ಮಾನವ ಬದುಕಿನ ಮಹಾ ಬೆಳಕು ಬಸವಣ್ಣ: ಕೆ. ಕಾಂತರಾಜ
ಮಾನವ ಬದುಕಿನ ಮಹಾ ಬೆಳಕು ಬಸವಣ್ಣ: ಕೆ. ಕಾಂತರಾಜ
ಬಳ್ಳಾರಿ 28: ಬಸವನೆಂದರೆ ಕೇವಲ ಉತ್ಸವ ಮೂರ್ತಿಯಲ್ಲ. ಬದುಕಿಗೆ ಬೆಳಕು ನೀಡಿದ ದಾರ್ಶನಿಕ. ದಲಿತ ದಮನಿತರನ್ನು ಪಶುಗಳೆಂದು ಕಂಡ ಸಮಾಜದಲ್ಲಿ ದಮನಿತರು ಪಶುಗಳಲ್ಲ, ಪಶುಪತಿ ಸಮಾನರೆಂದು ಸಾಧಿಸಿ ತೋರಿಸಿದ ಸಂತನೆಂದು ನಿವೃತ್ತ ಶಿಕ್ಷಕ ಕಾಂತರಾಜ್ ನುಡಿದರು.
ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಮೋಕಾ ಗ್ರಾಮದ ಮಲ್ಲೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ 307ನೇ ಮಹಾಮನೆ ಲಿಂ.ಐ.ಬಸವರಾಜ ಲಲಿತಮ್ಮ ದತ್ತಿ ಕಾರ್ಯಕ್ರಮದಲ್ಲಿ ಬಸವ ಬೆಳಗು ವಿಷಯದ ಬಗ್ಗೆ ಉಪನ್ಯಾಸ ನೀಡುತ್ತಾ ಬಸವಣ್ಣ, ತಾನೊಂದೇ ಶ್ರೇಷ್ಠನೆಂದೆನಿಸದೇ, ಕುಲ ವರ್ಣ ವರ್ಗ ಭೇದವೆಣಿಸದೇ, ಗಂಡು ಹೆಣ್ಣೆಂಬ ತಾರತಮ್ಯ ವೆಣಿಸದೇ ಸಕಲ ಜೀವಾತ್ಮರಿಗೆ ಶ್ರೇಷ್ಠತೆಯನ್ನು ತಂದು ಕೊಟ್ಟ ಜಗದ ಬೆಳಕು, ಯುಗದ ಬೆಳಕೆಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷರಾದ ಡಾ. ಕೆ.ಹನುಮಂತಪ್ಪ ನವರು ಮಾತನಾಡುತ್ತಾ, ಜಗಕೆ ಬೆಳಕಾದ ಪ್ರತಿ ವ್ಯಕ್ತಿಯು ಸಮಾಜದ ಕೆಡುಕಿನ ಬೆಂಕಿಗೆ ತಾನು ಮೊದಲು ಆಹುತಿಯಾಗಿ ಇತರರ ಬಾಳಿಗೆ ಬೆಳಕಾಗಿದ್ದಾರೆ. ಅವರಲ್ಲಿ ಬುದ್ಧ ಬಸವರು ಪ್ರಾಚೀನರಾದರೆ, ಗಾಂಧಿ ಅಂಬೇಡ್ಕರರು ಆದುನಿಕರಾಗಿ ನಮ್ಮ ಬಾಳಿಗೆ ಬೆಳಕಾಗಿದ್ದಾರೆ. ಅವರ ಆದರ್ಶದ ದಾರಿಯಲ್ಲಿ ನಾವು ನಡೆಯಬೇಕು. ನಮ್ಮ ಮಕ್ಕಳಿಗೆ ಮಾದರಿಯಾಗಿ ಅವರನ್ನು ಮುನ್ನಡೆಸಿಕೊಂಡು ಹೋಗಬೇಕೆಂದರು.
ಶಾಲೆಯ ಮುಖ್ಯ ಗುರುಗಳಾದ ಎನ್.ಎಂ.ಪಂಡಿತಾರಾಧ್ಯರು ಅಧ್ಯಕ್ಷತೆ ವಹಿಸಿದ್ದರು. ಮೋಕಾದ ಸಾಹಿತಿ ಕಥೆಗಾರರಾದ ಕುಂ. ಭುವನೇಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ರಾಮಣ್ಣ, ನಂದಿ ಚಾನೆಲ್ನ ರಾಮಾಂಜನಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಏಳನೇ ತರಗತಿ ವಿದ್ಯಾರ್ಥಿನಿ ಪಿ.ಗಂಗೋತ್ರಿ ಪ್ರಾರ್ಥನೆ ಮಾಡಿದರು. ಶಿಕ್ಷಕಿ ಸರಸ್ವತಿ ಸ್ವಾಗತ ಕೋರಿದರು. ಪರಿಷತ್ತಿನ ಅಧ್ಯಕ್ಷ ಕೆ.ಬಿ.ಸಿದ್ಧಲಿಂಗಪ್ಪ ಪ್ರಾಸ್ತಾವಿಕ ನುಡಿಗಳೊಂದಿಗೆ ದತ್ತಿ ಪರಿಚಯ ಮಾಡಿ, ನಿರೂಪಣೆ ಮಾಡಿದರು. ವಿದ್ಯಾರ್ಥಿಗಳಿಗೆ ಪೆನ್ನುಗಳನ್ನು ವಿತರಿಸಿ, ಅತಿಥಿಗಳನ್ನು ಸನ್ಮಾನಿಸುವದರೊಂದಿಗೆ ಕಾರ್ಯಕ್ರಮ ಮಂಗಳವಾಯಿತು.