ರಾಷ್ಟ್ರ ಪ್ರಶಸ್ತಿ ಪಡೆದ ಗೋಕಾಕ ಬಿಇಒ ಜಿ.ಬಿ.ಬಳಿಗಾರ ಅವರಿಗೆ ಸತ್ಕಾರ
ಲೋಕದರ್ಶನ ವರದಿ
ಬೆಟಗೇರಿ 10: ಗೋಕಾಕ ಕ್ಷೇತ್ರಶಿಕ್ಷಣಾಧಿಕಾರಿ ಜಿ.ಬಿ.ಬಳಿಗಾರ ಅವರು ಭಾರತೀಯ ಶೈಕ್ಷಣಿಕ ರಂಗದಲ್ಲಿ ಅತ್ಯುನ್ನತ ಗೌರವಗಳಲ್ಲಿ ಒಂದಾದ ಅತ್ಯುತ್ತಮ ಕ್ಷೇತ್ರ ಶಿಕ್ಷಣಾಧಿಕಾರಿ ರಾಷ್ಟ್ರ ಪ್ರಶಸ್ತಿ ಪಡೆದ ಪ್ರಯುಕ್ತ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಶಿಕ್ಷಣಪ್ರೇಮಿಗಳು, ಸ್ಥಳೀಯ ಹಿರಿಯ ನಾಗರಿಕರು ಇತ್ತೀಚೆಗೆ ಶಾಲು ಹೊದಿಸಿ ಸತ್ಕರಿಸಿದರು. ಭಾರತ ಸರಕಾರದ ಶಿಕ್ಷಣ ಸಚಿವಾಲಯದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನವದೆಹಲಿ ರಾಷ್ಟ್ರೀಯ ಶೈಕ್ಷಣಿಕ ಯೋಜನೆ ಮತ್ತು ಆಡಳಿತ ಸಂಸ್ಥೆ ಇವರು ಪ್ರತಿವರ್ಷ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಕ್ಷೇತ್ರದಲ್ಲಿ ವಿನೂತನ ಶೈಕ್ಷಣಿಕ ಚಟುವಟಿಕೆಗಳನ್ನು ಆಯೀಜಿಸಿ ಉತ್ತಮ ಪರಿಣಾಮ ಪಡೆದಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗಾಗಿ ಕೊಡಮಾಡುವ 2024-25ನೇ ಸಾಲಿನ ಈ ವರ್ಷದ ಈ ಪ್ರಶಸ್ತಿ ಸ್ವಿಕರಿಸಿದ ಕರ್ನಾಟಕದ ಏಕೈಕ ಬಿಇಒ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸ್ಥಳೀಯ ಶಿಕ್ಷಣಪ್ರೇಮಿ ಬಸವರಾಜ ಪಣದಿ ಮಾತನಾಡಿ, ಬೆಟಗೇರಿ ವಿವಿಡಿ ಸರಕಾರಿ ಪ್ರೌಢ ಶಾಲೆಯು ಸಹ ರಾಜ್ಯ ಮಟ್ಟದ ಪ್ರಶಸ್ತಿ ಪಡೆಯಲು ಹಗಲಿರುಳು ಶ್ರಮಿಸಿದ ನಿಸ್ವಾರ್ಥ ಮತ್ತು ದಕ್ಷ ಆಡಳಿತಗಾರ ಆಗಿನ ಬೆಟಗೇರಿ ವಿವಿಡಿ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯರಾಗಿದ್ದ ಜಿ.ಬಿ.ಬಳಿಗಾರ ಅವರು ಸಲ್ಲಿಸಿದ ಅವಿಸ್ಮರಣೀಯ ಸೇವೆಯನ್ನು ಈ ವೇಳೆ ಸ್ಮರಿಸಿದರು. ಈರಯ್ಯ ಹಿರೇಮಠ, ಶ್ರೀಶೈಲ್ ಗಾಣಗಿ, ಶಿವಾಜಿ ನೀಲಣ್ಣವರ, ಲಕ್ಷ್ಮಣ ನೀಲಣ್ಣವರ, ಬಸನಪ್ಪ ದೇಯಣ್ಣವರ, ನ್ಯಾಯವಾದಿಗಳಾದ ಎಮ್.ಐ.ನೀಲಣ್ಣವರ, ಚಂದ್ರಶೇಖರ ನೀಲಣ್ಣವರ, ವಿಠ್ಠಲ ಕೋಣಿ, ರಾಮಣ್ಣ ಬಳಿಗಾರ, ರಾಜು ಪತ್ತಾರ ಸೇರಿದಂತೆ ಮತ್ತೀತರರು ಇದ್ದರು.