ಸಮಾಜದ ಉನ್ನತಿಗೆ ಶ್ರಮಿಸಿದ ಕಾಯಕ ಶರಣ ಮಾದಾರ ಚನ್ನಯ್ಯ : ಪ್ರೊ. ಶಶಿಕಾಂತ್ ಎಸ್. ಉಡಿಕೇರಿ
ಕಲಬುರಗಿ 13: ಶಿವಶರಣ ಮಾದಾರ ಚನ್ನಯ್ಯ ಅವರ ವಿದ್ವತ್ತು, ಅನುಭವ ಮತ್ತು ಅನುಭಾವದಿಂದ ರಚಿತ ವಚನಗಳು ಸಮಾಜವನ್ನು ಜಾಗೃತಗೊಳಿಸಿವೆ. ಅವರ ಚಿಂತನೆಗಳು ಸಮಾಜದ ಬದಲಾವಣೆಗೆ ಶಕ್ತಿಯನ್ನು ತುಂಬಿವೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶಶಿಕಾಂತ ಎಸ್.ಉಡಿಕೇರಿ ಹೇಳಿದರು. ಗುಲಬರ್ಗಾ ವಿಶ್ವವಿದ್ಯಾಲಯದ ಕಾಯಕ ಪ್ರಿಯ ಶಿವಶರಣ ಮಾದಾರ ಚನ್ನಯ್ಯ ಅಧ್ಯಯನ ಪೀಠದ ವತಿಯಿಂದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಆಯೋಜಿಸಿದ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಕಾಯಕ ಪ್ರಿಯ ಶಿವಶರಣ ಮಾದಾರ ಚನ್ನಯ್ಯ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಿಸಿ ಮಾತನಾಡಿದರು.
ನಗರದ ಡಾ. ಅಂಬೇಡ್ಕರ್ ಪದವಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಅರುಣ ಜೋಳದಕೂಡ್ಲಿಗಿ ಮುಖ್ಯ ಅತಿಥಿಯಾಗಿ ಮಾತನಾಡಿ 'ಮಹಾ ಶೈವಭಕ್ತನಾಗಿದ್ದ ಮಾದಾರ ಚನ್ನಯ್ಯ ಶೈವ ಪರಂಪರೆಯನ್ನು ಜನಪರವಾಗಿ ಪ್ರಚಾರ ಮಾಡಿದ್ದರು. ಅನುಭವ ಮಂಟಪದಲ್ಲಿ ಆದ್ಯ ವಚನಕಾರನಾಗಿ ಬಸವಣ್ಣನವರ ಮೆಚ್ಚುಗೆ ಪಡೆದಿದ್ದರು. ವೃತ್ತಿ ಪರಿಕರಗಳನ್ನು ಅಂಕಿತವಾಗಿಸಿಕೊಂಡು ಕೀಳರಿಮೆ ಹೋಗಲಾಡಿಸಿ ಸಮಾಜದ ಉನ್ನತಿಗೆ ಶ್ರಮಿಸಿದ ಹಿರಿಯ ಶರಣರಲ್ಲಿ ಒಬ್ಬರಾಗಿದ್ದರು. ನುಡಿದಂತೆ ನಡೆಯಬೇಕು, ನಡೆದಂತೆ ನುಡಿಯಬೇಕು ಎಂಬ ವಚನಕ್ಕೆ ಬದ್ದರಾಗಿದ್ದ ಬಸವಣ್ಣನವರು ನಿನ್ನ ಮನೆಯ ಮಗನಯ್ಯ ಎಂದು ಮಾದಾರ ಚನ್ನಯ್ಯನವರ ಕುರಿತು ಸಂಬೋದಿಸಿರುವುದು ಜ್ಞಾನ ಮತ್ತು ಕರ್ಮ ಕಾಯಕ ಅಂಶಗಳು ವಚನ ಪರಂಪರೆಯ ಚರಿತ್ರೆಯಲ್ಲಿ ಎದ್ದು ಕಾಣುತ್ತವೆ. ರಾಜಸತ್ತೆಯ ಕರಿಕಾಳ ಚೋಳ ಮಾದಾರ ಚನ್ನಯ್ಯನ ಮನೆಗೆ ಹುಡುಕಿ ಬರುವ ಪ್ರಸಂಗವನ್ನು ವಿವರಿಸಿದರು.
ಭಾರತದಲ್ಲಿ ಪ್ರಾಚೀನ ಕ್ರಾಂತಿ ಮತ್ತು ಪ್ರತಿಕ್ರಾಂತಿ ಸಂದರ್ಭಗಳಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರು ಸಂಸ್ಕೃತ ಪಠ್ಯಗಳನ್ನು ಅಧ್ಯಯನ ಮಾಡಿದಂತೆ ಮಾದಾರ ಚನ್ನಯ್ಯ ಅವರು ವೇದ, ಶಾಸ್ತ್ರ, ತರ್ಕ ಮತ್ತು ಆಗಮಗಳ ಜ್ಞಾನ ಪಡೆದಿದ್ದರು. ಜನಪದರ ಹಾಡುಗಳು, ಲಾವಣಿ ಮತ್ತು ಕಾವ್ಯಗಳಲ್ಲಿ ನೆಲೆ ಪಡೆದಿರುವ ಚನ್ನಯ್ಯನವರು ಮೌಖಿಕ ಪರಂಪರೆಯಲ್ಲೂ ಜೀವಂತವಾಗಿದ್ದಾರೆ. ಮಾದಾರ ಚನ್ನಯ್ಯ ಕ್ರಿ.ಶ. 1,162ಕ್ಕೂ ಹಿಂದೆಯೇ ಬದುಕಿದ್ದರು ಎಂಬುದಕ್ಕೆ ಪುರಾವೆಗಳು ಶಾಸನಗಳಲ್ಲಿ ಸಿಕ್ಕಿವೆ. ಬಸವಣ್ಣ, ಜೇಡರ ದಾಸಿಮಯ್ಯ, ಡೋಹರ ಕಕ್ಕಯ್ಯಕ್ಕಿಂತಲೂ ಹಿರಿಯ ಶರಣರೆಂದು ಉಲ್ಲೇಖಗಳಿವೆ. ಐತಿಹಾಸಿಕ ಅಂಶಗಳ ಹಿನ್ನಲೆಯಲ್ಲಿ ಅದ್ಯ ವಚನಕಾರ ಆಗಿರುವ ಮಾದಾರ ಚನ್ನಯ್ಯ ಅವರ ಬಗ್ಗೆ ಅಧ್ಯಯನ ಮತ್ತು ಸಂಶೋಧನೆಗಳು ಆಗಬೇಕಿದೆ ಎಂದರು.
'ಮಾದಾರ ಚನ್ನಯ್ಯ ಅವರ ಬಗ್ಗೆ ಕೇವಲ ಹತ್ತು ವಚನಗಳು ಸಿಕ್ಕಿವೆ. ಬಸವಣ್ಣನವರ 32 ವಚನಗಳಲ್ಲಿ ಮಾದಾರ ಚನ್ನಯ್ಯರ ಹೆಸರು ಉಲ್ಲೇಖಿಸಿದ್ದಾರೆ. ಚನ್ನಬಸವಣ್ಣ, ಅಲ್ಲಮಪ್ರಭು, ಉರಿಲಿಂಗಪೆದ್ದಿ, ಹೊಲೇರ ಹೊನ್ನಯ್ಯ ಸೇರಿದಂತೆ 20ಕ್ಕೂ ಅಧಿಕ ವಚನಕಾರರು ಹಾಗೂ ಎಂಟು ಕವಿಗಳ ಕಾವ್ಯ, ತ್ರಿಪದಿಗಳು, ಹರಿಹರ ರಗಳೆ, ಮಂಟೇಸ್ವಾಮಿ ಶಿಶುಗೀತೆ, ಪದ್ಯಗಳು ಉಲ್ಲೇಖವಿದೆ. ಸುಮಾರು 100 ರಷ್ಟು ವಚನಗಳಲ್ಲಿ ಮಾದಾರ ಚನ್ನಯ್ಯನ ಕುರಿತಂತೆ ಪ್ರಸ್ತಾಪ ಮಾಡಲಾಗಿದೆ. 'ಮೇಲ್ಟಾತಿ ವರ್ಗದವರು ಮಾದಾರ ಚನ್ನಯ್ಯನ ಬಗ್ಗೆ ಅಧ್ಯಯನ ಮಾಡಿದ್ದಾರೆ. ಹೊಸ ತಲೆಮಾರಿನ ದಲಿತ ವರ್ಗ ಮತ್ತು ದಲಿತ ಸಮಾಜದವರು ಮಾದರ ಚನ್ನಯ್ಯನವರ ಬಗೆಗೆ ಹೊಸದಾಗಿ ಅಧ್ಯಯನ ನಡೆಯಬೇಕಿದೆ ಎಂದರು.
ಶಿವಶರಣ ಪ್ರಾಸ್ತಾವಿಕವಾಗಿ ಮಾದಾರ ಚನ್ನಯ್ಯ ಅಧ್ಯಯನ ಪೀಠದ ನಿರ್ದೇಶಕ ಪ್ರೊ. ದೇವಿದಾಸ ಜಿ.ಮಾಲೆ ಪ್ರಾಸ್ತಾವಿಕವಾಗಿ ಮಾತನಾಡಿ ಅನುಭವ ಮಂಟಪದಲ್ಲಿ ಹಿರಿಯ ಶರಣರಾಗಿದ್ದ ಕಾಯಕಪ್ರಿಯ ಶಿವಶರಣ ಮಾದಾರ ಚನ್ನಯ್ಯ ಬಸವಣ್ಣನವರಿಗಿಂತ ಹಿರಿಯರಾಗಿದ್ದರು. ಸಮಕಾಲೀನ ವಸ್ತುಸ್ಥತಿಗೆ ಅನುಗುಣವಾದ ವಚನಗಳನ್ನು ನೀಡಿರುವ ಇವರ 13 ವಚನಗಳು ಸಿಕ್ಕಿವೆ. ವರ್ಣ ಪದ್ಧತಿ, ಜಾತಿ ಸಂಘರ್ಷ, ಮೇಲು ಕೀಳು ಎಂಬ ಅಸಮಾನತೆಯ ಸಮಾಜದಲ್ಲಿ ಸಾಮಾನ್ಯ ವರ್ಗದಲ್ಲಿ ಜನಿಸಿದ ಮಾದಾರ ಚನ್ನಯ್ಯ ನೊಂದವರನ್ನು ಮುಖ್ಯವಾಹಿನಿಗೆ ತರುವಲ್ಲಿ ಶ್ರಮಿಸಿದ್ದಾರೆ. ಸಮಾಜ ವಿರೋಧಿ ಪದ್ಧತಿ, ಅಂಕು ಡೊಂಕುಗಳನ್ನು ಟೀಕಿಸಿ ಸುಧಾರಣೆ ಮಾಡಿದ್ದಾರೆ ಎಂದರು.
ಗುಲಬರ್ಗಾವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಮಲ್ಲಣ್ಣ ಮಡಿವಾಳ, ವಿದ್ಯಾವಿಷಯಕ್ ಪರಿಷತ್ ಸದಸ್ಯ ಹಾಗೂ ಸಮಾಜ ವಿಜ್ಞಾನಗಳ ನಿಕಾಯದ ಡೀನ್ ಪ್ರೊ. ದಶರಥ ನಾಯಕ, ಕುಲಸಚಿವರಾದ ಡಾ.ಎನ್.ಜಿ.ಕಣ್ಣೂರ, ಕುಲಸಚಿವ ಪ್ರೊ.ರಮೇಶ ಲಂಡನಕರ್, ಹಣಕಾಸು ಅಧಿಕಾರಿ ಶ್ರೀಮತಿ. ಜಯಾಂಬಿಕಾ ವೇದಿಕೆಯಲ್ಲಿದ್ದರು. ಎಲ್ಲಾ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಸಿಂಡಿಕೇಟ್ ಸದಸ್ಯರು, ವಿದ್ಯಾ ವಿಷಯಕ ಪರಿಷತ್ ಸದಸ್ಯರು, ವಿವಿಧ ನಿಕಾಯಗಳ ಡೀನರು, ಅತಿಥಿ ಅಧ್ಯಾಪಕರು, ಬೋಧಕೇತರ ಸಿಬ್ಬಂದಿ, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂಗೀತ ವಿಭಾಗದ ಉಪನ್ಯಾಸಕ ಸಿದ್ಧಾರ್ಥ ಚಿಮ್ಮಾ ಇದ್ಲಾಯಿ ಹಾಗೂ ಸಂಗಡಿಗರು ನಾಡಗೀತೆ ಮತ್ತು ವಚನ ಗೀತೆ ಹಾಡಿದರು ಪ್ರಕಾಶ ಹದನೂರ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ದೈಹಿಕ ಶಿಕ್ಷಣ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಚಂದ್ರಕಾಂತ ಬಿರಾದಾರ ನಿರೂಪಿಸಿದರು.
ಪೋಟೋ ಕ್ಯಾಪ್ಸನ್ :
ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮಗಾಂಧಿ ಸಭಾಂಗಣದಲ್ಲಿ ಆಯೋಜಿಸಿದ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶಿವಶರಣ ಮಾದಾರ ಚನ್ನಯ್ಯ ಅವರ ಭಾವಚಿತ್ರಕ್ಕೆ ಕುಲಪತಿ ಪ್ರೊ. ಶಶಿಕಾಂತ್ ಎಸ್. ಉಡಿಕೇರಿ ಪುಷ್ಪ ಸಮರ್ಿಸಿದರು. ಡಾ. ಅರುಣ್ ಜೋಳದಕೂಡ್ಲಿಗಿ, ಮಲ್ಲಣ್ಣ ಮಡಿವಾಳ, ಪ್ರೊ. ದಶರಥ ನಾಯಕ, ಪ್ರೊ. ರಮೇಶ ಲಂಡನಕರ್, ಡಾ. ಎನ್. ಜಿ. ಕಣ್ಣೂರು, ಜಯಾಂಬಿಕ ಹಾಗೂ ಪ್ರೊ. ದೇವಿದಾಸ ಮಾಲೆ ಇದ್ದರು.