ಕ್ಲೇ ಮಾಡೆಲಿಂಗ್ ಸ್ಪರ್ಧೆ: ಕೆಎಲ್ಇ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ
ಮಹಾಲಿಂಗಪುರ: ಸ್ಥಳೀಯ ಕೆಎಲ್ಇ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಾದ ಮಾದೇಶ ಕಂಠಿ ಮತ್ತು ತಮಿಮ್ ಜಮಾದಾರ ಕ್ಲೇ ಮಾಡೆಲಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಕೆಎಲ್ಇ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರ್ಮೆವರ 75ನೇ ಹುಟ್ಟು ಹಬ್ಬದ ಅಮೃತ ಮಹೋತ್ಸವ ನಿಮಿತ್ತ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಹಮ್ಮಿಕೊಂಡಿದ್ದರು. ಈ ವಿದ್ಯಾರ್ಥಿಗಳು ಬೆಳಗಾವಿಯಲ್ಲಿ ಬುಧವಾರ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿ ರಚಿಸಿದ ಜಿಂಕೆಯ ಕಲಾಕೃತಿ ವಲಯಮಟ್ಟಕ್ಕೆ ಪ್ರಥಮ ಸ್ಥಾನ ಪಡೆದಿದೆ. ಇದಕ್ಕೂ ಮುನ್ನ ಇದೇ ವಿದ್ಯಾರ್ಥಿಗಳು ಇತ್ತೀಚೆಗೆ ಚಿಕ್ಕೋಡಿಯಲ್ಲಿ ನಡೆದ ವಿಭಾಗಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದರು. ವಿದ್ಯಾರ್ಥಿಗಳಿಗೆ ಚಿತ್ರಕಲಾ ಶಿಕ್ಷಕ ಶಿವಾನಂದ ನೀಲನ್ನವರ ಮಾರ್ಗದರ್ಶನ ಮಾಡಿದ್ದರು.