ನಾವೀನ್ಯ ತಂತ್ರಜ್ಞಾನದಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಸಕಾರಾತ್ಮಕ ಬದಲಾವಣೆ

ನಾವೀನ್ಯ ತಂತ್ರಜ್ಞಾನದಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಸಕಾರಾತ್ಮಕ ಬದಲಾವಣೆ

ನಾವೀನ್ಯ ತಂತ್ರಜ್ಞಾನದಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಸಕಾರಾತ್ಮಕ ಬದಲಾವಣೆ 

ಕಲಬುರಗಿ: ನಾವೀನ್ಯ ತಂತ್ರಜ್ಞಾನದ ಅವಿಷ್ಕಾರದಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಸಕಾರಾತ್ಮಕ ಬದಲಾವಣೆಗಳಾಗುತ್ತಿವೆ. ಗ್ರಂಥಾಲಯಗಳು ನಾವೀನ್ಯ ತಂತ್ರಜ್ಞಾನ ಅಳವಡಿಕೆ, ಜ್ಞಾನ ವಿಸ್ತರಣೆ ಮತ್ತು ಸಂಶೋಧನಾ ಕ್ಷೇತ್ರಕ್ಕೆ ಅನುಗುಣವಾಗಿ ಒಳಗೊಳ್ಳುವ ಕ್ರಿಯಾಶೀಲತೆ ಬೆಳೆಸಿಕೊಂಡು ಬಳಕೆದಾರರಿಗೆ ಸದುಪಯೋಗವಾಗಬೇಕು ಎಂದು  ಬೀದರ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ. ಎಸ್‌. ಬಿರದಾರ ಅಭಿಪ್ರಾಯಪಟ್ಟರು.  

ಗುಲಬರ್ಗಾ ವಿಶ್ವವಿದ್ಯಾಲಯ ಗ್ರಂಥಾಲಯದ ಮಂಥನ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಶೈಕ್ಷಣಿಕ ಗ್ರಂಥಾಲಯಗಳು ಮತ್ತು ನಿರ್ವಾಹಕರು: ಬಳಕೆದಾರರ ಮೇಲೆ ಗುಣಮಟ್ಟದ ಪ್ರಭಾವ ಸೃಷ್ಟಿಸುವುದು" ವಿಷಯ ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿ ಗ್ರಂಥಪಾಲಕರು ಬಳಕೆದಾರರನ್ನು ಆಕರ್ಷಸಲು ನಾವೀನ್ಯತೆ ತಂತ್ರಜ್ಞಾನ ಮತ್ತು ಓದುವ ಪರಿಸರವನ್ನು ನಿರ್ಮಿಸಬೇಕು. ಗ್ರಂಥಾಲಯದಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವುದರ ಜೊತೆಗೆ ಕೃತಕ ಬುದ್ಧಿಮತ್ತೆಯ ಅನುಕೂಲ ಮತ್ತು ನೈತಿಕ ಬಳಕೆ ಬಗ್ಗೆ ಮಾಹಿತಿ ನೀಡುವುದು ಅಗತ್ಯವಿದೆ ಎಂದರು.  

ಗುಲಬರ್ಗಾ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಬಿ. ಎಲ್‌. ಹೂವಿನಬಾವಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಇಲ್ಲಿನ ಗ್ರಂಥಾಲಯದಲ್ಲಿನ ಪುಸ್ತಕಗಳನ್ನು ಓದುವ ಮೂಲಕ ಯುಜಿಸಿ ನಡೆಸುವಹಿಎನ್‌ಇಟಿ ಮತ್ತು ಜೆಆರ್‌ಎಫ್ ಪರೀಕ್ಷೆಯನ್ನು ಮೊದಲ ಯತ್ನದಲ್ಲಿಯೇ ಪಾಸಾಗಲು ನನಗೆ ಸಾಧ್ಯವಾಯಿತು ಎಂದು ಸ್ಮರಿಸಿಕೊಂಡರು. ರಾಷ್ಟ್ರ ಮಟ್ಟದ ಹಲವು ತಜ್ಞರ ಸಮಿತಿಗಳು ಭೇಟಿ ನೀಡಿ ಇಲ್ಲಿನ ಗ್ರಂಥಾಲಯ, ಸುವ್ಯವಸ್ಥೆ, ಗ್ರಂಥಗಳು ಮತ್ತು ಸಂಶೋಧನಾ ನಿಯತಕಾಲಿಕೆಗಳ ಲಬ್ಯತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರಶಂಸೆ ವ್ಯಕ್ತಪಡಿಸಿರುವುದು ಹೆಮ್ಮೆಯ ವಿಷಯ ಈ ಭಾಗದ ಸಾವಿರಾರು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಮತ್ತು ಸಂಶೋಧನೆ ಅಧ್ಯಯನದಿಂದ ಪರಿಪೂರ್ಣ ಜ್ಞಾನ ಸಂಪತ್ತನ್ನು ಪಡೆದುಕೊಂಡು ಉತ್ತಮ ಭವಿಷ್ಯ ರೂಪಿಸಿಸಿಕೊಳ್ಳಲು ಗ್ರಂಥಾಲಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.  

ಗ್ರಂಥಪಾಲಕ ಡಾ. ಸುರೇಶ್ ಜಂಗೆ ಮಾತನಾಡಿ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುತ್ತಿರುವ ಇಲ್ಲಿನ ಗ್ರಂಥಾಲಯದಲ್ಲಿ 13 ಸಾವಿರ ಪುಸ್ತಕಗಳಿವೆ. ವಿದ್ಯಾರ್ಥಿಗಳ ಅಧ್ಯಯನ ಮತ್ತು ಸಂಶೋಧನೆಗೆ ಪೂರಕವಾದ ಅಂತರಾಷ್ಟ್ರೀಯ ನಿಯತಕಾಲಿಕೆಗಳು ಸಹ ವ್ಯವಸ್ಥೆ ಮಾಡಲಾಗಿದೆ. ಪ್ರಾಯೋಗಿಕ ವೃತ್ತಿಜ್ಞಾನ ಮತ್ತು ಅನುಭವ ಕಲಿಕೆಯಿಂದ ಅವಕಾಶಗಳನ್ನು ಪಡೆಯಬಹುದು ಎಂದರು. ಭಾರತೀಯ ಗ್ರಂಥಾಲಯದ ಉಪಾಧ್ಯಕ್ಷ ಡಾ. ಪಿ. ಎಸ್ ಕಟ್ಟಿಮನಿ ಮಾತನಾಡಿ  ಜಗತ್ತಿನ ಪ್ರತಿಷ್ಠಿತ ಪ್ರಕಾಶಕರು ಮತ್ತು ಪ್ರಕಾಶನ ಸಂಸ್ಥೆಗಳು ಉತ್ಕೃಷ್ಠ ಸಂಶೋಧನೆ ಮಾಹಿತಿಗಳನ್ನು ಸಂಗ್ರಹಿಸಿ ಪ್ರಕಟಿಸುತ್ತಿವೆ. ಸಂಶೋಧನಾ ಕ್ಷೇತ್ರ ಮತ್ತು ದತ್ತಾಂಶ ಮಾಹಿತಿ ವ್ಯಾಪಕವಾಗಿ ವಿಸ್ತರಣೆಯಾಗುತ್ತಿದೆ ಎಂದರು.  

ಇದೇ ಸಂದರ್ಭದಲ್ಲಿ ಕಳೆದ 36 ವರ್ಷಗಳಿಂದ ಗುಲಬರ್ಗಾ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತರಾದ ಡಾ. ಖೇಮಣ್ಣ ವಿ. ಅಲ್ದಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು, ಶಿಕ್ಷಕೇತರ ಸಿಬ್ಬಂದಿ, ವಿವಿಧ ಕಾಲೇಜುಗಳ ಗ್ರಂಥಪಾಲಕರು, ಶಿಕ್ಷಣ ತಜ್ಞರು, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಗ್ರಂಥಪಾಲಕರಾದ ಡಾ. ಪ್ರವೀಣ್ ಕುಮಾರ್ ಸ್ವಾಗತಿಸಿದರು, ಡಾ. ಮಮತಾ ಮೇಸ್ತ್ರ ಕಾರ್ಯಕ್ರಮ ನಿರ್ವಹಿಸಿದರು. ಕು. ಪ್ರಿಯಾ ಸ್ವಾಗತಗೀತೆ ಹಾಡಿದರು.  


ಸುದ್ದಿ ಓದಿ