ಕನ್ನಡಿಗರ ಹೆಮ್ಮೆಯ ಕನ್ನಡ ವಿಶ್ವವಿದ್ಯಾಲಯವನ್ನು ಉಳಿಸಲು ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯ

ಕನ್ನಡಿಗರ ಹೆಮ್ಮೆಯ ಕನ್ನಡ ವಿಶ್ವವಿದ್ಯಾಲಯವನ್ನು ಉಳಿಸಲು  ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯ

ಕನ್ನಡಿಗರ ಹೆಮ್ಮೆಯ ಕನ್ನಡ ವಿಶ್ವವಿದ್ಯಾಲಯವನ್ನು ಉಳಿಸಲು  ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯ 

ಹಂಪಿ 05: ಕನ್ನಡ ವಿಶ್ವವಿದ್ಯಾಲಯವು, ಕನ್ನಡನಾಡಿನ ಮತ್ತು ವಿಜಯನಗರ ಜಿಲ್ಲೆಯ ಕೀರ್ತಿಯ ಮುಕುಟವಾಗಿದೆ. ದೇಶದಲ್ಲೆ ಅಪರೂಪವಾದ ಸಂಶೋಧನಾ ವಿಶ್ವವಿದ್ಯಾಲಯ ಕನ್ನಡ ವಿಶ್ವವಿದ್ಯಾಲಯ. ಕನ್ನಡ, ಕನ್ನಡಿಗರ ಪ್ರಜ್ಞೆಯನ್ನು ವಿಶ್ವ ಪ್ರಜ್ಞೆಯಾಗಿಸುವತ್ತ ತನ್ನ ಸತ್ವ ಸತ್ವದೊಡನೆ ವಿಶ್ವಪ್ರಜ್ಞೆಯಾಗಿ ಆಡಳಿತ ನಡೆಸಬೇಕೆಂಬ ಮಹತ್ವದ ಗುರಿಗಾಗಿ ಕನ್ನಡ ವಿಶ್ವವಿದ್ಯಾಲಯ ಸ್ಥಾಪಿತವಾಯಿತು. ಏಳು ನೂರು ಎಕರೆಗಳಷ್ಟು ವಿಸ್ತಾರವಾದ ಹಸಿರು ಪರಿಸರದ ನಡುವೆ ಸ್ಥಾಪಿತವಾಗಿದೆ. ಇದಕ್ಕೆ ಹೊಂದಿಕೊಂಡೇ ವಿಶ್ವವಿಖ್ಯಾತ ಐತಿಹಾಸಿಕ ಸ್ಥಳ ಹಂಪಿ ಇದೆ. ಕಳೆದ 32 ವರ್ಷಗಳಿಂದ ತನ್ನ ಮಹತ್ತರ ಸಾಧನೆಗಾಗಿಯೇ ಹಂಪಿಯ ಕನ್ನಡ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸುತ್ತಿದೆ.  


ಕನ್ನಡನಾಡನ್ನು ಕನ್ನಡ ವಿಶ್ವವಿದ್ಯಾಲಯದಲ್ಲಿ ನೋಡು, ಕನ್ನಡ ವಿಶ್ವವಿದ್ಯಾಲಯವನ್ನು ನೋಡದೆ, ಕನ್ನಡ ನಾಡಿನ ಯಾತ್ರೆ ಪೂರ್ಣವಾಗದು ಎಂಬಂತೆ ರೂಪಗೊಳ್ಳುತ್ತಿರುವ ಮತ್ತು ರೂಪುಗೊಳ್ಳಬೇಕಾದ ಸಂಸ್ಥೆ ಕನ್ನಡ ವಿಶ್ವವಿದ್ಯಾಲಯ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ಸಮುದಾಯದ ಸಾವಿರಾರು ವಿದ್ಯಾರ್ಥಿಗಳು ಸಹ ಈಗಾಗಲೆ ಕನ್ನಡ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆಂಬುದು ಹೆಮ್ಮೆಯ ವಿಷಯವಾಗಿದೆ.  


ನಮ್ಮೆಲ್ಲರ ಈ ಕನ್ನಡ ನಾಡಿನ ಕನ್ನಡ ವಿಶ್ವವಿದ್ಯಾಲಯವನ್ನು ಕಬಳಿಸುವ, ಕತ್ತು ಹಿಚುಕುವ ಕೆಲಸ ಕನ್ನಡ ದ್ರೋಹಿ ರಾಜಕಾರಣಿಗಳಿಂದ, ಅಧಿಕಾರಿಗಳಿಂದ ಭೂಗಳ್ಳ ಮಾಫಿಯಾಗಳಿಂದ ಇತ್ತೀಚಿನ ವರ್ಷಗಳಿಂದ ನಡೆಯುತ್ತಿರುವುದು ತುಂಬಾ ಅತಂಕಕಾರಿ ಬೆಳವಣಿಗೆಯಾಗಿದೆ. ತಮ್ಮ ಸ್ವಾರ್ಥ ಸಾಧನೆಗಾಗಿ ಅಭಿವೃದ್ದಿಯ ಮುಖವಾಡ ಹೊತ್ತು ನೂರಾರು ಎಕರೆ ಕನ್ನಡ ವಿಶ್ವವಿದ್ಯಾಲಯದ ಸಂಪತ್ತನ್ನು  ಕಬಳಿಸುವ ಪ್ರಯತ್ನ ಕೆಲವು ವರ್ಷಗಳ ಹಿಂದೆ ನಡೆಯಿತು. ಇದರ ವಿರುದ್ದ ನಾಡಿನಾದ್ಯಂತ ಪ್ರತಿಭಟನೆ, ಪೋಲಿಸರಿಂದ ಲಾಠಿಚಾರ್ಜ್‌, ಬಂಧನ-ಗಳು ನಡೆದಾಗ ಇದರ ತೀರ್ವತೆಯನ್ನು ಅರ್ಥ ಮಾಡಿಕೊಂಡ ಅಂದಿನ ಸರ್ಕಾರ ಭೂಗಳ್ಳರಿಗೆ ಸಹಾಯ ಮಾಡುವುದನ್ನು ನಿಲ್ಲಿಸಿತು.  


ಆದರೆ ವಿಶ್ವವಿದ್ಯಾಲಯಕ್ಕೆ ಆರ್ಥಿಕ ಸಂಕಷ್ಟ ತರುವ ಮೂಲಕ ಕತ್ತು ಹಿಚುಕಿ, ಉಸಿರು ನಿಲ್ಲಿಸುವ ಜಾಣ ಪ್ರಯತ್ನ ಮುಂದುವರೆದಿದೆ. ಕನ್ನಡ ವಿಶ್ವವಿದ್ಯಾಲಯ ಇಂದು ಅನೇಕ ರೀತಿಯ ಆರ್ಥಿಕ ಸಮಸ್ಯೆಗಳನ್ನು ಎದುರಿಸುವಂತೆ ಸೃಷ್ಟಿ ಮಾಡಲಾಗಿದೆ. ತಾತ್ಕಾಲಿಕ ಬೋಧಕ ನೌಕರರಿಗೆ, ಬೋಧಕೇತರ ನೌಕರರಿಗೆ, ಭದ್ರತೆ ಮತ್ತು ಸುಚಿತ್ವದ ಹೊರಗುತ್ತಿಗೆ ಕಾರ್ಮಿಕರಿಗೆ ಕಳೆದ ಒಂದು ವರ್ಷದಿಂದ ವೇತನ ಪಾವತಿ ಮಾಡಿಲ್ಲ. ಕಮಲಾಪುರ ಪುರಸಭೆಗೆ ತೆರಿಗೆ ಕಟ್ಟದೆ, ಕುಡಿಯುವ ನೀರಿನ ಸಮರ​‍್ಕ ಸರಬರಾಜು ಇಲ್ಲದೆ, ವಿಶ್ವವಿದ್ಯಾಲಯದ ಮಾನ ಹರಾಜು ಹಾಕಿಸಿಕೊಂಡಿದೆ. ವಿಶ್ವವಿದ್ಯಾಲಯದ ವಿದ್ಯುತ್ ಬಿಲ್ ಕಟ್ಟದೆ ಕತ್ತಲಿನಲ್ಲಿರುವ ಹೀನ ಪರಿಸ್ಥಿತಿ ಸಹ ಇತ್ತೀಚಿಗೆ ಒದಗಿಬಂದಿತ್ತು. ಕಳೆದ ತಿಂಗಳು ಆಡಳಿತ ಮಂಡಳಿ ಕಳೆದ 20 ವರ್ಷಗಳಿಂದಲೂ ದಿನಗೂಲಿಗಳಾಗಿ, ಹೊರಗುತ್ತಿಗೆ ಕಾರ್ಮಿಕರಾಗಿ ದುಡಿಯುತ್ತಿದ್ದ 47 (ನಲವತ್ತೇಳು) ಕನ್ನಡಿಗರನ್ನು ಕೆಲಸದಿಂದ ಕಿತ್ತು ಹಾಕಲು ತೀರ್ಮಾನ ಮಾಡಿದೆ. ಸರ್ಕಾರದಿಂದ ಅನುದಾನ ಬರುತ್ತಿಲ್ಲವಾದ್ದರಿಂದ, ವೇತನ ನೀಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಎಲ್ಲಾ ತಾತ್ಕಾಲಿಕ, ದಿನಗೂಲಿ, ಹೊರಗುತ್ತಿಗೆ ಕಾರ್ಮಿಕರನ್ನು ಹೊರದಬ್ಬುವುದು ಅನಿವಾರ್ಯವಾಗಿದೆ ಎಂಬುದಾಗಿ ಆಡಳಿತ ಮಂಡಳಿ ಕಾರಣ ಹೇಳುತ್ತಿದೆ. ಇಂತಹ ಕೆಟ್ಟ ಪರಿಸ್ಥಿತಿ ಕನ್ನಡ ವಿಶ್ವವಿದ್ಯಾಲಯಕ್ಕೆ ಬರಬೇಕೆಂಬ ಉದ್ದೇಶದಿಂದಲೇ ಕನ್ನಡ ದ್ರೋಹಿ ರಾಜಕಾರಣಿಗಳಿಂದ ಅಧಿಕಾರಿಗಳಿಂದ, ಭೂಗಳ್ಳರಿಂದ ಸೃಷ್ಟಿಸಲ್ಪಟ್ಟ ಸಮಸ್ಯೆಯಾಗಿದೆ.  


ಇಂದು ಕನ್ನಡ ನಾಡು ಸ್ಥಾಪಿತವಾದ 69ನೇ ರಾಜ್ಯೋತ್ಸವ ಮತ್ತು ಕರ್ನಾಟಕ ರಾಜ್ಯ ಎಂಬ ಮರು ನಾಮಕರಣಗೊಂಡು 50ವರ್ಷ ತುಂಬಿದ ಸುವರ್ಣ ಮಹೋತ್ಸವ ಸಂದರ್ಭ ದಲ್ಲಾದರು ಕರ್ನಾಟಕ ರಾಜ್ಯ ಸರ್ಕಾರ ಕನ್ನಡ ವಿಶ್ವವಿದ್ಯಾಲಯವನ್ನು ಉಳಿಸುವುದಾಗಿ, ಸಂರಕ್ಷಿಸುವುದಾಗಿ ಪ್ರತಿಜ್ಞೆ ಮಾಡಬೇಕಾಗಿದೆ. ಕನ್ನಡ ನಾಡಿನ ಜನ, ಬಾಷೆ, ನೆಲ, ಜಲ, ಸಂಸ್ಕೃತಿಯನ್ನು ಯಾವುದೇ ಕಾರಣಕ್ಕೂ ಬಲಿಕೊಡುವುದಿಲ್ಲ ಎಂದು ಘೋಷಿಸಬೇಕಾಗಿದೆ. ಹಾಗೆಯೇ ಆರ್ಥಿಕ ಸಂಕಟದಿಂದ ನರಳುತ್ತಿರುವ ಕನ್ನಡ ವಿಶ್ವವಿದ್ಯಾಲಯಕ್ಕೆ ಕನಿಷ್ಟ ಐದು (5) ಕೋಟಿ ರೂಪಾಯಿಗಳ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಿ, ಕೆಲಸ ಕಳೆದುಕೊಳ್ಳುತ್ತಿರುವ ಕನ್ನಡ ವಿಶ್ವವಿದ್ಯಾಲಯದ ಸಿಬ್ಬಂದಿ ಮತ್ತು ಕಾರ್ಮಿಕರ ಪ್ರಾಣ ರಕ್ಷಿಸಬೇಕಾಗಿ ಮತ್ತು ಈ ಮೂಲಕ ನಿಮ್ಮ ಕನ್ನಡ ಆಧ್ಯತೆಯನ್ನು ಮೆರೆಯಬೇಕಾಗಿ ಮನವಿ. 


ಸುದ್ದಿ ಓದಿ