ಸೇತುವೆಗೆ ಮುಳುಗಡೆ ಭೀತಿ : ಬಿಗಿ ಪೊಲೀಸ್ ಬಂದೋಬಸ್ತ್
ಸೇತುವೆಗೆ ಮುಳುಗಡೆ ಭೀತಿ : ಬಿಗಿ ಪೊಲೀಸ್ ಬಂದೋಬಸ್ತ್
ಕಂಪ್ಲಿ 22: ಕಂಪ್ಲಿ-ಕಂಪ್ಲಿಯ ತುಂಗಭದ್ರಾ ನದಿಯಲ್ಲಿ ಒಂದು ಲಕ್ಷ ಕ್ಯೂಸೆಕ್ ನೀರಿನ ಪ್ರಮಾಣ ಹೆಚ್ಚಾದ ಹಿನ್ನಲೆ ಮತ್ತೊಮ್ಮೆ ಪ್ರವಾಹ ಸೃಷ್ಟಿಸಿದ್ದು, ನದಿ ಪಾತ್ರದ ಜನರ ಆತಂಕಕ್ಕೆ ಎಡೆ ಮಾಡುವ ಜತೆಗೆ ಈ ವರ್ಷದಲ್ಲಿ ಸತತ ಐದನೇ ಬಾರಿ ನದಿ ಪ್ರವಾಹಕ್ಕೆ ಜನರು ಕಕ್ಕಾಬಿಕ್ಕಿಯಾಗಿದ್ದಾರೆ.
ಮೂರು ರಾಜ್ಯದ ಜೀವನಾಡಿ ತುಂಗಭದ್ರೆಯ ಒಡಲು ತುಂಬಿ, ಹೆಚ್ಚಿನ ನೀರನ್ನು ನದಿಗೆ ಹರಿ ಬಿಡಲಾಗಿದೆ. ಇದರಿಂದ ಕಂಪ್ಲಿ-ಕೋಟೆಯಲ್ಲಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆಗೆ ನೀರು ಬಡಿಯುತ್ತಿದ್ದು, ಇನ್ನೇನು ಮುಳುಗಡೆ ಹಂತಕ್ಕೆ ತಲುಪಿದ್ದು, ಸಂಚಾರಕ್ಕೆ ಕುತ್ತು ಬಂದಿದೆ.
ಮಲೆನಾಡು ಭಾಗದಲ್ಲಿ ಸುರಿದ ಭಾರೀ ಮಳೆಗೆ ತುಂಗ ಮತ್ತು ಭದ್ರ ಜಲಾಶಯಗಳು ದುಮ್ಮಿಕ್ಕಿ ಹರಿಯುವ ಜತೆಗೆ ಹೆಚ್ಚಿನ ನೀರನ್ನು ಹೊರಗಡೆ ಬಿಟ್ಟ ಹಾಗೂ ಅಧಿಕ ಪ್ರಮಾಣದ ನೀರು ತುಂಗಭದ್ರಾ ಜಲಾಶಯಕ್ಕೆ ಬರುತ್ತಿದ್ದು, ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿ, ಒಳ ಹರಿವಿನಲ್ಲಿ ಹೆಚ್ಚಳ ಕಂಡ ಹಿನ್ನಲೆ ನದಿಗೆ ನೀರು ಬಿಡಲಾಗಿದೆ. ಇದರಿಂದ ನದಿ ಪಾತ್ರದ ಜನರ ಆತಂಕಕ್ಕೆ ಕಾರಣವಾಗಿದೆ.
ಕಂಪ್ಲಿ ನದಿಯಲ್ಲಿ ನೀರಿನ ರಭಸದಿಂದಾಗಿ ಸೇತುವೆ ಮೇಲಿನ ಸಂಚಾರ ಕೆಲ ತಾಸು ಬಂದ್ ಮಾಡಿ, ಕಂಪ್ಲಿ-ಕೋಟೆ ಹಾಗೂ ಚಿಕ್ಕಜಂತಕಲ್ ಭಾಗದ ಕಡೆಯಲ್ಲಿ ಬ್ಯಾರಿಕೇಡ್ ಹಾಕಿ, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗುತ್ತಿದ್ದಂತೆ ಸಂಚಾರ ಸ್ಥಗಿತಗೊಳಿಸುತ್ತಿರುವುದನ್ನು ಅರಿತ ಪೋಷಕರು ಕಂಪ್ಲಿ ಕಡೆಯಿಂದ ನಮ್ಮ ದ್ವಿಚಕ್ರ ವಾಹನಗಳ ಮೂಲಕ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿರುವುದು ಕಂಡು ಬಂತು. ಗಂಗಾವತಿ ತಾಲೂಕು ವ್ಯಾಪ್ತಿಯ ಚಿಕ್ಕಜಂತಕಲ್ ಗ್ರಾಮದ ಸಾಕಷ್ಟು ವಿದ್ಯಾರ್ಥಿಗಳು ಕಂಪ್ಲಿಗೆ ವಿದ್ಯಾಭ್ಯಾಸಕ್ಕಾಗಿ ಬರುತ್ತಿದ್ದು, ಇಂದು ನದಿಗೆ ನೀರು ಬಂದ ಹಿನ್ನಲೆ ಆಯಾ ಶಾಲಾ ಆಡಳಿತ ಮಂಡಳಿಯವರು ಬೇಗನೇ ಶಾಲಾ ವಾಹನದ ಮೂಲಕ ಕೋಟೆ ಪ್ರದೇಶಕ್ಕೆ ಕಳುಹಿಸಿಕೊಟ್ಟು, ನಂತರ ಪೋಷಕರು ದ್ವಿಚಕ್ರವಾಹನದೊಂದಿಗೆ ಮಕ್ಕಳನ್ನು ಮನೆಗೆ ಕರೆದು ಹೋದರು. ಕೆಲವರು ಕಾಲ್ನಡಿಗೆ ಮೂಲಕ ಸೇತುವೆ ದಾಟಿದರು.
ಅ.002: ಕಂಪ್ಲಿ-ಕೋಟೆಯ ತುಂಗಭದ್ರಾ ನದಿ ಪ್ರವಾಹದಿಂದ ಸೇತುವೆ ಮಟ್ಟದಲ್ಲಿ ಹರಿಯುತ್ತಿರುವ ನೀರು.