ತಾಲೂಕಾಡಳಿತ ವಿರುದ್ಧ ಸಾರ್ವಜನಿಕರು ಪ್ರತಿಭಟನೆ
ಲೋಕದರ್ಶನ ವರದಿ
ಶಿಗ್ಗಾವಿ 12: ಕನಕ ಜಯಂತಿ ಮೆರವಣಿಗೆಗೆ ಸೂಕ್ತ ವ್ಯವಸ್ಥೆ ಮಾಡದ ತಾಲೂಕಾಡಳಿತ ವಿರುದ್ಧ ಸಾರ್ವಜನಿಕರು ಪ್ರತಿಭಟನೆ ಮಾಡಿದ ಘಟನೆ ಬಂಕಾಪೂರ ಪಟ್ಟಣದ ಕೆಂಡದಮಠದ ಆವರಣದಲ್ಲಿ ನಡೆಯಿತು.
ಕನಕದಾಸರ 535ನೇ ಜಯಂತಿ ಪ್ರಯುಕ್ತ ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಪಟ್ಟಣದ ಕೆಂಡದಮಠದಿಂದ ಬಾಡದ ಕನಕದಾಸ ಅರಮನೆವರೆಗೆ ಮೆರವಣಿಗೆಯನ್ನು ತಾಲೂಕಾಡಳಿತ ಆಯೋಜಿಸಿತ್ತು. ಆದರೆ ಬೆಳಿಗ್ಗೆ 8 ಕ್ಕೆ ಆರಂಭವಾಗಬೇಕಾಗಿದ್ದ ಮೆರವಣಿಗೆ 10.30 ಆದರೂ ಆರಂಭಗೊಳ್ಳಲಿಲ್ಲ. ಬೆಳಿಗ್ಗೆಯಿಂದ ಮೆರವಣಿಗೆಗೆ ಆಗಮಿಸಿದ್ದ ಶಾಲಾ ವಿದ್ಯಾರ್ಥಿಗಳು ಮೆರವಣಿಗೆ ಆರಂಭಗೊಳ್ಳದ ಕಾರಣ ಮನೆಗಳತ್ತ ಮರಳುತ್ತೀರುವುದನ್ನು ಗಮನಿಸಿದ ಸ್ಥಳೀಯರು ಆಕ್ರೋಶಗೊಂಡು ತಾಲೂಕಾಡಳಿತದ ವಿರುದ್ಧ ಘೋಷಣೆ ಕೂಗಿ ಮೆರವಣಿಗೆಗೆ ಸಿದ್ದಗೊಂಡಿದ್ದ ವಾಹನದ ಮುಂದೆ ಕುಂತು ಪ್ರತಿಭಟನೆ ನಡೆಸಿದರು. ಕಲಾ ತಂಡಗಳಿಲ್ಲದೇ ಮೆರವಣಿಗೆಗೆ ಅವಕಾಶ ನೀಡುವದಿಲ್ಲ ಎಂದು ಪಟ್ಟು ಹಿಡಿದರು. ನಂತರ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ ಶಿವಾನಂದ ರಾಣೆ ಮೆರವಣಿಗೆ ತಡವಾಗಿದ್ದಕ್ಕೆ ಸಾರ್ವಜನಿಕರ ಕ್ಷಮೆ ಕೇಳಿ ಕೂಡಲೇ ಡೊಳ್ಳು ಬಾರಿಸುವ ತಂಡ ತರಿಸುವ ಬರವಸೆ ನೀಡಿದರು.
ಮೆರವಣಿಗೆಗೆ ಕಲಾ ತಂಡಗಳ ಒದಗಿಸುವ ಜವಾಬ್ದಾರಿ ಹೊತ್ತಿದ್ದ ಅಬಕಾರಿ ಇಲಾಖೆಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗುವುದು ಎಂದರು. ನಂತರ ಪ್ರತಿಭಟನೆ ಹಿಂಪಡೆದ ಸ್ಥಳೀಯರು ಮೆರವಣಿಗೆಗೆ ಅವಕಾಶ ಮಾಡಿಕೊಟ್ಟರು.
ನಂತರ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಹೊಸಪೇಟೆ. ನಾರಾಯಣಪುರ. ಬಾಡ ಗ್ರಾಮಗಳಲ್ಲಿ ಸಾಗಿ ಕನಕ ಜನ್ಮ ಸ್ಥಳಕ್ಕೆ ಮುಕ್ತಾಯಗೊಳಿಸಲಾಯಿತು.
ಕೆಂಡದಮಠದ ಶ್ರೀ ರೇವಣಸಿದ್ದಸ್ವಾಮಿಜಿ. ತಹಶೀಲ್ದಾರ ಶಿವಾನಂದ ರಾಣೆ. ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ. ಉಪತಹಶೀಲ್ದಾರ ವೆಂಕಟೇಶ ಕುಲಕರ್ಣಿ . ಸತೀಶ ಆಲದಕಟ್ಟಿ. ಎ.ಕೆ.ಆದವಾನಿಮಠ. ಶಿವಾನಂದ ರಾಮಗೇರಿ. ಪಕ್ಕೀರಪ್ಪ ಕುಂದೂರ. ರಾಮಕ್ರಷ್ಣ ಆಲದಕಟ್ಟಿ. ಬೀರಪ್ಪ ಸಣ್ಣತಮ್ಮನವರ. ಮಾಲತೇಶ ರಾಣೋಜಿ ಸೇರಿದಂತೆ ಸಮಾಜದ ಮುಖಂಡರು ಇದ್ದರು