ಕರ್ನಾಟಕ ಮತ್ತು ಕನ್ನಡ ರಾಜ್ಯೋತ್ಸವ ಬಗ್ಗೆ ಚರಿತೆ ; ಸಿ ಎಸ್ ಆನಂದ
ಕರ್ನಾಟಕ ಮತ್ತು ಕನ್ನಡ ರಾಜ್ಯೋತ್ಸವ ಬಗ್ಗೆ ಚರಿತೆ ; ಸಿ ಎಸ್ ಆನಂದ
ಕಲಬುರಗಿ 29 ;ನಾವು ಪ್ರತಿ ವರ್ಷ ನವೆಂಬರ್ 1 ನೇ ತಾರೀಖನ್ನು ಕನ್ನಡ ರಾಜ್ಯೋತ್ಸವ ದಿನವೆಂದು ಆಚರಿಸುತ್ತೇವೆ. ಈ ಸಂಭ್ರಮ ಮತ್ತು ಸಡಗರದ ಆಚರಣೆ ಕನ್ನಡಿಗರಾದ ನಮಗೆಲ್ಲ ಖುಷಿ ಕೊಡುವ ಸಂಗತಿ. ಮೊದಲು ನಮ್ಮ ಕರ್ನಾಟಕ ಅಕ್ಕ- ಪಕ್ಕದ ರಾಜ್ಯದಲ್ಲಿ ಹರಿದು ಹಂಚಿ ಹೋಗಿತ್ತು. ಮದ್ರಾಸ್, ಮುಂಬೈ, ಕೊಡಗು , ಮೈಸೂರು ಕರ್ನಾಟಕ ಮತ್ತು ಹೈದ್ರಾಬಾದ, ಹೀಗೆ ಎಲ್ಲಕಡೆ ಹರಿದು-ಹಂಚಿ ಹೋದಂತಹ ಕರ್ನಾಟಕವನ್ನು ಒಂದು ಕಡೆಗೆ ತರಬೇಕು. ಬಿಟ್ಟು ಹೋದ ಕನ್ನಡದ ಒಟ್ಟು ಪ್ರದೇಶಗಳನ್ನು ಒಂದು ಮಾಡಬೇಕು. ಕರ್ನಾಟಕ ಒಂದಾಗಬೇಕು. ಚಂದಾಗಬೇಕೆಂದು ಹಿರಿದಾದ ಕನಸು ಕಂಡವರ ಸಂಖ್ಯೆ ಬಹಳಷ್ಟು ದೊಡ್ಡದಿದೆ. ನಮ್ಮ ಭವ್ಯ ಭಾರತ ದೇಶ ಸ್ವಾತಂತ್ರ್ಯಗೊಳ್ಳುವಲ್ಲಿ ಯಾವ ರೀತಿಯಾದ ಹೋರಾಟ ಚಳವಳಿ ಮತ್ತು ಸತ್ಯಾಗ್ರಹ ನಡೆಯಿತೋ ಹಾಗೆಯೇ ಕರ್ನಾಟಕ ಏಕೀಕರಣಕ್ಕೂ ಸಾಕಷ್ಟು ಚಳವಳಿಗಳು ಮತ್ತು ಹೋರಾಟಗಳು ನಡೆದಿವೆ. ನಾವು ಬಹುಮುಖ್ಯವಾಗಿ ಸ್ಮರಿಸಬೇಕಾದವರು ಕನ್ನಡದ ಕುಲಪುರೋಹಿತರೆಂದೇ ಹೆಸರುವಾಸಿಯಾದ ಆಲೂರು ವೆಂಕಟರಾಯರು ಧಾರವಾಡದ ರಾ.ರಾ.ದೇಶಪಾಂಡೆಯವರು ಕಡಪಾ ರಾಘವೇದ್ರರಾಯರು, ಸರ್.ಎಂ.ವಿಶ್ವೇಶ್ವರಯ್ಯನವರು ಸದಾ ಸ್ಮರಣೀಯರು.., ಹುಯಿಲಗೋಳ ನಾರಾಯಣರಾಯರು ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಅಂತ ಕಾವ್ಯ ಬರೆದು ಹೋರಾಡಿದರು. ಈ ಕನ್ನಡ ನಾಡು ಕಟ್ಟುವಲ್ಲಿ ಕರ್ನಾಟಕ ರಾಜ್ಯ ಕಟ್ಟುವಲ್ಲಿ ಈ ನೆಲದಲ್ಲಿ ಅನೇಕ ಧಾರ್ಮಿಕ ಚಳವಳಿಗಳಾಗಿವೆ, ಅನೇಕ ಭಾಷಾ ಚಳವಳಿಗಳಾಗಿವೆ. ಸಾಹಿತ್ಯಿಕ ಚಳವಳಿಗಳಾಗಿವೆ. ಹಾಗೆಯೇ ಈ ನೆಲದಲ್ಲಿ ಅನೇಕ ರೈತ ಚಳವಳಿಗಳಾಗಿವೆ. ಇವರ ಸಾಲಿನಲ್ಲೇ ಕರ್ನಾಟಕದ ಏಕೀಕರಣಕ್ಕಾಗಿ ಅನೇಕ ಸಾಹಿತಿಗಳು ಲೇಖಕರು ಮತ್ತು ಜನಪರ-ಜೀಪರ ಚಿಂತಕರು ಹೋರಾಟ ಮಾಡಿದ್ದಾರೆ. ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುವುದು ಅಗತ್ಯ. ಅವರೆಂದರೆ ಅ.ನ. ಕೃಷ್ಣರಾಯರು, ತ.ರಾ.ಸುಬ್ಬರಾವ್, ಶಿವರಾಮ ಕಾರಂತ, ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ದ.ರಾ. ಬೇಂದ್ರೆ, ಬಿ.ಎಂ. ಶ್ರೀಕಂಠಯ್ಯ- ಮುಂತಾದವರ ಪ್ರಯತ್ನದಿಂದ ಕರ್ನಾಟಕ ಒಂದುಗೂಡಿತು. 1956ರ ನವೆಂಬರ್ 1 ರಂದು ಮದ್ರಾಸ್, ಮುಂಬೈ, ಹೈದರಾಬಾದ್ ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳು ವೀಲೀನಗೊಂಡು ಮೈಸೂರು ರಾಜ್ಯವಾಗಿ ಮೈಸೂರು ಪ್ರಾಂತ್ಯವಾಗಿ ಉದಯವಾಯಿತು. ಉತ್ತರ ಕರ್ನಾಟಕ, ಮಲೆನಾಡು ಮತ್ತು ಹಳೆಯ ಮೈಸೂರು ಎಂಬುದಾಗಿ ಹೊಸದಾಗಿ ರಚನೆಗೊಂಡ ಮೈಸೂರು ರಾಜ್ಯವನ್ನು ಮೂರು ಪ್ರದೇಶಗಳಲ್ಲಿ ಗುರುತಿಸಲಾಯಿತು. ಆದರೆ ಉತ್ತರ ಕರ್ನಾಟಕದ ಜನರ ತರ್ಕ ಮತ್ತು ಮಾನ್ಯತೆಗಾಗಿ ಮುಂದೆ ರಾಜ್ಯದ ಹೆಸರು ನವೆಂಬರ್ 1, 1973 ರಂದು ‘ಕರ್ನಾಟಕ’ ಎಂದು ಮರುನಾಮಕರಣ ಮಾಡಿ ಬದಲಾಯಿಸಲಾಯಿತು. ಕರ್ನಾಟಕ ರಾಜ್ಯವಾಗಿ ರಚನೆಯಾಯಿತು. ಆಗ ನಮ್ಮ ಕರ್ನಾಟಕ ರಾಜ್ಯ ಒಟ್ಟು 19 ಜಿಲ್ಲೆಗಳನ್ನು ಒಳಗೊಂಡಿತ್ತು. ಈಗ ಇದು ಸಮೃದ್ಧವಾಗಿ ಬೆಳೆದು ಬೆಳೆಯುತ್ತ ಒಟ್ಟು 31 ಜಿಲ್ಲೆಗಳನ್ನು ಒಳಗೊಂಡಿರುವ ಬಹು ದೊಡ್ಡ ರಾಜ್ಯವಾಗಿದೆ.
ಈ ನಾಡಿನ ಭಾಷೆ ಚೆಲುವು ಮತ್ತು ಸೊಬಗನ್ನು ಇಲ್ಲಿಯ ಅನೇಕ ಕವಿಗಳು ತಮ್ಮ ಕವಿತೆಗಳ ಮೂಲಕ ಹಾಡಿ ಹೊಗಳಿದ್ದಾರೆ. ಕನ್ನಡ ಭಾಷೆಯ ಮತ್ತು ಕನ್ನಡ ಸಾಹಿತ್ಯದ ಶ್ರೇಷ್ಠತೆಯನ್ನು ಹಾಡಿ ಸಂಭ್ರಮಿಸಲು ಕಳೆದ ವರ್ಷ ಕರ್ನಾಟಕ ಸರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಡಿಯಲ್ಲಿ ಕೋಟಿ ಕಂಠ ಗಾಯನ ಎಂಬ ವಿಶಿಷ್ಟವಾದ ಅಭಿಯಾನ ಹಮ್ಮಿಕೊಂಡು ಆಚರಿಸಿರುವುದು ಮತ್ತಷ್ಟು ಅರ್ಥಪೂರ್ಣ ಆಚರಣೆ ಆಗಿತ್ತು. ಇದು ಕನ್ನಡಿಗರಾದ ನಮಗೆ ಕರ್ನಾಟಕ ರಾಜ್ಯೋತ್ಸವದ ಆಚರಣೆ ಬಹಳಷ್ಟು ಮೆರಗು ತಂದಿತ್ತು. ಈಗ ಕನ್ನಡ ನಾಡು ಒಂದಾಗಿ ಆರುವರೆ ದಶಕಗಳೇ ಗತಿಸಿವೇ.. ಇಂದು ನಮಗೆ ಕನ್ನಡಿಗರ ಸ್ವಾಭಿಮಾನದ ಸಂಕೇತವಾದ ರಾಜ್ಯೋತ್ಸವದ ದಿನ. ಅಷ್ಟೇ ಅಲ್ಲ ನಮಗೆ ಉತ್ಸವದ ಮತ್ತು ಉತ್ಸಾಹದ ದಿನವೂ ಆಗಿದೆ .
ಹೀಗೆ ಅನೇಕ ಕವಿಗಳು ನಮ್ಮ ಕರ್ನಾಟಕ ರಾಜ್ಯ ಉದಯವಾದ ಶುಭ ಸಂದರ್ಭದಲ್ಲಿ ನಾಡಿನ ಹಿರಿಮೆಯನ್ನು ತಮ್ಮ ಕಾವ್ಯದ ಮೂಲಕ ರಚಿಸಿ ಸಂಭ್ರಮಿಸಿದ್ದಾರೆ. ಕರು ಮತ್ತು ನಾಡು ಸೇರಿ ಎತ್ತರದ ಭೂಮಿ ಎಂಬರ್ಥದ ಕರುನಾಡು ಪದದಿಂದ ಉಗಮವಾಗಿದೆ. ‘ಕರು’ ಎಂದರೆ ‘ಕಪು’್ಪ. ನಾಡು ಎಂದರೆ ಪ್ರದೇಶ ಎಂದು ಅರ್ಥೈಸಿಕೊಂಡರೆ ಬಯಲು ಸೀಮೆಯ ಕಡು ಕಪ್ಪು ಮಣ್ಣಿನಿಂದಾಗಿ ಈ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಕೃಷ್ಣಾ ನದಿಯ ದಕ್ಷಿಣಕ್ಕೆ ಎರಡೂ ಕಡೆ ಜಲಾವೃತವಾದ ಪ್ರದೇಶವಾದ್ದರಿಂದ ಬ್ರಿಟಿಷರ್ ಕಾಲದಲ್ಲಿ ‘ಕರ್ನಾಟಿಕ್ ಅಥವಾ ಕರ್ನಾಟಕ’ ಹೆಸರು ಬಳಕೆಗೆ ಬಂದಿದೆ.
ಕರ್ನಾಟಕಕ್ಕೆ ತನ್ನದೇ ಆದ ಪ್ರತ್ಯೇಕ ಬಾವುಟವಿದೆ. ಅದು ಕೆಂಪು ಮತ್ತು ಹಳದಿ ಬಣ್ಣವನ್ನು ಹೊಂದಿದೆ. ಕನ್ನಡಕ್ಕೊಂದು ಬಾವುಟದ ಅವಶ್ಯಕತೆಯನ್ನು ಮನಗಂಡು ಕನ್ನಡದ ಹೋರಾಟಗಾರರಾದ ಎಂ . ರಾಮಮೂರ್ತಿಯವರು ಹಳದಿ ಮತ್ತು ಕೆಂಪು ಬಣ್ಣವನ್ನು ಬಳಸಿ ಬಾವುಟವನ್ನು ಸಿದ್ದಪಡಿಸಿದರು. ಈ ಹಳದಿ ಬಣ್ಣವು ಶಾಂತಿ ಮತ್ತು ಸೌಹಾರ್ದತೆಯನ್ನು ಸೂಚಿಸಿದರೆ ಕೆಂಪು ಬಣ್ಣ ಕ್ರಾಂತಿಯ ಸಂದೇಶವನ್ನು ನೀಡುತ್ತದೆ. ಕನ್ನಡಿಗರಾದ ನಾವು ಶಾಂತಿಗೆ ಬದ್ಧ ಮತ್ತು ಯುದ್ದಕ್ಕೂ ಸಿದ್ಧ ಎಂಬ ಸಂದೇಶವನ್ನು ಈ ಭಾವುಟ ರವಾನಿಸುತ್ತದೆ.
ಕರ್ನಾಟಕದ ಇತಿಹಾಸ ಮತ್ತು ಪರಂಪರೆ ಬಹಳಷ್ಟು ದೊಡ್ಡದಿದೆ. ಸುಮಾರು 2 ಸಾವಿರ ವರ್ಷಗಳ ಇತಿಹಾಸ ಇರುವ ನಮ್ಮ ಕನ್ನಡ ಭಾಷೆ ದ್ರಾವಿಡ ಭಾಷೆ ಆಗಿದೆ. ಸುಂದರವಾದ ಅಕ್ಷರಗಳುಳ್ಳ ಕನ್ನಡ ಭಾಷೆ ಅಷ್ಟೇ ಸೂಕ್ಷ್ಮಸಂವೇದನೆಯ ಭಾಷೆಯೂ ಆಗಿದೆ. 10 ನೇ ಶತಮಾನದಲ್ಲೇ ಮಹಾಕವಿ ಪಂಪ ತನ್ನ ಸಾಹಿತ್ಯದಲ್ಲಿ ಮನುಷ್ಯ ಜಾತಿ ತಾನೊಂದೇ ವಲಂಎನ್ನುವ ಜಾತ್ಯಾತೀತ ವಿಚಾರವನ್ನು ಸಾರಿ ಹೇಳಿದ ನಾಡು ನಮ್ಮದು . ಪಂಪ ಒಂದು ಕಡೆಗೆ ಹೇಳ್ತಾನೆ - " ನನಗೆ ಮುಂದಿನ ಜನ್ಮದಲ್ಲಿ ಮನುಷ್ಯ ಜನ್ಮ ಕೊಟ್ಟರೆ ಅದು ಕನ್ನಡ ನೆಲದಲ್ಲೇ ಹುಟ್ಟಿಸು ಆಕಸ್ಮಿಕವಾಗಿ ನೀನು ಕೊಡದಿದ್ದರೆ ದೇವರೆ ನನಗೆ ಒಂದು ದುಂಬಿಯಾಗಿ ಮರಿ ದುಂಬಿಯಾಗಿ .., ಇಲ್ಲವೆ ಒಂದು ಕೋಗಿಲೆಯಾಗಿ ಮರಿ ಕೋಗಿಲೆಯಾಗಿ ಇಲ್ಲೇ ಹುಟ್ಟಿಸು ಎಂದು ಬೇಡಿಕೊಳ್ಳುತ್ತಾನೆ. ಇದು ಈ ನೆಲದ ಈ ಪುಣ್ಯದ ಮಣ್ಣಿನ ಶ್ರೇಷ್ಠತೆಯನ್ನು ಎತ್ತಿತೋರಿಸುತ್ತದೆ. ಇನ್ನು 12 ನೇ ಶತಮಾನದಲ್ಲಿ ಅಣ್ಣ ಬಸವಣ್ಣ ಮತ್ತು ಅಲ್ಲಮಪ್ರಭುಗಳ ನೇತೃತ್ವದಲ್ಲಿ ಸಮಾಜೋ-ಧಾರ್ಮಿಕ ಕ್ರಾಂತಿ ಜರುಗಿರುವುದು ನಮ್ಮ ನೆಲದಲ್ಲೇ ಎಂಬುವದನ್ನು ನಾವು ಯಾವತ್ತು ಮರೆಯಲಾಗದು. ಮಾತೆಂಬುದು ಜ್ಯೋತಿರ್ಲಿಂಗ ಮತ್ತು ನುಡಿದರೆ ಮುತ್ತಿನ ಹಾರದಂತಿರಬೇಕು ಎಂದು ಹೇಳಿದ ಶರಣರ, ದಾಸರ, ಸೂಫಿಗಳ, ಸಂತರ ಮತ್ತು ವಿಶೇಷವಾಗಿ ತತ್ವಪದಕಾರರ ನಾಡು ನಮ್ಮದು.
ಕರ್ನಾಟಕ ರಾಜ್ಯೋತ್ಸವವನ್ನು ಕರ್ನಾಟಕದಲ್ಲಿರುವ ಬಹುತೇಕ ಹಿಂದೂಗಳು, ಮುಸ್ಲಿಮರು, ಜೈನರು ಮತ್ತು ಕ್ರಿಶ್ಚಿಯನ್ನರು ಧರ್ಮಬೇಧವಿಲ್ಲದೆ ಆಚರಿಸುತ್ತೇವೆ. ರಾಜ್ಯ ಸರ್ಕಾರ ಕರ್ನಾಟಕ ರಾಜ್ಯೋತ್ಸವದ ದಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುತ್ತದೆ. ಕರ್ನಾಟಕ ರಾಜ್ಯದಲ್ಲಿ ನಮ್ಮ ಕರ್ನಾಟಕ ಸರಕಾರ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಉಳುವಿಗಾಗಿ, ಬೆಳವಣಿಗೆಗಾಗಿ - ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸಾಹಿತ್ಯ ಅಕಾಡೆಮಿ ಕನ್ನಡ ಪುಸ್ತಕ ಪ್ರಾಧಿಕಾರ ಜಾನಪದ ಸಾಹಿತ್ಯ ಅಕಾಡೆಮಿ ಬಯಲಾಟ ಅಕಾಡೆಮಿ ಲಲಿತ ಕಲಾ ಅಕಾಡೆಮಿ ವಿಜ್ಞಾನ ಪರಿಷತ್ತು, ಸಾರ್ವಜನಿಕ ಗ್ರಂಥಾಲಯ, ರಂಗಭೂಮಿ , ರಂಗಾಯಣ ಮೊದಲಾದ ಪ್ರತಿಷ್ಠಾನಗಳನ್ನು, ಸಂಘ-ಸಂಸ್ಥೆಗಳನ್ನು ಸ್ಥಾಪನೆ ಮಾಡಿದೆ. ಇವೆಲ್ಲವುಗಳು ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತೆ ಮಹತ್ವದ ಯೋಜನೆಗಳನ್ನು, ಚಟುವಟಿಕೆಗಳನ್ನು ಹಾಕಿಕೊಳ್ಳುತ್ತ ಬಂದಿವೆ. ಇತ್ತೀಚಿನ ಸಂಶೋಧನೆ ಒಂದು ಕನ್ನಡ ಭಾಷೆ ಜಗತ್ತನಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಭಾಷೆಗಳಲ್ಲಿ ಇದು ಕೂಡ ಒಂದು ಎಂದು ದಾಖಲಿಸಿದೆ. ಇದನ್ನು ನಾವು ಮರೆಯಬಾರದು. ಮತ್ತು ಮೈ ಮರೆಯಬಾರದು. ಇಂದು ಕನ್ನಡ ಭಾಷೆ ಹೊಸ ತಂತ್ರಜ್ಞಾನಕ್ಕೆ ಪ್ರವೇಶ ಪಡೆದು ಬೆಳೆಯುತ್ತಿದೆ. ತಂತ್ರಜ್ಞಾನದ ಆವಿಸ್ಕಾರದಿಂದ ಕನ್ನಡ ಇಂದು ಜಾಗತಿಕ ಭಾಷೆಯಲ್ಲಿ ಸ್ಥಾನಪಡೆದಿದೆ. ಹಾಗಾಗಿ ಕನ್ನಡ ಅಳೆದು ಹೋಗುವ ಭಾಷೆ ಅಲ್ಲ. ಕನ್ನಡ ರಾಜ್ಯೋತ್ಸವದ ಸಂಭ್ರಮದ ದಿನದಂದು ವಿಶ್ವದಾದ್ಯಂತ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಕನ್ನಡಿಗರು ವಾಸವಿರುವ ದೇಶದ ವಿವಿಧ ರಾಜ್ಯಗಳಾದ ಮುಂಬೈ, ಪುಣೆ, ದೆಹಲಿ, ಚೆನ್ನೈ- ಹೀಗೆ ಮುಂತಾದ ಹೊರನಾಡು- ಹೊರ ರಾಷ್ಟ್ರಗಳಲ್ಲೂಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ಇದಲ್ಲದೆ ಸಾಗರೋತ್ತರದಲ್ಲಿರುವ ಕನ್ನಡ ಸಂಸ್ಥೆ, ಅಮೇರಿಕಾ, ಸಿಂಗಾಪುರ್, ದುಬೈ, ದಕ್ಷಿಣ ಕೊರಿಯಾ, ಮಸ್ಕಟ್, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ,ನೆದರ್‌ಲ್ಯಾಂಡ್ .....ಮೊದಲಾದ ದೇಶಗಳಲ್ಲಿ ನೆಲೆಸಿರುವ ಕನ್ನಡದ ಮನಸ್ಸುಗಳು ಮತ್ತು ನಮ್ಮ ಕನ್ನಡದ ಬಂಧುಗಳು ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುತ್ತಾರೆ.
ಕರ್ನಾಟಕದ ಜನ ಕಾಯಕ ಮಾಡುವ ಜನ ಕಾಯಕವೇ ಕೈಲಾಸ ಎಂಬ ತತ್ವದಲ್ಲಿ ಬಲವಾದ ನಂಬಿಕೆ ಇಟ್ಟಬೆವರಿನ ಜೀವಿಗಳು. ನಾವು ಬೆವರಿನ ಸಂಸ್ಕೃತಿಯನ್ನು ಪ್ರೀತಿಸಬೇಕು. ಶ್ರಮಸಂಸ್ಕೃತಿಯನ್ನು ಮತ್ತಷ್ಟು ಗೌರವಿಸಬೇಕು. ಬೇವರು ನಮ್ಮ ದೇವರು... ಬೇವರು ನಮ್ಮ ಅನ್ನ... ಬೇವರು ನಮ್ಮ ಬದುಕಿನ ಉಸಿರು... ಬೆವರಿನ ಜನರಿಂದಲೇ ಈ ನಾಡು ನಿರ್ಮಾಣವಾಗಿದೆ. ನಮ್ಮ ಭವ್ಯ ಕಟ್ಟಡಗಳನ್ನು, ಮನೆಗಳನ್ನು ಮತ್ತು ದೇವಾಲಯಗಳನ್ನು ಕಟ್ಟಿದವರು ನಮ್ಮ ನೆಲಮೂಲದ ಬೆವರಿನ ಜನರಾಗಿದ್ದಾರೆ. 12 ನೇ ಶತಮಾನದಲ್ಲಿ ವಿವಿಧ ಕಾಯಕ ಮಾಡುವ ಜನರೆ ಅಂದರೆ ಶರಣರೆ ಕನ್ನಡ ಭಾಷೆಯಲ್ಲಿ ವಚನ ರಚಿಸಿದರು. ಇಂದು ಜನಸಾಮಾನ್ಯರೂ ಕೂಡ ಉತ್ತಮವಾದ ಸಾಹಿತ್ಯ ರಚಿಸುತ್ತಿರವರು. ಈಗಾಗಲೇ ಕನ್ನಡ ಭಾಷೆಯಲ್ಲಿಅನೇಕರು ಶ್ರೇಷ್ಠ ಸಾಹಿತ್ಯ ರಚಿಸಿ ಪ್ರಸಿದ್ಧ ಸಾಹಿತಿಗಳಾಗಿ ತಮ್ಮ ಅಮೋಘ ಕೊಡುಗೆಯನ್ನು ನಾಡಿಗೆ ನೀಡಿರುವರು ಆದಿಕವಿ ಪಂಪ, ರನ್ನ, ಪೊನ್ನ ,ಹರಿಹರ, ರಾಘವಾಂಕ , ಕುಮಾರವ್ಯಾಸ ಇವರೆಲ್ಲರು ಬಹುದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಇವರೆಲ್ಲರೂ ನಮ್ಮ ಕನ್ನಡದ ಜಗತ್ತನ್ನು ಶ್ರೀಮಂತಗೊಳಿಸಿದ್ದಾರೆ. ಇದು ಅಷ್ಟೇ ಅಲ್ಲದೆ, ಕನ್ನಡದಲ್ಲಿ ಇಲ್ಲಿಯವರೆಗೆ ಎಂಟು ಜನ ಪ್ರಸಿದ್ಧ ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದುಕೊಂಡು ಕನ್ನಡದ ಭಾಷೆಗೆ ಮತ್ತಷ್ಟು ಶ್ರೀಮಂತಿಕೆಯನ್ನು ತಂದುಕೊಟ್ಟಿರುವರು.
ಇಂದು ಜಾಗತೀಕರಣ, ಖಾಸಗೀಕರಣ ಮತ್ತು ನಗರೀಕರಣಗಳ ಪ್ರಭಾವದಿಂದ ಆಘಾತಕ್ಕೆ ಒಳಗಾಗಿರುವ ಕನ್ನಡ ಭಾಷೆಯನ್ನು ಉಳಿಸುವಲ್ಲಿ, ಬೆಳೆಸುವಲ್ಲಿ ಪ್ರತಿಯೊಬ್ಬ ಕನ್ನಡಿಗನ ಬಹುದೊಡ್ಡ ಜವಾಬ್ದಾರಿಯಿದೆ. ಕನ್ನಡಿಗರ ಇಂಗ್ಲಿಷ್ ಅಂಧಾಭಿಮಾನ ಕನ್ನಡದ ಅಸ್ತಿತ್ವವನ್ನೇ ಅಲುಗಾಡಿಸುತ್ತಿದೆ. ಇಂಗ್ಲಿಷ್ ಕಲಿಯದಿದ್ದರೆ ಮಕ್ಕಳಿಗೆ ಭವಿಷ್ಯವೇ ಇಲ್ಲವೆನ್ನುವ ಮನೋಭಾವ ಕನ್ನಡಿಗರಲ್ಲಿ ಬೆಳೆಯಲು ಕಾರಣವೇನು ಎನ್ನುವುದನ್ನು ವಾಸ್ತವ ನೆಲೆಯಲ್ಲಿ ವಿಶ್ಲೇಷಿಸಬೇಕಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ಖಾಸಗಿ ವಲಯದ ಪ್ರವೇಶದಿಂದ ಪ್ರಾದೇಶಿಕ ಭಾಷೆಗಳು ಅಸ್ತಿತ್ವದ ಪ್ರಶ್ನೆ ಎದುರಿಸುತ್ತಿವೆ. ಸ್ವತಂತ್ರವಾದ ಆಲೋಚನಾ ಪದ್ಧತಿ ಸಂಕೀರ್ಣವಾದ ಭಾವನೆಗಳ ಅಭಿವ್ಯಕ್ತಿ ಸಾಮರ್ಥ್ಯ ಬೆಳೆಸಲು ಮಾತೃಭಾಷೆಯಿಂದ ಮಾತ್ರ ಸಾಧ್ಯ . ಈ ಮಾತನ್ನು ಎಲ್ಲರು ಬಹಳಷ್ಟು ಸೂಕ್ಷ್ಮವಾಗಿ ಗ್ರಹಿಸಿಕೊಳ್ಳಬೇಕು. ಇಂದು ಕನ್ನಡ ಭಾಷೆ ಎದುರಿಸುತ್ತಿರುವ ಮೊದಲನೆಯ ಬಹುದೊಡ್ಡ ಸವಾಲು ಎಂದರೆ - ಮರಾಠಿ, ತೆಲುಗು ಮತ್ತು ತಮಿಳು ಭಾಷಿಕರ ಪ್ರಭಾವ ಬಹಳ ದಟ್ಟವಾಗಿ ಆವರಿಸಿದೆ. ಕನ್ನಡಿಗರಾದ ನಾವು ಮೂಲತ: ಉದಾರಿಗಳು, ಬೇರೆ ಪ್ರದೇಶ, ಬೇರೆ ಭಾಷೆಯ ಜನರನ್ನು ಪ್ರೀತಿಸುವಂತವರು ಗೌರವಿಸುವಂತವರು. ಅಷ್ಟೇ ಅಲ್ಲದೆ ಅವರಿಗೆ ಆಶ್ರಯ ಕೊಡುವಂತವರಾಗಿದ್ದೇವೆ. ಇದೆಲ್ಲವೂ ಸರಿ ಇದೆ. ಆದರೆ ಭಾಷೆಯ ವಿಷಯದಲ್ಲಿ ನಾವು ನಮ್ಮತನವನ್ನು ಬಿಟ್ಟುಕೊಡಬಾರದು. ಕನ್ನಡ ಭಾಷೆ ಎದುರಿಸುತ್ತಿರುವ ಎರಡನೆಯ ಬಹುದೊಡ್ಡ ಸವಾಲು ಇಂಗ್ಲೀಷ ಭಾಷೆಯದಾಗಿದೆ. ನಾಯಿಕೊಡೆಗಳಂತೆ ಇಂಗ್ಲಿಷ್ ಮಾಧ್ಯಮ ಶಾಲೆಗಳು ನಾಡಿನಾದ್ಯಂತ ಹರಡಿವೆ. ಇಂಗ್ಲಿಷ್ ಕಲಿಯದಿದ್ದರೆ ಬದುಕು ದುರಂತಮಯವಾಗುವುದು ಎಂದು ಜನರು ಭಾವಿಸಿದ್ದಾರೆ. ಪ್ರಪಂಚವನ್ನು ಇಂಗ್ಲಿಷ್ ಮೂಲಕ ಮಾತ್ರ ಅರ್ಥ ಮಾಡಿಕೊಳ್ಳಬಹುದೆಂದು ಜನ ತಿಳಿದಿದ್ದಾರೆ. ನಗರ ಪ್ರದೇಶದ ಮತ್ತು ಗ್ರಾಮೀಣ ಪ್ರದೇಶದ ಬಹುತೇಕ ತಂದೆ-ತಾಯಿಯರು ತಮ್ಮ ಮಕ್ಕಳನ್ನು ಆಂಗ್ಲದ ಹಂಗಿನರಮನೆಗೆ ಸುರಕ್ಷಿತವಾಗಿ ಕಳುಹಿಸುತ್ತಿದ್ದಾರೆ. ಅಲ್ಲಿಂದ ಶುರುವಾದ ಬಾಯಲ್ಲಿ ಕನ್ನಡ ಮಂತ್ರ, ಕೃತಿಯಲ್ಲಿ ಆಂಗ್ಲ ಜಪ ಇಂದಿಗೂ ಯಾವುದೇ ಅಡೆತಡೆಯಿಲ್ಲದೆ ಸಾಗಿದೆ; ಸಾಗುತ್ತಲೇ ಇದೆ. ಇದರಿಂದ ಶ್ರೀಸಾಮಾನ್ಯ ಕನ್ನಡಿಗನೂ ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಗುರಿಯಾಗುತ್ತಿದ್ದಾನೆ. ಗ್ರಾಮೀಣ ಪ್ರದೇಶದಲ್ಲೂ ಇಂಗ್ಲಿಷ್ ಮಾಧ್ಯಮ ಶಾಲೆಗಳು ಹುಟ್ಟಿಕೊಂಡಿವೆ. ಇತ್ತಕಡೆಗೆ ಸರ್ಕಾರಿ ಕನ್ನಡ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ನಲುಗುತ್ತಿವೆ. ಎಷ್ಟೋ ಕಡೆ ಸರ್ಕಾರದ ಕನ್ನಡ ಮಾಧ್ಯಮದ ತರಗತಿಗಳಿಗಿಂತ ಇಂಗ್ಲಿಷ್ ಮಾಧ್ಯಮ ತರಗತಿಗಳೇ ಹೆಚ್ಚುತ್ತಿರುವ ವಿಚಿತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಎಷ್ಟೋ ಶ್ರೀಮಂತ ಕನ್ನಡಿಗರ ಮಕ್ಕಳು ಕನ್ನಡವನ್ನು ಕನಿಷ್ಠ ಒಂದು ಭಾಷೆಯಾಗಿಯೂ ಇಂದು ಓದು-ಬರಹದ ಅಧ್ಯಯನ, ಅಭ್ಯಾಸ ಮಾಡುತ್ತಿಲ್ಲ. ಇಲ್ಲಿಯ ರೈತರು, ಕಾರ್ಮಿಕರು, ಮತ್ತು ಕೂಲಿಕಾರರು ಕೂಡ ಸಾಲ ಮಾಡಿಯಾದರೂ ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದ ಶಾಲೆಗಳಿಗೆ ಕಳಿಸುತ್ತಿದ್ದಾರೆ. ಬಹಳಷ್ಟು ಕನ್ನಡಿಗರ ಮನೆಗಳಲ್ಲಿ ಬರೀ ಇಂಗ್ಲಿಷ್ ಪುಸ್ತಕ, ಇಂಗ್ಲಿಷ್ ದಿನಪತ್ರಿಕೆಗಳು ರಾರಾಜಿಸುತ್ತಿವೆ.ನಮ್ಮ ಮನೆಗಳಲ್ಲಿ ಕನ್ನಡ ಮಾತನಾಡುವುದಕ್ಕೆ ನಾವೇನೂ ಅಂತಹ ಕಷ್ಟಪಡಬೇಕಿಲ್ಲ. ಕನ್ನಡ ಭಾಷೆಗೆ ಭವ್ಯವಾದ ಇತಿಹಾಸವಿದೆ, ಪರಂಪರೆಯಿದೆ, ಸಮೃದ್ಧವಾದ ಸಾಹಿತ್ಯದ ಫಸಲಿದೆ. ಶಿಕ್ಷಣದ ಮಾಧ್ಯಮ ಇಂಗ್ಲಿಷ್ ಇದ್ದರೂ ಪರವಾಗಿಲ್ಲ; ಆಡಳಿತದಲ್ಲಿ ಮಾತ್ರ ಕನ್ನಡ ಬೇಕು. ಏಕೀಕರಣೋತ್ತರ ಯುಗದಲ್ಲಿ ನಾವು ಕನ್ನಡವನ್ನು ಇಂತಹ ಒಂದು ದ್ವಂದದಲ್ಲಿ ಉಳಿಸಲು ಹೊರಟಿದ್ದೇವೆ. ಆರು ದಶಕಗಳಲ್ಲಿ ಕನ್ನಡ ನಾಡಿನ ವಿದ್ಯಾರ್ಥಿಗಳು ಕನ್ನಡದ ಜೊತೆಗೊಂದು ಕರುಳುಬಳ್ಳಿ ಸಂಬಂಧ ಬೆಳೆಸಿಕೊಳ್ಳಲು ಬೇಕಾದ ವಾತಾವರಣವನ್ನು ನಿರ್ಮಿಸುವಲ್ಲಿ ನಾವೆಲ್ಲರೂ ಸೋತಿದ್ದೇವೆ. ಇಂದು ಭಾಷೆಗೆ ಎಷ್ಟು ದಕ್ಕೆ ಬಂದಿದೆಯೋ ಅಷ್ಟೇ ಪ್ರಮಾಣದಲ್ಲಿ ಮನುಷ್ಯನ ಭಾವನೆಗಳಿಗೂ ದಕ್ಕೆ ಬಂದಿದೆ.
ಕನ್ನಡಭಾಷೆಯ ಉದ್ದಾರದ ಕಾರ್ಯ ಕೇವಲ ಸಭೆ-ಸಮಾರಂಭಗಳ ಭಾಷಣಗಳಿಗೆ ಮಾತ್ರ ಸೀಮಿತವಾಗುತ್ತಿದೆ. ಕನ್ನಡವು ಕರ್ನಾಟಕದಲ್ಲಿಯೇ ಮೂಲೆ ಸೇರುತ್ತಿರುವಾಗ, ಸರ್ಕಾರಪೋಷಿತ ಕನ್ನಡಪರ ಸಂಘ-ಸಂಸ್ಥೆಗಳು ವಿದೇಶಗಳಲ್ಲಿ ಕನ್ನಡದ ಹೆಸರಿನಲ್ಲಿ ಆಡಂಬರದ ಮೆರವಣಿಗೆ ನಡೆಸುತ್ತಿವೆ. ಶಾಲೆಗಳಲ್ಲಿ ಉಳಿಯದ ಕನ್ನಡವನ್ನು ಸಮಾರಂಭ, ಸಮ್ಮೇಳನ, ಉತ್ಸವಗಳ ಮೂಲಕ ಉಳಿಸಿಕೊಳ್ಳುವ ಸಾಧ್ಯತೆ ತೀರಾ ಕಡಿಮೆ...!
ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿುಷ್ ಭಾಷೆಯನ್ನು ಕಲಿಸುವುದಕ್ಕೆ ಕೆಲವು ಸಾಹಿತಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇಂಗ್ಲಿಷನ್ನು ಒಂದು ಭಾಷೆಯಾಗಿ ಸರ್ಕಾರಿ ಶಾಲೆಗಳಲ್ಲಿ ಕಲಿಸುವುದಕ್ಕೆ ಜನಸಾಮಾನ್ಯರು ಯಾರೂ ವಿರೋಧ ವ್ಯಕ್ತಪಡಿಸಿಲ್ಲ. ಸರ್ಕಾರಿ ಶಾಲೆಗಳಲ್ಲಿ ಈಗಾಗಲೇ ಒಂದನೆಯ ತರಗತಿಯಿಂದಲೇ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸುವ ಕ್ರಮ ಜಾರಿಯಲ್ಲಿದೆ. ಆದರೆ ಅದು ಸರಿಯಾಗಿ ಅನುಷ್ಠಾನಕ್ಕೆ ಬಂದಿಲ್ಲ. ಇಂಗ್ಲಿಷ್ ಕಲಿಕೆ, ಗುಣಮಟ್ಟದ ಶಿಕ್ಷಣ ಕುರಿತು ಸರ್ಕಾರಿ ಶಾಲೆಗಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿವೆ. ನಮ್ಮ ಸರಕಾರ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಮಾಡಿದ್ದರೂ ಸರಕಾರಿ ಕಛೇರಿಗಳಲ್ಲಿ ಎಲ್ಲ ವ್ಯವಹಾರ ಇಂಗ್ಲಿಷ್ ನಲ್ಲೇ ನಡೆಯುತ್ತಿದೆ. ಕನ್ನಡಿಗರಿಗೆ ಅನ್ನ, ವಸತಿ, ಉದ್ಯೋಗದ ಭದ್ರತೆಯಿದ್ದರೆ, ಇದೆಲ್ಲದಕ್ಕೂ ಕನ್ನಡವು ಒಂದು ಮಾನದಂಡ ಆದರೆ, ಕನ್ನಡ ತಾನೇ ತಾನಾಗಿ ಇಲ್ಲಿಯ ಜನರಲ್ಲಿ ಉಳಿದು ಬೆಳೆಯುತ್ತದೆ. ಕನ್ನಡಭಾಷೆ ನಮಗೆ ಕೇವಲ ಕೊರಳಿನ ಕನ್ನಡವಾಗಬಾರದು, ಅದು ಬದುಕು ಕಟ್ಟಿಕೊಡುವ ಕರುಳಿನ ಕನ್ನಡವಾಗಬೇಕು. ಅನ್ನವನ್ನು ಕೊಡದ ಭಾಷೆಯನ್ನು ಕೇವಲ ಭಾವನೆಗಳ ನೆಲೆಯಲ್ಲಿ ಉಳಿಸಿಕೊಳ್ಳಬಹುದೇ ಹೊರತು ಬದುಕಿನಲ್ಲಿ ಅಲ್ಲ. ಈ ನೆಲೆಯಲ್ಲಿ ಕನ್ನಡ ಎಲ್ಲರಿಗೂ ಅನ್ನ ಕೊಡುವ ಭಾಷೆಯಾಗಬೇಕು. ಇಂತಹ ಸಂದರ್ಭದಲ್ಲೂ ಕರ್ನಾಟಕದಲ್ಲಿ ವಾಸಿಸುವ ಮತ್ತು ವಾಸಿಸಲು ಬಯಸುವ ಜನರು ಕನ್ನಡ ಭಾಷೆಯನ್ನು ಮಾತನಾಡುವುದು ಬಹಳ ಅವಶ್ಯಕವಾಗಿದೆ. ಜಾಗತೀಕರಣದ ಈ ಸಂದರ್ಭದಲ್ಲಿ ಕನ್ನಡ ಭಾಷೆ ಇನ್ನಷ್ಟು ಸೀಮಾತೀತವಾಗಿ ಬೆಳೆಯಬೇಕು ; ಅದು ಕಾಲಾತೀತವಾಗಿ ಉಳಿಯಬೇಕು. ನಮ್ಮ ಕನ್ನಡ ಭಾಷೆ ಬೋಧಿವೃಕ್ಷದ ಕೆಳಗೆ ಜ್ಞಾನವಾಗಿ ಅರಳುವಂತಹ ಭಾಷೆ ಆಗಿದೆ. ನಾವು ಆಡುವ ಮಾತು ಜ್ಯೋತಿರ್ಲಿಂಗವಾಗಿ ಬೆಳಕು ನೀಡುವಂತಹ ಭಾಷೆ ನಮ್ಮ ಕನ್ನಡ ಆಗಿದೆ. ಜಗತ್ತಿನ ಯಾವುದೇ ಭಾಷೆಯಲ್ಲಿ ಇರದೇ ಇರುವಂತಹ ಅದ್ಭುತ ಸಾಹಿತ್ಯ ನಮ್ಮ ಕನ್ನಡದಲ್ಲಿದೆ.
ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿರುವ, ಆರುವರೆ ಕೋಟಿ ಜನರು ಮಾತನಾಡುವ ಮತ್ತು ಒಂದು ರಾಜ್ಯದ ಅಧಿಕೃತ ರಾಜ್ಯಭಾಷೆಯಾಗಿರುವ ಕನ್ನಡ ಎಂದಿಗೂ ಅಳೆದು ಹೋಗುವುದಿಲ್ಲ. ಆಳಲು ಬಂದವರನ್ನು ಅರಗಿಸಿಕೊಳ್ಳುವ ಶಕ್ತಿ ನಮ್ಮ ಕನ್ನಡಕ್ಕಿದೆ. ಈ ಬಗೆಯ ಭರವಸೆಯನ್ನು ಕನ್ನಡಿಗರಲ್ಲಿ ಮೂಡಿಸುವುದು ನಮ್ಮೆಲ್ಲರ ಕರ್ತವ್ಯ ಆಗಿದೆ. ಕನ್ನಡ ಸೊರಗುತ್ತಿದೆ, ಮರೆಯಾಗುತ್ತಿದೆ. ಎಂಬ ಹಳಹಳಿಕೆ ಇಂದು ನಿನ್ನೆಯದಲ್ಲ. ಭಾಷೆಯೊಂದು ತನ್ನ ಹುಟ್ಟಿನೊಂದಿಗೆ ಪ್ರತಿರೋಧಗಳನ್ನೂ ಎದುರಿಸುತ್ತಾ ತನ್ನ ಅಸ್ಮಿತೆಯನ್ನು ಕಾಪಿಟ್ಟುಕೊಂಡು ಬಂದಿರುತ್ತದೆ. ಅದರ ಅಳಿವು ಮತ್ತು ಉಳಿವಿನ ಪ್ರಶ್ನೆ ಅದನ್ನಾಡುವ ಜನರ ಪ್ರೀತಿಯೊಂದೇ ಅಲ್ಲ; ಬದ್ಧತೆಯನ್ನು ಕೂಡ ಬಯಸುತ್ತದೆ. ಅದು ಇಲ್ಲವೆಂದಾದಲ್ಲಿ ಕನ್ನಡ ಭಾಷೆ ಎಂದೋ ಇತಿಹಾಸವಾಗುತ್ತಿತ್ತು. ಆದರೆ ಮುಂದಿನ ಭವಿಷ್ಯ....? ಭವಿಷ್ಯ ನಿಜಕ್ಕೂ ಭಯಾನಕವಿದೆ. ಇಂದಿನ ಈ ವರ್ತಮಾನ ಭವಿಷ್ಯದ ಕೂಸು. ಕನ್ನಡವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಖಂಡಿತ ನಮ್ಮ ನಿಮ್ಮೆಲ್ಲರ ಕೈಯಲ್ಲಿಯೇ ಅಡಕವಾಗಿದೆ.
ಸರ್ಕಾರ ಸಂಘ-ಸಂಸ್ಥೆಗಳಿಂದ ಮಾತ್ರ ಈ ಕೆಲಸ ಮಾಡಲು ಸಾಧ್ಯವಾಗದು. ಸಾರ್ವಜನಿಕರು ಕನ್ನಡಿಗರು ಮತ್ತು ಕನ್ನಡದ ಮನಸ್ಸುಗಳು ಕನ್ನಡ ಕಟ್ಟುವ ಕೆಲಸವನ್ನು ಅತ್ಯಂತ ಶ್ರದ್ಧೆ ಅಭಿಮಾನ ಮತ್ತು ಆಸಕ್ತಿಯಿಂದ ಮಾಡಬೇಕಾಗಿದೆ. ಕನ್ನಡ ನಾಡು ಒಂದಾಗಿ ಉಳಿಯಬೇಕಾದರೆ ಕರ್ನಾಟಕದಲ್ಲಿ ಕನ್ನಡ ಭಾಷೆ ನಿಜವಾದ ಅರ್ಥದಲ್ಲಿ ಆಡಳಿತ ಭಾಷೆ ಆಗಬೇಕು. ಸರ್ಕಾರದ ಎಲ್ಲ ಚಟುವಟಿಕೆಗಳು ಕನ್ನಡದಲ್ಲಿ ನಡೆಯಬೇಕು. ಕನ್ನಡ ಭಾಷೆಯನ್ನು ನಮ್ಮ ಬದುಕಿನ ಎಲ್ಲಾ ಸ್ತರಗಳಲ್ಲಿ ಸಮರ್ಥವಾಗಿ ಬಳಸಬೇಕು. ನಾವು ಕನ್ನಡಿಗರು ಎಂದು ಹೇಳಿಕೊಳ್ಳುವ ನಮ್ಮ ಹೆಗಲು ಆಕಾಶವನ್ನು ತಾಗಬೇಕು. ನಾವು ಕನ್ನಡಿಗರು, ಕನ್ನಡ ಭಾಷೆ ನಮ್ಮದು ಎನ್ನುವ ಸಂತೋಷ ಹೃದಯದಿಂದ ಉಕ್ಕಿಬರಬೇಕು. ಹಾಗೇ ದಿನಾಲೂ ಆಗುತ್ತಿದ್ದರೆ ಬದುಕೇ ಕನ್ನಡ ರಾಜ್ಯೋತ್ಸವ ಆಗುತ್ತದೆ. ನಮ್ಮ ಜೀವನದಲ್ಲಿ ಸಮೃದ್ಧಿ ಮತ್ತು ಸಂತೃಪ್ತಿ ದೊರೆಯುತ್ತದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ನಮ್ಮ ನಾಡಿನ ಎಲ್ಲಾ ರಾಜಕೀಯ ಪಕ್ಷದ ನಾಯಕರು ಕಾರ್ಯೋನ್ಮುಖವಾಗಲಿ ನಮ್ಮ ನಾಡಿನ ಎಲ್ಲಾ ಹಿರಿಯ ಸಾಹಿತಿಗಳು, ಚಿಂತಕರು ಮತ್ತು ವಿದ್ವಾಂಸರು ಆಲೋಚಿಸಲಿ..., ನಾವು ನಮ್ಮ ಕನ್ನಡ ಭಾಷೆಯ ಉಳಿವಿಗಾಗಿ ಮತ್ತು ಬೆಳವಣಿಗೆಗಾಗಿ ಕರ್ನಾಟಕ ಸರ್ಕಾರದ ಕನ್ನಡಪರ ಚಟುವಟಿಕೆಗಳನ್ನು ಮತ್ತು ಕನ್ನಡದ ಕಾರ್ಯಕ್ರಮಗಳನ್ನು ತನು-ಮನ ಧನದಿಂದ ಬೆಂಬಲಿಸೋಣ.