ಗುವಿವಿ: ಕಲಾ ನಿಕಾಯದ ಡೀನರಾಗಿ ಪ್ರೊ. ಎಚ್‌.ಟಿ. ಪೋತೆ ನೇಮಕ

ಗುವಿವಿ: ಕಲಾ ನಿಕಾಯದ ಡೀನರಾಗಿ ಪ್ರೊ. ಎಚ್‌.ಟಿ. ಪೋತೆ ನೇಮಕ

 ಕಲಬುರಗಿ 03: ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಹಾಗೂ ಹಿರಿಯ ಪ್ರಾಧ್ಯಾಪಕ ಪ್ರೊ. ಎಚ್‌.ಟಿ. ಪೋತೆ ಅವರು ಕಲಾ ನಿಕಾಯದ ಡೀನರಾಗಿ ನೇಮಕಗೊಂಡಿದ್ದಾರೆ.  ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ 2000ರ ಪ್ರಕರಣ 21(1) ಅನ್ವಯ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಶಿಕಾಂತ್ ಎಸ್ ಉಡಕೇರಿ ಅವರು ಡಿ. 4, 2025 ರಿಂದ ಮೇ. 31, 2027 ರ ಅವಧಿಯವರೆಗೆ ಡೀನರನ್ನಾಗಿ ನಾಮ ನಿರ್ದೇಶನ ಮಾಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಕಿರು ಪರಿಚಯ: ಪ್ರೊ. ಎಚ್‌.ಟಿ. ಪೋತೆ ಅವರು ಈ ಮೊದಲು ಒಂದು ಅವಧಿಗೆ ಕಲಾ ನಿಕಾಯದ ಡೀನರಾಗಿ ಕಾರ್ಯ ನಿರ್ವಹಿಸಿದ್ದರು. ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಂಶೋಧನೆ ನಡೆಸಿದ ಸುಮಾರು 32 ಪಿಎಚ್‌.ಡಿ ವಿದ್ಯಾರ್ಥಿಗಳಿಗೆ ಮತ್ತು 30 ಎಂಫಿ.ಲ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿರುತ್ತಾರೆ. ಸುಮಾರು 125ಕ್ಕೂ ಹೆಚ್ಚು ಸ್ವತಂತ್ರ ಕೃತಿಗಳನ್ನು ಪ್ರಕಟಿಸಿದಲ್ಲದೆ, ದೇಶ ವಿದೇಶಿಗಳಿಗೆ ಭೇಟಿ ನೀಡಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಸಮ್ಮೇಳನ ಹಾಗೂ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿರುತ್ತಾರೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದ ವಿವಿಧ ಸಂಸ್ಥೆ ಮತ್ತು ವಿಶ್ವವಿದ್ಯಾಲಯಗಳಲ್ಲಿ ವಿಶೇಷ ಉಪನ್ಯಾಸಗಳನ್ನು ನೀಡಿರುತ್ತಾರೆ. ಸಾಹಿತ್ಯ ಲೋಕದ ಹಲವು ಪ್ರಶಸ್ತಿ ಮತ್ತು ಸಮ್ಮಾನಗಳಿಗೆ ಬಾಜನರಾಗಿರುವ ಪ್ರೊ. ಎಚ್‌.ಟಿ. ಪೋತೆ ಇವರು ಇಂಗ್ಲೆಂಡ್, ಆಸ್ಟ್ರೇಲಿಯಾ, ಥೈಲ್ಯಾಂಡ್ ಮತ್ತು ಐರ್‌ಲ್ಯಾಂಡ್ ದೇಶಗಳಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ ಹೆಮ್ಮೆಯು ಇವರದ್ದಾಗಿದೆ.    



ಸುದ್ದಿ ಓದಿ