ಮನರಂಜನೆ

ಕಾಶ್ಮೀರ್ ಫೈಲ್ಸ್ ; ಜನಾಂಗೀಯ ಹತ್ಯೆಗೆ ಕನ್ನಡಿ ಹಿಡಿದಿದೆಯೇ ?

ಕಾಶ್ಮೀರ್ ಫೈಲ್ಸ್ ; ಜನಾಂಗೀಯ ಹತ್ಯೆಗೆ ಕನ್ನಡಿ ಹಿಡಿದಿದೆಯೇ ?

ವಿವೇಕ್ ಅಗ್ನಿಹೋತ್ರಿ ನಿರ್ದೇಶನದ “ಕಾಶ್ಮೀರ್ ಫೈಲ್ಸ್” ಮೂರು ದಶಕಗಳ ಹಿಂದೆ ಕಾಶ್ಮೀರದಲ್ಲಿ ಜರುಗಿದ ಘಟನಾವಳಿಗಳನ್ನು ಚಿತ್ರಿಸಲು ಪ್ರಯತ್ನಿಸಿದೆ. ಭಾರತ ಗಣತಂತ್ರ ವ್ಯಾಪ್ತಿಯಿಂದ ಕಾಶ್ಮೀರ ಕಳಚಿಕೊಳ್ಳುವಂತೆ ಮಾಡಲು ಅಲ್ಲಿನ ಪ್ರತ್ಯೇಕತವಾದಿಗಳು ಪ್ರಯತ್ನಿಸುತ್ತಲೇ ಇದ್ದಾರೆ. 1986ರ ತನಕ ಬೂದಿ ಮುಚ್ಚಿದ ಕೆಂಡದಂತಿದ್ದ ಕಾಶ್ಮೀರ ನಂತರ ಅಕ್ಷರಶಃ ಕೆನ್ನಾಲಿಗೆಯಾಗಿದೆ. ಈಗಾಗಲು ಕಾರಣವೇನು ? ಇದರ ಬಗ್ಗೆ ಎರಡೂ ರೀತಿಯ ವಾದಗಳಿವೆ.ಈ ವಾದಗಳೇ ಇದ್ದರೂ ಅಲ್ಲಿನ ಹಿಂದೂಗಳು ಪ್ರತ್ಯೇಕವಾದಿಗಳಿಂದ ನಲುಗಿದರು, ತಾವು ಹುಟ್ಟಿ ಬೆಳೆದ ಮನೆ, ಊರು ಬಿಟ್ಟು ತೆರಳುವಂಥ ಅಮಾನವೀಯ ದೌರ್ಜನ್ಯಕ್ಕೆ ಈಡಾದರು ಎನ್ನುವುದು ಸುಳ್ಳೇನಲ್ಲ. ಇಂಥ  ದುರ್ಘಟನಾವಳಿಗಳನ್ನು ಒಂದು ಕಾಶ್ಮೀರಿ ಪಂಡಿತ ಕುಟುಂಬ ಅನುಭವಿಸಿದ ಹಿಂಸೆ, ದೌರ್ಜನ್ಯ ಮತ್ತು ಹತ್ಯೆಯ ಮೇಲೆಯೇ ಕೇಂದ್ರೀಕರಿಸುವುದರ ಮೂಲಕ ಕಾಶ್ಮೀರಿ ಕಡತವನ್ನು ಮರು ಅನಾವರಣ ಮಾಡುವ ಪ್ರಯತ್ನ ನಡೆದಿದೆ.ಇದಕ್ಕೆ ಸಮಕಾಲೀನ ಘಟನೆಗಳನ್ನು ತಳುಕು ಹಾಕಿರುವುದು ಗಮನಾರ್ಹ. ದೆಹಲಿಯ ಜೆ.ಎನ್.ಯು. ಸಿನೆಮಾದಲ್ಲಿ ಎ.ಎನ್.ಯು. ಆಗಿದೆ. ಅಲ್ಲಿ ಕಾಶ್ಮೀರ್ ಆಜಾದಿ ಘೋಷಣೆ ಕೂಗಿದವರಿಗೆ ನಿಜಕ್ಕೂ ಕಾಶ‍್ಮೀರದಲ್ಲಿ ಆದ ಜನಾಂಗೀಯ ಹತ್ಯೆ ಬಗ್ಗೆ ಅರಿವಿಲ್ಲ. ಅಂಥ ವಿದ್ಯಾರ್ಥಿಗಳು ಸಿನೆಮಾದ ಒಂದು ಪಾತ್ರವಾದ ಪ್ರಾಧ್ಯಾಪಿಕೆ ರಾಧಿಕಾ ಮೆನನ್ ಮತ್ತು ಈ ಥರದ ವ್ಯಕ್ತಿಗಳ ತಪ್ಪು ಬೋಧನೆಯಿಂದ ಬ್ರೈನ್ ವಾಶ್ ಗೆ ಒಳಗಾಗಿದ್ದಾರೆ. ಇಂಥವರು ಒಂದಲ್ಲ ಒಂದು ರೀತಿ ಆಮಿಷಕ್ಕೆ ಒಳಗಾಗಿದ್ದಾರೆ ಎನ್ನುವುದು. ಆಧಾರವಿಲ್ಲದೇ ಈ ರೀತಿಯ ನಿರ್ಧಾರಕ್ಕೆ ಬರುವುದು ಅದರಲ್ಲಿಯೂ ಪ್ರತ್ಯೇಕತಾವಾದಿ ಬಿಟ್ಟಾ ಜೊತೆಯಲ್ಲಿ ಪ್ರೊಫೆಸರ್ ರಾಧಿಕಾ ಸಲುಗೆಯಿಂದ ಇರುವ ಚಿತ್ರದತ್ತ ಕ್ಯಾಮೆರಾ ಫೋಕಸ್ ಮಾಡಿ ಇವರಿಬ್ಬರಿಗೂ ದೈಹಿಕ ಸಂಬಂಧವಿದೆ ಎಂಬಂತೆ ಚಿತ್ರಿಸಿರುವುದು ಪೂರ್ವಾಗ್ರಹಪೀಡಿತ ಎನಿಸುತ್ತದೆ.ನಿರ್ದೇಶಕರು ಇಡೀ ಸಿನೆಮಾದುದ್ದಕ್ಕೂ ಪೂರ್ವಾಗ್ರಹಪೀಡಿತರಾಗಿದ್ದಾರೆಯೇ ? ಹಾಗೇನು ಅನಿಸುವುದಿಲ್ಲ. ಆರಂಭಿಕ ದೃಶ್ಯದಲ್ಲಿ ಮಕ್ಕಳು ಕ್ರಿಕೆಟ್ ಆಡುತ್ತಿರುವುದು, ಹಿನ್ನೆಲೆಯಲ್ಲಿ ಸಚಿನ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ತೊಡಗಿರುವ ರೇಡಿಯೋ ಕಾಮೆಂಟರಿ ಕೇಳುತ್ತಿರುತ್ತದೆ. ಅಲ್ಲಿಂದ ಮುಸ್ಲೀಮ್ ಯುವಕರು ಸಚಿನ್ ಗೆ ಜೈಕಾರ ಕೂಗಿದ ಶಿವನಿಗೆ ಥಳಿಸುತ್ತಾರೆ. ಈ ಘಟನೆ ಅವರಿಗೆಂದು ಕಾಶ್ಮೀರದ ಭಾಗ ಎಂದು ಅನಿಸಿಯೇ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ.ಅಧ್ಯಾಪಕ ಪುಷ್ಕರ್ ಪಂಡಿತ್ ಉನ್ನತಮಟ್ಟದ ಆಡಳಿತಾಧಿಕಾರಿ ಬ್ರಹ್ಮದತ್ ಉನ್ನತ ಪೊಲೀಸ್ ಅಧಿಕಾರಿ ಹರಿ ನಾರಯಣ್, ಹಿರಿಯ ವೈದ್ಯ  ಡಾ. ಮಹೇಶ್ ಕುಮಾರ್, ಪತ್ರಕರ್ತ ಪಾತ್ರಗಳ ಮೂಲಕ ಕಾಶ್ಮೀರದಲ್ಲಿ ನಡೆದ ಘಟನಾವಳಿಗಳನ್ನು ಮರು ನಿರೂಪಣೆ ಮಾಡುವ ಪ್ರಯತ್ನ ನಡೆದಿದೆಯಾದರೂ ಅದು ಸಮರ್ಥವಾಗಿ ಮೂಡಿ ಬಂದಿಲ್ಲ. ಈ ಪಾತ್ರಗಳು ಸೊರಗಿವೆ ಎಂದೇ ಹೇಳಬಹುದು.ಕಾಶ್ಮೀರದಲ್ಲಿ ವಿದ್ಯೆ, ಹಣ ಮತ್ತು ಅಧಿಕಾರ ಹೊಂದಿದ್ದ ಕಾಶ್ಮೀರಿ ಪಂಡಿತ ಕುಟುಂಬಗಳನ್ನು ಗುರಿಯಾಗಿಸಿಕೊಂಡು ಪ್ರತ್ಯೇಕತಾವಾದಿಗಳು ನಡೆಸುವ ಕ್ರೌರ್ಯವನ್ನು ತೋರಿಸಲಾಗಿದೆ. ಲಕ್ಷಾಂತರ ಹಿಂದೂ ಪಂಡಿತರು ಕಾಶ್ಮೀರ ತೊರೆಯುವಂತೆ ಮಾಡಲಾಗುತ್ತದೆ. ಹುಟ್ಟೂರು ಬಿಟ್ಟು ನಿರಾಶ‍್ರಿತ ಶಿಬಿರಗಳಲ್ಲಿ ಅಸಹಾಯಕ ಸ್ಥಿತಿಯಲ್ಲಿ ನೆಲೆಸುವಂತೆ ಮಾಡಲಾಗುತ್ತದೆ. ಹಳ್ಳಿಯೊಂದರಲ್ಲಿ  ಆಶ್ರಯ ಪಡೆದಿದ್ದ ಹಿಂದೂ ಕುಟುಂಬಳ ಮಾರಣ ಹೋಮ ನಡೆಸಲಾಗುತ್ತದೆ.ನಿರ್ದೇಶಕರು ಅಂತೆಕಂತೆಗಳ ಮೇಲೆ ಇವೆಲ್ಲವನ್ನೂ ನಿರೂಪಿಸಿದ್ದಾರೆಯೇ ? ಹಾಗೆ ಹೇಳಲು ಆಗುವುದಿಲ್ಲ. ಕಾಶ್ಮೀರ ಕಡತಗಳನ್ನು ಅಧ‍್ಯಯನ ಮಾಡಿಯೇ ಚಿತ್ರಕಥೆ ರಚಿಸಿರುವುದು ಸ್ಪಷ್ಟವಾಗುತ್ತದೆ. ಇಂಡಿಪೆಂಡೆಟ್ ಸ್ಟೇಟ್ ಗಳಿಕೆಗಾಗಿ ಮೂಲ ನಿವಾಸಿಗಳನ್ನೇ ಗುರಿಯಾಗಿಸಿಕೊಂಡ ಪ್ರತ್ಯೇಕವಾದಿಗಳ ಪ್ರಯತ್ನಗಳನ್ನು ನಿರ್ದೇಶಕರು ಹೇಳಲು ಹೊರಟಿರುವುದು ಹೌದಾದರೂ ಅವುಗಳನ್ನು ಮತ್ತಷ್ಟೂ ಪರಿಣಾಮಕಾರಿಯಾಗಿ ಹೇಳಬಹುದಿತ್ತು.ಎ.ಎನ್.ಯು. ವಿದ್ಯಾರ್ಥಿ ಕೃಷ್ಣ ಪಂಡಿತ್ ಪಾತ್ರವಂತೂ ತೀರಾ ಪೇಲವ. ಇಂಥ ಏನು ಗ್ರಹಿಸಿದ, ಏನು ಗ್ರಹಿಸಲಿಲ್ಲ ಎನ್ನುವುದಂತೂ ಗೊಂದಲಕಾರಿ. ಕೊನೆಗೆ ಕ್ಯಾಂಪಸ್ಸಿಗೆ ಬಂದು ಕಾಶ್ಮೀರದ ಮೂಲ ವಿಷಯ ಹೇಳಲು ಹೊರಟಿರುವುದು ನೋಡಿದಾಗ ಅದನ್ನೆಲ್ಲ ತಿಳಿಯಲು ಅಲ್ಲಿಯ ತನಕ ಹೋಗಬೇಕಿತ್ತೆ ಎನ್ನಿಸದಿರದು.

ಸಿನೆಮಾ ಆಗಿ ಎಷ್ಟು ಯಶಸ್ವಿ ?

ಕಾಶ್ಮೀರ್ ಫೈಲ್ಸ್ ಸಿನೆಮಾ ಆಗಿ ಎಷ್ಟು ಯಶಸ್ವಿ ಎಂದು ನೋಡುವುದಾದರೆ ಅದು ಸಿನೆಮಾ ಆಗಿಯೇ ಇಲ್ಲ. ಅತ್ತ ನಾಟಕವೂ ಅಲ್ಲದೇ ಇತ್ತ ಡಾಕ್ಯುಮೆಂಟರಿಯೂ ಆಗದೇ ಸೊರಗಿದೆ. ಚಿತ್ರಕಥೆಯನ್ನು ಮತ್ತಷ್ಟೂ ಬಿಗಿಗೊಳಿಸಬಹುದಾಗಿತ್ತು. ಸಂಕಲನ, ಛಾಯಾಗ್ರಹಣ ವಿಭಾಗವೂ ಯಶಸ್ವಿಯಾಗಿಲ್ಲ. ಸಂಗೀತವಂತೂ ಪೂರ್ಣ ಬಳಲಿದೆ. ಅಭಿನಯದ ವಿಷಯದಲ್ಲಿ ಹಿರಿಯ ಐಎಎಸ್ ಅಧಿಕಾರಿ ಪಾತ್ರದ ಮಿಥುನ್ ಚಕ್ರವರ್ತಿ, ಅಧ್ಯಾಪಕ ಪುಷ್ಕರ್ ಪಂಡಿತ್ ಪಾತ್ರದ ಅನುಪಮ್ ಖೇರ್, ವಿಶ್ವವಿದ್ಯಾಲಯದ ಪ್ರಾಧ್ಯಾಪಿಕೆ ಪಾತ್ರದ ಪಲ್ಲವಿ ಜೋಶಿ ಅಭಿನಯ ಹೃದಯಸ್ಪರ್ಶಿಯಾಗಿದೆ. ಉಳಿದ ಕಲಾವಿದರ ಪಾತ್ರ ನಿರ್ವಹಣೆ ಪೇಲವ. ಇದಷ್ಟೇ ಅಲ್ಲ ಪುಷ್ಕರ್ ಪಂಡಿತ್ ಪಾತ್ರವೊಂದನ್ನು ಬಿಟ್ಟು ಉಳಿದ ಎಲ್ಲ ಪಾತ್ರಗಳನ್ನು ನಿರ್ದೇಶಕರು ಬೆಳೆಸಿರುವ ರೀತಿಯೂ ದುರ್ಬಲ.ಭಾರತ ವಿಭಜನೆ ಸಂದರ್ಭದಲ್ಲಿ ಅಂದಿನ ಕೇಂದ್ರ ಸರ್ಕಾರ ಕಾಶ್ಮೀರ ವಿಷಯವನ್ನು ಸಮರ್ಪಕವಾಗಿ ನಿರ್ವಹಣೆ ಮಾಡದ ಪರಿಣಾಮವೇ ಮುಂದಿನ ಎಲ್ಲ ಘಟನಾವಳಿಗೆ ಕಾರಣವಾಗಿದೆ ಎಂಬ ಅಂಶವೂ ಸ್ಪಷ್ಟವಾಗುತ್ತದೆ. ಜನ ಸಾಮಾನ್ಯರ ಬೇಡಿಕೆಯಲ್ಲದ 370 ವಿಧಿಯನ್ನು ಕಾಶ್ಮೀರದಲ್ಲಿ ಜಾರಿಗೊಳಿಸುವ ಮೂಲಕ ಅಲ್ಲಿನ ಜನತೆ ಮಾನಸಿಕವಾಗಿ ಪ್ರತ್ಯೇಕವಾಗುವಂತೆ ಮಾಡಲಾಯಿತೇ ಎಂಬ ಪ್ರಶ್ನೆಯೂ ಉದ್ಬವವಾಗುತ್ತದೆ.ನಿರ್ದೇಶಕರು ಅಂತೆಕಂತೆಗಳ ಮೇಲೆ ಇವೆಲ್ಲವನ್ನೂ ನಿರೂಪಿಸಿದ್ದಾರೆಯೇ ? ಹಾಗೆ ಹೇಳಲು ಆಗುವುದಿಲ್ಲ. ಕಾಶ್ಮೀರ ಕಡತಗಳನ್ನು ಅಧ‍್ಯಯನ ಮಾಡಿಯೇ ಚಿತ್ರಕಥೆ ರಚಿಸಿರುವುದು ಸ್ಪಷ್ಟವಾಗುತ್ತದೆ. ಇಂಡಿಪೆಂಡೆಟ್ ಸ್ಟೇಟ್ ಗಳಿಕೆಗಾಗಿ ಮೂಲ ನಿವಾಸಿಗಳನ್ನೇ ಗುರಿಯಾಗಿಸಿಕೊಂಡ ಪ್ರತ್ಯೇಕವಾದಿಗಳ ಪ್ರಯತ್ನಗಳನ್ನು ನಿರ್ದೇಶಕರು ಹೇಳಲು ಹೊರಟ್ಟಿದ್ದರೂ ಇನ್ನಷ್ಟು ಸಮರ್ಥವಾಗಿ ದಾಟಿಸಬಹುದಿತ್ತು. ಇಡೀ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿರಿಸಿಕೊಂಡು ನಡೆದ ಮಾರಣಹೋಮ ಜನಾಂಗೀಯ ಹತ್ಯೆಯಲ್ಲದೇ ಇನ್ನೆನ್ನು ? ಇದು ಕಟ್ಟುಕಥೆಯಂತೂ ಅಲ್ಲ !

ಸುದ್ದಿ ಓದಿ