ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ರಚಿಸಿ ಅರ್ಹ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಣೆ
ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ರಚಿಸಿ ಅರ್ಹ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಣೆ
ಬೀದರ್ 10 : ಜಿಲ್ಲೆಯ ಎಲ್ಲ ಆರು ವಿಧಾನಸಭೆ ಕ್ಷೇತ್ರಗಳಲ್ಲಿ ಒಂದು ವಾರದೊಳಗೆ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ರಚಿಸಿ ಅರ್ಹ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಣೆ ಸೇರಿದಂತೆ ಅಗತ್ಯ ಪ್ರಕ್ರಿಯೆ ಆರಂಭಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಸೋಮವಾರ ವಿಧಾನಸಭೆ ಅಧಿವೇಶನದಲ್ಲಿ ಪ್ರಶ್ನೋತ್ತರ ವೇಳೆ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅವರು ಬೀದರ್ ದಕ್ಷಿಣ ಕ್ಷೇತ್ರ ಸೇರಿದಂತೆ ಜಿಲ್ಲೆಯಲ್ಲಿ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ರಚನೆ ಮಾಡದಿರುವ ಕುರಿತು ಪ್ರಸ್ತಾಪಿಸಿದರು. ಸಮಿತಿ ರಚನೆ ಮಾಡಿ, ಸಮಸ್ಯೆ ಇತ್ಯರ್ಥಪಡಿಸದ ಕಾರಣ ಬಗರ್ ಹುಕುಂ ಸಾಗುವಳಿದಾರ ಬಡಪಾಯಿಗಳು ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ಸಮಿತಿ ರಚಿಸುವಲ್ಲೂ ವಿಳಂಬ ಮಾಡುತ್ತಿದೆ ಎಂದು ಸದನದ ಗಮನ ಸೆಳೆದರು. ಈ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಯಿತು.ಶಾಸಕರ ಪ್ರಶ್ನೆಗೆ ಉತ್ತರಿಸಿದ ಸಚಿವರು ಕಾರಣಾಂತರಗಳಿಂದ ಬೀದರ್ ಜಿಲ್ಲೆಯಲ್ಲಿ ಈವರೆಗೂ ಬಗರ್ ಹುಕುಂ ಸಮಿತಿಗಳನ್ನು ರಚಿಸಿಲ್ಲ. ವಿಳಂಬವಾಗಿದೆ ಎಂದು ಶಾಸಕರು ಹೇಳಿದ್ದನ್ನು ಒಪ್ಪುವೆ. ವಿಳಂಬಕ್ಕೆ ಕಾರಣ ಏನು? ಏಕೆ ಎಂದು ಸಬೂಬು ಹೇಳಲು ಹೋಗಲ್ಲ. ಸಮಿತಿ ರಚಿಸಿ ಮುಂದಿನ ಪ್ರಕ್ರಿಯೆಗಳು ನಡೆಸುವುದು ಸರ್ಕಾರದ ಕರ್ತವ್ಯ. ಮುಂಬರುವ ಒಂದು ವಾರದೊಳಗೆ ಬೀದರ್ ದಕ್ಷಿಣ ಸೇರಿದಂತೆ ಜಿಲ್ಲೆಯ ಎಲ್ಲ ಆರು ಕ್ಷೇತ್ರಗಳಲ್ಲಿ ಸಮಿತಿ ರಚನೆಯಾಗಲಿವೆ. ಅರ್ಹರಿರುವ ಬಗರ್ ಹುಕುಂ ಸಾಗುವಳಿದಾರರಿಗೆ ಸರ್ಕಾರ ನಿಯಮದ ಪ್ರಕಾರ ಜಮೀನು ನೀಡಲಿದೆ. ಯಾರಿಗೂ ಒಕ್ಕಲೆಬ್ಬಿಸುವ ಪ್ರಶ್ನೆಯೇ ಇಲ್ಲ. ಈ ವಿಷಯದಲ್ಲಿ ವಿನಾಕಾರಣ ಆತಂಕಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದರು.ದಶಕಗಳಿಂದ ಉಳುಮೆ ಮಾಡುತ್ತಿರುವ ಸಾಗುವಳಿದಾರರು ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ. ಹಲವು ಕಡೆಗಳಲ್ಲಿ ಬೆಳೆಗಳು ಕಟಾವಿಗೆ ಬಂದಾಗ ಅಧಿಕಾರಿಗಳು ಏನೇನೋ ವಾದ ಮಂಡಿಸಿ ಈ ಬೆಳೆ ಕಿತ್ತಿ ಹಾಕಿದ್ದಾರೆ. ಅಲ್ಲಲ್ಲಿ ಬಿತ್ತನೆ ಮಾಡಿದ ಬೆಳೆಯನ್ನೇ ನಾಶಪಡಿಸಿದ್ದಾರೆ. ಇದು ಗಂಭೀರ ಸಮಸ್ಯೆಯಾಗಿದೆ.ಸಮಸ್ಯೆಗೆ ತಾರ್ಕಿಕ ಅಂತ್ಯ ಹಾಡಲೇಬೇಕಾಗಿದೆ. ಸರ್ಕಾರ ದಲಿತರ, ಬಡವರ, ಕೃಷಿಕರ, ಕೂಲಿಕಾರ್ಮಿಕರ, ಹಿಂದುಳಿದ ತೀರ ಬಡಪಾಯಿಗಳ ಹಿತದಿಂದ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅರ್ಹ ಉಳುಮೆದಾರರಿಗೆ ಹಕ್ಕುಪತ್ರ ನೀಡಿ, ಖಾತೆ, ಪಹಣಿ, ನೋಂದಣಿ ಮಾಡಿಕೊಡಲು ಶಾಸಕ ಬೆಲ್ದಾಳೆ ಸದನದ ಗಮನ ಸೆಳೆದರು.
ಒಂದು ವಾರದೊಳಗೆ ಹಕ್ಕುಪತ್ರ ನೀಡಿ ನೋಂದಣಿ ಮಾಡಿಕೊಡುವುದಾಗಿ ಕಂದಾಯ ಸಚಿವರು ಕಳೆದ ಅಕ್ಟೋಬರ್ ನಲ್ಲಿ ಘೋಷಣೆ ಮಾಡಿದ್ದರು. ಈ ಹೇಳಿಕೆ ನೀಡಿ ಆರು ತಿಂಗಳಾದರೂ ನಮ್ಮಲ್ಲಿ ಸಮಿತಿಯೇ ರಚನೆಯಾಗಿಲ್ಲ. ಸಾಗುವಳಿದಾರರು ಆತಂಕದಲ್ಲಿ ಅಲೆದಾಡುವಂತಾಗಿದೆ. ಬೀದರ್ ನಲ್ಲಿ ಕಳೆದ 12 ವರ್ಷಗಳಿಂದ ಸಮಿತಿ ಸಭೆಯೇ ನಡೆದಿಲ್ಲ. ಹೀಗಾದರೆ ಇವರ ಸಮಸ್ಯೆ ನಿವಾರಣೆ ಆಗುವುದು ಯಾವಾಗ? ಇನ್ನು ಬಗರ್ ಹುಕುಂ ಸಾಗುವಳಿ ಹೆಸರಿನಲ್ಲಿ ಕೆಲವೆಡೆ ಭೂ ಮಾಫಿಯಾದವರು ಜಾಗ ಕಬಳಿಕೆ ಯತ್ನಿಸುತ್ತಿದ್ದಾರೆ ಎಂಬ ದೂರುಗಳು ಸಹ ಬರುತ್ತಿವೆ. ಸರ್ಕಾರ ಇದಕ್ಕಾಗಿ ಕಾಲಮಿತಿ ಕಾರ್ಯಯೋಜನೆ ಹಾಕಿಕೊಂಡು ಬಡ ಸಾಗುವಳಿದಾರರ ನೆರವಿಗೆ ಬರಬೇಕು ಎಂದು ಕೋರಿದರು.ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಸಹ ಬೆಲ್ದಾಳೆ ಅವರ ಬೇಡಿಕೆಗೆ ದನಿಗೂಡಿಸಿ, ಸರ್ಕಾರ ವಿಳಂಬ ಮಾಡದೆ ಸಮಿತಿ ರಚಿಸಿ ಅರ್ಹರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು. ವಾರದಲ್ಲಿ ನಿಮ್ಮ ಬೇಡಿಕೆ ಈಡೇರಲಿದೆ ಎಂದು ಸಚಿವ ಬೈರೇಗೌಡ ಅವರು ಹೇಳಿ ಚರ್ಚೆಗೆ ತೆರೆ ಎಳೆದರು. (ಕೋಟ್)
ರಾಜ್ಯದ ಬೇರೆಡೆ ಬಗರ್ ಹುಕುಂ ಸಕ್ರಮೀಕರ ಸಮಿತಿಗಳನ್ನು ರಚಿಸಿ ವರ್ಷವೇ ಉರುಳಿದೆ. ಆದರೆ ಬೀದರ್ ಜಿಲ್ಲೆಯಲ್ಲಿ ಸಮಿತಿಗಳನ್ನು ರಚನೆ ಏಕೆ ಮಾಡಿಲ್ಲ? ನಮ್ಮವರ ಮೇಲೇಕೆ ಹೀಗೆ ಅನ್ಯಾಯ? ನಮ್ಮ ಜಿಲ್ಲೆಯಲ್ಲಿ ನಾಲ್ಕು ಜನ ಬಿಜೆಪಿ ಶಾಸಕರಿದ್ದಾರೆ ಎಂಬ ಕಾರಣಕ್ಕೆ ಸರ್ಕಾರ ತಾರತಮ್ಯ ಮಾಡುತ್ತಿದೆಯೇ?
ಬಾಕ್ಸ್‌ಖಂಡ್ರೆ ಸುಪ್ರೀಮೋನಾ? ಬೀದರ್ ಜಿಲ್ಲೆಯಲ್ಲಿ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ರಚನೆ ಮಾಡದಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಕಾರಣನಾ? ಸರ್ಕಾರ ಸಮಿತಿ ರಚಿಸಲು ನಿರ್ಧರಿಸಿ ಕ್ರಮಕ್ಕೆ ಮುಂದಾದರೂ ಬೀದರ್ ಜಿಲ್ಲೆಯಲ್ಲಿ ಮಾತ್ರ ಎಲ್ಲ ಆರು ಕ್ಷೇತ್ರಗಳಲ್ಲಿ ಸಮಿತಿ ರಚನೆ ಮಾಡಿಲ್ಲ ಎಂದಾದರೆ ಅಲ್ಲಿ ಖಂಡ್ರೆನೆ ಸುಪ್ರೀಮೋನಾ? ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಖಾರವಾಗಿ ಪ್ರಶ್ನಿಸಿದರು. ಮಹತ್ವದ ವಿಷಯದ ಬಗ್ಗೆ ಸರ್ಕಾರ ಗಮನಹರಿಸಬೇಕು. ಶಾಸಕ ಬೆಲ್ದಾಳೆ ಅವರ ಜನಪರ ವಿಷಯದ ಬೇಡಿಕೆಗೆ ಸರ್ಕಾರ ಸ್ಪಂದಿಸಿ ಬೇಗ ಬೀದರ್ ಜಿಲ್ಲೆಯಲ್ಲಿ ಸಮಿತಿ ರಚಿಸಿ ಗೊಂದಲ ನಿವಾರಿಸಬೇಕು ಎಂದು ಆಗ್ರಹಿಸಿದರು.
.