ದುಶ್ಚಟ ತೊರೆದು ಉತ್ತಮ ಜೀವನ ನಡೆಸಿ: ವಿರೂಪಾಕ್ಷ ಶ್ರೀ
ಘಟಪ್ರಭಾ 25: ನಗರದ ವಾಲ್ಮೀಕಿ ಭವನದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜನಜಾಗೃತಿ ಸಮಿತಿಯ ನೇತೃತ್ವದಲ್ಲಿ ಸೆ.25ರಿಂದ ಆರಂಭವಾದ ಮಧ್ಯವರ್ಜನ ಶಿಬಿರದ ಉದ್ಘಾಟನಾ ಸಮಾರಂಭ ಶುಕ್ರವಾರ ನಡೆಯಿತು. ಸಾನಿಧ್ಯ ವಹಿಸಿದ್ದ ಘಟಪ್ರಭಾ ಹೊಸಮಠದ ಪೂಜ್ಯ ವಿರೂಪಾಕ್ಷ ಮಹಾಸ್ವಾಮಿಗಳು ಮಾತನಾಡಿ, ಸಾರ್ವಜನಿಕರು ಜೀವನದಲ್ಲಿ ಅಂಟಿಸಿಕೊಂಡಿರುವ ವಿವಿಧ ದುಶ್ಚಟ ಹಾಗೂ ವ್ಯಸನಗಳನ್ನು ತೊರೆದು, ಕುಟುಂಬದ ಸುಖ-ಸಮೃದ್ಧಿಗಾಗಿ ಉತ್ತಮ ಜೀವನ ನಡೆಸಬೇಕು. ಈ ನಿಟ್ಟಿನಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಯೋಜನ ಪಡೆದುಕೊಳ್ಳುವಂತೆ ಕರೆ ನೀಡಿದರು.
ಜೆ.ಜಿ. ಸಹಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಬಿ.ಕೆ.ಎಚ್. ಪಾಟೀಲ ಮಾತನಾಡಿ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಾರ್ವಜನಿಕರು ಹಾಗೂ ಮಹಿಳೆಯರ ಅಭಿವೃದ್ಧಿಗಾಗಿ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳ ಸದುಪಯೋಗ ಪಡೆಯುವಂತೆ ಮನವಿ ಮಾಡಿದರು. ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಸವರಾಜ ಬೆಳ್ಳಣ್ಣವರ ಅಧ್ಯಕ್ಷತೆ ವಹಿಸಿದ್ದರು. ಬೆಳಗಾವಿ ಜಿಲ್ಲಾ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಧಿಕಾರಿ ಲವಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ವತಿಯಿಂದ ನೂರಾರು ಮಧ್ಯವರ್ಜನ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಈ ಭಾಗದ ಜನರು ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸುರೇಶ್ ಪಾಟೀಲ, ಸೋಮಶೇಖರ ಮಗದುಮ, ಕೆ.ಆರ್.ಎಚ್. ಶಿಕ್ಷಣ ಸಂಸ್ಥೆ ಅಧ್ಯಕ್ಷ ರಾಮಣ್ಣ ಹುಕ್ಕೇರಿ, ಸುಧೀರ ಜೋಡಟ್ಟಿ, ಮಾಜಿ ಜಿ.ಪಂ. ಸದಸ್ಯೆ ವಂದನಾ ಕತ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೋಕಾಕ ತಾಲೂಕು ಅಧ್ಯಕ್ಷೆ ಭಾರತಿ ಮದಭಾವಿ, ಗಂಗಾಧರ ಬಡಕುಂದ್ರಿ, ಪುಟ್ಟು ಖಾನಾಪುರ, ಮಲ್ಲಿಕಾರ್ಜುನ ತುಕ್ಕಾನಟ್ಟಿ, ಶ್ರೀಕಾಂತ ಮಹಾಜನ, ಈರಣ್ಣ ಕಲಕುಟಗಿ, ಕಾಡಪ್ಪ ಕರೋಶಿ, ಶ್ರೀಕಾಂತ ಕುಲಕರ್ಣಿ, ಪತ್ರಕರ್ತ ಗಣೇಶ ಗಾಣಿಗ, ಸುಭಾಸ ಗಾಯಕವಾಡ, ಈಶ್ವರ ಚೌಗಲಾ, ಕರವೇ ರಾಜಾಧ್ಯಕ್ಷ ಕೆಂಪಣ್ಣ ಚೌಕಶಿ, ಡಾ. ವಿರೇಂದ್ರ ಹೊಸಮಠ, ಅಶೋಕ ನಾಯಿಕ, ಅರ್ಜುನ ಗಾಡಿವಡ್ಡರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಜನಜಾಗೃತಿ ಸಮಿತಿಯ ಮೋಟಯ್ಯ, ಜ್ಯೋತಿ ವಾಘ ಹಾಗೂ ಪದಾಧಿಕಾರಿಗಳು ಮತ್ತು ಶಿಬಿರಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.