ರಾಣೆಬೆನ್ನೂರ

ಅಭ್ಯಾಸದ ಜೊತೆಗೆ ಸಮಾಜಸೇವೆಯಲ್ಲೂ ಮುನ್ನಡೆಯಿರಿ: ಅರುಣಕುಮಾರ ಪೂಜಾರ್ ಕರೆ

ಅಭ್ಯಾಸದ ಜೊತೆಗೆ ಸಮಾಜಸೇವೆಯಲ್ಲೂ ಮುನ್ನಡೆಯಿರಿ: ಅರುಣಕುಮಾರ ಪೂಜಾರ್ ಕರೆ

ರಾಣೆಬೆನ್ನೂರು ಆ. 2: ಸಮಾಜದ ಮಕ್ಕಳು ಉತ್ತಮ ಶಿಕ್ಷಣ ಪಡೆದು ಪ್ರತಿಭಾವಂತರಾಗಿ ಬೆಳೆಯುವುದರ ಜೊತೆಗೆ ಸಮಾಜಸೇವೆಯಲ್ಲೂ ತೊಡಗಿಸಿಕೊಂಡು ಸಮಾಜಕ್ಕೆ ಗೌರವ ತರುವಂತೆ ಮಾಜಿ ಶಾಸಕ ಅರುಣಕುಮಾರ ಪೂಜಾರ್ ಕರೆ ನೀಡಿದರು.  ನಗರದ ಮೇಡ್ಲೇರಿ ರಸ್ತೆಯ ಶ್ರೀ ಆದಿಶಕ್ತಿ ದೇವಸ್ಥಾನದ ಸಭಾಂಗಣದಲ್ಲಿ ಹಿಂದು ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ 2025ಹಿ26ಸಾಲಿನ ಎಸ್‌ಎಸ್‌ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.  

ರಾಜ್ಯದಲ್ಲಿ 70 ಲಕ್ಷಕ್ಕೂ ಹೆಚ್ಚು ಪಂಚಮಸಾಲಿ ಸಮಾಜದ ಜನರಿದ್ದು, ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿಯೂ ಅನೇಕ ಸಾಧಕರು ಇದ್ದಾರೆ. ಇಂತಹ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಹೇಳಿದರು.  ಈ ಸಂದರ್ಭದಲ್ಲಿ ಹರಿಹರ ಪಂಚಮಸಾಲಿ ಪೀಠದ ಜಗದ್ಗುರು  ವಚನಾನಂದ ಸ್ವಾಮೀಜಿ ಅವರು ಅರುಣಕುಮಾರ ಪೂಜಾರ್ ಅವರನ್ನು ಸನ್ಮಾನಿಸಿದರು.  

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಚ್‌.ಎಸ್‌. ಶಿವಶಂಕರ, ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಗುತ್ತೂರು, ಎಸ್‌.ಎಸ್‌. ರಾಮಲಿಂಗಣ್ಣ, ರಾಜಣ್ಣ ಮೊಟಗಿ, ಶಂಕರಗೌಡ ಪಾಟೀಲ, ಬಿ.ಸಿ. ಹನುಮಗೌಡ್ರ, ಬಸವರಾಜ ಹುಲ್ಲತ್ತಿ, ಸಿದ್ದಣ್ಣ ಚಿಕ್ಕಬಿದರಿ, ಭಾರತೀ ಜಂಬಿಗಿ, ಮಾಲತೇಶ್ ಚಳಗೇರಿ, ಪ್ರಮೀಳಾ ಜಂಬಿಗಿ, ಅಜಯ್ ಜಂಬಿಗಿ ಸೇರಿದಂತೆ ಸಮಾಜದ ಮುಖಂಡರು, ಮಹಿಳೆಯರು, ನಾಗರಿಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.  ಇದೇ ಸಂದರ್ಭದಲ್ಲಿ ಶಿಕ್ಷಣ, ಸಮಾಜಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 50ಕ್ಕೂ ಹೆಚ್ಚು ಗಣ್ಯರನ್ನು ಗೌರವಿಸಲಾಯಿತು. ಎಸ್‌ಎಸ್‌ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. 


ಸುದ್ದಿ ಓದಿ