ರಾಯಬಾಗ ಕ್ಷೇತ್ರದಲ್ಲಿ 3.30 ಕೋಟಿ ರೂ. ರಸ್ತೆ ಕಾಮಗಾರಿಗೆ ಚಾಲನೆ: ಶಾಸಕ ದುರ್ಯೋಧನ ಐಹೊಳೆ
ಚಿಕ್ಕೋಡಿ 24: ಗ್ರಾಮೀಣ ಭಾಗದ ರಸ್ತೆ ಮೂಲಸೌಕರ್ಯವನ್ನು ಬಲಪಡಿಸಲು ರಾಜ್ಯ ಸರ್ಕಾರ ವಿಶೇಷ ಅನುದಾನ ನೀಡಿದ್ದು, ಇದರಡಿ ರಾಯಬಾಗ ಕ್ಷೇತ್ರ ವ್ಯಾಪ್ತಿಯ ಚಿಕ್ಕೋಡಿ ತಾಲೂಕಿನ ವಿವಿಧ ಗ್ರಾಮಗಳ ರಸ್ತೆ ಅಭಿವೃದ್ಧಿಗೆ ಒಟ್ಟು 3.30 ಕೋಟಿ ರೂ. ಮಂಜೂರಾಗಿದೆ ಎಂದು ಶಾಸಕ ದುರ್ಯೋಧನ ಐಹೊಳೆ ತಿಳಿಸಿದರು.ತಾಲೂಕಿನ ಉಮರಾಣಿ, ಹಂಚನಾಳ, ಪೋಗತ್ಯಾನಟ್ಟಿ ಮತ್ತು ಜೋಡಟ್ಟಿ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, “ಗ್ರಾಮೀಣ ರಸ್ತೆ ಸುಧಾರಣೆ ಆದಾಗ ಮಾತ್ರ ಗ್ರಾಮಗಳ ಸಮಗ್ರ ಅಭಿವೃದ್ಧಿ ಸಾಧ್ಯ. ಉತ್ತಮ ರಸ್ತೆ ಸೌಲಭ್ಯದಿಂದ ಕೃಷಿ ಉತ್ಪನ್ನಗಳ ಸಾಗಣೆ ಸುಗಮವಾಗುವುದರೊಂದಿಗೆ ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ಸಾರ್ವಜನಿಕರಿಗೆ ಸಂಚಾರದಲ್ಲಿ ಹೆಚ್ಚಿನ ಅನುಕೂಲ ಕಲ್ಪಿಸುತ್ತದೆ” ಎಂದರು.
ಉಮರಾಣಿ ಹಾಗೂ ಕರೋಶಿ ಗ್ರಾಮದ ಜನರ ದೀರ್ಘಕಾಲದ ಬೇಡಿಕೆಯಾದ ಉಮಾರಾಣಿ- ಕರೋಶಿ ರಸ್ತೆ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯಿಂದ 1.50 ಕೋಟಿ ರೂ. ಮಂಜೂರಾಗಿದ್ದು, ಈ ಕಾಮಗಾರಿಯಿಂದ ಎರಡು ಗ್ರಾಮಗಳ ಮಧ್ಯೆ ಸಂಪರ್ಕ ಸುಧಾರಣೆಯಾಗಲಿದೆ ಎಂದು ಹೇಳಿದರು. ಹಂಚನಾಳ ಗ್ರಾಮದಿಂದ ಬೆಲ್ಲದ ಬಾಗೇವಾಡಿ ಗ್ರಾಮವರೆಗೆ 1 ಕೋಟಿ ರೂ., ಪೋಗತ್ಯಾನಟ್ಟಿ ಗ್ರಾಮದಿಂದ ಬೆಲ್ಲದ ಬಾಗೇವಾಡಿ ರಸ್ತೆ ಸುಧಾರಣೆಗೆ 30 ಲಕ್ಷ ರೂ., ಜೋಡಟ್ಟಿ ಗ್ರಾಮದಲ್ಲಿ ವಿವಿಧ ರಸ್ತೆ ಕಾಮಗಾರಿಗಳಿಗೆ 50 ಲಕ್ಷ ರೂ. ಸೇರಿದಂತೆ ಒಟ್ಟು 3.30 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಲಾಗಿದೆ ಎಂದು ವಿವರಿಸಿದರು.
ಈ ಅನುದಾನದಿಂದ ಗ್ರಾಮೀಣ ಭಾಗದ ಜನತೆಗೆ ಉತ್ತಮ ರಸ್ತೆ ಸೌಲಭ್ಯ ದೊರಕುವ ಮೂಲಕ ಸಾರಿಗೆ ವ್ಯವಸ್ಥೆ ಸುಧಾರಿಸಿ, ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ಸಿಗಲಿದೆ. ಕಾಮಗಾರಿಗಳನ್ನು ಗುಣಮಟ್ಟದಿಂದ ಹಾಗೂ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಸಕ ಐಹೊಳೆ ತಿಳಿಸಿದರು.ಈ ಸಂದರ್ಭದಲ್ಲಿ ಸುರೇಶ ಬೆಲ್ಲದ, ಸದಾಶಿವ ಗೋರ್ಡ, ಲಕ್ಷ್ಮಣ ಪೂಜೇರಿ, ಮುರಿಗೇಪ್ಪ ಅಡಿಸೇರಿ, ರಾಜೇಶ ಜಿಡ್ಡಿಮನಿ, ಬಸಗೌಡ ಪಾಟೀಲ, ಬಬಗೌಡ ಪಾಟೀಲ, ಧನಪಾಲ ಭೀಮನಾಯಿಕ, ಕಲ್ಲಪ್ಪ ಕರಗಾಂವೆ, ವಿವೇಕಾನಂದ ಸಂಬಾಜಿ, ಅನಿಲ ಪಾಟೀಲ, ಸಲಿಂ ಮುಲ್ಲಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.