ಮಂತ್ರಿ ಅಮಿತ್ ಶಾ ಕ್ಷಮೆಯಾಚನೆಗೆ ಗುವಿವಿ ಎಸ್‌ಸಿ, ಎಸ್‌ಟಿ ನೌಕರರ ಸಂಘ ಒತ್ತಾಯ
ಮಂತ್ರಿ ಅಮಿತ್ ಶಾ ಕ್ಷಮೆಯಾಚನೆಗೆ ಗುವಿವಿ ಎಸ್‌ಸಿ, ಎಸ್‌ಟಿ ನೌಕರರ ಸಂಘ ಒತ್ತಾಯ
ಕಲಬುರಗಿ 19: ಭಾರತ ಸರ್ಕಾರದ ಕೇಂದ್ರ ಸಚಿವ ಅಮಿತ್ ಶಾ ಅವರು ಸಂಸತ್ತಿನಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಕುರಿತು “ಇಂದು ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಎನ್ನುವುದು ವ್ಯಸನವಾಗಿದೆ” ಎಂಬ ಅಪ್ರಬುದ್ಧ ಹಾಗೂ ನಿಂದನ ಪೂರ್ವಕ ಅವಹೇಳನಕಾರಿ ಹೇಳಿಕೆಯನ್ನು ಗುಲಬರ್ಗಾ ವಿಶ್ವವಿದ್ಯಾಲಯದ ಎಸ್‌ಸಿ,ಎಸ್‌ಟಿ ನೌಕರರ ಸಂಘದ ಪದಾಧಿಕಾರಿಗಳು ತೀವ್ರವಾಗಿ ಖಂಡಿಸಿ ಗುಲಬರ್ಗಾ ವಿಶ್ವವಿದ್ಯಾಲಯದ ಕಾರ್ಯಸೌಧದ ಮುಂದೆ ಇಂದು ಪ್ರತಿಭಟನೆ ನಡೆಸಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಕಾರ್ಯಸೌಧದ ಎದುರು ಕೇಂದ್ರ ಗೃಹ ಮಂತ್ರಿ ಹೇಳಿಕೆ ವಿರುದ್ಧ ಘೋಷಣೆ ಕೂಗುವ ಮೂಲಕ ಗೃಹ ಮಂತ್ರಿಯಯವರು ದೇಶದ ಜನರ ಮುಂದೆ ಕ್ಷಮೆಯಾಚಿಸಿ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಗುಲಬರ್ಗಾ ವಿಶ್ವವಿದ್ಯಾಲಯದ ಎಸ್‌ಸಿ,ಎಸ್‌ಟಿ ನೌಕರರ ಸಂಘ ಪ್ರತಿಭಟನೆ ನಡೆಸಿದರು.
ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಚಂದ್ರಕಾಂತ ಯಾತನೂರು ಮಾತನಾಡಿ ಕೇಂದ್ರ ಗೃಹ ಮಂತ್ರಿಗಳು ತಮ್ಮ ಈ ಅಸಂವಿಧಾನಿಕ ಹೇಳಿಕೆಯನ್ನು ಹಿಂಪಡೆದು ದೇಶದ ಜನರ ಮುಂದೆ ಬೇಸರತ್ತಾಗಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು. ದೇಶದ ಪ್ರಜ್ಞಾವಂತರಾದ ನಮಗೆ ತುಂಬಲಾರದ ನೋವಾಗಿದೆ. ಭವ್ಯ ಭಾರತದ ನೊಂದಿರುವ ವಿವಿಧ ಸಮುದಾಯಗಳನ್ನು ಅವಮಾನಿಸಿದ್ದಾರೆ. ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನವನ್ನು ಸ್ಮರಿಸಿ ಅಧಿಕಾರ ಅನುಭವಿಸುತ್ತಿರುವ ಪ್ರಜ್ಞಾವಂತ ಸಚಿವರೊಬ್ಬರು ಈ ರೀತಿಯ ಹೇಳಿಕೆ ನೀಡಿರುವುದು ದುರಾದೃಷ್ಟಕರ ಎಂದು ಖಂಡಿಸಿದರು.
ಕನ್ನಡ ಅದ್ಯಯನ ಸಂಸ್ಥೆ ನಿರ್ದೇಶಕ ಹಾಗೂ ಸಾಹಿತಿ ಪ್ರೊ. ಎಚ್. ಟಿ. ಪೋತೆ ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ದೇಶ ಮಾತ್ರವಲ್ಲದೇ ಇಡೀ ವಿಶ್ವವೇ ಮೆಚ್ಚಿಕೊಂಡು ಅವರ ಆದರ್ಶಗಳನ್ನು ಪಾಲಿಸುತ್ತಿರುವಾಗ ಮನುವಾದ ಚಿಂತನೆಯ ಶ್ರೀ ಅಮಿತ್ ಶಾ ಸಂಸ್ಕಾರ ರಹಿತವಾಗಿ ಮಾತನಾಡಿರುವುದು ಭಾರತೀಯ ನಾಗರೀಕ ಸಮುದಾಯ ತಲೆತಗ್ಗಿಸುವಂತಾಗಿದೆ. ಡಾ. ಬಿ. ಆರ್. ಅಂಬೇಡ್ಕರ್ ಅವರು ಸಂವಿಧಾನ ರಚಿಸದಿದ್ದರೆ ಈ ದೇಶದ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ಮಹಿಳಾ ವರ್ಗದವರು ಇತರರಂತೆ ಸರಿಸಮನಾಗಿ ಬದುಕುವ ಹಕ್ಕಗಳನ್ನೆ ಕಳೆದುಕೊಳ್ಳಬೇಕಾಗಿತ್ತು. ಅಷ್ಟೇ ಏಕೆ ಜೈನ ಧರ್ಮಿಯರಾದ ಅಮಿತ್ ಶಾ ಅವರಿಗೆ ಅಲ್ಪಸಂಖ್ಯಾತ ಧರ್ಮಿಯನೆಂದು ಮಾನ್ಯತೆಯೇ ಸಿಗುತ್ತಿರಲಿಲ್ಲ. ಡಾ. ಬಿ. ಆರ್. ಅಂಬೇಡ್ಕರರು ಶೋಷಿತರಿಗೆ ಹಾಗೂ ಶ್ರಮಿಕ ವರ್ಗಕ್ಕೆ ವ್ಯಸನವಲ್ಲ. ಅವರನ್ನು ನಾವು ಸದಾ ಸ್ಮರಿಸುತ್ತೇವೆ. ಅವರು ನೊಂದವರ, ಶೋಷಿತರ, ಮಹಿಳೆಯರ ಹಾಗೂ ಹಿಂದುಳಿದವರ ಬದುಕಾಗಿದ್ದಾರೆ ಎಂದು ಹೇಳಿಕೆ ನೀಡುವ ಮೂಲಕ ಕರ್ನಾಟಕ ರಾಜ್ಯದ ರಾಜ್ಯಪಾಲರು ನಮ್ಮ ಸಂಘದ ಮನವಿ ಪತ್ರವನ್ನು ರಾಷ್ಟ್ರಪತಿಗಳಿಗೆ ರವಾನಿಸಬೇಕೆಂದು ಗುಲಬರ್ಗಾ ವಿಶ್ವವಿದ್ಯಾಲಯದ ಎಸ್‌ಸಿ, ಎಸ್‌ಟಿ ನೌಕರರ ಸಂಘವು ಮನವಿ ಪತ್ರವನ್ನು ಸಲ್ಲಿಸಿತು.
ಗುಲಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಅತಿಥಿ ಉಪನ್ಯಾಸಕರ ಸಂಘ, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿ ಸಂಘಗಳ ಜೊತೆಗೆ ವಿದ್ಯಾರ್ಥಿಗಳು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಹಿಡಿದು ಗ್ರಂಥಾಲಯದಿಂದ ವಿಶ್ವವಿದ್ಯಾಲಯದ ಕಾರ್ಯಸೌಧದವರೆಗೆ ಮೆರವಣಿಗೆ ನಡೆಸುವ ಮೂಲಕ ಕೇಂದ್ರ ಮಂತ್ರಿ ಶ್ರೀ. ಅಮಿತ್ ಶಾ ಅವರು ಕ್ಷಮೆಯಾಚಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಪ್ರೊ. ಜಿ.ಎಂ. ವಿದ್ಯಾಸಾಗರ್, ಸಮಾಜ ವಿಜ್ಞಾನ ನಿಕಾಯದ ಡೀನ್ ಪ್ರೊ. ಶ್ರೀರಾಮುಲು, ಪ್ರೊ. ದಶರಥ ನಾಯಕ, ಪ್ರೊ. ಎಸ್.ಎನ್. ಗಾಯಕವಾಡ, ಪ್ರೊ. ಆನಂದ ನಾಯಕ್, ಪ್ರೊ. ಆನಂದ ಸಾವದಾನೆ, ಎಸ್‌ಸಿ/ಎಸ್‌ಟಿ ನೌಕರರ ಸಂಘದ ಕಾರ್ಯದರ್ಶಿ ಬಸವರಾಜ ಕಪೂರ, ಬೋಧಕೇತರ ಸಿಬ್ಬಂದಿ ಶ್ರೀ. ಪ್ರಕಾಶ್ ಹದನೂರು, ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಅತಿಥಿ ಉಪನ್ಯಾಸಕರ ಸಂಘ, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಸಂಘಗಳು ಬೃಹತ್ ಪ್ರತಿಭಟನೆ ನಡೆಸಿದರು.