ವಿಶ್ವದ ಅತಿದೊಡ್ಡ ಲಸಿಕೆ ನೀಡಿಕೆ ಕಾರ್ಯಕ್ರಮದ ಹೊಸ್ತಿಲಲ್ಲಿ ಭಾರತ-ಪ್ರಧಾನಿ ಮೋದಿ
ನವದೆಹಲಿ, ಜ 4 :ವಿಶ್ವದ ಅತಿದೊಡ್ಡ ಲಸಿಕೆ ನೀಡುವ ಕಾರ್ಯಕ್ರಮ ಆರಂಭಿಸುವ ಹೊಸ್ತಿಲಲ್ಲಿ ಭಾರತವಿದೆ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ಇಡೀ ರಾಷ್ಟ್ರ ನಮ್ಮ ಎಲ್ಲ ವಿಜ್ಞಾನಿಗಳು ಮತ್ತು ತಂತ್ರಜ್ಞರಿಗೆ ಕೃತಜ್ಞವಾಗಿದೆ ಎಂದು ಹೇಳಿದ್ದಾರೆ.ರಾಷ್ಟ್ರೀಯ ಮಾಪನ ಶಾಸ್ತ್ರ-2021 ರ ಉದ್ಘಾಟನಾ ಭಾಷಣವನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾಡಿದ ನರೇಂದ್ರಮೋದಿ, ಭಾರತದಲ್ಲಿ ಉತ್ಪಾದಿಸಿದ ಎರಡು ಕೋವಿಡ್-19 ಲಸಿಕೆಗಳಿಗೆ ಭಾರತೀಯ ಔಷಧ ಮಹಾನಿಯಂತ್ರಕರು ಒಪ್ಪಿಗೆ ನೀಡಿರುವುದು ಶ್ಲಾಘನೀಯ ಎಂದು ಹೇಳಿದ್ದಾರೆ.ಗುಣಮಟ್ಟ ಮತ್ತು ವಿಶ್ವಾಸಾರ್ಹತೆ 'ಬ್ರಾಂಡ್ ಇಂಡಿಯಾ'ಗೆ ಆಧಾರಸ್ತಂಭವಾಗಿರಬೇಕು ಎಂದ ಅವರು, ಕೈಗಾರಿಕೆಗಳು ಮತ್ತು ವೈಜ್ಞಾನಿಕ ಸಂಸ್ಥೆಗಳ ನಡುವಿನ ಸಹಯೋಗವನ್ನು ಬಲಪಡಿಸುವಲ್ಲಿ ಸರ್ಕಾರದ ಆದ್ಯತೆಗಳಿದ್ದು, ಇದು ಅನೇಕ ವಿಶ್ವಖ್ಯಾತ ಸಂಶೋಧನಾ ಕೇಂದ್ರಗಳನ್ನು ಸ್ಥಾಪನೆಗೆ ಸಹಕಾರಿಯಾಗಿದೆ. ಈ ಕೇಂದ್ರಗಳ ನಿರಂತರ ಪ್ರಯತ್ನಗಳಿಗೆ ಅನುಸಾರವಾಗಿ ಜಾಗತಿಕ ಆವಿಷ್ಕಾರ ಶ್ರೇಯಾಂಕದಲ್ಲಿ ದೇಶ ಅಗ್ರ 50 ದೇಶಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ.ಕರೋನಾ ಬಿಕ್ಕಟ್ಟಿನ ಸಮಯದಲ್ಲಿ ವಿಜ್ಞಾನಿಗಳು ಮತ್ತು ತಂತ್ರಜ್ಞರ ಪಾತ್ರವನ್ನು ಶ್ಲಾಘಿಸಿರುವ ಪ್ರಧಾನಿ, “ಸಿಎಸ್‌ಐಆರ್ ಮತ್ತು ದೇಶದ ಇತರ ವಿಜ್ಞಾನ ಸಂಸ್ಥೆಗಳು ಮುನ್ನೆಲೆಗೆ ಬಂದು ಜಾಗತಿಕ ಸಾಂಕ್ರಾಮಿಕಕ್ಕೆ ಪರಿಹಾರವನ್ನು ಒದಗಿಸಿವೆ. ದೇಶವು ವೈಜ್ಞಾನಿಕ ಸಂಸ್ಥೆಗಳ ಬಗ್ಗೆ ಗೌರವ ಹೆಚ್ಚಿಸಿದೆ ಎಂದು ಹೇಳಿದ್ದಾರೆ. ಸಿಎಸ್ಐಆರ್ ವಿಜ್ಞಾನಿಗಳು ದೇಶದ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಬೇಕು. ಇದರಿಂದ ಮುಂದಿನ ಪೀಳಿಗೆಯ ಯುವ ವಿಜ್ಞಾನಿಗಳನ್ನು ಬೆಳೆಸಲು ಸಹಕಾರಿಯಾಗಲಿದೆ ಎಂದು ಪ್ರಧಾನಿ ಹೇಳಿದ್ದಾರೆ.