ಬೆಳಗಾವಿ

ಕಾಲೇಜಿನಲ್ಲಿ 2026-27 ಚಟುವಟಿಕೆಗಳಿಗೆ ಚಾಲನೆ

ಕಾಲೇಜಿನಲ್ಲಿ 2026-27 ಚಟುವಟಿಕೆಗಳಿಗೆ ಚಾಲನೆ

ಲೋಕದರ್ಶನ ವರದಿ 

  ಮೂಡಲಗಿ 25: ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2026-27  ಸಾಲಿನ ಸಾಂಸ್ಕೃತಿಕ, ಎನ್‌ಎಸ್‌ಎಸ್, ರೆಡ್ಕ್ರಾಸ್, ಸ್ಕೌಟ್ಸ್‌ ಮತ್ತು ಗೈಡ್ಸ್‌, ಕ್ರೀಡಾ ಘಟಕಗಳ ಉದ್ಘಾಟನೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಪ್ರಾಂಶುಪಾಲ ಪ್ರೊ. ಸಂಗಮೇಶ ಗುಜಗೊಂಡ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯೊಂದಿಗೆ ಪಠ್ಯೇತರ ಚಟುವಟಿಕೆಗಳು ಅವರ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗುತ್ತವೆ. ವಿದ್ಯಾರ್ಥಿಗಳು ಗುರು-ಹಿರಿಯರನ್ನು ಗೌರವಿಸಿ, ವಿನಯದಿಂದ ಜ್ಞಾನ ಸಂಪಾದಿಸಿ ಉನ್ನತ ಸಾಧನೆ ಮಾಡುವಂತೆ ಸಲಹೆ ನೀಡಿದರು.  

ಶ್ರೀಧರ ಬೋಧ ಸ್ವಾಮೀಜಿಗಳು ಆಶೀರ್ವಚನ ನೀಡಿ, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಂಸ್ಕಾರ, ಮಾನವೀಯ ಮೌಲ್ಯ ಹಾಗೂ ಸಾಮಾಜಿಕ ಜವಾಬ್ದಾರಿಗಳನ್ನು ಬೆಳೆಸಿಕೊಂಡು ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಹಾರೈಸಿದರು. ಪ್ರಾಂಶುಪಾಲ ಮಹೇಶ ವೈ. ಕಂಬಾರ ಅಧ್ಯಕ್ಷತೆ ವಹಿಸಿ, ಕಾಲೇಜಿನ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳು ಸಾಧನೆಯ ಶಿಖರಕ್ಕೇರಬೇಕು ಎಂದು ಪ್ರೇರೇಪಿಸಿದರು. ನೂತನ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಬ್ಯಾಡ್ಜ್‌ ವಿತರಿಸಿ ಸ್ವಾಗತಿಸಲಾಯಿತು.  

ಕಳೆದ ಸಾಲಿನಲ್ಲಿ ವಿವಿಧ ವಿಭಾಗಗಳಲ್ಲಿ ಅತ್ಯಧಿಕ ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ‘ಪ್ರತಿಭಾ ಪುರಸ್ಕಾರ’ ನೀಡಿ ಅಭಿನಂದಿಸಲಾಯಿತು. ಪಿಎಚ್‌.ಡಿ ಪದವಿ ಪಡೆದ ಸಾಧಕರು ಹಾಗೂ ನಿವೃತ್ತ ಉಪನ್ಯಾಸಕರನ್ನು ಸಹ ಸನ್ಮಾನಿಸಲಾಯಿತು. ಸಾಂಸ್ಕೃತಿಕ ಸಂಯೋಜಕಿ ಯೋಗಿನಿ ಕೆ.ವಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳು ಜರುಗಿದವು. ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ