ಮಕ್ಕಳಿಗೆ ಮೇಟಿ ವಿದ್ಯೆಯ ಪ್ರಾತ್ಯಕ್ಷಿಕೆ
ಶಾಲೆ ಆವರಣದಲ್ಲಿ ರೈತರ ಬಂಡಿ ಗಾಲಿ ಹಳಿ ಕಟ್ಟುವ ವಿಧಾನ ಪ್ರದರ್ಶನ
ಮಹಾಲಿಂಗಪುರ: ಮರೆಯಾಗುತ್ತಿರುವ ಗ್ರಾಮೀಣ ರೈತರ ವಾಹನಗಳನ್ನು ಮತ್ತು ಅವುಗಳ ಗಾಲಿಗಳನ್ನು ಸಿದ್ದಗೊಳಿಸುತ್ತಿದ್ದ ರೀತಿಯನ್ನು ಮಕ್ಕಳಿಗೆ ತೋರಿಸುವ ಉದ್ದೇಶದಿಂದ ಪ್ರಾಥಮಿಕ ಶಾಲೆಯೊಂದರಲ್ಲಿ ಮೇಟಿ ವಿದ್ಯೆಯ ಪ್ರಾತ್ಯಕ್ಷಿಕೆ ಏರ್ಪಡಿಸಿದ್ದು ವಿಶೇಷವಾಗಿತ್ತು.
ಸಮೀಪದ ಘಟಪ್ರಭ ತೀರದ ಅವರಾದಿ ಗ್ರಾಮದ ಮಹಾಲಕ್ಷ್ಮೀ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲೇ ಕಮ್ಮಾರನನ್ನು ಕರೆಸಿ ಚಿಕ್ಕಡಿಯ ಗಾಲಿಗೆ ಹಳಿ ಕಟ್ಟಿಸುವ ಮೂಲಕ ಹೊಸ ತಲೆಮಾರಿನ ಮೇಟಿ ವಿದ್ಯೆಯ ತಿಳಿವು ಮೂಡಿಸಿದರು.
ಪಾಠ ಪ್ರ್ಯಾಕ್ಟಿಕಲ್ ಆಗಿ ಮನನವಾಯಿತು:
ಒಂದು ಗಾಲಿಗೆ 12 ಕಟ್ಟಿಗೆ ತುಂಡುಗಳು ಹೇಗೆ ಆಧಾರವಾಗಿ ಹಿಡಿತ ಸಾಧಿಸುತ್ತವೆ. ಭಾರ ಹೊರುವಲ್ಲಿ ಹೇಗೆ ಸಮತೋಲನ ಕಾಯ್ದುಕೊಳ್ಳುತ್ತವೆ. ಕಟ್ಟಿಗೆ ತುಂಡುಗಳು ಒಂದಕ್ಕೊಂದು ಅನುಗುಣವಾಗಿ ಹೊಂದಿಕೊಳ್ಳಲು ಸುತ್ತಲೂ ಕಬ್ಬಿಣದ ಪಟ್ಟಿ (ಹಳಿ) ಯನ್ನು ಹೇಗೆ ಅಳವಡಿಸಲಾಗುತ್ತದೆ ಎಂಬುದನ್ನು ವಿದ್ಯಾರ್ಥಿಗಳು ಅರಿತರು. ವಿದ್ಯಾರ್ಥಿಗಳಿಗೆ ಶಾಖದ ಬಗ್ಗೆ ಪಾಠ ಇರುವುದರಿಂದ ಶಾಖ ಕೊಟ್ಟಾಗ ಕಬ್ಬಿಣ ಹೇಗೆ ಹಿಗ್ಗುತ್ತದೆ ಮತ್ತು ತಂಪು ಕೊಟ್ಟಾಗ ಹೇಗೆ ಕುಗ್ಗುತ್ತದೆ ಎಂಬುದನ್ನು ಕೂಡ ಈ ಹಳಿ ಕಟ್ಟುವ ವಿಧಾನದಿಂದ ತಿಳಿಯಲು ಸಾಧ್ಯವಾಯಿತು. ಮುಖ್ಯಶಿಕ್ಷಕ ಎ.ಪಿ.ಬಿರಾದಾರಪಾಟೀಲ, ಮಹಾಲಿಂಗ ಪಾಟೀಲ ಸೇರಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.
ಬಂಡಿಗೆ ಹಳಿ ಕಟ್ಟುವ ವಿಧಾನ:
ನಮ್ಮ ಪೂರ್ವಜರು ತೋಟದಲ್ಲಿ ಹೇರಳವಾಗಿ ಸಿಗುತ್ತಿದ್ದ ಮರದ ಕಟ್ಟಿಗೆಗಳಿಂದ ಬಡಿಗನ ಸಹಾಯದಿಂದ ಕಟ್ಟಿಗೆ ತುಂಡುಗಳನ್ನು ಆಪ್ತವಾಗಿ ಜೋಡಿಸಿ ಗಾಲಿ ಸಿದ್ದಪಡಿಸುತ್ತಿದ್ದರು. ಅದಕ್ಕೆ ಬಿಗಿ ಹಿಡಿತ (ಗ್ರಿಪ್) ಸಿಗಬೇಕೆಂದು ಗಾಲಿಯ ಹೊರಮೇಲ್ಮೈ ಸುತ್ತಲೂ ಕಬ್ಬಿಣ ಪಟ್ಟಿಯನ್ನು ಬಿಗಿಯಾಗಿ ಜೋಡಿಸುತ್ತಿದ್ದರು. ಜೋಡಿಸುವ ತನಕ ಸಡಿಲವಾಗಲೆಂದು ಕಬ್ಬಿಣವನ್ನು ಕುರುಳು ಕಟ್ಟಿಗೆಯ ಬೆಂಕಿಯಲ್ಲಿ ಸುಡುತ್ತಿದ್ದರು. ಶಾಖಕ್ಕೆ ಅದು ಹಿಗ್ಗಿದಾಗ ಗಾಲಿಗೆ ಜೋಡಿಸುತ್ತಿದ್ದರು. ನಂತರ ಅದಕ್ಕೆ ನೀಎಉಣಿಸಿ ತಂಪುಗೊಳಿಸಿದಾಗ ಕಬ್ಬಿಣ ಕುಗ್ಗಿ ಗಾಲಿಯ ಅಳತೆಗೆ ಬಿಗಿಯಾಗಿ ಹೊಂದಿಕೊಳ್ಳುತ್ತಿತ್ತು. ಈ ಕಲೆಯನ್ನೇ ಬಂಡಿಗೆ ಹಳಿ ಕಟ್ಟುವ ವಿಧಾನ ಎನ್ನುತ್ತಾರೆ.
*ಒಂದು ಕಾಲದಲ್ಲಿ ಗ್ರಾಮೀಣ ಭಾಗದ ರೈತರ ತೇರು ಎಂದೇ ಹೆಸರಾಗಿದ್ದ ಕಟ್ಟಿಗೆ ಗಾಲಿ, ಕಬ್ಬಿಣ ಹಳಿಯ ಚಕ್ಕಡಿ ಬಂಡಿ ಇತ್ತೀಚೆಗೆ ಟೈರ್ ಗಾಲಿಗಳ ಆಗಮನದಿಂದ ನೇಪತ್ಯಕ್ಕೆ ಸರಿದಿದೆ. ಚಲನೆ ನಿಧಾನವಾದರೂ ಎಂಥದ್ದೇ ಕೆಸರು, ಮಣ್ಣು ಮತ್ತು ಉಸುಕು ತುಂಬಿದ ದಾರಿಯಲ್ಲೂ ಸರಾಗವಾಗಿ ಕಿತ್ತೋಡುತ್ತಿದ್ದ ಚಕ್ಕಡಿ ಜಾಗದಲ್ಲಿ ವೇಗವಾಗಿ ಓಡುವ ಟೈರ್ ಗಾಲಿಯ ನೂತನ ಬಂಡಿಗಳು ಬಂದಿದ್ದರಿಂದ ಹಳೆಯ ಚಕ್ಕಡಿಗಳು ಪ್ರಾಚೀನ ಪಳೆಯುಳಿಕೆಯಂತೆ ಅಪರೂಪವಾಗುತ್ತಿವೆ. ಅಂಥ ಪದ್ದತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಕಾರ್ಯ ಶಾಲೆಯಲ್ಲಿ ಮಾಡಿದ್ದು ಶ್ಲಾಘನೀಯ.
-ಶಿವಲಿಂಗ ಸಿದ್ನಾಳ, ಉಪನ್ಯಾಸಕ, ಮಹಾಲಿಂಗಪುರ