ಚಿಕ್ಕೋಡಿ

ಸದಸ್ಯರ ಸಹಕಾರದಿಂದ ಸಂಘದ ಪ್ರಗತಿ: ರಾಜಾರಾಮ ಮಾನೆ

ಸದಸ್ಯರ ಸಹಕಾರದಿಂದ ಸಂಘದ ಪ್ರಗತಿ: ರಾಜಾರಾಮ ಮಾನೆ

ಲೋಕದರ್ಶನ ವರದಿ 

ಮಾಂಜರಿ 22: ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 80ನೇ ವಾರ್ಷಿಕ ಸರ್ವಸಾಧಾರಣ ಸಭೆ ಬಸವೇಶ್ವರ ಸಭಾಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ರಾಜಾರಾಮ ಅಪ್ಪಾಸಾಹೇಬ ಮಾನೆ ಮಾತನಾಡಿ, ಸದಸ್ಯರ ಸಹಕಾರ, ವಿಶ್ವಾಸ ಹಾಗೂ ಆಡಳಿತ ಮಂಡಳಿಯ ಪಾರದರ್ಶಕ ಕಾರ್ಯನಿರ್ವಹಣೆಯಿಂದ ಸಂಘವು ನಿರಂತರ ಪ್ರಗತಿ ಸಾಧಿಸುತ್ತಿದೆ ಎಂದರು. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸಂಘವು 43.18 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.12ರಷ್ಟು ಲಾಭಾಂಶ ನೀಡಲಾಗುವುದು ಎಂದು ತಿಳಿಸಿದರು.  

ಗ್ರಾಮೀಣ ಭಾಗದ ರೈತರಿಗೆ ಆರ್ಥಿಕ ನೆರವು, ಸಾಲ ಸೌಲಭ್ಯ ಹಾಗೂ ಠೇವಣಿ ಸೇವೆಗಳನ್ನು ಒದಗಿಸುವುದು ಸಂಘದ ಪ್ರಮುಖ ಉದ್ದೇಶವಾಗಿದೆ. ರೈತರಿಗೆ ಗುಣಮಟ್ಟದ ಟ್ರ್ಯಕ್ಟರ್, ಕೃಷಿ ಉಪಕರಣ ಹಾಗೂ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಕಲ್ಪಿಸಲಾಗುತ್ತಿದೆ. ಕೃಷಿ ಭೂಮಿ ಉಳುಮೆ ಸೇರಿದಂತೆ ವಿವಿಧ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಟ್ರ್ಯಕ್ಟರ್ ಸೇವೆಯನ್ನೂ ಸಂಘದ ವತಿಯಿಂದ ಒದಗಿಸಲಾಗುತ್ತಿದೆ ಎಂದರು.

ಸಂಘದ ಕಾರ್ಯದರ್ಶಿ ಪಿಂಟು ಚವಾಣ ಮಾತನಾಡಿ, ಸಂಘದಲ್ಲಿ ಒಟ್ಟು 2,667 ಸದಸ್ಯರಿದ್ದು, 1.98 ಕೋಟಿ ಷೇರು ಬಂಡವಾಳ ಹೊಂದಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ 7.61 ಕೋಟಿ ಠೇವಣಿ ಸಂಗ್ರಹಿಸಲಾಗಿದೆ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ಶೂನ್ಯ ಬಡ್ಡಿದರದಲ್ಲಿ ಸದಸ್ಯರಿಗೆ 15.42 ಕೋಟಿ ಸಾಲ ಹಾಗೂ ಸಂಘದ ವತಿಯಿಂದ 4.62 ಕೋಟಿ ಸಾಲ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.  

ಸಭೆಯಲ್ಲಿ ಅಶೋಕ ಜೋಶಿ, ಸಂಘದ ನಿರ್ದೇಶಕ ಡಾ. ಅಜಿತ್ ಚಿಗರೆ, ನಿರ್ದೇಶಕರಾದ ಸುಭಾಷ ಘೋಸರವಾಡೆ, ಅಣ್ಣಾಸಾಹೇಬ ಚೌಗಲಾ, ತೇಜಶ್ರೀ ಮದಭಾವೆ, ಜ್ಯೋತಿಬಾ ಸಾವಂತ್, ಅಣ್ಣಾಸಾಹೇಬ ಜಾಧವ್ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ