ಬೆಳೆ ಪರಿಹಾರ ತಕ್ಷಣ ರೈತರ ಖಾತೆಗೆ ಜಮೆ ಮಾಡಲು ಬೆಲ್ದಾಳೆ ಒತ್ತಾಯ
ಬೀದರ್ 22: ಬೀದರ್ ದಕ್ಷಿಣ ಕ್ಷೇತ್ರ ಸೇರಿದಂತೆ ಬೀದರ್, ಬಸವಕಲ್ಯಾಣ, ಹುಲಸೂರು, ಹುಮನಾಬಾದ್ ತಾಲ್ಲೂಕಿನ ರೈತರಿಗೆ ತಕ್ಷಣ ಅತಿವೃಷ್ಟಿ ಬೆಳೆ ಹಾನಿ ಪರಿಹಾರ ಬಿಡುಗಡೆ ಮಾಡಬೇಕೆಂದು ಕ್ಷೇತ್ರದ ಶಾಸಕರಾದ ಬಿಜೆಪಿ ರಾಜ್ಯ ಕಾರ್ಯದರ್ಶಿ ಡಾ.ಶೈಲೇಂದ್ರ ಬೆಲ್ದಾಳೆ ಒತ್ತಾಯಿಸಿದ್ದಾರೆ. ಜಿಲ್ಲೆಯಲ್ಲಿ ಅತಿವೃಷ್ಟಿ ಬೆಳೆ ಹಾನಿ ಪರಿಹಾರ ಸಮರ್ಕವಾಗಿ ವಿತರಣೆ ಆಗುತ್ತಿಲ್ಲ. ಬೀದರ್, ಹುಮನಾಬಾದ್, ಬಸವಕಲ್ಯಾಣ, ಹುಲಸೂರು ತಾಲ್ಲೂಕಿನ ರೈತರ ಖಾತೆಗೆ ಹಣ ಜಮೆ ಆಗಿಲ್ಲ. ಈ ಬಗ್ಗೆ ಅನೇಕ ರೈತರು ನನಗೆ ಖುದ್ದು ಭೇಟಿಯಾಗಿ, ದೂರವಾಣಿ ಕರೆ ಮಾಡಿ ದೂರು ನೀಡಿದ್ದಾರೆ.
ಜಿಲ್ಲಾಡಳಿತ ತಕ್ಷಣ ಈ ಕುರಿತು ಗಮನಹರಿಸಿ ಸಂತ್ರಸ್ತ ರೈತರ ಖಾತೆಗೆ ಪರಿಹಾರ ಹಣ ಜಮೆ ಮಾಡಬೇಕೆಂದು ಶನಿವಾರ ಹೊರಡಿಸಿರುವ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ. ಬೀದರ್ ಜಿಲ್ಲೆಯ ಸುಮಾರು 1.80 ಲಕ್ಷ ರೈತರ ಖಾತೆಗೆ ಶೀಘ್ರವೇ ಮೊದಲ ಹಂತದ 140 ಕೋಟಿ ರೂ. ಬೆಳೆ ಹಾನಿ ಪರಿಹಾರ ಜಮೆಯಾಗಲಿದೆ. ಜಿಲ್ಲಾಡಳಿತ ಪರಿಹಾರ ವಿತರಣೆ ಪ್ರಕ್ರಿಯೆ ಆರಂಭಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಕಳೆದ ದಿ.29ರಂದು ಹೇಳಿದ್ದಾರೆ. ಆದರೆ ಈವರೆಗೆ ಅನೇಕ ರೈತರಿಗೆ ಪರಿಹಾರ ಬಂದಿಲ್ಲ. ಹೆಚ್ಚು ರೈತರು ಪರಿಹಾರಕ್ಕಾಗಿ ಕಾಯುತ್ತಿದ್ದಾರೆ. ಸಮಸ್ಯೆಯಲ್ಲಿರುವ ರೈತರಿಗೆ ಬೇಗ ನೆರವಾಗುವ ಕಾರ್ಯಕ್ಕೂ ಇಷ್ಟೊಂದು ವಿಳಂಬ, ನಿರ್ಲಕ್ಷ್ಯತೆ ವಹಿಸುತ್ತಿರುವುದು ಸರಿಯಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಸರ್ಕಾರ ಘೋಷಿಸಿದಂತೆ ಹೆಕ್ಟೇರ್ ಗೆ ಹೆಚ್ಚುವರಿ 8500 ರೂ. ಪರಿಹಾರ ಇನ್ನೂ ನೀಡುತ್ತಿಲ್ಲ.
ಈಗ ನೀಡುತ್ತಿರುವ ಪರಿಹಾರ ಕೇಂದ್ರ ಸರ್ಕಾರದ ಎನ್ ಡಿಆರ್ ಎಫ್ ನಿಧಿಯ ಪರಿಹಾರವಾಗಿದೆ. ರಾಜ್ಯ ಸರ್ಕಾರ ಏನೂ ಕೊಟ್ಟಿಲ್ಲ. ಬೆಳೆ ನಷ್ಟದಿಂದ ರೈತ ಸಮೂಹ ಸಾಕಷ್ಟು ಸಂಕಷ್ಟದಲ್ಲಿ ಕಾಲ ಕಳೆಯುತ್ತಿದೆ. ಇಂಥ ಸ್ಥಿತಿಯಲ್ಲೂ ಸರ್ಕಾರದ ಹೆಚ್ಚುವರಿ ಪರಿಹಾರ ಘೋಷಣೆಗಷ್ಟೇ ಸೀಮಿತಗೊಳಿಸಿರುವ ನೀತಿ ರೈತ ವಿರೋಧಿಯಾಗಿದೆ. ಪರಿಹಾರ ನೀಡಿಕೆಯಲ್ಲಿ ಆಗುತ್ತಿರುವ ವಿಳಂಬವನ್ನು ಗಮನಿಸಿದರೆ ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿ ಸರಿಯಿಲ್ಲ. ಗ್ಯಾರಂಟಿ ಅಬ್ಬರದಲ್ಲಿ ಖಜಾನೆ ಝಳಝಳವಾದಂತೆ ಕಾಣುತ್ತಿದೆ ಎಂದು ಶಾಸಕ ಡಾ. ಬೆಲ್ದಾಳೆ ಟೀಕಿಸಿದ್ದಾರೆ. ಕೊಟ್ಟ ಮಾತಿನಂತೆ ಸಚಿವರು ರೈತರಿಗೆ ಬರಬೇಕಾದ ಸುಮಾರು 280 ಕೋಟಿ ರೂ. ಬೆಳೆ ನಷ್ಟ ಪರಿಹಾರ ಕೂಡಲೇ ಬಿಡುಗಡೆ ಮಾಡಲು ಕ್ರಮ ಕೈಗೊಂಡು ನೊಂದ ರೈತರ ನೆರವಿಗೆ ಬರಬೇಕು. ಹೆಚ್ಚುವರಿ 8500 ರೂ. ಪರಿಹಾರ ಸಹ ತಕ್ಷಣ ರೈತರಿಗೆ ವಿತರಿಸಬೇಕು. ನಮ್ಮಲ್ಲಿ ಈಗ ಡಿಬಿಟಿ ವ್ಯವಸ್ಥೆ ಇರುವ ಕಾರಣ ಎಲ್ಲ ರೈತರ ಖಾತೆಗೆ ಏಕಕಾಲಕ್ಕೆ ಪರಿಹಾರ ಹಣ ಜಮೆ ಮಾಡಬೇಕು. ತಾಲ್ಲೂಕು ನಡುವೆ ತಾರತಮ್ಯ ಮಾಡಬಾರದು. ಜಿಲ್ಲಾಡಳಿತ ಸಹ ಈ ವಿಷಯ ಗಂಭೀರವಾಗಿ ಪರಿಗಣಿಸಬೇಕು. ಬೇಗ ಹಣ ಜಮಾ ಆಗದಿದ್ದರೆ ರೈತರೊಂದಿಗೆ ಸೇರಿ ಹೋರಾಟ ಮಾಡುವುದು ಅನಿವಾರ್ಯ ಎಂದು ಎಚ್ಚರಿಸಿದ್ದಾರೆ.