯವಾಹಿನಿಗೆ ತರಬಹುದು. ಸೋಲು-ಗೆಲುವು ಸಮನಾಗಿ ಸ್ವೀಕರಿಸಿ, ಕ್ರೀಡಾ ಸ್ಪೂರ್ತಿ ಮೆರೆಯಬೇಕು. ತೀರ್ುಗಾರರ ಅಂತಿಮ ನಿರ್ಧಾರಕ್ಕೆ ಕ್ರೀಡಾಪಟುಗಳು ಬದ್ಧರಾಗಿರಬೇಕು. ಎಂದರು.
ಅಸೋಷಿಯೇಷನ್ ಅಧ್ಯಕ್ಷ ರಮೇಶ್ ಎನ್.ಶಿವಪುರ ಮಾತನಾಡಿ, ತಾಲೂಕು ಕೇಂದ್ರವಾಗಿ ಆರು ವರ್ಷ ಪೂರೈಸಿದರೂ ಇನ್ನು ತಾಲೂಕು ಕ್ರೀಡಾಂಗಣ ರೂಪುಗೊಂಡಿಲ್ಲ. ಇಲ್ಲಿನ ಕ್ರೀಡಾಪಟುಗಳ ನಿರಂತರ ಕ್ರೀಡಾಭ್ಯಾಸಕ್ಕೆ, ಕ್ರೀಡಾ ತರಬೇತಿ, ಕೌಶಲ ತರಬೇತಿ ನೀಡಲು ತೊಂದರೆಯಾಗಿದೆ. ಕ್ರೀಡಾಪಟುಗಳ ಹಿತದೃಷ್ಠಿಯಿಂದ ತಾಲೂಕು ಕ್ರೀಡಾಂಗಣ ರೂಪಿಸಿ, ಅಗತ್ಯ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಸಲ್ಲಿಸಿ ಒತ್ತಾಯಿಸಿದರು. ಇಲ್ಲಿ ನಡೆದ 10 ತಂಡಗಳ ಮಾಲಿಕರು ಬಿಡ್ಡಿಂಗ್ ಮೂಲಕ 160 ಆಟಗಾರರನ್ನು ಖರೀದಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಕೆ.ಎಸ್.ಚಾಂದ್ ಭಾಷಾ, ಎನ್.ರಾಮಾಂಜಿನೇಯಲು, ಟಿ.ವಿ.ಸುದರ್ಶನರೆಡ್ಡಿ, ಕಂಪ್ಲಿ ಕ್ರೀಡಾ ಹಾಗೂ ಕ್ರಿಕೆಟ್ ಅಸೋಸಿಯೇಷನ್ ಗೌರವಾಧ್ಯಕ್ಷ ಕೆ.ಸುರೇಶಬಾಬು, ಉಪಾಧ್ಯಕ್ಷರಾದ ಯು.ಬಸವರಾಜ, ಕೆ.ಉಮೇಶ, ತಿಪ್ಪೇಸ್ವಾಮಿ, ಮೌಲಾ, ಗೌಸ್, ಖಜಾಂಚಿ ಕೆ.ಶ್ರೀನಾಥ, ಸದಸ್ಯರಾದ ಶಿವಕುಮಾರ್, ನಾಗರಾಜ, ಮಹೇಶ, ಉಮೇಶ, ಜಗ್ಗು, ಮುಖಂಡರಾದ ಕೆ.ಶ್ರೀನಿವಾಸರಾವ್, ನಾಗೇಶ್ವರಾವ್, ಮುತ್ತಣ್ಣ, ಸುಧಾಕರ, ಕಿಶೋರ, ಸುಧಾಕರ, ಯಾಳ್ಪಿ ಅಬ್ದುಲ್ ಮುನಾಫ್ ಸೇರಿದಂತೆ ಅನೇಕರಿದ್ದರು.
ಅ.001: ಕಂಪ್ಲಿ ತಾಲೂಕು ಕ್ರೀಡಾಂಗಣ ನಿರ್ಮಿಸುವಂತೆ ಶಾಸಕ ಗಣೇಶ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.