ಒಣ ಮೆಣಸಿನಕಾಯಿಗೆ ಬೆಂಬಲ ಬೆಲೆ ಘೋಷಿಸುವ ವಿಶ್ವಾಸ: ನಾಗಿರೆಡ್ಡಿ
ಒಣ ಮೆಣಸಿನಕಾಯಿಗೆ ಬೆಂಬಲ ಬೆಲೆ ಘೋಷಿಸುವ ವಿಶ್ವಾಸ: ನಾಗಿರೆಡ್ಡಿ
ಬೆಂಗಳೂರು, ಮಾ. 04: ಕರ್ನಾಟಕದಲ್ಲಿರುವ ಒಣ ಮೆಣಸಿನಕಾಯಿ ಬೆಳೆಗಾರರು ಮತ್ತು ವ್ಯಾಪಾರಿಗಳ ಸಂರಕ್ಷಣೆಗಾಗಿ ಒಣ ಮೆಣಸಿನಕಾಯಿಗೆ ಬೆಂಬಲ ಬೆಲೆ ಘೋಷಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ಕರ್ನಾಟಕ ಸರ್ಕಾರ ಪೂರಕವಾದ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ವಿಶ್ವಾಸವಿದೆ ಎಂದು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಯಶವಂತರಾಜ ನಾಗಿರೆಡ್ಡಿ ಅವರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ಒಣ ಮೆಣಸಿನಕಾಯಿಗೆ ಬೆಂಬಲ ಬೆಲೆ ಘೋಷಣೆ ಮಾಡಲು ಕೋರಿ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಬಳ್ಳಾರಿ ಮತ್ತು ರಾಯಚೂರು ಜಿಲ್ಲಾ ಕೋಲ್ಡ್ ಸ್ಟೋರೇಜ್ ಅಸೋಸಿಯೇಷನ್ ಮತ್ತು ಒಣ ಮೆಣಸಿನಕಾಯಿ ಬೆಳೆಗಾರರ ಸಂಘದ ಪ್ರತಿನಿಧಿಗಳು ಸಚಿವರಾದ ಸತೀಶ್ ಜಾರಕಿಹೊಳಿ, ಎನ್.ಎಸ್. ಬೋಸರಾಜ್, ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ್, ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ, ಸಂಸದರಾದ ಕುಮಾರನಾಯಕ್ ಮತ್ತು ಇ. ತುಕಾರಾಂ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ದೇಶಕರಾದ ಶಿವಾನಂದ ಕಾಪಸೆ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ರೈತರು ಒಣ ಮೆಣಸಿನಕಾಯಿಯನ್ನು ಯಥೇಚ್ಛವಾಗಿ ಬೆಳೆಯುತ್ತಿದ್ದು, ಬೆಲೆ ಕುಸಿತದಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಬೆಂಬಲ ಬೆಲೆಯಲ್ಲಿ ಮೆಣಸಿನಕಾಯಿಯನ್ನು ಖರೀದಿ ಮಾಡಿದಲ್ಲಿ ರೈತರು ಆರ್ಥಿಕ ನಷ್ಟದಿಂದ ಪಾರಾಗಲಿದ್ದಾರೆ ಎಂದು, ಮನವರಿಕೆ ಮಾಡಿಕೊಡುವಲ್ಲಿ ನಿಯೋಗವು ಯಶಸ್ವಿಯಾಗಿದೆ ಎಂದರು. ಕಾರಣ ಸಚಿವರು, ಬೆಂಬಲ ಬೆಲೆ ಘೋಷಿಸುವ ಕ್ಯಾಬಿನೆಟ್ ಉಪ ಸಮಿತಿಯ ಮೂಲಕ ಶೀಘ್ರದಲ್ಲೇ ವರದಿಯನ್ನು ಸಿದ್ಧಪಡಿಸಿ, ಆಂದ್ರ್ರದೇಶದಲ್ಲಿ ಘೋಷಣೆಯಾಗಿರುವ ಮಾದರಿಯಲ್ಲಿಯೇ ಕರ್ನಾಟಕದಲ್ಲಿಯೂ ಒಣ ಮೆಣಸಿನಕಾಯಿಗೆ ಬೆಂಬಲ ಬೆಲೆಯನ್ನು ಘೋಷಣೆ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುತ್ತದೆ. ಈ ಮೂಲಕ ಕರ್ನಾಟಕದ ಬಹುತೇಕ ಕೋಲ್ಡ್ ಸ್ಟೋರೇಜ್‌ಗಳಲ್ಲಿ ಕಳೆದ 2 ವರ್ಷಗಳಿಂದ ಸಂಗ್ರಹವಾಗಿರುವ ಒಣ ಮೆಣಸಿನ ಕಾಯಿ ಬೆಳೆಯ ಜೊತೆಯಲ್ಲಿ ಈ ವರ್ಷದ ಬೆಳೆಯೂ ಕೊಯ್ಲಿಗೆ ಬಂದಿರುವ ಕಾರಣ ರೈತರು ಆರ್ಥಿಕ ನಷ್ಟವನ್ನು ಅನುಭವಿಸುತ್ತಾರೆ. ಕಾರಣ ಕರ್ನಾಟಕ ಸರ್ಕಾರ ತಕ್ಷಣವೇ, ಒಣ ಮೆಣಸಿನಕಾಯಿ ಬೆಳೆಗಾರರು - ವ್ಯಾಪಾರಿಗಳು ಹಾಗೂ ಕೋಲ್ಡ್‌ಸ್ಟೋರೇಜ್‌ಗಳ ಮಾಲೀಕರ ನೆರವಿಗೆ ಬರುವ ವಿಶ್ವಾಸ ತಮಗಿದೆ ಎಂದರು.
ಬಳ್ಳಾರಿ ಜಲ್ಲಾ ಕೋಲ್ಡ್ ಸ್ಟೋರೇಜ್ ಅಸೋಸಿಯೇಷನ್ ಸಂಘದ ಅಧ್ಯಕ್ಷರಾದ ಬಿ. ಸತ್ಯಬಾಬು, ಕಾರ್ಯದರ್ಶಿಗಳಾದ ವಾಸು ಶ್ಯಾಮಸುಂದರ್, ಪದಾಧಿಕಾರಿಗಳಾದ ತಿಪ್ಪಾರೆಡ್ಡಿ, ಅಂಕಾರಾವ್, ಕೃಷ್ಣಮೂರ್ತಿ, ಶ್ರೀನಾಥ್‌ರೆಡ್ಡಿ, ಅರವಿಂದ ನಾಯ್ಡು, ಅನಿಲ್ ಮತ್ತು ರಾಯಚೂರು ಜಿಲ್ಲಾ ಕೋಲ್ಡ್ ಸ್ಟೋರೇಜ್ ಮಾಲೀಕರ ಸಂಘದ ಜಿಲ್ಲಾಧ್ಯಕ್ಷರಾದ ವೆಂಕಟರಾವ್, ಮುಖಂಡರಾದ ರವಿ ಪಾಟೀಲ್, ಪ್ರಕಾಶ್ ಹಾಗೂ ಇನ್ನಿತರರು ನಿಯೋಗದಲ್ಲಿದ್ದರು.