ಮನೆಯಲ್ಲಿರುವ ಹಿರಿಯರಲ್ಲಿ ನಗುವಿದ್ದರೆ ಅದೇ ಅರಮನೆ : ಡಾ.ಟೊಣ್ಣೆ
ಮನೆಯಲ್ಲಿರುವ ಹಿರಿಯರಲ್ಲಿ ನಗುವಿದ್ದರೆ ಅದೇ ಅರಮನೆ : ಡಾ.ಟೊಣ್ಣೆ
ಹಾರೂಗೇರಿ 29: ಇಂದು ಹಿರಿಯರ ನಿರ್ಲಕ್ಷ್ಯ ಭಾವನೆ ಸಮಾಜದಲ್ಲಿ ಬೆಳೆಯುತ್ತಿದೆ. ಒಂದು ಕಾಲಕ್ಕೆ ನಮ್ಮ ಬದುಕಿಗೆ ಆಧಾರವಾದವರು ಇಂದು ನಿರಾಧಾರವಾಗುತ್ತಿರುವುದು ವಿಷಾಧನೀಯ ಸಂಗತಿ. ನಮ್ಮ ಸಂಸ್ಕೃತಿಯಲ್ಲಿ ಗುರು ಹಿರಿಯರು ದೇವರ ಸಮಾನ. ಮನೆಯಲ್ಲಿರುವ ಹಿರಿಯರ ಮುಖದಲ್ಲಿ ನಗುವಿದ್ದರೆ ಅದೇ ಅರಮನೆಯಾಗುತ್ತದೆ ಎಂದು ಬೆಳಗಾವಿ ಕೆಎಲ್‌ಇ ಆಯುರ್ವೇದ ಆಸ್ಪತ್ರೆಯ ಡಾ.ಸಂಜೀವ ಟೊಣ್ಣೆ ಹೇಳಿದರು.
ಪಟ್ಟಣದ ಡಾ.ಜಂಬಗಿ ಕಾಲೇಜು ಸಭಾಭವನದಲ್ಲಿ ಮಂಗಳವಾರ ಆಧಾರ ಹಿರಿಯ ನಾಗರಿಕ ಕಲ್ಯಾಣ ಸಂಸ್ಥೆ ಹಾರೂಗೇರಿ ಮತ್ತು ಶ್ರೀ ಸಿದ್ಧಿವಿನಾಯಕ ಗ್ರಾಮೀಣ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಆಶ್ರಯದಲ್ಲಿ ನಡೆದ ಆಯುರ್ವೇದ ಮತ್ತು ಹಿರಿಯರ ಆರೋಗ್ಯ-ಸಂವಾದ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಹಿರಿಯರು ಅನುಭಾವಿಗಳು. ಅವರ ಅನುಭಾವದ ಲಾಭ ಪಡೆದು ಕಿರಿಯರು ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕು. ಅವರಲ್ಲಿ ಅನಾಥ ಪ್ರಜ್ಞೆ ಮೂಡದಂತೆ ನಾವು ನೋಡಿಕೊಂಡು, ಅವರ ತ್ಯಾಗದ ಮೇಲೆ ತಮ್ಮ ಬದುಕು ರೂಪುಗೊಂಡಿದೆ ಎಂದು ನಾವು ಅರಿತುಕೊಳ್ಳಬೇಕು. ವೃದ್ಧಾಶ್ರಮಗಳು ತಲೆಯೆತ್ತುವ ಬದಲಾಗಿ ಹಿರಿಯರಿರುವ ಮನೆಗಳೇ ದೇವಾಲಯಗಳಾಗುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಡಾ.ಟೊಣ್ಣೆ ಹೇಳಿದರು.
ಡಾ.ಶೋಭಾಂಗಿಣಿ ಕೋಲಾರ ಮಾತನಾಡುತ್ತ ವೃದ್ಧಾಪ್ಯ ನೈಸರ್ಗಿಕ ಹಂತ. ಸಮತೋಲಿತ ಅಹಾರ ಸೇವನೆ, ನಿಯಮಿತ ತಪಾಸನೆ ಮತ್ತು ಚಿಕಿತ್ಸೆ ಪಡೆದುಕೊಳ್ಳಬೇಕು. ದೈನಂದಿನ ಚಟುವಟಿಕೆಗಳಲ್ಲಿ ಕ್ರೀಯಾಶೀಲತೆಯಿಂದ ತಮ್ಮನ್ನು ತೊಡಗಿಸಿಕೊಂಡು ಸಂತೋಷ ಹಾಗೂ ಉತ್ಸಾಹದಿಂದ ಇರಬೇಕು ಎಂದರು.
ಆಧಾರ ಹಿರಿಯ ನಾಗರಿಕ ಕಲ್ಯಾಣ ಸಂಸ್ಥೆ ಅಧ್ಯಕ್ಷ ಡಾ.ಸಿ.ಆರ್.ಗುಡಸಿ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲ ಸಂಪತ್ತುಗಳಲ್ಲಿ ಆರೋಗ್ಯ ಸಂಪತ್ತು ಮಿಗಿಲಾದುದು. ಇಳಿವಯಸ್ಸಿನಲ್ಲಿ ಹೆಚ್ಚಿನ ವಿಶ್ರಾಂತಿಯ ಅಗತ್ಯವಿದೆ ಎಂದರು. ಈ ವೇಳೆ ಹಿರಿಯ ನಾಗರಿಕರಿಗೆ ಓಷಧೀಯ ಸಸ್ಯಗಳನ್ನು ವಿತರಿಸಲಾಯಿತು.
ಪ್ರಾಚಾರ್ಯ ಬಸವರಾಜ ಘಂಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶರಣ ವಿಚಾರ ವಾಹಿನಿ ಅಧ್ಯಕ್ಷ ಐ.ಆರ್.ಮಠಪತಿ, ಡಾ.ಪಿ.ಬಿ.ಮೋರ್ಡಿ, ಡಾ.ಸಂಜೀವ ಧರ್ಮಟ್ಟಿ, ವಿಶ್ರಾಂತ ಪ್ರಾಚಾರ್ಯ ಬಿ.ಎ.ಜಂಬಗಿ, ಶ್ರೀಕಾಂತ ಪತ್ತಾರ, ಎಸ್.ಎಲ್.ಬಾಡಗಿ, ಶ್ರೀಪಾಲ ಉಗಾರೆ, ಪಿ.ಎಲ್.ಧರ್ಮಟ್ಟಿ, ಶ್ರೀಶೈಲ ಮಠಪತಿ, ಎಮ್.ಕೆ.ಪಾಟೀಲ ಹಾಗೂ ಅನೇಕ ಹಿರಿಯರು ಉಪಸ್ಥಿತರಿದ್ದರು.