ಕಂಪ್ಲಿ

ಜನಮನ ಸೆಳೆದ ಸುಗಮ ಸಂಗೀತ ಕಾರ್ಯಕ್ರಮ ಹಿ ಜನಪದ ಪರಂಪರೆ ಉಳಿಸುವ ಅಗತ್ಯಕ್ಕೆ ಒತ್ತಾಯ

ಜನಮನ ಸೆಳೆದ ಸುಗಮ ಸಂಗೀತ ಕಾರ್ಯಕ್ರಮ ಹಿ ಜನಪದ ಪರಂಪರೆ ಉಳಿಸುವ ಅಗತ್ಯಕ್ಕೆ ಒತ್ತಾಯ

ಲೋಕದರ್ಶನ ವರದಿ     

ಕಂಪ್ಲಿ  03: ತಾಲೂಕಿನ ಜೆಮ್ಮಿಗನೂರು ಗ್ರಾಮದಲ್ಲಿ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಆವರಣದಲ್ಲಿ ನಡೆದ ಸುಗಮ ಸಂಗೀತ ಕಾರ್ಯಕ್ರಮವು ಜನಮನ ಸೆಳೆದಿತು. ಕಾರ್ಯಕ್ರಮವನ್ನು ರಂಗಭೂಮಿ ಕಲಾವಿದರ ಸಂಘದ ಕಾರ್ಯದರ್ಶಿ ಕುರುಬರ ಹೇಮೇಶ್ವರ ಅವರು ಉದ್ಘಾಟಿಸಿ, ಜನಸಂಗೀತವು ಸಂಸ್ಕೃತಿಯ ಆತ್ಮವಾಗಿದ್ದು, ಅದನ್ನು ಉಳಿಸುವುದು ಮತ್ತು ಮುಂದಿನ ಪೀಳಿಗೆಗೆ ಪಸರಿಸುವುದು ಅಗತ್ಯ ಎಂದು ಹೇಳಿದರು.  

ಅವರು ಮಾತನಾಡಿ, ಇಂದಿನ ತಂತ್ರಜ್ಞಾನ ಯುಗದಲ್ಲಿ ಜನಪದ ಕಲೆಗಳು ಕಡಿಮೆಯಾಗುತ್ತಿರುವುದು ಆತಂಕಕಾರಿ ಸಂಗತಿ ಎಂದು ಹೇಳಿ, ಗ್ರಾಮೀಣ ಭಾಗದಲ್ಲಿ ಕಲೆ, ಸಾಹಿತ್ಯ ಮತ್ತು ಸಂಗೀತ ಕಾರ್ಯಕ್ರಮಗಳನ್ನು ಹೆಚ್ಚಾಗಿ ಆಯೋಜಿಸಬೇಕೆಂದು ಒತ್ತಾಯಿಸಿದರು.  

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಡಾ. ಅಬ್ದುಲ್ ಕಲಾಂ ಎಸ್‌.ಪಿ ಚಾರಿಟೇಬಲ್ ಫೌಂಡೇಶನ್ನ ಕಾರ್ಯದರ್ಶಿ ಎಚ್‌. ಪೀರಾವಲಿ ಅವರು ಮಾತನಾಡಿ, ಯುವ ಪೀಳಿಗೆ ಜನಪದ ಕಲೆಯನ್ನು ಅರಿತುಕೊಳ್ಳುವುದು ಮತ್ತು ಅದನ್ನು ಉಳಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.  

ಸಂಗೀತ ಕಾರ್ಯಕ್ರಮದಲ್ಲಿ ಕಲಾವಿದರಾದ ಭೀಮೇಶ್, ರಮೇಶ್, ವಿಜಯ್ ಸೇರಿದಂತೆ ಹಲವು ಗಾಯಕರು ಸುಗಮ ಸಂಗೀತವನ್ನು ಪ್ರಸ್ತುತಪಡಿಸಿ ಪ್ರೇಕ್ಷಕರನ್ನು ಮನರಂಜಿಸಿದರು. ತಬಲಾ ವಾದಕರಾಗಿ ರಾಘವೇಂದ್ರ ಗಂಗಾವತಿ, ಕೀಬೋರ್ಡ್ನಲ್ಲಿ ರಮೇಶ್ ಸೇರಿದಂತೆ ತಂಡವು ಸಂಗೀತಕ್ಕೆ ಮೆರುಗು ನೀಡಿತು.  

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಬಿ. ಸಬೀನ್ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಸ್ಥಳೀಯರು ಭಾಗವಹಿಸಿದ್ದರು. ಕಾರ್ಯಕ್ರಮವು ಜನಪದ ಹಾಗೂ ಸುಗಮ ಸಂಗೀತದ ಮಹತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಿತು. 


ಸುದ್ದಿ ಓದಿ