ನವೆಂಬರ್ ಕ್ರಾಂತಿ ಖಚಿತ ದಲಿತ ಸಿಎಂ ಕೂಗು
ನವೆಂಬರ್ ಕ್ರಾಂತಿ ಖಚಿತ ದಲಿತ ಸಿಎಂ ಕೂಗು
ಬೆಂಗಳೂರು: ರಾಜ್ಯದಲ್ಲಿ ‘ನವೆಂಬರ್ ಕ್ರಾಂತಿ’ಯ ಸುದ್ದಿ ಬೆನ್ನಲೇ ‘ದಲಿತ ಮುಖ್ಯಮಂತ್ರಿ’ ಕೂಗು ಎದ್ದಿದೆ. ಶಿವಮೊಗ್ಗದಲ್ಲಿ ಸಚಿವ ಕೆ.ಎಚ್.ಮುನಿಯಪ್ಪ ಬೆಂಬಲಿಗರು ಮುಂದಿನ ಸಿಎಂ ಎಂದು ಘೋಷಣೆ ಹಾಕಿದರೆ, ಇತ್ತ ಬೆಂಗಳೂರಿನಲ್ಲೂ ಗೃಹಸಚಿವ ಡಾ. ಜಿ.ಪರಮೇಶ್ವರ್ ಮುಂದಿನ ಮುಖ್ಯಮಂತ್ರಿ ಆಗಲಿ ಎಂದು ಅವರ ಬೆಂಬಲಿಗರು ಘೋಷಣೆ ಮೊಳಗಿಸಿದ್ದಾರೆ.
ಇನ್ನೊಂದೆಡೆ, ದಲಿತ ಸಿಎಂ ಬೇಡಿಕೆಯನ್ನು ಸತೀಶ್ ಜಾರಕಿಹೊಳಿ ಮತ್ತು ಡಾ. ಜಿ.ಪರಮೇಶ್ವರ್ ಅವರು ಅನುಮೋದಿಸಿದ್ದಾರೆ. ಜೊತೆಗೆ, ಒಂದು ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬದಲಾವಣೆ ಆಗುವುದಾದರೆ ಮುಂದೆ ದಲಿತರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ದಲಿತ ಸಂಘಟನೆಗಳು ಮನವಿ ಮಾಡಿವೆ. ಒಟ್ಟಿನಲ್ಲಿ ಮುಂದಿನ ಮುಖ್ಯಮಂತ್ರಿ ಗಾದಿ ಬೇರೆ ಸಮಾಜದ ಪಾಲಾಗದಂತೆ ರಣತಂತ್ರ ಹೆಣೆಯಲಾಗಿದೆ.
ಸಿದ್ದರಾಮಯ್ಯ ಅವರನ್ನು ಸಿಎಂ ಆಗಿ ಮುಂದಿನ ಎರಡೂವರೆ ವರ್ಷಗಳಿಗೆ ಮುಂದುವರಿಸುವುದಾದರೆ ನಮ್ಮ ತಕರಾರು ಇಲ್ಲ, ಅವರನ್ನು ಬದಲಾಯಿಸುವುದಾದರೆ ಆ ಹುದ್ದೆಗೆ ದಲಿತರನ್ನು ಪರಿಗಣಿಸಬೇಕು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಡಾ.ಜಿ.ಪರಮೇಶ್ವರ, ಡಾ.ಎಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ, ಕೆ.ಎಚ್.ಮುನಿಯಪ್ಪ ಅವರಿಗೆ ಅವಕಾಶ ಕಲ್ಪಿಸಬೇಕು ಎಂದು ಒಕ್ಕೂಟದ ಅಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸುವ ಮೂಲಕ ಸಿಎಂ-ಡಿಸಿಎಂ ನಡುವೆ ನಡೆಯುತ್ತಿರುವ ಜಿದ್ದಾಜಿದ್ದಿಗೆ ಹೊಸ ಆಯಾಮ ನೀಡಿದ್ದಾರೆ.
ಇದಕ್ಕೆ ಪೂರಕವಾಗಿ ಶಿವಮೊಗ್ಗದಲ್ಲಿ ಮುನಿಯಪ್ಪ ಮುಂದಿನ ಸಿಎಂ ಎಂಬ ಘೋಷಣೆ ಕೇಳಿ ಬಂದರೆ, ಇತ್ತ ಬೆಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮನೆ ಮುಂದೆ ಸೋಮವಾರ ಬೆಳಗ್ಗೆ ನೆರೆದ ಅಭಿಮಾನಿಗಳು, ‘ಡಾ.ಪರಮೇಶ್ವರ್ ಮುಂದಿನ ಮುಖ್ಯಮಂತ್ರಿ’ ಎಂದು ಜೈಕಾರ ಹಾಕಿದರು. ‘ತಾವೇ ಸಿಎಂ ಆಗಬೇಕು’ ಎಂದು ಘೋಷಣೆ ಕೂಗಿದರು.
ಈ ಬೆಳವಣಿಗೆ ನಡುವೆಯೇ ‘ದಲಿತ ನಾಯಕರು ಸಿಎಂ ಆಗಬೇಕು’ ಎಂದು ಸಚಿವ ಸತೀಶ್ ಜಾರಕಿಹೊಳಿ ಬಯಕೆ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದಲಿತ ನಾಯಕರಿಗೆ ಸಿಎಂ ಆಗುವ ಅವಕಾಶ ಸಿಗಬೇಕು ಎಂಬುದು ನಮ್ಮ ಬಯಕೆ. ಆದರೆ, ಪಕ್ಷದ ನಾಯಕರು ಇದನ್ನು ನಿರ್ಧಾರ ಮಾಡುತ್ತಾರೆ. ಯಾವ ಸಮುದಾಯಕ್ಕೆ ಯಾವ ಅವಕಾಶ ನೀಡಬೇಕು ಎನ್ನುವುದು ನಾಯಕರಿಗೆ ಬಿಟ್ಟಿದ್ದು ಎಂದು ಹೇಳಿದರು.
ಇನ್ನು ಸಚಿವ ಮುನಿಯಪ್ಪ ಸಿಎಂ ಆಗಲಿ ಎಂದು ಶಿವಮೊಗ್ಗದಲ್ಲಿ ಘೋಷಣೆ ಕೂಗಿರುವ ಬಗ್ಗೆ ಪ್ರತಿಕ್ರಿಯಿಸಿದ ಡಾ.ಪರಮೇಶ್ವರ್, ನಾವೆಲ್ಲ ಒಂದು ವರ್ಗಕ್ಕೆ ಸೇರಿದ್ದೇವೆ. ಆ ವರ್ಗಕ್ಕೆ ಅವಕಾಶ ಸಿಕ್ಕಿತಲ್ಲ ಎಂಬುದು ಸಂತೋಷ ಆಗುತ್ತದೆ. ಯಾವ ವರ್ಗ ತುಳಿತಕ್ಕೆ ಒಳಗಾಗಿತ್ತು, ಆ ವರ್ಗಕ್ಕೆ ಆಡಳಿತ ವರ್ಗ ಆಗುತ್ತದೆ ಅಂದರೆ ಸಂತೋಷಪಡಲು ಆಗುವುದಿಲ್ಲವೇ ಎಂದರು.
ದಲಿತ ಸಿಎಂ ಸ್ಥಾನ ಈ ಸಲ ಸಿಗಬೇಕು ಎಂಬ ವಿಶ್ವಾಸ ಏನಾದರೂ ಇದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಪಕ್ಷದಲ್ಲಿ ತೀರ್ಮಾನ ಮಾಡುವವರು ಯಾರು? ನಾವು ಇಲ್ಲಿ ಕುಳಿತುಕೊಂಡು ನಾಲ್ಕು ಜನ ಹೇಳಿದರೆ ಆಗುವುದಿಲ್ಲ. ಹೈಕಮಾಂಡ್ ವಿಶ್ಲೇಷಣೆ ಮಾಡುತ್ತದೆ. ಸದ್ಯ ಬಿಹಾರ ಚುನಾವಣೆ ನಡೆಯುತ್ತಿದೆ. ತದನಂತರ ಅವಶ್ಯಕತೆ ಇದ್ದರೆ ವರಿಷ್ಠರೇ ಮಾಡುತ್ತಾರೆ ಎಂದು ಹೇಳಿದರು.
ಸಂಪುಟ ಪುನಾಚರಣೆ ಕುರಿತು ಕೇಳಿದಾಗ, ಸಂಪುಟ ಪುನಾರಚನೆಯಾಗಲಿ, ನಾಯಕತ್ವ ಬದಲಾವಣೆ ವಿಚಾರವಾಗಲಿ ಹೈಕಮಾಂಡ್ನಿಂದ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ಮುನ್ಸೂಚನೆಯೂ ಇಲ್ಲ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆ ಎಂಬುದನ್ನು ಕಾದುನೋಡೋಣ ಎಂದರು. ಹೈಕಮಾಂಡ್ ತೀರ್ಮಾನ ನಾವು ಹೇಳಲು ಬರುವುದಿಲ್ಲ. ಅವರು ಏನು ತೀರ್ಮಾನ ಮಾಡುತ್ತಾರೆ ಕಾದುನೋಡೋಣ. ನಿತ್ಯ ಮಾಧ್ಯಮದಲ್ಲಿ ಹೇಳಿಕೆ ಕೊಡಬಹುದು ಅಷ್ಟೇ. ಹೈಕಮಾಂಡ್ ತಿಳಿಸುವವರೆಗೂ ಯಾವುದಕ್ಕೂ ಮಹತ್ವ ಇರುವುದಿಲ್ಲ ಎಂದು ತಿಳಿಸಿದರು. ದಲಿತ ನಾಯಕರಿಗೆ ಸಿಎಂ ಆಗುವ ಅವಕಾಶ ಸಿಗಬೇಕು ಎಂಬುದು ನಮ್ಮ ಬಯಕೆ. ಆದರೆ, ಪಕ್ಷದ ನಾಯಕರು ಇದನ್ನು ನಿರ್ಧಾರ ಮಾಡುತ್ತಾರೆ. ಯಾವ ಸಮುದಾಯಕ್ಕೆ ಏನು ಅವಕಾಶ ನೀಡಬೇಕು ಎನ್ನುವುದು ನಾಯಕರಿಗೆ ಬಿಟ್ಟಿದ್ದು. -ಸತೀಶ್ ಜಾರಕಿಹೊಳಿ, ಸಚಿವ ಮುನಿಯಪ್ಪ 7 ಬಾರಿ ಸಂಸದರಾಗಿದ್ದವರು. ಇದು ಸಾಮಾನ್ಯವಲ್ಲ. ಪಕ್ಷದಲ್ಲಿ ಹಿರಿಯರು, ಕೇಂದ್ರದಲ್ಲಿ ಸಚಿವರಾಗಿದ್ದರು. ಈಗ ರಾಜ್ಯದಲ್ಲಿ ಸಚಿವರಾಗಿದ್ದಾರೆ. ಅವರು ಸಮರ್ಥರಿದ್ದು, ಅರ್ಹತೆಯೂ ಇದೆ. ಮುನಿಯಪ್ಪ ಸಿಎಂ ಆದರೆ ನಾನು ತುಂಬ ಸಂತೋಷಪಡುತ್ತೇನೆ. -ಡಾ. ಜಿ.ಪರಮೇಶ್ವರ್, ಗೃಹಸಚಿವ