ತಾಲೂಕು ಹೋರಾಟಕ್ಕೆ ಕುಳಿತ ಆಮರಣ ಉಪವಾಸ ಅಂತ್ಯ : ತಾಲೂಕು ಹೋರಾಟ ಮುಂದುವರಿಕೆ
ಮಹಾಲಿಂಗಪುರ 04 : ತಾಲೂಕು ಬೇಡಿಕೆಗಾಗಿ ಪಟ್ಟಣದಲ್ಲಿ ನಡೆದಿರುವ ತಾಲೂಕು ಹೋರಾಟವು ಡಿ.4ರ ಸೋಮವಾರ ಯಶಸ್ವಿ 600 ದಿನಗಳನ್ನು ಪೂರೈಸಿತು. ಸೋಮವಾರ ಸಂಜೆ ತಾಲೂಕು ಹೋರಾಟ ವೇದಿಕೆಗೆ ಆಗಮಿಸಿದ ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣುರ ಅವರು ಆಮರಣ ಉಪವಾಸ ಕೈಗೊಂಡವರಲ್ಲಿ ಹಲವರು ವಯಸ್ಸಾದವರು ಇರುವ ಕಾರಣ, ಆಮರಣ ಉಪವಾಸ ಬಿಡಿ, ಹೋರಾಟ ಮುಂದುವರೆಸಿ. ಬೆಳಗಾವಿ ಅಧಿವೇಶನದ ವೇಳೆ ಒಂದು ದಿನ ತಾಲೂಕು ಹೋರಾಟಗಾರರ ನಿಯೋಗವನ್ನು ಕರೆದುಕೊಂಡು ಸಿಎಂ ಸಿದ್ದರಾಮಯ್ಯನವರಿಗೆ ಬೇಡಿಕೆ ಸಲ್ಲಿಸುತ್ತೇನೆ. ನನ್ನ ಮೇಲೆ ವಿಶ್ವಾಸವಿಡಿ, ನಾನು ಶಾಸಕನಲ್ಲ, ಆದರೆ ನಮ್ಮದೇ ಸರ್ಕಾರ ಇರುವ ಕಾರಣ ಸಂಬಂಧಿಸಿದ ಸಚಿವರು, ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ, ಎರಡು ತಿಂಗಳೊಳಗೆ ಮಹಾಲಿಂಗಪುರ ಹೊಬಳಿ ಘೋಷಿಸುತ್ತೇನೆ. ನಂತರದಲ್ಲಿ ನಿಮ್ಮ ಜೊತೆಗೆ ಹೋರಾಟದಲ್ಲಿ ಇದ್ದು ಸಕರ್ಾರದ ಮೇಲೆ ಒತ್ತಡ ತಂದು ಮಹಾಲಿಂಗಪುರ ತಾಲೂಕು ರಚಿಸುವ ಜವಾಬ್ದಾರಿ ನನ್ನದು ಎನ್ನುವ ಭರವಸೆ ನೀಡಿದರು.
ಸಂಧಾನ ಸಭೆಗೆ ಆಗಮಿಸಿದ್ದ ಜಮಖಂಡಿ ವಿಭಾಗ ಅಧಿಕಾರಿ ಸಂತೋಷ ಕಾಮಗೌಡ ಮಾತನಾಡಿ, ತಾಲೂಕು ಹೋರಾಟವು 600 ದಿನಗಳನ್ನು ಪೂರೈಸಿದೆ. ಆಮರಣ ಉಪವಾಸಕ್ಕೆ ಕುಳಿತವರ ಆರೋಗ್ಯ ಸ್ಥಿತಿಯು ಹದಗೆಡುತ್ತಿರುವ ಕಾರಣ ಹಾಗೂ ಪ್ರತಿಯೊಂದು ಜೀವ ಅಮೂಲ್ಯವಾದ್ದರಿಂದ ಆಮರಣ ಉಪವಾಸ ಕೈಬಿಡಿ, ಮಹಾಲಿಂಗಪುರ ಹೊಬಳಿ ರಚನೆಯು ಕಾರ್ಯ ಸರ್ಕಾರ ಮಟ್ಟದಲ್ಲಿ ಎಲ್ಲಿಗೆ ನಿಂತಿದೆ ಎಂಬುದನ್ನು ಪರಿಶೀಲಿಸಿ, ತ್ವರಿತ ಹೋಬಳಿ ರಚನೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದರು. ನಿಮ್ಮ ನಿರಂತರ ತಾಲೂಕು ಹೋರಾಟಕ್ಕೆ ನಮ್ಮ ಆಡಳಿತದಿಂದ ಯಾವುದೆ ತೊಂದರೆ ಇರುವದಿಲ್ಲ ಎಂದರು.
ತಾಲೂಕು ಹೋರಾಟ ವೇದಿಕೆ ಅಧ್ಯಕ್ಷ ಸಂಗಪ್ಪ ಹಲ್ಲಿ ಮಾತನಾಡಿ, ಬೆಳಗಾವಿ ಅಧಿವೇಶನದೊಳಗೆ ನಿಯೋಗದೊಂದಿಗೆ ಸಿಎಂ ಭೇಟಿ, ಎರಡು ತಿಂಗಳೊಳಗಾಗಿ ಮುಧೋಳ ತಾಲೂಕಿನಲ್ಲಿ ಮಹಾಲಿಂಗಪುರ ಹೊಬಳಿ ರಚನೆ, ಲೋಕಸಭೆ ಚುನಾವಣೆಯೊಳಗೆ ತಾಲೂಕು ರಚನೆ ಮಾಡಿಸಿಬೇಕು, ತಪ್ಪಿದರೆ ನಿಯೋಜಿತ ಮಹಾಲಿಂಗಪುರ ತಾಲೂಕಿನ ಎಲ್ಲಾ ಗ್ರಾಮ, ಪಟ್ಟಣಗಳಲ್ಲಿ ಚುನಾವಣೆ ಬಹಿಸ್ಕಾರ ಮಾಡುವದಾಗಿ ತಿಳಿಸಿ, ಸಿಎಂ ಭೇಟಿ, ಹೋಬಳಿ ಮತ್ತು ತಾಲೂಕು ರಚನೆ ಜವಾಬ್ದಾರಿಯನ್ನು ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ವಹಿಸಿಕೊಂಡಿದ್ದರಿಂದ ಹಾಗೂ ಅಧಿಕಾರಿಗಳು ನೀಡಿದ ಹೋಬಳಿ ರಚನೆಯ ಭರವಸೆಯೊಂದಿಗೆ ಆಮರಣ ಉಪವಾಸ ಕೈಬಿಟ್ಟು, ಎಂದಿನಂತೆ ನಮ್ಮ ತಾಲೂಕು ಹೋರಾಟ ನಿರಂತರವಾಗಿರುತ್ತದೆ ಎಂದರು.
ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ, ಜಮಖಂಡಿ ಎಸಿ ಸಂತೋಷ ಕಾಮಗೌಡ, ರಬಕವಿ-ಬನಹಟ್ಟಿ ತಹಶೀಲ್ದಾರ ಗಿರೀಶ ಸಾದ್ವಿ, ಜಮಖಂಡಿ ಡಿವೈಎಸ್ಪಿ ಶಾಂತವೀರ ಅವರು ಸಂಗಪ್ಪ ಹಲ್ಲಿ ನೇತೃತ್ವದಲ್ಲಿ ಆಮರಣ ಉಪವಾಸ ಸತ್ಯಾಗ್ರಹ ಕೈಗೊಂಡ 15 ಜನರಿಗೆ ಎಳೆನೀರು ಕುಡಿಸುವ ಮೂಲಕ ಆಮರಣ ಉಪವಾಸ ಹೋರಾಟವನ್ನು ಅಂತ್ಯಗೊಳಿಸಿದರು.ತಾಲೂಕು ಹೋರಾಟ ಸಮಿತಿಯ ಮಹಾಲಿಂಗಪ್ಪ ಕೋಳಿಗುಡ್ಡ, ಮಹಾದೇವ ಮಾರಾಪೂರ, ನಿಂಗಪ್ಪ ಬಾಳಿಕಾಯಿ, ಪರಪ್ಪ ಬ್ಯಾಕೂಡ, ದುಂಡಪ್ಪ ಜಾಧವ, ಭೀಮಸಿ ಸಸಾಲಟ್ಟಿ, ಸುಭಾಸ ಶಿರಬೂರ, ಸಿದ್ದು ಶಿರೋಳ, ರಫೀಕ ಮಾಲದಾರ, ಹನಮಂತ ಭಜಂತ್ರಿ, ಪುರಸಭೆ ಸದಸ್ಯ ರವಿ ಜವಳಗಿ, ಸಕರ್ಾರಿ ಆಸ್ಪತ್ರೆಯ ಡಾ. ಸಿ.ಎಂ.ವಜ್ಜರಮಟ್ಟಿ ಸೇರಿದಂತೆ ಹಲವರು ಇದ್ದರು.ಪ್ರಾಸ್ತಾವಿಕವಾಗಿ ಪತ್ರಕರ್ತ ಜಯರಾಮ್ ಶೆಟ್ಟಿ ಸವಿವರ ನೀಡಿದರು, ಹೋರಾಟ ಸಮಿತಿಯ ಕಾರ್ಯದಶರ್ಿ ಚಂದ್ರಶೇಖರ ಮೋರೆ ಸ್ವಾಗತಿಸಿದರು.